Friday, September 20, 2024

ಪ್ರಾಯೋಗಿಕ ಆವೃತ್ತಿ

ಹಾಸನ ಪೆನ್‌ಡ್ರೈವ್‌ ಪ್ರಕರಣ| ವೈರಲ್ ಆದ ವಿಡಿಯೋಗಳು…. ನಾಲ್ವರು ಸಂತ್ರಸ್ತೆಯರು ಆತ್ಮಹತ್ಯೆಗೆ ಯತ್ನ

ಹಾಸನದ ಪೆನ್‌ಡ್ರೈವ್‌ ಪ್ರಕರಣ ದಿನದಿಂದ ದಿನಕ್ಕೆ ಜಿಲ್ಲಾದ್ಯಂತ ಆತಂಕ ಹೆಚ್ಚಿಸ್ತಾ ಇದೆ. ಕಾಮುಕ ಯುವ ನಾಯಕನ ಅಶ್ಲೀಲ ವಿಡಿಯೋಗಳು ವಾಟ್ಸ್‌ಆಪ್‌ಗಳಲ್ಲಿ ಹರಿದಾಡ್ತಾ ಇವೆ. ವಿಡಿಯೋಗಳು ಹೊರಬಂದ ಪರಿಣಾಮ, ಸುಮಾರು ನಾಲ್ಕು ಸಂತ್ರಸ್ತ ಹೆಣ್ಣುಮಕ್ಕಳು ಆತ್ಮಹತ್ಯೆಗೂ ಕೂಡ ಯತ್ನಿಸಿದ್ದಾರೆ ಎಂಬ ಮಾಹಿತಿ ಈಗಷ್ಟೆ ಬಂದಿದೆ. ಆ ಕಾಮುಕ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿದ್ದಾನೆ ಎಂದೂ ಹೇಳಲಾಗುತ್ತಿದೆ.

ಆತ ಹಲವು ಮಹಿಳೆಯನ್ನ ಮನವೊಲಿಸಿ, ಪುಸಲಾಯಿಸಿ, ಆಮಿಷ ಒಡ್ಡಿ, ಬೆದರಿಸಿ ಲೈಂಗಿಕ ತೃಷೆ ತೀರಿಸಿಕೊಂಡಿದ್ದಾನೆ. ತನ್ನ ಕೃತ್ಯವನ್ನ ತಾನೇ ರೆಕಾರ್ಡ್ ಮಾಡಿಕೊಂಡಿದ್ದ ಎನ್ನಲಾಗಿದೆ. ಸರಿಸುಮಾರು 2,976ಕ್ಕೂ ಹೆಚ್ಚು ವಿಡಿಯೊಗಳನ್ನು ಆತ ಇಟ್ಟುಕೊಂಡಿದ್ದ. ಅವುಗಳನ್ನು ಯಾರೋ ಕಾಪಿ ಮಾಡಿಕೊಂಡು ಸಾವಿರಾರು ಪೆನ್‌ಡ್ರೈವ್‌ಗಳಿಗೆ ಹಾಕಿ, ಹಾಸನದ ಸ್ಟೇಡಿಯಂ, ಮಹಾರಾಜ ಪಾರ್ಕ್‌ ಸೇರಿದಂತೆ ಹಲವು ಕಡೆ ಎಸೆದಿದ್ದಾರೆ. ಅವು ಜನರ ಕೈಗೆ ಸಿಕ್ಕಿ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿವೆ. ಆತನ ಕಾಮವಾಂಚೆಗೆ ಬಲಿಯಾದ ಸಂತ್ರಸ್ತೆಯ ಚಿತ್ರಗಳು ಹೊರಬಂದ ಕಾರಣ, ನಾಲ್ವರು ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿರುವವರಲ್ಲಿ ಒರ್ವ ಮಹಿಳೆ ಸರ್ಕಾರಿ ಅಧಿಕಾರಿಯೂ ಆಗಿದ್ದಾರೆ ಎನ್ನಲಾಗುತ್ತಿದೆ. ಮಾಧ್ಯಮಗಳ ಅಥವಾ ಪೊಲೀಸರ ಮುಂದೆ ಹೋಗಿ ನ್ಯಾಯ ಕೇಳಲು ಸಿದ್ದರಿರುವ ಸಂತ್ರಸ್ತ ಮಹಿಳೆಯರಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಅವರ ಫೋನ್‌ ಕರೆಗಳನ್ನು ಕದ್ದಾಲಿಸುವುದು,‌ ಬೆದರಿಕೆ ಹಾಕುವುದು, ಮಹಿಳಾಪರ ಹೋರಾಟಗಾರರ, ಸಾಮಾಜಿಕ ಕಾರ್ಯಕರ್ತರ ಸಂಪರ್ಕಕ್ಕೆ ಸಿಗದಂತೆ ಮಾಡುವ ಹುನ್ನಾರಗಳು ಜಿಲ್ಲಾದ್ಯಂತ ನಡೆಯುತ್ತಿವೆ ಎಂದು ಸ್ಥಳೀಯ ಹೋರಾಟಗಾರರು ಆರೋಪಿಸಿದ್ದಾರೆ.

“ಕೆಲವು ಸಂತ್ರಸ್ತ ಮಹಿಳೆಯರು ದೂರು ನೀಡಲು ಮುಂದೆ ಬಂದರೂ ಕುಟುಂಬಸ್ಥರೇ ಅವರನ್ನು ತಡೆಯುತ್ತಿದ್ದಾರೆ. ಕೌಟುಂಬಿಕ ಮಾಹಿತಿ ಬಹಿರಂಗವಾಗುವ, ಮಾಧ್ಯಮಗಳಲ್ಲಿ ತಮ್ಮ ವಿವರ ಪ್ರಕಟವಾಗುವ ಭಯದಿಂದ ಅಂಜಿ ಹಿಂದೆ ಸರಿಸುತ್ತಿದ್ದಾರೆ. ಅಲ್ಲದೆ, ಆ ವಿಡಿಯೋಗಳಲ್ಲಿ ಇರುವ ಬಹುತೇಕ ಮಹಿಳೆಯರು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಯ ಪಕ್ಷಕ್ಕೆ ಸೇರಿದವರು, ಆ ವ್ಯಕ್ತಿಯಿಂದ ಹಲವು ರೀತಿಯ ಸಹಾಯ ಪಡೆದಿರುವವರ ಕುಟುಂಬದ ಮಹಿಳೆಯರು. ಕಾರ್ಯಕರ್ತರ ಪತ್ನಿಯರು-ಮಕ್ಕಳು ಎಂಬುದೇ ಆತಂಕದ ವಿಷಯ. ಇನ್ನೂ ನಿತ್ಯ ಮೂರ್ನಾಲ್ಕು ಬಾರಿ ಸರಣಿಯಂತೆ ನೂರಾರು ವಿಡಿಯೋಗಳನ್ನ ಹರಿಬಿಡಲಾಗುತ್ತಿರುವುದು ಸಂತ್ರಸ್ತರನ್ನ ಹೆಚ್ಚಿನ ಆತಂಕಕ್ಕೆ ದೂಡಿದೆ. ಪರಿಸ್ಥಿತಿ ಹೀಗೆಯೇ ಬಿಗುಡಾಯಿಸಿದರೆ ಸಂತ್ರಸ್ತ ಹೆಣ್ಣುಮಕ್ಕಳ ಹಾಗೂ ಅವರ ಕುಟುಂಬಸ್ಥರ ಸಾಲು-ಸಾಲು ಸಾವುಗಳನ್ನ ಕಾಣಬೇಕಾದ ಪರಿಸ್ಥಿತಿ ಜಿಲ್ಲೆಗೆ ಎದುರಾಗಬಹುದು” ಎಂದೂ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಸಂಬಂಧ ಪೆನ್‌ಡ್ರೈವ್ನಲ್ಲಿ ವಿಡಿಯೋ ತುಂಬಿಸಿ ಸಾರ್ವಜನಿಕವಾಗಿ ಸಿಸುವಂತೆ ಮಾಡಿರುವುದರ ಕುರಿತು ಸುಮೊಟೊ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಂಗ ತನಿಖೆ ನಡೆಸಬೇಕೆಂದು ಹಿರಿಯ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಆರ್‌.ಪಿ ವೆಂಕಟೇಶ ಮೂರ್ತಿ ಆಗ್ರಹಿಸಿ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಒತ್ತಾಯಿಸಿದ್ದಾರೆ. ಪ್ರಕರಣದಲ್ಲಿ ಯಾರು ಅಪರಾಧಿ ಇದ್ದಾರೋ, ಅವರಿಗೆ ಕಠಿಣ ಶಿಕ್ಷೆಯಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ಸುದ್ದಿಗೋಷ್ಠಿ ನಡೆದ ಕೆಲವೇ ಗಂಟೆಗಳಲ್ಲಿ ಮತ್ತಷ್ಟು ಅಶ್ಲೀಲ ವಿಡಿಯೋಗಳನ್ನ ವಾಟ್ಸಪ್‌ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ಈದಿನ.ಕಾಮ್‌ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಹಾಗೂ ಸಾಹಿತಿ ರೂಪ ಹಾಸನ, “ಇಂತಹದೊಂದು ಕೃತ್ಯ ನಡೆದಿರುವುದು ತಿಳಿದಾಗ ಮತ್ತು ಅಂತಹ ಕೆಲವು ವಿಡಿಯೋಗಳನ್ನ ಸ್ವತಃ ನೋಡಿದಾಗ ಅಕ್ಷರಶಃ ಆಘಾತವಾಯಿತು, ಅದರಿಂದ ವೈಯಕ್ತಿಕವಾಗಿ ನಾನು ಸುಧಾರಿಸಿಕೊಳ್ಳುವುದೇ ಕಷ್ಟ ಆಗಿತ್ತು. ಹೀಗಿರುವಾಗ ಆ ವಿಡಿಯೋದಲ್ಲಿರುವ ಹೆಣ್ಣುಮಕ್ಕಳ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಮೂರಕ್ಕೂ ಹೆಚ್ಚು ಹೆಣ್ಣುಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆಲ್ಲ ಧೈರ್ಯ ತುಂಬಲಾಗಿದ್ದು, ಕುಟುಂಬಗಳು ಸಂತ್ರಸ್ತ ಹೆಣ್ಣುಮಕ್ಕಳನ್ನು ಸೂಕ್ಷ್ಮವಾಗಿ ನೋಡಿಕೊಳ್ಳಬೇಕಿದೆ” ಎಂದು ಅವರು ಹೇಳಿದರು.

ಅಲ್ಲದೆ, ಪ್ರಕರಣ ಸಂಬಂಧ “ಹಲ್ಲುಕಿತ್ತ ಹಾವಿನಂತಿರುವ ಮಹಿಳಾ ಆಯೋಗ, ಪರಿಶೀಲನೆ ನಡೆಸಿ ವರದಿ ನೀಡಬಹುದಷ್ಟೆ. ಆದರೆ, ಸಮಗ್ರ ತನಿಖೆ, ಸಂತ್ರಸ್ತರ ರಕ್ಷಣೆಯ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮವಹಿಸಬೇಕು. ವಿಶೇಷ ನ್ಯಾಯಾಂಗ ತನಿಖೆ ನಡೆಸಬೇಕು” ಎಂದು ರೂಪ ಹಾಸನ ಆಗ್ರಹಿಸಿದ್ದಾರೆ.

“ಚುನಾವಣಾ ಕಣದಲ್ಲಿರುವ ಅಭ್ಯರ್ಥಿಯು ತಮ್ಮ ಮಾರ್ಫ್‌ ವಿಡಿಯೋಗಳನ್ನ ಎಲ್ಲ ಕಡೆ ಬಿತ್ತರಿಸಲಾಗುತ್ತಿದೆ ಎಂದು ಆರೋಪಿಸಿ ದೂರು ನೀಡಿದ್ದು, ಆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಸಂತ್ರಸ್ತರು ಯಾರು ದೂರು ನೀಡಲು ಮುಂದೆ ಬರುತ್ತಿಲ್ಲ. ಮಾಹಿತಿ ಇರುವವರು ಕೂಡ ಮುಂದೆ ಬಂದು ದೂರು ನೀಡಲು ಹೆದರುತ್ತಿದ್ದಾರೆ ಹಾಗಾಗಿ ಈ ಪ್ರಕರಣದಲ್ಲಿ ಹೇಗೆ ಮುಂದುವರೆದು ನ್ಯಾಯಕ್ಕಾಗಿ ಆಗ್ರಹಿಸುವುದು ಎಂಬುದೇ ತಿಳಿಯುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸುತ್ತಾರೆ ವಕೀಲರಾದ ಬಾನು ಮುಸ್ತಾಕ್.

ಒಟ್ಟಾರೆಯಾಗಿ ಚುನಾವಣಾ ಕಣದಲ್ಲಿರುವ ವ್ಯಕ್ತಿಯನ್ನು ರಾಜಕೀಯವಾಗಿ ಮುಗಿಸುವ ಉದ್ದೇಶಕ್ಕೆ ನಡೆದಿರುವ ಈ ಕೃತ್ಯದಿಂದ ವಿಡಿಯೋಗಳಲ್ಲಿರುವ ಸಾವಿರಾರು ಹೆಣ್ಣುಮಕ್ಕಳ ಮಾನ-ಪ್ರಾಣ ತೂಗುಗತ್ತಿಯ ಮೇಲೆ ನಿಂತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!