Thursday, September 19, 2024

ಪ್ರಾಯೋಗಿಕ ಆವೃತ್ತಿ

ಎಂಟೈರ್ ಪೊಲಿಟಿಕಲ್ ಸೈನ್ಸ್ ಪದವೀಧರನಿಗೆ ರಾಜಕಾರಣವನ್ನು ಅರ್ಥ ಮಾಡಿಸುವ ಫಲಿತಾಂಶವಿದು….

ಮಾಚಯ್ಯ ಎಂ ಹಿಪ್ಪರಗಿ

ಫಲಿತಾಂಶ ಬಂದಾಗಿದೆ. ಮೋದಿಯವರ ಆಡಳಿತದ ವಿರುದ್ಧ ಜನ ತಮ್ಮ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಧ್ವನಿಗೆ ಬಲ ತುಂಬಿದ್ದಾರೆ. ಒಕ್ಕೂಟವಾಗಿ ಎನ್ ಡಿ ಎ ಮೈತ್ರಿಗೆ ಬಹುಮತ ಸಿಕ್ಕಿರುವುದರಿಂದ ಅದು ಸರ್ಕಾರ ರಚಿಸುವ ಸಾಧ್ಯತೆಗಳೇ ಹೆಚ್ಚು. ಇಂತಹ ನಿಟ್ಟುಸಿರಿನ ಫಲಿತಾಂಶದ ನಂತರವೂ ಎನ್ ಡಿ ಎ ಮತ್ತೆ ಸರ್ಕಾರ ರಚಿಸಿ, ಮೋದಿಯವರೇ ಮತ್ತೆ ಪ್ರಧಾನಿಯಾಗಲಿರುವ ಅವಕಾಶದ ಬಗ್ಗೆ ಬಹಳಷ್ಟು ಸ್ನೇಹಿತರು ಆತಂಕದ ಮಾತುಗಳನ್ನಾಡುತ್ತಿದ್ದಾರೆ.

ಆ ಆತಂಕಕ್ಕೆ ಕಾರಣವುಂಟು. ಮೋದಿಯವರ ಈ ಹತ್ತು ವರ್ಷಗಳ ಅವಧಿಯಲ್ಲಿ ಅನುಭವಿಸಿದ ಅಘೋಷಿತ ತುರ್ತು ಪರಿಸ್ಥಿತಿಯ ತಲ್ಲಣಗಳನ್ನು ಕಂಡ ಜನ, ಈಗ ಮತ್ತೆ ಮೋದಿಯೇ ಪ್ರಧಾನಿಯಾಗುವ ಅವಕಾಶದಿಂದ ಆತಂಕಕ್ಕೆ ಈಡಾಗುತ್ತಿದ್ದಾರೆ. ಇದರಲ್ಲಿ ಅಚ್ಚರಿಯಿಲ್ಲ. ಒಂದುವೇಳೆ, ಎನ್ ಡಿ ಎ ಅಧಿಕಾರಕ್ಕೆ ಬಂದರು ಕೂಡಾ ಮೋದಿ ಪ್ರಧಾನಿ ಹುದ್ದೆಯಿಂದ ದೂರಾಗಬೇಕು ಎಂಬ ನಿರೀಕ್ಷೆಯಲ್ಲಿದ್ದ ಮನಸ್ಸುಗಳು ಬೇಸರಗೊಳ್ಳುತ್ತಿವೆ. ಇದು ಸರಳ ನಿರೀಕ್ಷೆ ಮತ್ತು ಸಹಜ ಆತಂಕ.

ಆದರೆ ಭಾರತದ ಮತದಾರ ಎಂಬ ಅಜ್ಞಾತ ಜಾಣ-ಜಾಣೆ ಈ ಬಾರಿ ಕೊಟ್ಟಿರುವ ತೀರ್ಪು ಅದೆಷ್ಟು ಪ್ರಬುದ್ಧ ಮತ್ತು ಅದೆಷ್ಟು ದೂರದೃಷ್ಟಿಯಿಂದ ಕೂಡಿದೆಯೆಂದರೆ, ಸರ್ವಾಧಿಕಾರ ಮತ್ತು ಧರ್ಮದ್ವೇಷದ ರಾಜಕಾರಣ ಮುಂದಿನ ಹದಿನೈದು ಇಪ್ಪತ್ತು ವರ್ಷಗಳವರೆಗೆ ಈ ಇಂಡಿಯಾದ ನೆಲದಲ್ಲಿ ಮತ್ತೆ ಚಿಗುರದಂತೆ ಮಾಡಲು ಬೇಕಾದ ಜಾಣ್ಮೆ ಈ ತೀರ್ಪಿನಲ್ಲಿದೆ. ಅಲ್ಲದೇ ಮೋದಿ ಎಂಬ ಎಂಟೈರ್ ಪೊಲಿಟಿಕಲ್ ಸೈನ್ಸ್ ಪದವೀಧರನಿಗೆ ರಾಜಕಾರಣದ ಎ.ಬಿ.ಸಿ.ಡಿ.ಗಳನ್ನು ಕಲಿಸುವ ಎಲ್ಲಾ ಅವಕಾಶಗಳೂ ಈ ತೀರ್ಪಿನೊಳಗೆ ಮೇಳೈಸಿವೆ. ಈ ಸೂಕ್ಷ್ಮಗಳು ಅನುಷ್ಠಾನಗೊಳ್ಳಬೇಕೆಂದರೆ, ಎನ್ ಡಿ ಎ ಮತ್ತೆ ಸರ್ಕಾರ ರಚಿಸಲೇಬೇಕು; ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕು. ಇದು ಭಾರತದ ಪ್ರಜಾಪ್ರಭುತ್ವ ದೃಷ್ಟಿಕೋನದಿಂದ ಒಳ್ಳೆಯ ಬೆಳವಣಿಗೆಯಾಗಲಿದೆ ಅನ್ನೋದು ನನ್ನ ಅಂದಾಜು.

ಹೇಗೆ? ವಿವರಿಸುವೆ…

ಮೊದಲು, ನನ್ನ ಗ್ರಹಿಕೆಯ ಮಟ್ಟಕ್ಕನುಗುಣವಾಗಿ ಈ ಸರ್ವಾಧಿಕಾರದ ಬಗ್ಗೆ ಒಂದು ಸಣ್ಣ ಲೆಕ್ಚರ್ ಕೊಟ್ಟುಬಿಡುವೆ. ಮೋದಿ ಮತ್ತೆ ಪ್ರಧಾನಿಯಾಗುವ ಸಾಧ್ಯತೆಯನ್ನು ಕಂಡು ಆತಂಕಗೊಂಡಿರುವವರು ಒಂದು ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು. ಮೋದಿಯವರನ್ನು ನಾವೆಲ್ಲ ಒಬ್ಬ ವ್ಯಕ್ತಿಯಾಗಿ ನೋಡುತ್ತಿರುವುದರಿಂದ ಅವರೊಳಗಿನ ಸರ್ವಾಧಿಕಾರಿ ಗುಣವೂ ಅವರ ರೂಪದಲ್ಲೆ ನಮಗೆ ಕಾಣುತ್ತಿದೆ. ಆದರೆ ವಾಸ್ತವದಲ್ಲಿ ಸರ್ವಾಧಿಕಾರಿ ಎನ್ನುವುದು ವ್ಯಕ್ತಿಯಾಗಿರುವುದಿಲ್ಲ, ಅದೊಂದು ಮನಸ್ಥಿತಿ. ಒಬ್ಬ ವ್ಯಕ್ತಿಯಲ್ಲಿ ಆ ಮನಸ್ಥಿತಿ ರೂಪತಳೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಸರಕು, ಅಂಕೆಯಿಲ್ಲದ ಅಧಿಕಾರ. ಆ ಅಧಿಕಾರವನ್ನು ಹೇಗೆ ಅರ್ಥೈಸಿಕೊಳ್ಳುತ್ತಾನೆ ಎಂಬುದರ ಮೇಲೆ ಮನಸ್ಥಿತಿಯು ನಿರಂಕುಶವಾದದತ್ತ ರೂಪಾಂತರಗೊಳ್ಳುತ್ತದೆ. ತೀವ್ರತೆಯಲ್ಲಿ ವ್ಯತ್ಯಾಸ ಇರಬಹುದಾದರೂ, ತನ್ನ ಮಾತೇ ನಡೆಯಬೇಕು; ನಾನೇ ಶ್ರೇಷ್ಠ; ನನ್ನ ನಿಲುವೇ ಅಂತಿಮ ಎಂಬ ಮನಸ್ಥಿತಿಯ ಅಸಂಖ್ಯ ಜನರು ನಮ್ಮ ನಡುವೆ ಸಿಗುತ್ತಾರೆ. ವಾಸ್ತವದಲ್ಲಿ ಅವರೆಲ್ಲರೂ ಸರ್ವಾಧಿಕಾರಿಗಳೇ! ತಮಗೆ ಸಿಕ್ಕ ಅಧಿಕಾರದ ಅಥವಾ ಔದ್ಯಮಿಕ ಅವಕಾಶಗಳ ವ್ಯಾಪ್ತಿಯಲ್ಲಿ ಅವರು ಎಷ್ಟು ಸರ್ವಾಧಿಕಾರಿಗಳಾಗಿ ಮೆರೆಯಬಹುದೋ ಅಷ್ಟು ಮೆರೆಯುತ್ತಿರುತ್ತಾರೆ. ಆದರೆ ಮೋದಿಯವರಿಗೆ ಅವರೆಲ್ಲರಿಗಿಂತ ಉನ್ನತವಾದ ಅಧಿಕಾರ ದೊರಕಿದ್ದರಿಂದ ನಮಗೆ, ನಮ್ಮ ದೇಶದ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹೊರೆಯಾಗಿ ರೂಪಾಂತರವಾಗಿದ್ದಾರೆ.

ಒಟ್ಟರ್ಥದಲ್ಲಿ ಹೇಳುವುದಾದರೆ, ನಿರಂಕುಶ ಅಧಿಕಾರದಿಂದ ಅವರನ್ನು ಬೇರ್ಪಡಿಸಿದರೆ, ಅವರ ಸರ್ವಾಧಿಕಾರಿ ಮನಸ್ಥಿತಿಯೂ ನಿಶ್ಯಕ್ತಗೊಂಡು ನರಳಾಟಕ್ಕೆ ಸಿಲುಕುತ್ತದೆ. ಈ ನರಳಾಟದ ಭಯವೇ ಹಿಟ್ಲರ್ ಎಂಬ ಸರ್ವಾಧಿಕಾರಿ ತನ್ನನ್ನು ತಾನು ಕೊನೆಗಾಣಿಸಿಕೊಳ್ಳುವಂತೆ ಮಾಡಿದ್ದು. ಇದರರ್ಥ, ಎಲ್ಲಾ ಸರ್ವಾಧಿಕಾರಿ ಮನಸ್ಥಿತಿಯವರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತಲ್ಲ; ಆದರೆ ಅವರ ಮನಸ್ಸು ಅಷ್ಟು ವಿಚ್ಛಿದ್ರಕಾರಿ ಮಾರ್ಗಗಳ ಕುರಿತು ಯೋಚಿಸುತ್ತೆ ಅನ್ನೋದು. ಹಿಟ್ಲರ್ ತನ್ನನ್ನು ತಾನು ಕೊನೆಗೊಳಿಸುವ ಅಸಹಾಯಕತೆಗೆ ತುತ್ತಾದ, ಬೇರೆ ಸರ್ವಾಧಿಕಾರಿಗಳಿಗೆ ಅಂತಹ ಅಸಹಾಯಕತೆ ಎದುರಾಗದೆ ಹೋದರೆ ಅವರು ಬೇರಾವುದೋ ರೂಪದಲ್ಲಿ ಅಪಾಯಕಾರಿಯಾಗಿ ಪರಿವರ್ತನೆಯಾಗಬಹುದು. ಹಾಗಾಗಿ ಬಹುಪಾಲು ಸರ್ವಾಧಿಕಾರಿಗಳ ಅಂತ್ಯ ಆತ್ಮಹತ್ಯೆಯಲ್ಲೋ, ಹತ್ಯೆಯಲ್ಲೋ, ಮರಣದಂಡನೆಯಲ್ಲೋ ಕೊನೆಗೊಂಡಿವೆ.

ಒಂದುವೇಳೆ, ನಾವೆಲ್ಲಾ ನಿರೀಕ್ಷಿಸಿದಂತೆ ಮೋದಿಯವರನ್ನು ಸಂಪೂರ್ಣವಾಗಿ ಅಧಿಕಾರದಿಂದ ಕೆಳಗಿಳಿಸಿ, ಇಂಡಿಯಾ ಮೈತ್ರಿ ಕೂಟವನ್ನು ಗದ್ದುಗೆಗೇರಿಸಿದ್ದರೆ, ಮೋದಿ ವಿರೋಧ ಪಕ್ಷದ ನಾಯಕನಾಗಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮತ್ತು ಸೌಹಾರ್ಧದ ಬಂಧಕ್ಕೆ ಈಗಿಗಿಂತಲೂ ಅಪಾಯಕಾರಿಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತೆ ಇರಲಿಲ್ಲ. ಅಧಿಕಾರವನ್ನು ಮರಳಿ ಪಡೆಯಲು ಅದು ಅವರಿಗೆ ಅನಿವಾರ್ಯವೂ ಆಗಿರುತ್ತಿತ್ತು. ಅಷ್ಟರೊಳಗೆ ಮೈತ್ರಿಯ ಕಾರಣಕ್ಕೆ ಇಂಡಿಯಾ ಒಕ್ಕೂಟದೊಳಗೆ ಕಚ್ಚಾಟಗಳೋ, ಸಣ್ಣಪುಟ್ಟ ಹಗರಣಗಳೋ ಬಯಲಿಗೆ ಬಂದಿದ್ದರೆ, ಮೋದಿಯವರಿಗೆ ಜನಬೆಂಬಲ ಹೆಚ್ಚಾಗಿ, ಮಧ್ಯಂತರದಲ್ಲೇ ಮೊದಲಿಗಿಂತಲೂ ಹೆಚ್ಚಿನ ಸಾಮರ್ಥ್ಯದೊಂದಿಗೆ ಅಧಿಕಾರಕ್ಕೆ ಮರಳಿದ್ದರೂ ಅಚ್ಚರಿಯಿಲ್ಲ. ಹಾಗೇನಾದರೂ ಆಗಿದ್ದಲ್ಲಿ, ಸರ್ವಾಧಿಕಾರಿ 2.0 ರೂಪ ಅತಿ ಕರಾಳವಾಗಿರುತ್ತಿತ್ತು ಅನ್ನುವುದು ಮಾತ್ರ ಖಾತ್ರಿ.

ಆದರೆ ಈ ಫಲಿತಾಂಶದಿಂದಾಗಿ, ಮೋದಿಯನ್ನು ಸಂಪೂರ್ಣ ಅಧಿಕಾರದಿಂದ ದೂರವಿಟ್ಟು ಅಪಾಯವನ್ನು ಮೇಲೆಳೆದುಕೊಳ್ಳದೆಯೂ ಆತನನ್ನು ನಿಶ್ಯಕ್ತಗೊಳಿಸುವ ತಂತ್ರಕ್ಕೆ ಮತದಾರ ದಾರಿ ಕಂಡುಕೊಂಡಿದ್ದಾನೆ. ಬಹುಮತ ಕಳೆದುಕೊಂಡ ಬಿಜೆಪಿ ಈಗ ಟಿಡಿಪಿ, ಜೆಡಿಯು, ಶಿವಸೇನೆ (ಶಿಂಧೆ) ತರಹದ ಮಿತ್ರಪಕ್ಷಗಳ ಕೈಗೊಂಬೆ. ಈ ಸರ್ಕಾರದಲ್ಲಿ ಮೋದಿ ಪ್ರಧಾನಿಯಾದರೂ, ಅವರು ಸ್ವತಂತ್ರವಾಗಿರಲಾರರು ಎಂಬುದಂತೂ ಸತ್ಯ. ಅರ್ಥಾತ್ ಗುಜರಾತಿನಿಂದ ದಿಲ್ಲಿಯ ಕರ್ತವ್ಯಪಥದವರೆಗೆ ಮೋದಿ ಅನುಭವಿಸುತ್ತಲೇ ಬಂದ ಮತ್ತು ಆ ಕಾರಣಕ್ಕೆ ಸರ್ವಾಧಿಕಾರಿಯಾಗಿ ರೂಪಾಂತರಗೊಂಡ, ನಿರಂಕುಶ ಅಧಿಕಾರವನ್ನು ಕಿತ್ತುಕೊಂಡಿರುವ ಮತದಾರ, ಅಂಕುಶ ಹಾಕಿದ ಅಧಿಕಾರವನ್ನು ಅವರ ಕೈಗಿತ್ತಿದ್ದಾನೆ. ಅಧಿಕಾರವಿಲ್ಲದ ಮೋದಿಗಿಂತ, ಅಂಕುಶ ಹಾಕಿದ ಮೋದಿ ಕಡಿಮೆ ಅಪಾಯಕಾರಿ ಅನ್ನೋದು ಇಲ್ಲಿ ಮುಖ್ಯವಾಗುತ್ತದೆ.

ಇನ್ನು ಮೋದಿಯವರ ಇಡೀ ರಾಜಕೀಯ ಬದುಕನ್ನು ನೋಡಿದರೆ, ಅವರು ಯಾವತ್ತು ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಿದವರಲ್ಲ. ಈ ಹಿಂದೆ ಕೇಂದ್ರದಲ್ಲಿ ಎನ್ ಡಿ ಎ ಸರ್ಕಾರವಿದ್ದರೂ, ಬಿಜೆಪಿ ಸ್ವತಂತ್ರವಾಗಿ ಬಹುಮತದ ಗಡಿ ದಾಟಿದ್ದರಿಂದ, ಮಿತ್ರಪಕ್ಷಗಳಿಗೆ ಸರ್ಕಾರದಲ್ಲಿ ಸ್ಥಾನವಿತ್ತೇ ವಿನಾ ಅವರಿಗೆ ಆಡಳಿತದಲ್ಲಿ ಸ್ವಾತಂತ್ಯ್ರವಿರಲಿಲ್ಲ. ಆದರೆ ಈಗ ಮೋದಿಯವರಿಗೆ ಸರ್ಕಾರ ನಡೆಸಲು ಮಿತ್ರಪಕ್ಷಗಳ ಸಹಕಾರ ಅತ್ಯಗತ್ಯ. ಪ್ರತಿ ನಿರ್ಣಯಕ್ಕೂ ಸಂಪುಟದ ಒಪ್ಪಿಗೆ ಕೇಳಬೇಕಾಗುತ್ತದೆ. ಎಲ್ಲರನ್ನೂ ಕನ್ವಿನ್ಸ್ ಮಾಡಬೇಕಾಗುತ್ತದೆ. ಮುಖ್ಯವಾಗಿ, ಎಲ್ಲಾ ಕ್ರೆಡಿಟ್ಟನ್ನು ತಾನೊಬ್ಬನ್ನೇ ಕಬಳಿಸಲು ಅಡೆತಡೆಗಳು ಉದ್ಭವಿಸುತ್ತವೆ. ಇದರಿಂದಾಗಿ ಮೋದಿ ಕೂಡಾ ಎಲ್ಲರಂತೆ ಒಬ್ಬ ಪೊಲಿಟಿಕಲ್ ಲೀಡರ್ ಅಷ್ಟೆ, ದೇವರು ಡೈರೆಕ್ಟಾಗಿ ಭೂಮಿಗೆ ರವಾನಿಸಿದ ಪಾರ್ಸೆಲ್ ಪೊಲಿಟಿಷಿಯನ್ ಅಲ್ಲ ಎಂಬ ಸತ್ಯ ಜನರಿಗೂ ಮನವರಿಕೆಯಾಗುತ್ತದೆ.

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವ ಅಭ್ಯಾಸವೇ ಇಲ್ಲದ ನಮ್ಮ ಎಂಟೈರ್ ಪೊಲಿಟಿಕಲ್ ಸೈನ್ಸ್ ಪದವೀಧರನಿಗೆ ನಿತೀಶ್ ಕುಮಾರ್, ನಾಯ್ಡು ತರಹದ ಜೋಕಾಲಿವೀರರ ಜೊತೆ ಹೆಣಗುವ ರಾಜಕಾರಣದ ಪ್ರಾಕ್ಟಿಕಲ್ ಪಾಠ ಇನ್ಮುಂದೆ ಶುರುವಾಗಲಿದೆ. ಸ್ಥಿರ ಸರ್ಕಾರ, ಮಿನಿಮಮ್ ಗೌರ್ಮೆಂಟ್, ಬಲಿಷ್ಠ ನಾಯಕತ್ವ ಎಂಬ ಬೂಸ್ಟುಗಳ ಮೂಲಕ ತಾನೊಬ್ಬ ಅದ್ವಿತೀಯ ನಾಯಕ ಎಂದು ಈಗಲೂ ಜನರನ್ನು ಯಾಮಾರಿಸುವಲ್ಲಿ ಯಶಸ್ವಿಯಾಗಿರುವ ಮೋದಿಯವರ ನಿಜಬಣ್ಣ ಜನರಿಗೆ ಇನ್ಮುಂದೆ ದರ್ಶನವಾಗಲಿದೆ. ಒಂದು ಕಾಲದಲ್ಲಿ, ಪಕ್ಕಕ್ಕೆ ಕೂರಿಸಿಕೊಂಡು ತಮ್ಮ ಈ ಶಿಷ್ಯನಿಗೆ ವಾಜಪೇಯಿಯವರು ಬೋಧಿಸಿದ್ದ `ರಾಜಧರ್ಮ’ದ ನಿಜವಾದ ಮರ್ಮ ಮೋದಿಗೆ ಈಗ ಹಂಗಿನ ಸಮ್ಮಿಶ್ರ ಸರ್ಕಾರ ನಡೆಸುವಾಗ ಅರ್ಥವಾಗಲಿದೆ.

ಇದನ್ನೆಲ್ಲ ಪರಿಗಣಿಸಿದಾಗ ಮೋದಿಯ ವ್ಯಕ್ತಿತ್ವದ ಸುತ್ತ ಕಟ್ಟಿರುವ ಮಿಥ್ಯದ ಇಮೇಜುಗಳು ಸಂಪೂರ್ಣವಾಗಿ ಜಖಮ್ಮುಗೊಳ್ಳುವ ಅವಕಾಶವನ್ನು ಈ ಫಲಿತಾಂಶ ಮುಕ್ತವಾಗಿಟ್ಟಿದೆ ಎನ್ನಬಹುದು. ಇದಾಗದೆ, ನಾವೆಲ್ಲ ನಿರೀಕ್ಷಿಸಿದಂತೆ ಸೋಲಿನ ಹೊಣೆ ಹೊತ್ತು ಮೋದಿ ಪ್ರಧಾನಿ ಹುದ್ದೆಯಿಂದ ನಿರ್ಗಮಿಸುವ ತೀರ್ಮಾನಕ್ಕೇನಾದರು ಬಂದಿದ್ದರೆ, ಆಗ ಮೋದಿಯನ್ನು ರಾಜಕೀಯ ಷಡ್ಯಂತ್ರದ ಸಂತ್ರಸ್ತನಂತೆ ಬಿಂಬಿಸಿ, ಮತ್ತಷ್ಟು ಬಲ ತುಂಬಲು ಗೋದಿ ಮೀಡಿಯಾಗಳು ಟೊಂಕ ಕಟ್ಟಿ ನಿಲ್ಲುತ್ತಿದ್ದವು. ಈಗ ಅವುಗಳು ಮೋದಿಯ ನಿಶ್ಯಕ್ತಿಯನ್ನು ಕಂಡು ಮರುಗಬೇಕಷ್ಟೆ.

ಮೋದಿ ಅಧಿಕಾರದಲ್ಲಿರುವುದರಿಂದ ಅಪಾಯದ ಸಾಧ್ಯತೆ ಶೂನ್ಯ ಎಂಬುದು ಸಾರಾಂಶವಲ್ಲ. ಆದರೆ ಪೆಟ್ಟು ತಿಂದು ಹುತ್ತ ಹೊಕ್ಕ ಹಾವಿಗಿಂತ, ಕಣ್ಣಮುಂದೆ ನಿತ್ರಾಣಗೊಂಡು ನರಳಾಡಿಕೊಂಡಿರುವ ಹಾವು ಕಡಿಮೆ ಅಪಾಯಕಾರಿ ಎನ್ನುವುದು ನನ್ನ ನಿರೀಕ್ಷೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!