ಮಂಡ್ಯ ನಗರಾಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಹಮ್ಮಿಕೊಂಡು ಸದ್ಯದಲ್ಲೇ ರಾಜ್ಯದಲ್ಲಿ ಮಾದರಿ ನಗರವನ್ನಾಗಿ ರೂಪಿಸುತ್ತೇವೆ ಎಂದು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ನಯೀಂ ತಿಳಿಸಿದರು.
ಮಂಡ್ಯನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಪರಿಸರ ಸಂಸ್ಥೆಯ ಮಮತೆಯ ಮಡಿಲು ನಿತ್ಯ ದಾಸೋಹಕ್ಕೆ ಬಕ್ರೀದ್ ಹಬ್ಬದ ನಿಮಿತ್ತ ದಾಸೋಹ ವಿತರಿಸಿ ಸರ್ವರಿಗೂ ಶುಭಾಶಯ ಕೋರಿದ ಅವರು, ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಬಹಳ ಮುಖ್ಯವಾಗಿ ಬಡವರಿಗೆ ಹಸಿವು ಮುಕ್ತ ಕರ್ನಾಟಕ ಎಂಬ ಘೋಷವಾಕ್ಯದೊಡನೆ ಅನ್ನಭಾಗ್ಯ ಯೋಜನೆಯ್ನು ಜಾರಿಗೆ ತಂದ ಕೀರ್ತಿ ಸರ್ಕಾರಕ್ಕೆ ಸಲ್ಲುತ್ತದೆ. ಈ ಮೂಲಕ ಅಪೌಷ್ಠಿಕತೆಯಿಂದ ನರಳುತ್ತಿರುವ ಕುಟುಂಬಗಳು ಸದೃಢ ದೇಹ ಹೊಂದಿ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬೇಕೆಂದು ತಿಳಿಸಿದರು.

ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತ ಯುವಕನಿಗೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಂತಹ ಪ್ರಮುಖ ಹುದ್ದೆ ನೀಡಿರುವುದಕ್ಕೆ ಸರ್ಕಾರವನ್ನು ಅಭಿನಂದಿಸುತ್ತಾ, ನಯೀಂರವರು ಯುವಜನರಾಗಿದ್ದು, ಸೂರಿಲ್ಲದ ನಗರದ ಜನತೆಗೆ ಸೂರೊದಗಿಸುವ ಕೆಲಸವನ್ನು ಮಾಡಿ ಮಂಡ್ಯ ನಗರವನ್ನು ಗುಡಿಸಲು ಮುಕ್ತ ನಗರವಾಗಿಸಲು ಶ್ರಮಿಸಬೇಕು ಎಂದರು.
ಕೆಡಿಪಿ ಸದಸ್ಯ ಸಿ.ಎಂ. ದ್ಯಾವಪ್ಪ, ನಯೀಂ ಅವರನ್ನು ಮಮತೆಯ ಮಡಿಲು ವತಿಯಿಂದ ಗೌರವಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತ ಸಂತೆಕಸಲಗೆರೆ ಬಸವರಾಜು, ಮಂಡ್ಯ ಜಿಲ್ಲಾ ಬೆಸ್ತರ ಸಂಘದ ಮಳವಳ್ಳಿ ಘಟಕದ ಅಧ್ಯಕ್ಷ ಶಿವರಾಜು ಇತರರು ಉಪಸ್ಥಿತರಿದ್ದರು.




