Friday, June 21, 2024

ಪ್ರಾಯೋಗಿಕ ಆವೃತ್ತಿ

ಮೋದಿ ಸರ್ಕಾರ ರಾಜ್ಯಕ್ಕೆ ವಂಚನೆ ಮಾಡಿದ್ದು ಬರೋಬರಿ ₹1,85,468 ಕೋಟಿ: ಅಂಕಿ- ಅಂಶ ಮುಂದಿಟ್ಟ ಸಚಿವ ಕೃಷ್ಣ ಭೈರೇಗೌಡ 

ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರ ಕಳೆದ 5 ವರ್ಷಗಳ ಅವಧಿಯಲ್ಲಿ ₹1,85,468 ಕೋಟಿ ರೂಪಾಯಿಗಳ ತೆರಿಗೆ ವಂಚನೆ ಮಾಡಿದ್ದು, ಕೇಂದ್ರ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕನಿಷ್ಟ 11,495 ಕೋಟಿ ಪರಿಹಾರ ನೀಡಬೇಕೇಂಬ ಶಿಫಾರಸ್ಸನ್ನು ತಿರಸ್ಕರಿಸಿ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅಂಕಿ – ಅಂಶಗಳನ್ನು ಸಭಿಕರ ಮುಂದಿಟ್ಟರು.

ಮಂಡ್ಯನಗರದ ಸುಮರವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಕರ್ನಾಟಕ ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ಮತ್ತು ಜಾಗೃತ ಕರ್ನಾಟಕ ಆಯೋಜಿಸಿದ್ದ ‘ಕರ್ನಾಟಕಕ್ಕಾದ ತೆರಿಗೆ ಪಾಲಿನ ವಂಚನೆ ರೈತರ ಗಾಯದ ಮೇಲೆ ಬರೆ’ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಅವರು ಪ್ರಧಾನ ಭಾಷಣ ಮಾಡಿದರು.

2023- 24ನೇ ಸಾಲಿನ ಜಿಎಸ್’ಟಿ ಪಾಲಿನ ತೆರಿಗೆ 32,192 ಕೋಟಿ, 15ನೇ ಹಣಕಾಸು ಆಯೋಗದ ಪಾಲು 11,376 ಕೋಟಿ, ಸೆಸ್ ಮತ್ತು ಸರ್ ಚಾರ್ಜ್ ನಷ್ಟ 8,263 ಕೋಟಿ ಸೇರಿ ಒಟ್ಟು 51,831 ಕೋಟಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಬಾಕಿ ಎಂದು ತಿಳಿಸಿದರು.

ಅದೇ ರೀತಿ 2024-25 ನೇ ಸಾಲಿನಲ್ಲಿ 31,066 ಕೋಟಿ ಜಿಎಸ್’ಟಿ ಪರಿಹಾರ, 15ನೇ ಹಣಕಾಸು ಆಯೋಗದ ಪಾಲು 12,967 ಕೋಟಿ ಸೆಸ್ ಮತ್ತು ಸರ್ ಚಾರ್ಜ್ ನಷ್ಟು 8,060 ಕೋಟಿ ಸೇರಿ ಒಟ್ಟು 52,093 ಕೋಟಿ ರೂ. ತೆರಿಗೆ ರಾಜ್ಯಕ್ಕೆ ಬರಬೇಕಿದೆ ಎಂದು ಅಂಕಿ ಅಂಶ ಸಮೇತ ಸಾಬೀತು ಪಡಿಸಿದರು.

ಶೇ.23ರಷ್ಟು ತೆರಿಗೆ ವಂಚನೆ

ಕೃಷಿ ಪ್ರಧಾನವಾಗಿರುವ ಭಾರತ ದೇಶ ಉಳಿಯಬೇಕಾದರೆ ರೈತ ಸಂಕುಲ ಬದುಕಬೇಕು. ಅದಕ್ಕಾಗಿ ಈ ಸತ್ಯವನ್ನು ಅರ್ಥೈಸಲಾಗುತ್ತಿದ್ದು, ಕೇಂದ್ರ ಸರ್ಕಾರ ರಾಜ್ಯಕ್ಕೆ ಶೇ.23ರಷ್ಟು ತೆರಿಗೆಯನ್ನು ವಂಚಿಸುತ್ತಿದ್ದು, ಇದರು 13 ರಿಂದ 14 ಸಾವಿರ ಕೋಟಿ ರೂ.ಗಳಾಗಲಿವೆ ಎಂದು ವಿವರಿಸಿದರು.

ಡಾ.ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ 14ನೇ ಹಣಕಾಸು ಆಯೋಗ ರಚನೆಯಾಗಿದ್ದು,ರಾಜ್ಯದ ಒಬ್ಬರು ಆಯೋಗ ಪ್ರತಿನಿಧಿಸುತ್ತಿದ್ದರು. ಆಗ ನಮ್ಮ ತೆರಿಗೆ ಪಾಲು ನೂರು ರೂಪಾಯಿಗೆ 4.72ಪೈಸೆ ದೊರೆಯುತ್ತಿತ್ತು. ಆನಂತರ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರದಲ್ಲಿ ರಚನೆಯಾದ 15 ನೇ ಹಣಕಾಸು ಆಯೋಗದಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಪೈಕಿ ಓರ್ವ ಪ್ರತಿನಿಧಿ ಇರಲಿಲ್ಲ, ನಮ್ಮ ತೆರಿಗೆ ಪಾಲು ನೂರು ರೂಪಾಯಿಗೆ 3.64ಪೈಸೆಗೆ ಇಳಿಕೆಯಾದ ಬಗ್ಗೆ ಕಳವಳ  ವ್ಯಕ್ತಪಡಿಸಿದರು.

ದಕ್ಷಿಣ ಭಾರತದ ರಾಜ್ಯಗಳ ಕಡೆಗಣನೆ

ಕೇಂದ್ರದ ತೆರಿಗೆಗೆ ಶೇ.40ರಷ್ಟು ಪಾಲು ನೀಡುವ ದಕ್ಷಿಣ ಭಾರತ ರಾಜ್ಯಗಳನ್ನು ಕಡೆಗಣಿಸಿ, ಮಹಾರಾಷ್ಟ್ರ, ರಾಜಸ್ತಾನ, ಗುಜರಾತ್, ಬಿಹಾರ ಹಾಗೂ ಛತ್ತೀಸ್ ಘಡಗಳಿಗೆ ಹೆಚ್ಚು ಪಾಲು ನೀಡಿರುವ ಬಗ್ಗೆ ವಿವರಿಸಿದರು.

ರಾಜ್ಯದ ತೆರಿಗೆ ಪಾಲಿನಲ್ಲಿ ವಂಚನೆಯಾಗುತ್ತಿರುವ ಶೇ.23ರಷ್ಟು ನಷ್ಟದ ಪೈಕಿ ಅನಿವಾರ್ಯವಾಗಿ ನೀಡಬೇಕೆಂದು ಹಣಕಾಸು ಆಯೋಗ ಮಾಡಿದ ಶಿಫಾರಸ್ಸಿಗೆ ಎಳ್ಳು-ನೀರು ಬಿಟ್ಟಿರುವ ಕೇಂದ್ರ ಅರ್ಥ ಸಚಿವರು ಒಕ್ಕೂಟ ವ್ಯವಸ್ಥೆಯನ್ನು ನಾಚಿಸುತ್ತಿದ್ದಾರೆಂದು ಹರಿಹಾಯ್ದರು.

ರಾಜ್ಯ ಸರ್ಕಾರದ ಅಯವ್ಯಯದಲ್ಲಿ ನಮ್ಮ ಪಾಲು ಶೇ.77ರಷ್ಟು ಇದ್ದು, ಕೇಂದ್ರದ ಪಾಲು ಶೇ.23ರಷ್ಟಿದೆ, ಆದರೆ ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶಗಳಿಗೆ ಶೇ.55ರಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತಿರುವುದು ಸಮಂಜಸವೇ ಎಂದು ಪ್ರಶ್ನಿಸಿದರು.

ರಾಜ್ಯದ ನೀರಾವರಿ ಯೋಜನೆಗಳಿಗೆ ನಯಾಪೈಸೆ ಅನುದಾನ ನೀಡದ ಕೇಂದ್ರ ಸರ್ಕಾರ ರೈತರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ವಹಿಸಿಲ್ಲ, ಕೃಷಿ ತಜ್ಞ ಡಾ.ಸ್ವಾಮಿನಾಥನ್ ವರದಿ ಅನುಷ್ಟಾನಕ್ಕೂ ಮುಂದಾಗಿಲ್ಲ, ರೈತರ ಸಾಲ ಮನ್ನಾಗೆ ಅಗತ್ಯವಿರುವ 3 ಲಕ್ಷ ಕೋಟಿ ಹಣವಿಲ್ಲವೆಂದು ಪುನರುಚ್ಚರಿಸುವ ಕೇಂದ್ರ ಸರ್ಕಾರ ಸುಮಾರು ನಾಲ್ಕೈದು ಸಾವಿರ ಶ್ರೀಮಂತರಿಗೆ 30 ಲಕ್ಷ ಕೋಟಿ ಸಾಲಮನ್ನಾ ಮಾಡಿದೆ ಎಂದು ವಿವರಿಸಿದರು.

ಅನುಮತಿ ನೀಡಲು ನಿರಾಸಕ್ತಿ

ರಾಜ್ಯದ ಬರಗಾಲಕ್ಕೆ ನೆರವಾಗಲು ನಯಾಪೈಸೆ ನೆರವು ನೀಡದ ಕೇಂದ್ರ ಸರ್ಕಾರ ಸುಳ್ಳು ಹೇಳುವ ಮೂಲಕ ರಾಜ್ಯದ ಜನರನ್ನು ಕತ್ತಲೆಯಟ್ಟಿಡಲು ಪ್ರಯತ್ನಿಸುತ್ತಿದೆ. ಅದೇ ರೀತಿ ಮೇಕೆದಾಟು ಯೋಜನೆಗೆ ಅನುಮತಿ ನೀಡಲು ನಿರಾಸಕ್ತಿ ತೋರುತ್ತಿದೆ ಎಂದು ಹರಿಹಾಯ್ದರು.

ಪ್ರಜಾಪ್ರಭುತ್ವ ಉಳಿಯಬೇಕಾದರೆ ಹೊಟ್ಟೆ ಪಾಡಿನ ವಿಚಾರಗಳ ಸತ್ಯದ ದರ್ಶನವಾಗಬೇಕು. ಸುಳ್ಳುಗಳ ಮೂಲಕ ರಾಜ್ಯ ಹಾಗೂ ರಾಷ್ಟ್ರದ ಜನರನ್ನು ದಾರಿ ತಪ್ಪಿಸುವ ಪ್ರಧಾನಿ, ಕೇಂದ್ರ ಸಚಿವರು ಹಾಗೂ ಸಂಸದರ ಆರೋಪಗಳಿಗೆ ಅಂಕಿ ಅಂಶಗಳ ಮೂಲಕ ತಿರುಗೇಟು ನೀಡಿದರು.

ವಿಚಾರಗೋಷ್ಠಿಯ ಮೂಲಕ ಜನರಿಗೆ ಸತ್ಯಾಂಶ ತಿಳಿಯಲು ನೆರವಾದ ಸಂಘಟನೆಗಳಿಗೆ ಧನ್ಯವಾದ ತಿಳಿಸಿದ ಸಚಿವರು, ಮಂಡ್ಯ ಜಿಲ್ಲೆ ರೈತರ ಪ್ರತಿಬಿಂಬವಾಗಿರುವ ಜಿಲ್ಲೆ, ಇಲ್ಲಿ ಕಲ್ಪನೆಗಳಲ್ಲಿ, ಊಹೆಗಳ ಮೇಲೆ ಗಿಮಿಕ್ ಮಾಡುವ ಪ್ರವೃತ್ತಿ ಮೇಳೈಸುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

ಪ್ರಜಾಪ್ರಭುತ್ವ ಉಳಿದರೆ ಶ್ರಮಿಕರ ಉಳಿವು

ಪ್ರಜಾಪ್ರಭುತ್ವ ಉಳಿದರೆ ಬಹುಸಂಖ್ಯಾತರಾಗಿರುವ ರೈತರು, ದಲಿತರು, ಬಡವರು, ಶ್ರಮಿಕರು ಉಳಿಯುತ್ತಾರೆ. ಈ ಹಿನ್ನಲೆಯಲ್ಲಿ ರಾಜಕೀಯ ನಾಯಕರ ವಿಚಾರಗಳು ಸತ್ಯದ ದರ್ಶನ ಮಾಡಿಸಬೇಕು. ರೈತರ ಶೇ.100ರಷ್ಟು ಸಮಸ್ಯೆಗಳನ್ನು ಯಾವ ಸರ್ಕಾರವು ಈಡೇರಿಸಲು ಸಾಧ್ಯವಿಲ್ಲ ಎಂಬ ವಾಸ್ತವ ನನಗೂ ಅರಿವಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯದ ಆರ್ಥಿಕ ಅನುದಾನ, ಬರ ಪರಿಹಾರ, ನೀರಾವರಿ ಅನುದಾನ ಮುಂತಾದ ವಂಚನೆಗಳ ಬಗ್ಗೆ ಮಾತನಾಡಿದರು.

ವಿಚಾರಗೋಷ್ಠಿಯಲ್ಲಿ ಪ್ರಾಸ್ತಾವಿಕವಾಗಿ ರೈತಸಂಘದ ರಾಜ್ಯಾದ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು. ಅಧ್ಯಕ್ಷತೆಯನ್ನು ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಪಿ.ರವಿಕುಮಾರ್ ಗೌಡ, ದರ್ಶನ್ ಪುಟ್ಟಣ್ಣಯ್ಯ, ದಿನೇಶ್ ಗೂಳಿಗೌಡ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ರೈತಸಂಘದ ಪ್ರಸನ್ನ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳನ್ನು ಜಾಗೃತ ಕರ್ನಾಟಕದ ಮುಖಂಡ ಎನ್.ನಾಗೇಶ್ ಸ್ವಾಗತಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!