Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವಾರದೊಳಗೆ ವಿ.ಸಿ ನಾಲೆಗಳಿಗೆ ನೀರು : ಚಲುವರಾಯಸ್ವಾಮಿ

ಸುಮಾರು 300 ಕೋಟಿ ರೂ.ವೆಚ್ಚದಲ್ಲಿ ಸ್ವಾತಂತ್ರದ ನಂತರ ಕೆ.ಆರ್.ಎಸ್ ಅಚುಕಟ್ಟು ವ್ಯಾಪ್ತಿಯ 40 ಕಿ.ಮೀ ಉದ್ದದ ನಾಲಾ ಆಧುನೀಕರಣ ಕಾಮಗಾರಿ ಕೈಗೊಂಡಿದ್ದು, ಈ ಪೈಕಿ 24 ಕಿ.ಮೀ ಕಾಮಗಾರಿ ಪೂರ್ಣಗೊಂಡಿದ್ದು, 4 ಕಿ.ಮೀ ಪ್ರಗತಿಯಲ್ಲಿರುತ್ತದೆ, ಇನ್ನೂ ಒಂದು ವಾರದೊಳಗೆ ನಾಲೆಗಳಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.

ಬುಧವಾರ ಕೆ.ಆರ್.ಎಸ್ ನಿಂದ ಕಟ್ಟೇರಿವರೆಗೆ ನಾಲಾ ಏರಿಯ ಮೂಲಕ ಕಾಮಗಾರಿಯ ಪರಿಶೀಲನೆ, ಅರಳಕುಪ್ಪೆಯಿಂದ ಚಾಕಶೆಟ್ಟಿಹಳ್ಳಿವರೆಗೆ ನಾಲಾ ಏರಿಯ ಮೂಲಕ, ಎಲೆಕೆರೆ ಹ್ಯಾಂಡ್ ಪೋಸ್ಟ್ ಸೇತುವೆ , ಹುಲಿಕೆರೆ ಸುರಂಗದಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲನೆ ನಡೆಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೆ.ಆರ್.ಎಸ್ ನಿಂದ ನೀರು ಬಿಡುಗಡೆ ಮಾಡಲು ಹಾಗೂ ರೈತರಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ರೈತರ ಅವಶ್ಯಕತೆಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ, ಈಗ ಕೈಗೊಂಡಿರುವ ಕಾಮಗಾರಿ ಅತ್ಯಂತ ಉತ್ತಮ ಗುಣಮಟ್ಟದಿಂದ ಕೂಡಿದೆ, ಈ ಬಗ್ಗೆ ಅನುಮಾನವಿದ್ದವರೂ ಎಲ್ಲಿ ಬೇಕಾದರೂ ಹೋಗಿ ಪರೀಕ್ಷೆ ಮಾಡಿಕೊಳ್ಳಬಹುದು, ನಮ್ಮ ರಾಜಕೀಯ ವಿರೋಧಿಗಳು ಮಾಡುವ ಟೀಕೆಗಳಿಗೆ ನಾವು ಕಿವಿಗೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ನಾಲಾ ಆಧುನೀಕರಣದಿಂದ ಅತ್ಯಂತ ವೇಗವಾಗಿ ಅಚ್ಚುಕಟ್ಟು ವ್ಯಾಪ್ತಿಗೆ ನೀರು ತಲುಪಲಿದೆ. 3 ದಿನ ತೆಗೆದುಕೊಳ್ಳುತ್ತಿದ್ದ ಸ್ಥಳಕ್ಕೆ ಕೇವಲ 1 ದಿನದಲ್ಲಿ ನೀರು ತಲುಪುತ್ತದೆ. ನಮ್ಮ ಅಧಿಕಾರಾವಧಿಯಲ್ಲಿ ರೈತರಿಗೆ ಒಳ್ಳೆಯದು ಮಾಡುವುದಕ್ಕಾಗಿ ಇಂತಹ ದೊಡ್ಡ ಕಾರ್ಯಕ್ಕೆ ಕೈ ಹಾಕಿದ್ದೇವೆ, ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಅವರಿಗೆ ಅಧಿಕಾರವಿದ್ದಾಗ ಏಕೆ ಇಂತಹ ಕೆಲಸಗಳನ್ನು ಮಾಡಲಿಲ್ಲ ಎಂದು ಪ್ರಶ್ನಿಸಿದರು.

ನಿಗಧಿತ ಅವಧಿಯೊಳಗೆ ನಾಲೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳಿಸಬೇಕು. ಕಳಪೆ ಕೆಲಸ ಕಂಡು ಬಂದರೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಆಧುನೀಕರಣ ಕಾಮಗಾರಿಯಿಂದ ವಿವಿಧ ತಾಲ್ಲೂಕುಗಳ ಕೊನೆಯ ಭಾಗಕ್ಕೂ ನೀರನ್ನು ಸುಲಭವಾಗಿ ತಲುಪಿಸಬಹುದು ಹಾಗೂ ಇದು ಶಾಶ್ವತ ಪರಿಹಾರವಾಗಿರುತ್ತದೆ. ಈ ನಾಲಾ ಭಾಗದಲ್ಲಿ ಬರುವ 18 ಕೆರೆಗಳಿಗೆ ನೀರು ತುಂಬಿಸಬಹುದು ಎಂದು ಸಚಿವರು ತಿಳಿಸಿದರು‌.

ಪರಿಶೀಲನೆಯ ವೇಳೆ ವಿಧಾನಸಭಾ ಶಾಸಕರಾದ ರಾಮೇಶ್ ಬಾಬು ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣಯ್ಯ, ಪಿ.ರವಿ ಕುಮಾರ್, ವಿಧಾನ ಪರಿಷತ್ ಶಾಸಕ ಮಧು ಮಾದೇಗೌಡ, ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ: ಕುಮಾರ, ಕಾ.ನೀ.ನಿ.ನಿ ಅಧೀಕ್ಷಕ ಇಂಜಿನಿಯರ್ ರಘುರಾಂ, ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!