Wednesday, October 23, 2024

ಪ್ರಾಯೋಗಿಕ ಆವೃತ್ತಿ

ವಯನಾಡ್ ಉಪಚುನಾವಣೆ | ಅಮೇಥಿಯಲ್ಲಿ ಸೋತ ಸ್ಮೃತಿ ಇರಾನಿ, ಪ್ರಿಯಾಂಕಾ ಗಾಂಧಿಗೆ ಎದುರಾಳಿ!

ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ವಯನಾಡ್ ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ರಾಯ್‌ ಬರೇಲಿಯನ್ನು ಉಳಿಸಿಕೊಂಡಿರುವ ರಾಹುಲ್, ವಯನಾಡ್ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರಿಂದ ತೆರವಾದ ವಯನಾಡ್‌ನಲ್ಲಿ ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನಿಂದ ರಾಹುಲ್ ಸಹೋದರಿ, ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಕಣಕ್ಕಿಳಿದಿದ್ದಾರೆ. ಇದೀಗ, ಪ್ರಿಯಾಂಕಾ ವಿರುದ್ಧ ಅಮೇಥಿಯಲ್ಲಿ ಸೋಲುಂಡ ಮಾಜಿ ಸಚಿವೆ ಸ್ಮೃತಿ ಇರಾನಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

1978ರಲ್ಲಿ, ಇಂದಿರಾ ಗಾಂಧಿಯವರು ಕರ್ನಾಟಕದ ಚಿಕ್ಕಮಗಳೂರಿನ ಉಪಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ರಾಜಕೀಯ ಮರುಜನ್ಮ ಪಡೆದಿದ್ದರು. ನಂತರ 1980ರಲ್ಲಿ ಆಂಧ್ರಪ್ರದೇಶದ ಮೇದಕ್ ಕ್ಷೇತ್ರದಿಂದ ಅವರು ಗೆಲುವು ಸಾಧಿಸಿದ್ದರು. ಅದೇ ರೀತಿ, 1999ರಲ್ಲಿ ಸೋನಿಯಾ ಗಾಂಧಿ ಉತ್ತರ ಪ್ರದೇಶದ ಅಮೇಥಿ ಮತ್ತು ಬಳ್ಳಾರಿಯಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ದಕ್ಷಿಣದಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು. ಬಳಿಕ, ಬಳ್ಳಾರಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಅಮೇಥಿ ಮತ್ತು ವಯನಾಡ್‌ನಲ್ಲಿ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಅವರು ಸೋತರೂ, ವಯನಾಡ್‌ ಜನರು ರಾಹುಲ್ ಕೈಹಿಡಿದ್ದರು. ದಕ್ಷಣದ ರಾಜ್ಯಗಳು ಗಾಂಧಿ ಕುಟುಂಬದ ಸದಸ್ಯರಿಗೆ ರಾಜಕೀಯವಾಗಿ, ಸಂಸತ್‌ನಲ್ಲಿ ಅಸ್ವಿತ್ವವನ್ನು ಉಳಿಸಿಕೊಳ್ಳಲು ನೆರವಾಗುತ್ತಿವೆ.

ಈವರೆಗೆ ಚುನಾವಣೆಗೆ ಸ್ಪರ್ಧಿಸದಿದ್ದ ಪ್ರಿಯಾಂಕಾ ಗಾಂಧಿ ಈಗ ಮೊದಲ ಬಾರಿಗೆ ಚುನಾವಣಾ ಅಭ್ಯರ್ಥಿಯಾಗಿ ರಾಜಕೀಯ ಅಖಾಡದಲ್ಲಿದ್ದಾರೆ. ಅವರು ವಯನಾಡ್‌ನಲ್ಲಿ ತಮ್ಮ ಚುನಾವಣಾ ರಾಜಕೀಯ ಪ್ರಾರಂಭಿಸಲು ಮುಂದಾಗಿದ್ದಾರೆ. ಅವರ ವಿರುದ್ಧ ಬಿಜೆಪಿ ಸಂಭಾವ್ಯ ಅಭ್ಯರ್ಥಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಊಹಾಪೋಹಗಳು ಚರ್ಚೆಯಾಗುತ್ತಿವೆ.

ಅದರಲ್ಲೂ, ಗಮನಾರ್ಹವಾಗಿ, ಕೇಂದ್ರ ಸಚಿವೆಯಾಗಿ ಸ್ಪರ್ಧಿಸಿದರೂ ಅಮೇಥಿಯನ್ನು ಉಳಿಸಿಕೊಳ್ಳಲಾಗದೆ, ಪರಾಜಿತಗೊಂಡಿದ್ದ ಸ್ಮೃತಿ ಇರಾನಿ ಹೆಸರು ಮುನ್ನೆಲೆಯಲ್ಲಿದೆ.

ಅಂದಹಾಗೆ, ಬಿಜೆಪಿ ಆಶ್ಚರ್ಯಕರವಾಗಿ ಮುಖ್ಯಮಂತ್ರಿಗಳನ್ನು ಬದಲಿಸುವುದು, ಅಭ್ಯರ್ಥಿಗಳನ್ನು ಬದಲಿಸುವುದನ್ನು ನಿರಂತವಾಗಿ ಮಾಡುತ್ತಲೇ ಬಂದಿದೆ. ಕಾಂಗ್ರೆಸ್‌ ನಾಯಕರ ವಿರುದ್ಧ ಎಲ್ಲಿಂದಲೋ, ಯಾರನ್ನೋ ತಂದು ಕಣಕ್ಕಿಳಿಸುವ ನಿರ್ಧರಗಳನ್ನು ಹಲವು ಬಾರಿ ಬಿಜೆಪಿ ತೆಗೆದುಕೊಂಡಿದೆ. 1999ರಲ್ಲಿ ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದಾಗ, ಅವರ ವಿರುದ್ಧ ಸುಷ್ಮಾ ಸ್ವರಾಜ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಆದರೆ, ಸುಷ್ಮಾ ಸ್ವರಾಜ್ ಸೋಲುಂಡಿದ್ದರು.

ಅದೇ ರೀತಿ, ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಗೋವಿಂದರಾಜ ನಗರದಿಂದ ವಿ ಸೋಮಣ್ಣ ಅವರನ್ನು ಹೊತ್ತೊಯ್ದು ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲೂ, ಆರ್ ಅಶೋಕ್ ಅವರನ್ನು ಪದ್ಮನಾಭನಗರದ ಜೊತೆಗೆ ಡಿ.ಕೆ ಶಿವಕುಮಾರ್ ವಿರುದ್ಧ ಕನಕಪುರದಲ್ಲೂ ಕಣಕ್ಕಿಳಿಸಿತ್ತು. ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳೇ ತಮ್ಮ ಮತಗಳನ್ನು ಬದಲಿಸುವಂತೆ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿಸಿತ್ತು.

ಬಿಜೆಪಿಯ ಇಂತಹ ತಂತ್ರಗಳು ಹೆಚ್ಚಿನ ಬಾರಿ ಸೋತಿದ್ದರೂ, ಕೆಲವು ಬಾರಿ ಯಶಸ್ಸು ಕಂಡಿವೆ. ಹೀಗಾಗಿ, ತಮಗೆ ಸರಿಯಾದ ನೆಲೆಯೇ ಇಲ್ಲದ ಕೇರಳದಲ್ಲಿ ಬಿಜೆಪಿ, ಉತ್ತರ ನಾಯಕಯನ್ನು ತಂದು ಕಣಕ್ಕಿಳಿಸಿದರೂ, ಕಾಂಗ್ರೆಸ್ ವಿರುದ್ಧ ಗೆಲುವು ಸುಲಭವಲ್ಲ ಎಂಬುದು ಸ್ಪಷ್ಟವಾಗಿದೆ. ಅದಾಗ್ಯೂ, ಕಾಂಗ್ರೆಸ್‌/ಪ್ರಿಯಾಂಕಾ ಅವರನ್ನು ಸೋಲಿಸಲು, ಮತಗಳನ್ನು ವಿಭಜಿಸಲು ಯಾವುದೇ ರೀತಿಯ ತಂತ್ರವನ್ನು ಬಿಜೆಪಿ ಎಣೆಯಬಹುದು. ಅದಾಗ್ಯೂ, ಸ್ಮೃತಿ ಇರಾನಿ ವಯನಾಡ್‌ಗೆ ಬಂದರೆ, ಕಾಂಗ್ರೆಸ್‌ಗೆ ಯಾವುದೇ ಪೆಟ್ಟಾಗಲಾರದು ಎಂಬುದು ಕೂಡ ಚರ್ಚೆಯಲ್ಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!