Wednesday, October 23, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಅರ್ಥಪೂರ್ಣ ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನ

ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಮಳವಳ್ಳಿಯಲ್ಲಿ ಆಚರಿಸಲು ಪೂರ್ವಭಾವಿ ಸಭೆಯಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಯಿತು.

ತಹಶೀಲ್ದಾರ್ ಲೋಕೇಶ್ ಮಾತನಾಡಿ, ತಾಲ್ಲೂಕು ಆಡಳಿತದ ವತಿಯಿಂದ ಜೂನ್ 27ರಂದು ನಡೆಯಲಿರುವ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಯಶಸ್ವಿಗೆ ಮುಖಂಡರು ತಮ್ಮ ಸಲಹೆಗಳನ್ನು ನೀಡಬೇಕೆಂದು ಕೋರಿದರು.

ಒಕ್ಕಲಿಗರ ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಎಲ್ಲಾ ಸಮುದಾಯದ ಅಭಿವೃದ್ದಿಗಾಗಿ ಶ್ರಮಿಸಿದ್ದು, ಅವರು ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ, ಜೊತೆಗೆ ಎಲ್ಲಾರು ಒಗ್ಗಟ್ಟಾಗಿ ಕೆಂಪೇಗೌಡರ ಜಯಂತಿಯನ್ನು ಆಚರಿಸಬೇಕಾಗಿರುವುದರಿಂದ ಎಲ್ಲಾ ಸಮುದಾಯದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಾಲ್ಲೂಕು ಆಡಳಿತ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳಬೇಕು, ಜಾನಪದ ಕಲಾಮೇಳದೊಂದಿಗೆ ಕೆಂಪೇಗೌಡರ ಭಾವಚಿತ್ರ ಮೆರವಣಿಗೆ ಮಾಡಬೇಕು, ಸಾಧಕರಿಗೆ ಸನ್ಮಾನ ಮಾಡಬೇಕೆಂದು ಸಲಹೆ ನೀಡಿದರು.

ಮುಖಂಡ ಎನ್.ಕೆ ಕುಮಾರ್ ಮಾತನಾಡಿ, ಕೆಂಪೇಗೌಡರ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಮಾಡಬೇಕು, ಎಲ್ಲಾ ಹೋಬಳಿಗಳಲ್ಲಿ ಪ್ರಚಾರಕೊಟ್ಟು, ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಭಾಗವಹಿಸುವಂತೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳು ಶ್ರಮಿಸಬೇಕು, ಅರ್ಥಪೂರ್ಣ ಜಯಂತಿ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ ರಾಜು ಮಾತನಾಡಿ, ಕೆಂಪೇಗೌಡರು ತಮ್ಮ ಆಳ್ವಿಕೆಯ ಕಾಲದಲ್ಲಿ ಒಂದೊಂದು ಸಮುದಾಯಕ್ಕೂ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ, ಎಲ್ಲಾ ಜನಾಂಗದವರು ಸ್ಮರಿಸುವ ಸಾಧಕರು ಕೆಂಪೇಗೌಡರು ಆಗಿರುವುದರಿಂದ ಎಲ್ಲಾ ಜನಂಗದವರನ್ನು ಕರೆದು ಹಿಂದೆ ನಡೆಸಿಕೊಂಡು ಬರುತ್ತಿದ್ದ ರೀತಿಯಲ್ಲಿಯೇ ಅದ್ದೂರಿಯಾಗಿ ಕೆಂಪೇಗೌಡರ ಜಯಂತಿಯನ್ನು ಆಚರಿಸಬೇಕೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ತಹಶೀಲ್ದಾರ್ ಲೊಕೇಶ್ ಮಾತನಾಡಿ, ಮುಖಂಡರ ಸಲಹೆ ಮತ್ತು ಸಹಕಾರದೊಂದಿಗೆ ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು., ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ ತಮ್ಮ ಇಲಾಖೆಗೆ ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಬೇಕೆಂದು ಸೂಚನೆ ನೀಡಿದರು.

ಜೂನ್ 27ರಂದು ತಾಲ್ಲೂಕು ಪಂಚಾಯಿತಿಯಿಂದ ಮಳವಳ್ಳಿ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದವರೆಗೆ ಜಾನಪದ ಕಲಾಮೇಳದೊಂದಿಗೆ ಕೆಂಪೇಗೌಡರ ಭಾವಚಿತ್ರ ಮೆರವಣಿಗೆ ನಡೆಯಲಿದೆ, ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಪಿ.ಎಂ ನರೇಂದ್ರಸ್ವಾಮಿ ವಹಿಸಲಿದ್ದಾರೆ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಅಭಿನಂದಿಸುವುದರ ಜೊತೆಗೆ ಕೆಂಪೇಗೌಡರ ಸಾಧನೆ ಬಗ್ಗೆ ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಗ್ರಾಮಪಂಚಾಯಿತಿ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಲಾಗುವುದು, ತಾಲ್ಲೂಕು ಆಡಳಿತದ ವತಿಯಿಂದ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಲು ಶ್ರಮಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಮತ ಸೇರಿದಂತೆ ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!