Thursday, October 24, 2024

ಪ್ರಾಯೋಗಿಕ ಆವೃತ್ತಿ

ಪ್ರಶ್ನೆ ಪತ್ರಿಕೆ ಸೋರಿಕೆ| ಇಸ್ರೋ ಮಾಜಿ ಅಧ್ಯಕ್ಷರ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿ ರಚನೆ

ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಬುಧವಾರ UGC-NET ಪರೀಕ್ಷೆಯನ್ನು ರದ್ದು ಮಾಡಿತ್ತು. ಇದೇ ರೀತಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ನೀಟ್ ಪರೀಕ್ಷೆಯ ಬಗ್ಗೆಯೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅದನ್ನು ಕೂಡ ರದ್ದು ಮಾಡುವುದಕ್ಕೆ ವಿದ್ಯಾರ್ಥಿಗಳು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದರೂ, ಕೇಂದ್ರ ಸರ್ಕಾರ ಹಿಂದೇಟು ಹಾಕಿತ್ತು.

ದೇಶದಲ್ಲಿ ಭಾರೀ ವಿವಾದ ಎಬ್ಬಿಸಿರುವ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದವು ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿರುವ ನಡುವೆಯೇ ಕೇಂದ್ರ ಸರ್ಕಾರವು, ಇದೇ ವಿವಾದಕ್ಕೆ ಸಂಬಂಧಿಸಿದಂತೆ ಇಸ್ರೋ ಮಾಜಿ ಅಧ್ಯಕ್ಷ ಮತ್ತು ಐಐಟಿ ಕಾನ್ಪುರ ಆಡಳಿತ ಮಂಡಳಿಯ ಅಧ್ಯಕ್ಷ ಡಾ ಕೆ ರಾಧಾಕೃಷ್ಣನ್ ಅವರ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿಯನ್ನು ರಚಿಸಿ, ಆದೇಶ ಹೊರಡಿಸಿದೆ.

“ಪರೀಕ್ಷೆಗಳನ್ನು ಪಾರದರ್ಶಕ, ಸುಗಮ ಮತ್ತು ನ್ಯಾಯ ಸಮ್ಮತವಾಗಿ ನಡೆಸುವುದನ್ನು ಖಚಿತ ಪಡಿಸಿಕೊಳ್ಳುವುದಕ್ಕಾಗಿ ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದ್ದೇವೆ. ಪರೀಕ್ಷಾ ಪ್ರಕ್ರಿಯೆಯ ಕಾರ್ಯವಿಧಾನದಲ್ಲಿ ಸುಧಾರಣೆ, ಡೇಟಾ ಭದ್ರತಾ ಪ್ರೋಟೋಕಾಲ್‌ಗಳಲ್ಲಿ ಸುಧಾರಣೆ ಮತ್ತು ಎನ್‌ಟಿಎಯ ರಚನೆ ಮತ್ತು ಕಾರ್ಯನಿರ್ವಹಣೆಯ ಕುರಿತು ಶಿಫಾರಸುಗಳನ್ನು ಮಾಡಲು ಸಮಿತಿಗೆ ಸೂಚನೆ ನೀಡಲಾಗಿದೆ. ಸಮಿತಿಯು ತನ್ನ ವರದಿಯನ್ನು ಮುಂದಿನ ಎರಡು ತಿಂಗಳೊಳಗೆ ಸಚಿವಾಲಯಕ್ಕೆ ಸಲ್ಲಿಸಬೇಕು” ಎಂದು ಶಿಕ್ಷಣ ಸಚಿವಾಲಯವು ಮಾಧ್ಯಮ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ಡಾ ಕೆ ರಾಧಾಕೃಷ್ಣನ್ ಅವರು ಮುಖ್ಯಸ್ಥರಾಗಿರುವ ಉನ್ನತ ಮಟ್ಟದ ತಜ್ಞರ ಸಮಿತಿಯಲ್ಲಿ ದೆಹಲಿಯ ಏಮ್ಸ್‌ನ ಮಾಜಿ ನಿರ್ದೇಶಕರಾದ ಡಾ. ರಂದೀಪ್ ಗುಲೇರಿಯಾ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ . ಬಿ.ಜೆ.ರಾವ್, ಐಐಟಿ ಮದ್ರಾಸ್‌ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಪ್ರೊ. ರಾಮಮೂರ್ತಿ ಕೆ, ಕರ್ಮಯೋಗಿ ಭಾರತ್ ಮಂಡಳಿಯ ಸದಸ್ಯ ಪಂಕಜ್ ಬನ್ಸಾಲ್, ಐಐಟಿ ದೆಹಲಿಯ ವಿದ್ಯಾರ್ಥಿ ವ್ಯವಹಾರಗಳ ಡೀನ್ ಪ್ರೊ. ಆದಿತ್ಯ ಮಿತ್ತಲ್, ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಗೋವಿಂದ್ ಜೈಸ್ವಾಲ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!