Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಮುಖಂಡರು ನಿಖರ ಮಾಹಿತಿ ಪಡೆದು ಮಾತನಾಡಲಿ: ಸಿ.ಆರ್.ರಮೇಶ್

ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ, ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳಿಕೆ ನೀಡಿರುವ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ ಅವರಿಗೆ ನಿಖರ ಮಾಹಿತಿ ಪಡೆದು ಮಾತನಾಡಬೇಕು ಎಂದು ಕಾಂಗ್ರೆಸ್ ಕಿಸಾನ್ ಘಟಕದ ಮೇಲುಕೋಟೆ ಅಧ್ಯಕ್ಷ ಸಿ.ಆರ್.ರಮೇಶ್
ತಿರುಗೇಟು ನೀಡಿದರು.

ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಿದೆ. ಜತೆಗೆ ಮಂಡ್ಯ ಜಿಲ್ಲೆ ಅಭಿವೃದ್ಧಿಗಾಗಿ ಮೈಶುಗರ್ ಕಾರ್ಖಾನೆ ಹೊಸದಾಗಿ ಸ್ಥಾಪಿಸಲು ಮುಂದಾಗಿದೆ. ಅಲ್ಲದೇ ವಿ.ಸಿ.ಫಾರಂ ಬಳಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಹಾಗೂ‌ ವಿ.ಸಿ ನಾಲೆ ಕೊನೆ ಭಾಗದ ರೈತರಿಗೆ ನೀರೋದಗಿಸಲು ನಾಲೆ ಆಧುನೀಕರಣ ಇವೆಲ್ಲವೂ ಅಭಿವೃದ್ಧಿ ಕೆಲಸವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.

ಜಿಲ್ಲೆಯ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಲಾಭ ನಿರೀಕ್ಷಿಸದೆ ಮೈಶುಗರ್ ಪ್ರಾರಂಭಿಸಿ ರೈತರಿಗೆ ನಿರ್ದಿಷ್ಟ ಅವಧಿಯಲ್ಲಿ ಹಣ ನೀಡಿದ್ದು, ಈ ಸಾಲಿನಲ್ಲೂ ಕಬ್ಬು ನುರಿಸಲು ಬಾಯ್ಲರ್ ಪೂಜೆ ಮಾಡಲಾಗಿದೆ ಎಂದರು.

ನಿಮ್ಮಂತಹ ಕೆಲವು ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳ ಬಗ್ಗೆ ವೃಥಾ ಟೀಕೆ ಮಾಡುತ್ತಿದ್ದಾರೆ. ಆದರೆ ಈ ಯೋಜನೆಯಿಂದ ರಾಜ್ಯದಲ್ಲಿ ಲಕ್ಷಾಂತರ ಬಡ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸುತ್ತಿವೆ. ಇಡೀ ದೇಶವೇ ಗ್ಯಾರಂಟಿ ಯೋಜನೆಗಳನ್ನು ಕೊಂಡಾಡುತ್ತಿವೆ. ಇದು ಬಿಜೆಪಿ ನಾಯಕರಿಗೆ ತಿಳಿದಿದೆಯೇ, ಗ್ಯಾರಂಟಿ ಯೋಜನೆಗಳು ಬೇಡವೆನ್ನುವ ಬಿಜೆಪಿ ಮುಖಂಡರು ಈ ಯೋಜನೆ ಪಡೆಯದೇ ದೂರ ಉಳಿದಿದ್ದಾರೆಯೇ ಎಂದು ತಿರುಗೇಟು ನೀಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ನೀಡಿದಂತಹ ಮೋದಿ ಗ್ಯಾರಂಟಿಗಳಾದ ದುಡಿಯುವ ವರ್ಗಕ್ಕೆ ವಿಶ್ವಕರ್ಮ ಯೋಜನೆ 1ಲಕ್ಷ ರೂ.,ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ 5 ಲಕ್ಷ, ಯುವ ಉದ್ಯಮಿಗಳಿಗೆ ಮುದ್ರಾ ಯೋಜನೆಯ 2 ಲಕ್ಷ ಬೀದಿ ಮಹಿಳೆಯರಿಗೆ 1ಲಕ್ಷ, ಪ್ರತಿ ವ್ಯಕ್ತಿಗೂ‌ ವಿಮೆ ಸೌಲಭ್ಯ, 2 ಲಕ್ಷದ ಗ್ಯಾರಂಟಿ ಕಾರ್ಡ್ ಇನ್ನೂ ದೆಹಲಿಯಲ್ಲೇ ಇದೆಯಲ್ಲ, ಎಷ್ಟು ಫಲಾನುಭವಿಗಳಿಗೆ ನೀಡಲಾಗಿದೆ ಎಂಬ ನಿಖರ ಮಾಹಿತಿ ತಿಳಿಸಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ಬೀಳದು

ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರು ರಾಜ್ಯ ಸರ್ಕಾರ ಬೀಳಲಿದೆ ಎಂಬ ಹಗಲು ಕನಸು ಕಾಣುತ್ತಿದ್ದಾರೆ. ಇದು ಅವರ ಭ್ರಮೆಯಷ್ಟೇ. ರಾಜ್ಯದ ಜನತೆ ಸ್ಪಷ್ಟ ಬಹುಮತ ನೀಡಿ 136 ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಹೀಗಾಗಿ 5 ವರ್ಷ ಸರ್ಕಾರ ಸುಭದ್ರವಾಗಿರಲಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ 4 ಜನ ಸಿಎಂಗಳನ್ನು ಹಾಗೂ ಸರ್ಕಾರ ನೀಡಿದ ಸುಳ್ಳು ಕೊಡುಗೆಗಳನ್ನು ರಾಜ್ಯದ ಜನತೆ ಮರೆತಿಲ್ಲ. ನಮ್ಮ ಪಕ್ಷದ ಆಂತರೀಕ ವಿಚಾರದಲ್ಲಿ ವಿರೋಧ ಪಕ್ಷಗಳು ತಲೆ ತೂರಿಸುವ ಬದಲು ವಿರೋಧ ಪಕ್ಷದ ಸ್ಥಾನದ ಜವಾಬ್ದಾರಿ ನಿಭಾಯಿಸಲಿ ಎಂದರು.

ಹೈಕಮಾಂಡ್ ನಿರ್ಧರಿಸಲಿದೆ

ರಾಜ್ಯ ಸರ್ಕಾರದಲ್ಲಿ ಮುಂದಿನ ಸಿಎಂ ಯಾರಾಗಬೇಕೆಂಬುದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಲಿದೆ. ಸ್ವಾಮೀಜಿ ಅವರಿಂದ ಹೇಳಿಕೆ ಕೊಡಿಸುವ ಅವಶ್ಯಕತೆ ಇಲ್ಲ. ಮಾಜಿ ಸಿಎಂ ಯಡಿಯೂರಪ್ಪ ಮಠ ಮಾನ್ಯಗಳಿಗೆ ಅನುದಾನ ನೀಡಿದ್ದರಿಂದ ಬಹುತೇಕ ಸ್ವಾಮೀಜಿಗಳು ಬಿಜೆಪಿ ಪರ ಇದ್ದಾರೆ. ಜೋಡೆತ್ತಿನಂತೆ ಕೆಲಸ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಏಳಿಗೆ ಸಹಿಸದ ಬಿಜೆಪಿ ನಾಯಕರೇ ಇಂತಹ ಕೆಲಸ ಮಾಡಿರಬಹುದು. ಕಾಂಗ್ರೆಸ್ ಕಾರ್ಯಕರ್ತರು ಕೈ ಕಟ್ಟಿ ಕೂರುವುದಿಲ್ಲ. ಮೋದಿ ಗ್ಯಾರಂಟಿ ಕಾರ್ಡ್ ಹಿಡಿದು ಜಾರಿಗೆ ಒತ್ತಾಯಿಸಿ ಬೀದಿಗಿಳಿದು ರಾಜ್ಯದದ್ಯಾಂತ ಹೋರಾಟ ನಡೆಸಬೇಕಾದ ಪರಿಸ್ಥಿತಿ ಉದ್ಬವಿಸಲಿದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ದುದ್ದ ಎಪಿಸಿಎಸ್ ಮಾಜಿ ಅಧ್ಯಕ್ಷ ಎಚ್.ಎಂ.ಉದಯಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ನಿರ್ದೇಶಕರಾದ ಎನ್.ಕೃಷ್ಣೇಗೌಡ, ಡಿ.ಹುಚ್ಚೇಗೌಡ, ಕಾಂಗ್ರೆಸ್ ಮುಖಂಡರಾದ ಪುರದ ದೇವಣ್ಣ, ಕೆಂಪೇಗೌಡ, ಕಿರಣ್ ಕುಮಾರ್, ಸಂಪಹಳ್ಳಿ ದೇವರಾಜು, ಶಿವರುದ್ರ, ಉಮ್ಮಡಹಳ್ಳಿ ನಾಗೇಶ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!