Thursday, September 19, 2024

ಪ್ರಾಯೋಗಿಕ ಆವೃತ್ತಿ

ಧರ್ಮಸ್ಥಳ ಸಂಘದ ಪ್ರತಿನಿಧಿ ಪೂಜಾ ಕೊಲೆ ಪ್ರಕರಣ| ದೃಶ್ಯ ಸಿನಿಮಾದ ಮಾದರಿಯಲ್ಲಿ ಪೊಲೀಸರನ್ನು ಯಾಮಾರಿಸಲು ಯತ್ನಿಸಿ ಕೊನೆಗೂ ಸಿಕ್ಕಿಬಿದ್ದ ಆರೋಪಿ!

ಮುಚ್ಚಿ ಹೋಗಬಹುದಾಗಿದ್ದ ಮಲೆನಾಡಿನ ಕುಗ್ರಾಮವೊಂದರ ಯುವತಿಯ ನಾಪತ್ತೆ-ಹತ್ಯೆ ಪ್ರಕರಣವೊಂದು, ತೀರ್ಥಹಳ್ಳಿ ತಾಲೂಕು ಆಗುಂಬೆ ಠಾಣಾ ಪೊಲೀಸರ ಕಾರ್ಯದಕ್ಷತೆ–ಪ್ರಾಮಾಣಿಕ ತನಿಖೆಯಿಂದ ಬಯಲಿಗೆ ಬರುವಂತಾಗಿದೆ.

ಎಲ್ಲದಕ್ಕಿಂತ ಮುಖ್ಯವಾಗಿ ಯುವತಿಯ ಕೊಲೆ ಮಾಡಿದ್ದ ಆರೋಪಿ, ತನ್ನ ಮೇಲೆ ಸಣ್ಣ ಅನುಮಾನವೂ ಬರಬಾರದೆಂದು, ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರೊಂದಿಗೆ ಎರಡ್ಮೂರು ದಿನಗಳ ಕಾಲ ಓಡಾಡಿಕೊಂಡಿದ್ದ ಎಂಬ ಮಾಹಿತಿ ದೊರೆತಿದೆ. ಆದರೆ ಮಾಳೂರು ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್ ಕೆ ಹಾಗೂ ಆಗುಂಬೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಂಗನಾಥ್ ಅಂತರಗಟ್ಟಿ ನೇತೃತ್ವದ ಪೊಲೀಸ್ ತಂಡದ ತನಿಖೆಯ ಚಾಕಚಕ್ಯತೆಯಿಂದ, ಜೊತೆಯಲ್ಲಿಯೇ ಓಡಾಡಿಕೊಂಡಿದ್ದ ಆರೋಪಿಯು ಜೈಲು ಸೇರುವಂತಾಗಿದೆ. ‘ದೃಶ್ಯಂ’ ಸಿನಿಮಾ ಶೈಲಿಯ ಮರ್ಡರ್ ಮಿಸ್ಟರಿ ಪ್ರಕರಣವೊಂದು ಬೆಳಕಿಗೆ ಬರುವಂತಾಗಿದೆ.

ತೀರ್ಥಹಳ್ಳಿ ತಾಲೂಕಿನ ಹಸಿಮನೆ ಹೊಸೂರು ಗ್ರಾಮದ ಪೂಜಾ ಎ ಕೆ (24) ಎಂಬ ಯುವತಿ ನಾಪತ್ತೆಯಾದ ಸಂಬಂಧ, ಆಗುಂಬೆ ಪೊಲೀಸ್ ಠಾಣೆಯಲ್ಲಿ ಕಳೆದ ಜೂನ್ 30ರಂದು ಪ್ರಕರಣ ದಾಖಲಾಗಿತ್ತು. ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿಯಾದ ಈಕೆ, ಕೆಲಸಕ್ಕೆಂದು ಮನೆಯಿಂದ ಬೆಳಗ್ಗೆ ಹೊರಹೋದ ಮಗಳು ಮನೆಗೆ ಆಗಮಿಸಿಲ್ಲ ಎಂದು ಆಗುಂಬೆ ಠಾಣೆಗೆ ತೆರಳಿದ್ದ ತಂದೆ, ಪೊಲೀಸರಿಗೆ ದೂರು ನೀಡಿದ್ದರು.

ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಗುಂಬೆ ಠಾಣಾ ಪಿಎಸ್ಐ ರಂಗನಾಥ್ ಅಂತರಗಟ್ಟಿ ಅವರು, ತಕ್ಷಣವೇ ತನಿಖೆ ನಡೆಸಲು ಪ್ರಾರಂಭಿಸಿದ್ದಾರೆ.

ಯುವತಿಯ ಮೊಬೈಲ್ ಫೋನ್, ಕಾಲ್ ರೆಕಾರ್ಡ್ ವಿವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮನೆ ಮನೆಗೆ ತೆರಳಿ ಯುವತಿಯ ಕುರಿತಂತೆ ಮಾಹಿತಿ ಕಲೆ ಹಾಕಿದ್ದರು. ಹಲವು ಜನರನ್ನು ವಿಚಾರಣೆಗೊಳಪಡಿಸಿದ್ದರು.

ಈ ವೇಳೆ ಯುವತಿಯ ಸಂಬಂಧಿ ಹಾಗೂ ಪಿಕ್‌ಅಪ್ ವಾಹನ ಚಾಲನೆ ಕೆಲಸ ಮಾಡುತ್ತಿದ್ದ ನಾಲೂರು ಒಡೆದ ಕೊಡಗೆ ಗ್ರಾಮದ ನಿವಾಸಿ ಮಣಿಕಂಠ (25) ಎಂಬಾತ, ಪೂಜಾಳು ಕೆಂಪು ಕಾರೊಂದರಲ್ಲಿ ಹೋಗಿದ್ದನ್ನು ನೋಡಿದ್ದಾಗಿ ಹೇಳಿದ್ದ. ತಾನೂ ಕೂಡ ಆಕೆಯ ಮೊಬೈಲ್ ಪೋನ್ ಗೆ ಕರೆ ಮಾಡಿ ಮಾತನಾಡಿದ್ದೆ ಎಂದು ತಿಳಿಸಿದ್ದ.

ಮಣಿಕಂಠ ನೀಡಿದ ಕಾರಿನ ಮಾಹಿತಿ ಆಧಾರದ ಮೇಲೆ ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದರು. ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದ್ದರು.

ಆಗುಂಬೆಯಲ್ಲಿ ನಾಪತ್ತೆಯಾಗಿದ್ದ ಯುವತಿ
ಕೊಲೆಯಾದ ಯುವತಿ ಪೂಜಾ ಹಾಗೂ ಆರೋಪಿ ಮಣಿಕಂಠ

ಎರಡ್ಮೂರು ದಿನಗಳ ಕಾಲ ಮಣಿಕಂಠ ಕೂಡ ಪೊಲೀಸರು ಹಾಗೂ ಯುವತಿಯ ಕುಟುಂಬದವರ ಜೊತೆಗೇ ಪೂಜಾಳ ಪತ್ತೆ ಕಾರ್ಯದಲ್ಲಿ ಓಡಾಡಿಕೊಂಡಿದ್ದ. ಪೊಲೀಸರು ಎಷ್ಟೆ ಪ್ರಯತ್ನ ನಡೆಸಿದರೂ ಪೂಜಾಳ ಸುಳಿವು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇಡೀ ಪ್ರಕರಣ ನಿಗೂಢವಾಗಿ ಪರಿಣಮಿಸಿತ್ತು. ಆ ಬಳಿಕ ಮಣಿಕಂಠನ ಸ್ನೇಹಿತನೋರ್ವನನ್ಜು ಪೊಲೀಸರು ವಿಚಾರಣೆಗೊಳಪಡಿಸಿದ್ದರು.

ಈ ವೇಳೆ ಯುವತಿ ನಾಪತ್ತೆಯಾದ ದಿನ ತಾನು ಹಾಗೂ ಮಣಿಕಂಠ ಜೊತೆಯಲ್ಲಿಯೇ ಇರುವುದಾಗಿ ಹೇಳಿಕೊಂಡಿದ್ದ. ಅನುಮಾನದ ಮೇರೆಗೆ ಪೊಲೀಸರೊಂದಿಗೇ ಇದ್ದ ಪಿಕಪ್ ಚಾಲಕ ಮಣಿಕಂಠನನ್ನು ಮತ್ತೊಮ್ಮೆ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಮಣಿಕಂಠ, ತನ್ನ ಕಾರನ್ನು ಸ್ನೇಹಿತ ಕೊಂಡೊಯ್ದಿದ್ದ. ಆತನ ಪಿಕ್ ಅಪ್ ವಾಹನದಲ್ಲಿ ತಾನು ಮಲಗಿಕೊಂಡಿದ್ದೆ’ ಎಂದು ತದ್ವಿರುದ್ದ ಮಾಹಿತಿ ನೀಡಿದ್ದಾನೆ.

ಇದರಿಂದ ಅನುಮಾನಗೊಂಡ ಆಗುಂಬೆ ಪೊಲೀಸರು, ಕಳೆದ ಕೆಲ ದಿನಗಳಿಂದ ತಮ್ಮ ಜೊತೆಯಲ್ಲಿಯೇ ಓಡಾಡಿಕೊಂಡಿದ್ದ ಮಣಿಕಂಠನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಆ ಬಳಿಕ ತನಿಖಾಧಿಕಾರಿಗಳು ತಮ್ಮದೇ ಶೈಲಿಯಲ್ಲಿ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಪೂಜಾಳ ಹತ್ಯೆಯ ಎಲ್ಲ ವೃತ್ತಾಂತವನ್ನು ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳ ಪರಿಶೀಲನೆ ನಡೆಸಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಕೆ ಮಿಥುನ್ ಕುಮಾರ್

ಕೊಲೆಯಾದ ಪೂಜಾಳಿಗೆ ಕರೆ ಮಾಡಿ ಕರೆಯಿಸಿಕೊಂಡಿದ್ದ ಆರೋಪಿಯು, ಕಾರೊಂದರಲ್ಲಿ ಆಕೆಯನ್ನು ನಾಲೂರು ಕೊಳಿಗೆ ಗ್ರಾಮದ ಕವಲೇಗುಡ್ಡದ ಬಳಿ ಕರೆದೊಯ್ದಿದ್ದ. ಅಲ್ಲಿ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿದ್ದ. ನಂತರ ಮೃತದೇಹವನ್ನು ಕವಲೇಗುಡ್ಡದ ಬೆಟ್ಟದ ಮೇಲಿಂದ ಕೆಳಕ್ಕೆ ಎಸೆದು, ಆತ್ಮಹತ್ಯೆ ಎಂಬಂತೆ ಕಾಣುವಂತಾಗಲು ಪ್ರಯತ್ನಿಸಿದ್ದ. ಈ ಎಲ್ಲ ಸಂಗತಿಯನ್ನು ಪೊಲೀಸರ ತನಿಖೆಯ ವೇಳೆ ಬಾಯ್ಬಿಟ್ಟಿರುವುದಾಗಿ ತಿಳಿದುಬಂದಿದೆ.

ಇದರ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಭಾನುವಾರ (ಜು. 7) ರಂದು ಘಟನಾ ಸ್ಥಳಕ್ಕೆ ಕರೆದೊಯ್ದಿದ್ದರು. ಈ ವೇಳೆ ಮೃತದೇಹವು ಮರವೊಂದರ ರೆಂಬೆಗೆ ಸಿಲುಕಿಕೊಂಡು ಭಾಗಶಃ ಕೊಳೆತ ಸ್ಥಿತಿಯಲ್ಲಿರುವುದು ಪತ್ತೆಯಾಗಿತ್ತು.

ಕೊಲೆಗೆ ಕಾರಣವೇನು ?

ಸುಮಾರು ಎರಡು ವರ್ಷಗಳ ಹಿಂದೆ ಪೂಜಾಳ ವಿವಾಹವು ಯುವಕನೋರ್ವನೊಂದಿಗೆ ನಡೆದಿತ್ತು. ಆದರೆ ಕೌಟುಂಬಿಕ ಕಲಹದ ಕಾರಣದಿಂದಾಗಿ ಪೂಜಾ ತವರು ಮನೆ ಸೇರಿದ್ದಳು. ತದನಂತರ ಸಂಬಂಧಿ ಮಣಿಕಂಠನ ಜೊತೆ ಹೆಚ್ಚಿನ ಒಡನಾಟವಿಟ್ಟುಕೊಂಡಿದ್ದಳು. ಈ ನಡುವೆ ಪೂಜಾಳು ಮತ್ತೋರ್ವ ಯುವಕನೊಂದಿಗೆ ಸಲುಗೆಯಿಂದಿದ್ದಾಳೆ ಎಂಬುದನ್ನು ಆರೋಪಿ ಮಣಿಕಂಠ ಅರಿತುಕೊಂಡಿದ್ದ.

ಪೂಜಾಳ ಹುಟ್ಟುಹಬ್ಬಕ್ಕೆ ಮಣಿಕಂಠ ಕೊಡಿಸಿದ್ದ ಕೇಕ್ ಅನ್ನು ಪೂಜಾಳು, ಆರೋಪಿಯ ಬದಲಾಗಿ ಸಲುಗೆಯಿಂದಿದ್ದ ಯುವಕನೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಇದರಿಂದ ಮಣಿಕಂಠ ಮತ್ತಷ್ಟು ಆಕ್ರೋಶಗೊಂಡಿದ್ದ.

ಕೊಲೆಗಾಗಿ ಪ್ಲಾನ್ ಮಾಡಿದ್ದ

ಮಣಿಕಂಠ, ಪೂಜಾಳನ್ನು ಕೊಲೆ ಮಾಡುವ ಉದ್ದೇಶದಿಂದಲೇ ಎಲ್ಲ ರೀತಿಯಿಂದಲೇ ಪೂರ್ವ ಯೋಜನೆ ಮಾಡಿಕೊಂಡು ಬಂದಿದ್ದ ಎಂಬ ಅಂಶ ತನಿಖೆಯ ವೇಳೆ ತಿಳಿದುಬಂದಿದೆ.

ಆತ, ತಾನು ಆಕೆಗೆ ನೀಡಿದ್ದ 40 ಸಾವಿರ ಹಣ ಕೊಡುವಂತೆ ಮೆಸೇಜ್ ಮಾಡಿ, ಮೊಬೈಲ್ ಸ್ವಿಚ್ ಆಫ್ ಆಗುತ್ತದೆ ಎಂದು ಹೇಳಿದ್ದ. ನಂತರ ಆತನೇ ಮೊಬೈಲ್‌ ಆಫ್‌ ಮಾಡಿ ನಂತರ ಚಾರ್ಜ್ ಹಾಕಿದ ಹಾಗೆ ಮಾಡಿ ಕೊಲೆ ಮಾಡಿದ ನಂತರ ಮತ್ತೆ ಆಕೆ ಮೊಬೈಲ್‌ಗೆ ದುಡ್ಡು ನೀಡುವಂತೆ ಮೆಸೇಜ್ ಹಾಕಿದ್ದ. ಇದು ಪೊಲೀಸರಿಗೂ ಹಾದಿ ತಪ್ಪುವಂತೆ ಮಾಡಿತ್ತು.

ನಂತರ ಸಿಡಿಆ‌ರ್ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಮಣಿಕಂಠನನ್ನು ಪ್ರಶ್ನೆ ಮಾಡಿದ್ದಾರೆ. ಆಗ ತನ್ನ ಎಲ್ಲ ತಪ್ಪುಗಳನ್ನು ಒಪ್ಪಿಕೊಂಡು, ಬಳಿಕ ಕೊಲೆ ಮಾಡಿ ಶವ ಎಸೆದ ಜಾಗದ ಬಗ್ಗೆ ಮಣಿಕಂಠ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನ್ನೊಂದಿಗೆ ಉತ್ತಮವಾಗಿದ್ದರೂ ಕೂಡ, ಇನ್ನೋರ್ವ ಯುವಕನೊಂದಿಗೆ ಸಲುಗೆಯಿಂದ ಇದ್ದದ್ದನ್ನು ಸಹಿಸದೆ ಹಾಗೂ ಹಣಕಾಸಿ‌ ವಿಚಾರಕ್ಕೆ ಪೂಜಾ ಕೊಲೆ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಅದನ್ನು ವ್ಯವಸ್ಥಿತವಾಗಿ ಯೋಜನೆ ಹಾಕಿಕೊಂಡು ಮಾಡಿದ್ದಾನೆ ಎಂಬ ಅಂಶ ಪೊಲೀಸರ ತನಿಖೆಯ ವೇಳೆ ತಿಳಿದುಬಂದಿದೆ.

ಒಟ್ಟಾರೆಯಾಗಿ, ಆಗುಂಬೆ ಠಾಣೆ ಪಿಎಸ್ಐ ರಂಗನಾಥ್ ಅಂತರಗಟ್ಟಿ ಮತ್ತವರ ಸಿಬ್ಬಂದಿಗಳ ದಕ್ಷ ತನಿಖೆಯಿಂದ ನಿಗೂಢವಾಗಿದ್ದ ಯುವತಿಯ ನಾಪತ್ತೆ ಪ್ರಕರಣ, ಕೊನೆಗೂ ಬಯಲಿಗೆ ಬರುವಂತಾಗಿದೆ. ಪೊಲೀಸರ ಜೊತೆಗೇ ಓಡಾಡಿಕೊಂಡಿದ್ದವನೇ ಕೊಲೆ ಆರೋಪಿ ಎಂಬ ಸತ್ಯಾಂಶ ಹೊರಗೆ ಬಂದಿದ್ದು, ಈಗ ಜೈಲು ಪಾಲಾಗುವಂತಾಗಿದೆ.

ಪೂಜಾಳ ಪ್ರಕರಣದಲ್ಲಿ ಆಗುಂಬೆ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ರಂಗನಾಥ್ ಅಂತರಗಟ್ಟಿ ಮತ್ತವರ ಸಿಬ್ಬಂದಿಗಳ ಕಾರ್ಯವೈಖರಿ ನಿಜಕ್ಕೂ ಅಭಿನಂದಿಸಬೇಕು. ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಐದಾರು ದಿನಗಳ ಕಾಲ ನಿರಂತರವಾಗಿ ತನಿಖೆ ನಡೆಸಿದ್ದಾರೆ. ಬಹಳಷ್ಟು ಪರಿಶ್ರಮ ಹಾಕಿದ್ದಾರೆ. ಇದೆಲ್ಲದರ ಫಲವಾಗಿ ಮುಚ್ಚಿ ಹೋಗಬಹುದಾಗಿದ್ದ ನಾಪತ್ತೆ – ಹತ್ಯೆ ಪ್ರಕರಣ ಬಯಲಿಗೆ ಬರುವಂತಾಗಿದೆ.

ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪ್ರಾಮಾಣಿಕ ತನಿಖೆ ನಡೆಸಿದ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!