ಇದೇ ಜುಲೈ 10ರಂದು ಸಂಜೆ 4 ಗಂಟೆಗೆ ಮಂಡ್ಯದ ರೈತ ಸಭಾಂಗಣದಲ್ಲಿ ಜಿ ಮಾದೇಗೌಡ ಪ್ರತಿಷ್ಠಾನ, ಭಾರತಿ ಎಜುಕೇಷನ್ ಟ್ರಸ್ಟ್ ಭಾರತೀನಗರ, ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಹಾಗೂ ಡಾ. ಜಿ ಮಾದೇಗೌಡ ಅಭಿಮಾನಿಗಳ ಬಳಗದಿಂದ 24ನೇ ವರ್ಷದ ರಾಜ್ಯಮಟ್ಟದ ಡಾ.ಜಿ ಮಾದೇಗೌಡ ಸಮಾಜಸೇವಾ ಮತ್ತು ಸಾವಯವ ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ನಂಜೇಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀ ಎಜುಕೇಶನ್ ಟ್ರಸ್ಟ್ ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಕಳೆದ 23 ವರ್ಷಗಳಿಂದ ಸಮಾಜಸೇವೆ ಮತ್ತು ಸಾವಯವ ಕೃಷಿ ಪ್ರಶಸ್ತಿಯನ್ನು 46 ಮಂದಿ ಸಾಧಕರಿಗೆ ನೀಡಿ ಗೌರವಿಸಲಾಗಿದೆ ಎಂದರು.
ಈ ಬಾರಿಯ ಸಮಾಜ ಸೇವಾ ಪ್ರಶಸ್ತಿಗೆ ಮಾಜಿ ಶಾಸಕ ಡಿ.ಆರ್ ಪಾಟೀಲ್ ಹಾಗೂ ಸಾವಯವ ಕೃಷಿ ಪ್ರಶಸ್ತಿಗೆ ಮಳವಳ್ಳಿ ತಾಲೂಕು ಮಲ್ಲಿಗಹಳ್ಳಿ ಗ್ರಾಮದ ಶ್ರೀಪಾದ ಪಿ ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ ನಾರಾಯಣಸ್ವಾಮಿ ವಹಿಸಲಿದ್ದು, ಹೆಸರಾಂತ ಸಾಹಿತಿ ಪ್ರೊ.ಎಸ್ ಜಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಪಿ ರವಿಕುಮಾರ್ ಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಮಧು ಜಿ ಮಾದೇಗೌಡ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು .
ಗೋಷ್ಠಿಯಲ್ಲಿ ಭಾರತಿ ಎಜುಕೇಷನ್ ಟ್ರಸ್ಟ್ ಪ್ರಾಂಶುಪಾಲ ಮಹದೇವಸ್ವಾಮಿ, ಪ್ರಾಧ್ಯಾಪಕರಾದ ನಾಗೇಶ್ , ರಾಮಕೃಷ್ಣ ಸೇರಿದಂತೆ ಇತರರಿದ್ದರು.




