Wednesday, October 23, 2024

ಪ್ರಾಯೋಗಿಕ ಆವೃತ್ತಿ

ಮಂಗಳೂರು | ಸ್ಥಳ ಮಹಜರಿನ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿದ ‘ಚಡ್ಡಿ ಗ್ಯಾಂಗ್’: ಇಬ್ಬರಿಗೆ ಗುಂಡೇಟು!

ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಣಿಯಲ್ಲಿ ಜುಲೈ 9ರ ಮಂಗಳವಾರ ಬೆಳಗಿನ ಜಾವ ಮನೆಯೊಂದಕ್ಕೆ ನುಗ್ಗಿ ದರೋಡೆಗೈದು ಪರಾರಿಯಾಗಿದ್ದ ‘ಚಡ್ಡಿ ಗ್ಯಾಂಗ್’ ಅನ್ನು ಕೇವಲ ಐದೇ ಗಂಟೆಗಳಲ್ಲಿ ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದರು.

ಆರೋಪಿಗಳನ್ನು ಸಕಲೇಶಪುರದಿಂದ ಮಂಗಳೂರಿಗೆ ಮಂಗಳವಾರ ಸಂಜೆ ಕರೆತರಲಾಗಿತ್ತು. ಬುಧವಾರ ಬೆಳಗ್ಗೆ ದರೋಡೆ ನಡೆಸಿದ ಬಳಿಕ ಮುಲ್ಕಿಯಲ್ಲಿ ಕಾರು ಬಿಟ್ಟು ಹೋಗಿದ್ದ ಸ್ಥಳದ ಮಹಜರು ಮಾಡಲು ಹೋದ ವೇಳೆ ಆರೋಪಿಗಳು ಪೊಲೀಸರ ಮೇಲೆ ದಾಳಿ ಮಾಡಿ, ಪರಾರಿಯಾಗಲು ಯತ್ನಿಸಿರುವ ಘಟನೆ ನಡೆದಿದೆ.

ಈ ವೇಳೆ ಪೊಲೀಸರಿಗೆ ಗಾಯವಾಗಿದ್ದು, ಆರೋಪಿಗಳ ಮೇಲೆ ಪೊಲಿಸರು ಗುಂಡು ಹಾರಿಸಿದ್ದಾರೆ. ಪೊಲೀಸರ ಗುಂಡೇಟಿನಿಂದ ಇಬ್ಬರು ಆರೋಪಿಗಳ ಕಾಲಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಪಡುಪಣಂಬೂರು ಬಳಿ ಘಟನೆ ನಡೆದಿರುವುದಾಗಿ ಮಾಹಿತಿ ಲಭಿಸಿದೆ. ದರೋಡೆ ಪ್ರಕರಣ ಹಾಗೂ ಪರಾರಿಯಾಗಲು ಯತ್ನಿಸಿದ ಬಗೆಗಿನ ಎಲ್ಲ ವಿವರಗಳನ್ನು ನೀಡಲು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಬುಧವಾರ ಬೆಳಗ್ಗೆ 11.30ಕ್ಕೆ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾರೆ.

ಏನಿದು ಪ್ರಕರಣ?

ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಣಿಯಲ್ಲಿ ಜುಲೈ 9ರ ಬೆಳಗಿನ ಜಾವ ಮನೆಯೊಂದಕ್ಕೆ ನುಗ್ಗಿ ದರೋಡೆಗೈದು ಪರಾರಿಯಾಗಿದ್ದ ಚಡ್ಡಿ ಗ್ಯಾಂಗ್ ಅನ್ನು ಮಂಗಳೂರು ಪೊಲೀಸರು, ಹಾಸನ ಪೊಲೀಸರ ನೆರವಿನಿಂದ ಕೇವಲ ಐದೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ದರೋಡೆಗೈದು ಬಸ್ಸಿನಲ್ಲಿ ಬೆಂಗಳೂರು ಕಡೆಗೆ ಪರಾರಿಯಾಗುತ್ತಿದ್ದ ತಂಡವನ್ನು ಕೆಎಸ್‌ಆರ್‌ಟಿಸಿಯ ಬಸ್ ಚಾಲಕ ಹಾಗೂ ಕಂಡಕ್ಟರ್ ನೀಡಿದ ಮಾಹಿತಿಯ ಮೇರೆಗೆ ಸಕಲೇಶಪುರದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಈ ಮಿಂಚಿನ ಕಾರ್ಯಾಚರಣೆಯನ್ನು ಕೃತ್ಯ ನಡೆದ ಕೇವಲ 5 ಗಂಟೆಗಳ ಒಳಗೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು.

ಬಂಧಿತರೆಲ್ಲರೂ ಮಧ್ಯಪ್ರದೇಶದ ಮೂಲದವರಾಗಿದ್ದು, ರಾಜು ಸಿಂಗ್ವಾನಿಯ (24 ವರ್ಷ), ಮಯೂರ್ (30 ವರ್ಷ), ಬಾಲಿ (22 ವರ್ಷ), ವಿಕ್ಕಿ (21 ವರ್ಷ) ಎಂದು ಗುರುತಿಸಲಾಗಿದೆ.

ಈ ಚೆಡ್ಡಿ ಗ್ಯಾಂಗ್‌, ಮಂಗಳವಾರ ಮುಂಜಾನೆ 3.30ರ ಅವಧಿಯಲ್ಲಿ ಉರ್ವ ಕೊಟ್ಟಾರದ ಬಳಿ ವೃದ್ಧ ದಂಪತಿ ವಾಸವಿರುವ ಮನೆಯೊಂದಕ್ಕೆ ಪ್ರವೇಶಿಸಿ, ಮಾರಕಾಯುಧ ತೋರಿಸಿ ಬೆದರಿಸಿ ದರೋಡೆ ಕೃತ್ಯ ನಡೆಸಿದ್ದರು. ಆ ಬಳಿಕ ಮನೆಯಲ್ಲಿದ್ದ ಕಾರಿನ ಕೀಯನ್ನು ಪಡೆದುಕೊಂಡು ಅಲ್ಲಿಂದ ಪರಾರಿಯಾಗಿದ್ದರು. ಮುಲ್ಕಿ ಸಮೀಪ ಕಾರನ್ನು ತೊರೆದು, ಮತ್ತೆ ಮಂಗಳೂರು ಕಡೆಗೆ ಬಂದ ಬಸ್‌ನಲ್ಲಿ ಹತ್ತಿದ್ದರು. ಮುಲ್ಕಿ ಬಸ್ಸು ನಿಲ್ದಾಣದ ಸಮೀಪ ನಿಲ್ಲಿಸಿದ್ದ ಕಳವು ಮಾಡಲ್ಪಟ್ಟ ಕಾರನ್ನು ಪತ್ತೆಮಾಡಿ ವಶಕ್ಕೆ ಪಡೆದು ಸ್ಥಳದ ಆಸುಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಉಡುಪಿ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ದರೋಡೆಗೈದಿದ್ದ ವ್ಯಕ್ತಿಗಳು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಪೊಲೀಸರಿಗೆ ಕಂಡು ಬಂದಿತ್ತು.

ಆ ಬಳಿಕ ಮಂಗಳೂರಿನಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದ ತಂಡವನ್ನು ಸಕಲೇಶಪುರ ಪೊಲೀಸರ ನೆರವಿನಿಂದ ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!