Thursday, October 24, 2024

ಪ್ರಾಯೋಗಿಕ ಆವೃತ್ತಿ

ವಾಲ್ಮೀಕಿ ನಿಗಮ ಅಕ್ರಮ | ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ಆಪ್ತರು ಇಡಿ ವಶಕ್ಕೆ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಹಗರಣದ ಸಂಬಂಧ ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖೆಯನ್ನು ಎದುರಿಸುತ್ತಿರುವ ಮಾಜಿ ಸಚಿವ ಹಾಗೂ ಶಾಸಕ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಸುಮಾರು 185 ಕೋಟಿ ರೂ.ಗಳಿಗೂ ಹೆಚ್ಚಿನ ಅವ್ಯವಹಾರ ನಡೆಸಲಾಗಿರುವ ಹಿನ್ನೆಲೆಯಲ್ಲಿ ಡಾಲರ್ಸ್ ಕಾಲೋನಿಯ ಮನೆ ಅಲ್ಲದೇ ಅವರಿಗೆ ಸೇರಿದ ಆಸ್ತಿಗಳಿರುವ ಬಿಇಎಲ್ ರೋಡ್, ಮತ್ತಿಕೆರೆ ಹಾಗೂ ಮಲ್ಲೇಶ್ವರಂ ಸೇರಿದಂತೆ ನಾಲ್ಕು ಕಡೆ ದಾಳಿಗಳನ್ನು ಕೈಗೊಂಡು ಪರಿಶೀಲನೆ ನಡೆಸಿ ಶಾಸಕ ನಾಗೇಂದ್ರರನ್ನು ವಶಕ್ಕೆ ತೆಗೆದುಕೊಂಡಿರುವ ಇಡಿ ಅಧಿಕಾರಿಗಳು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.

ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸಂಬಂಧ ಶಾಸಕ ನಾಗೇಂದ್ರ ಹಾಗೂ ಕಾಂಗ್ರೆಸ್‌ ಶಾಸಕ ಬಸವನಗೌಡ ದದ್ದಲ್‌ ಅವರ ನಿನ್ನೆಯ ಸುಧೀರ್ಘ ವಿಚಾರಣೆಯ ಬೆನ್ನಲ್ಲೇ ಇಡಿ ಅಧಿಕಾರಿಗಳು ಇಂದು ಮುಂಜಾನೆಯಿಂದ ಹಠಾತ್‌ ದಾಳಿ ನಡೆಸಿ ಶಾಸಕ ನಾಗೇಂದ್ರರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಮತ್ತೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್‌ ನೀಡಿದ ಮರುದಿನವೇ ಇಡಿ ಅಧಿಕಾರಿಗಳು ಶಾಸಕರಾದ ನಾಗೇಂದ್ರ, ಬಸನಗೌಡ ದದ್ದಲ್‌,ಅಲ್ಲದೇ ಯ್ಯೂನಿಯನ್ ಬ್ಯಾಂಕ್ ಬ್ರಾಂಚ್ ಹೆಡ್ ಸುಚಿ ಸ್ಮಿತಾ, ಕ್ರೆಡಿಟ್‌ ಆಫೀಸರ್ ಕೃಷ್ಣಮೂರ್ತಿ, ಬ್ರಾಂಚ್ ಹೆಡ್ ದೀಪಾ ಮುಂತಾದವರ ಮನೆಗಳ ಮೇಲೂ ದಾಳಿ ನಡೆಸಿ, ವಿಚಾರಣೆ ನಡೆಸಲಾಗುತ್ತಿದೆ. ನಿಗಮದ ಎಂಡಿ ಜೆ.ಜೆ.ಪದ್ಮನಾಭ್, ಲೆಕ್ಕಪರಿಶೋಧಕ ಪರಶುರಾಮ್ ಮನೆ ಮೇಲೂ ದಾಳಿ ನಡೆಸಲಾಗಿದೆ.

ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್, ಸತ್ಯನಾರಾಯಣ್ ವರ್ಮಾ ಸೇರಿ ಹಲವರ ಮನೆ, ಕಚೇರಿಯಲ್ಲೂ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಲಾಗುತ್ತಿದೆ‌.ರಾಯಚೂರಿನಲ್ಲಿರುವ ನಿಗಮದ ಅಧ್ಯಕ್ಷ ದದ್ದಲ್ ನಿವಾಸದ ಮೇಲೆ ದಾಳಿ ನಡೆದಿದೆ.

ಬೆಂಗಳೂರಿನ ಪದ್ಮನಾಭ್ ನಿವಾಸ, ಹೈದರಾಬಾದ್‌ನಲ್ಲಿರುವ ಸತ್ಯನಾರಾಯಣ್ ವರ್ಮಾ ನಿವಾಸ ಕಚೇರಿ ಸೇರಿದಂತೆ ಒಟ್ಟು 18 ಸ್ಥಳಗಳಲ್ಲಿ ಏಕಕಾಲಕ್ಕೆ ಇಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಹಾಗೂ ದದ್ದಲ್ ಇಬ್ಬರೂ ಎಸ್‌ಐಟಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದರು. ಬುಧವಾರವೂ ಸಹ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು.

ದದ್ದಲ್‌ಗೆ ಶಾಕ್

ಹಗರಣದ ಸಂಬಂಧ ಶಾಸಕ ಬಸನಗೌಡ ದದ್ದಲ್‌ ಅವರ ರಾಯಚೂರಿನ ಮನೆ ಕಚೇರಿಗಳ‌ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಪ್ರತ್ಯೇಕ ತನಿಖೆಯನ್ನು ಕೈಗೊಂಡಿರುವುದರಿಂದ ರಾಜ್ಯ ಸರ್ಕಾರಕ್ಕೆ ಸಂಕಷ್ಟ ಎದುರಾಗಲಿದೆ.

ವಾಲ್ಮೀಕಿ ನಿಗಮದ ಹಗರಣದಲ್ಲಿ 183 ಕೋಟಿ ರೂ. ಅವ್ಯವಹಾರ ನಡೆದಿತ್ತು. ಇದರ ವ್ಯಾಪ್ತಿ ಕೆಳಹಂತದ ಅಧಿಕಾರಿಗಳಿಂದ ಹಿಡಿದು ಮೇಲಿನವರೆಗೂ ವ್ಯಾಪಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್‌ ಡೆತ್‌ನೋಟ್‌ನಲ್ಲಿಯೂ ಸಚಿವರ ಬಗ್ಗೆ ಉಲ್ಲೇಖ ಇದೆ.

ಸಿಐಡಿ ತನಿಖೆ ಶೀಘ್ರ

ಬ್ಯಾಂಕ್‌ಗಳಲ್ಲಿ ಬಹುಕೋಟಿ ಹಣ ಅಕ್ರಮ ನಡೆದಾಗ ಈ ವಿಚಾರದಲ್ಲಿ ರಾಜ್ಯ ಯಾವುದೇ ಒಪ್ಪಿಗೆ ನೀಡದೆಯೂ ಸಿಬಿಐ ಹಾಗೂ ಇಡಿ ಇದರಲ್ಲಿ ಮಧ್ಯೆ ಪ್ರವೇಶಿಸಿ ತನಿಖೆ ಕೈಗೆತ್ತಿಕೊಳ್ಳಬಹುದಾಗಿದೆ.
ಎರಡೂ ಸಂಸ್ಥೆಗಳು ಈ ಪ್ರಕರಣದ ಬಗ್ಗೆ ಆಸಕ್ತಿ ವಹಿಸಿವೆ ಅಕ್ರಮ ನಡೆದ ಸಂದರ್ಭದಲ್ಲಿ ಬಿ. ನಾಗೇಂದ್ರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಶಾಸಕ ದದ್ದಲ್‌ ಈಗಲೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವುದರಿಂದ ಇಡಿ ದಾಳಿ ಮಹತ್ವ ಪಡೆದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!