Thursday, September 19, 2024

ಪ್ರಾಯೋಗಿಕ ಆವೃತ್ತಿ

ತಮಿಳುನಾಡಿಗೆ ನೀರು| ಮಂಡ್ಯದಲ್ಲಿ ಕನ್ನಡಸೇನೆ ಕಾರ್ಯಕರ್ತರ ಪ್ರತಿಭಟನೆ

ರಾಜ್ಯ ಸರ್ಕಾರವು ತಮಿಳುನಾಡಿಗೆ ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಹರಿಸುತ್ತಿದೆ ಎಂದು ಖಂಡಿಸಿ ಮಂಡ್ಯದಲ್ಲಿ ಕನ್ನಡ ಸೇನೆ ಕಾರ್ಯಕರ್ತರು ಮಂಡ್ಯದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಮಂಡ್ಯ ಸಂಜಯ ವೃತ್ತದಲ್ಲಿ ಸೇನೆಯ ಕಾರ್ಯಕರ್ತರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕಾವೇರಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ,ಕೇಂದ್ರ -ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ,ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸೇನೆಯ ಜಿಲ್ಲಾಧ್ಯಕ್ಷ ಹೆಚ್ ಸಿ ಮಂಜುನಾಥ್ ಮಾತನಾಡಿ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆಯಂತೆ ಪ್ರತಿನಿತ್ಯ ಒಂದು ಟಿಎಂಸಿ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಬದಲಾಗಿ ಎಂಟು ಸಾವಿರ ಕ್ಯೂಸೆಕ್ ನೀರು ಬಿಡಲಾಗುವುದು ಎಂದು ಸರ್ವ ಪಕ್ಷಗಳ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಕಾವೇರಿ ಕೊಳ್ಳದ ಜಲಾಶಯಗಳಿಂದ ಇಪ್ಪತ್ತು ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದಾರೆ ಎಂದರು.

ಸಮಿತಿಯ ಸೂಚನೆ ಗಿಂತ ಹೆಚ್ಚಿನ ಪ್ರಮಾಣದಲ್ಲಿ ತಮಿಳುನಾಡಿಗೆ ನೀರು ಬಿಡುವ ಮೂಲಕ ರಾಜ್ಯದ ಜನತೆಗೆ ದ್ರೋಹ ಮಾಡಲಾಗಿದೆ, ರಾಜ್ಯ ಸರ್ಕಾರ ಈ ಕೂಡಲೇ ಶ್ವೇತಪತ್ರ ಹೊರಡಿಸಬೇಕು, ಕಳೆದ ವರ್ಷ ನೀರಿಲ್ಲದೆ ರೈತರು ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ, ಸ್ವಲ್ಪ ಪ್ರಮಾಣದಲ್ಲಿ ಕೆ ಆರ್ ಎಸ್ ಗೆ ನೀರು ಬಂದಿದೆ. ಇಲ್ಲಿನ ಕೆರೆ ಕಟ್ಟೆಗಳು ತುಂಬಿಲ್ಲ, ಆದರೂ ಕೂಡ ನೆರೆ ರಾಜ್ಯಕ್ಕೆ ನೀರು ಬಿಡುವ ಮೂಲಕ ಜಲಾಶಯ ಖಾಲಿ ಮಾಡಲು ಮುಂದಾಗಿದೆ, ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಿಂದ 20,000 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ, ಈ ಕೂಡಲೇ ನೀರು ನಿಲ್ಲಿಸಿ ಇಲ್ಲಿನ ರೈತರು ಎರಡು ಬೆಳೆ ಬೆಳೆಯಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ವಿಧಾನ ಮಂಡಲದ ಅಧಿವೇಶನ ಆರಂಭಗೊಂಡಿದ್ದು ಜಿಲ್ಲೆಯ ಶಾಸಕರು ಸದನದಲ್ಲಿ ದನಿ ಎತ್ತಬೇಕು, ಕಳೆದ ವರ್ಷದಂತೆ ಮೌನವಹಿಸಿ ಕೂರಬಾರದು, ಕಾವೇರಿ ಕೊಳ್ಳ ಜಿಲ್ಲೆಗಳ ಎಲ್ಲಾ ಶಾಸಕರು ದನಿಗೂಡಿಸಿ ರೈತರ ಹಿತ ಕಾಪಾಡಲು ಮುಂದಾಗಬೇಕು ಸಂಕಷ್ಟ ಪರಿಸ್ಥಿತಿಯಲ್ಲಿರುವ ರೈತರ ಹಿತ ಕಾಪಾಡುವುದು ಚುನಾಯಿತ ಜನಪ್ರತಿನಿಧಿಗಳ ಹೊಣೆಗಾರಿಕೆ ಎಂಬುದನ್ನು ಮರೆಯಬಾರದು ಇಲ್ಲದಿದ್ದರೆ ಜಿಲ್ಲೆಗೆ ಬಂದಾಗ ಶಾಸಕರನ್ನು ತಡೆಯಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸೇನೆಯ ರಾಜ್ಯ ಸಂಚಾಲಕ ಮಹಾಂತಪ್ಪ, ಬೆಟ್ಟಳ್ಳಿ ಮಂಜುನಾಥ್, ಸೌಭಾಗ್ಯ, ಪವಿತ್ರ, ಇಂದ್ರಮ್ಮ, ನಂದಿನಿ, ದೇವು, ಶಿವು, ಚಂದ್ರು, ಮಧು, ಕುಮಾರ ಯರಹಳ್ಳಿ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!