Thursday, September 19, 2024

ಪ್ರಾಯೋಗಿಕ ಆವೃತ್ತಿ

‘ಹಂಸ’ ಗೀತೆಯಲ್ಲೊಂದು ‘ಸಿದ್ದರಾಮ’ ಚರಿತೆ…..

ಮಾಚಯ್ಯ ಎಂ ಹಿಪ್ಪರಗಿ

ಹಂಸಲೇಖರನ್ನು ಇಷ್ಟಪಡಲು ನಮಗೆ ಎಷ್ಟು ಕಾರಣಗಳು ಸಿಗಬಹುದೋ, ಅವರನ್ನು ಇಷ್ಟಪಡದಿರಲೂ ಅಷ್ಟೇ ಕಾರಣಗಳು ಸಿಗಬಹುದು. ಆದರೆ ಆ ಕಾರಣಗಳು ನಮ್ಮ ವೈಯಕ್ತಿಕ ಮಿತಿಗಳಿಗೆ ಒಳಪಟ್ಟಿದ್ದಾಗ, ಅದು ನಮ್ಮ ಅಭಿವ್ಯಕ್ತಿ ಆಯ್ಕೆಯ ಸ್ವಾತಂತ್ಯ್ರವಾಗುಳಿಯುತ್ತದೆ. ಆದರೆ ಹಂಸಲೇಖ ಅವರ ಸಾಮಾಜಿಕ ಹಿನ್ನೆಲೆಯ ಕಾರಣಕ್ಕೆ ಅವರನ್ನು ಯಾರಾದರೂ ಗುರಿಯಾಗಿಸಿಕೊಂಡಾಗ, ವೈಯಕ್ತಿಕ ಕಾರಣಕ್ಕೆ ಅವರನ್ನು ಇಷ್ಟಪಡದವರು ಕೂಡಾ ಹಂಸಲೇಖ ಅವರ ಪರವಾಗಿ ನಿಲ್ಲಬೇಕಾಗುತ್ತದೆ. ಯಾಕೆಂದರೆ ಅದು ಕೇವಲ ಹಂಸಲೇಖರ ಮೇಲೆ ನಡೆಯುವ ದಾಳಿ ಮಾತ್ರವಲ್ಲ, ಅವರು ಪ್ರತಿನಿಧಿಸುವ ಸಾಮಾಜಿಕ ಹಿನ್ನೆಲೆಯ ಮೇಲೆ ನಡೆಯುವ ದಾಳಿ. ಅಂತಹ ದಾಳಿಗಳು ಎಷ್ಟೇ ವ್ಯಕ್ತಿಗತವಾಗಿರುವಂತೆ ಕಂಡುಬಂದರೂ, ಅವು ಪರೋಕ್ಷವಾಗಿ ನಮ್ಮ ಸಂವಿಧಾನದ ಸಮಾನತೆಯ ಆಶಯ ಮತ್ತು ಬಹುತ್ವದ ಮೇಲೆ ನಡೆಸುತ್ತಿರುವ ದಾಳಿಯ ಭಾಗಗಳಾಗಿರುತ್ತವೆ. ಆ ಕಾರಣಕ್ಕೆ ಪ್ರತಿಯೊಬ್ಬ ಸಂವಿಧಾನವಾದಿಯೂ ಅಂತಹ ದಾಳಿಗಳನ್ನು ಖಂಡಿಸಬೇಕಾಗುತ್ತದೆ. Exactly ನಮ್ಮ ಬಹುಪಾಲು ಪ್ರಜ್ಞಾವಂತ ವಲಯ ಈಗ ಮಾಡುತ್ತಿರೋದು ಇದೇ ಕೆಲಸವನ್ನು.

ಶೂದ್ರನೊಬ್ಬ ಸಂಗೀತ ಕ್ಷೇತ್ರದಲ್ಲಿ ಅಪಾರ ಎನ್ನುವಂತ ಸಾಧನೆ ಮಾಡುವುದು, ನಾದಬ್ರಹ್ಮ ಎನಿಸಿಕೊಳ್ಳುವುದು `ಅವರಿಗೆ’ ಇರಿಸುಮುರಿಸು ಎನ್ನಿಸಬಹುದು. ಇದಿಷ್ಟಕ್ಕೇ ಅವರು ಹಂಸಲೇಖರ ಮೇಲೆ ಮುನಿಸಿಕೊಂಡರಾ? ಖಂಡಿತ ಇಲ್ಲ… ಒಂದೊಮ್ಮೆ ಹಂಸಲೇಖ, ತಮ್ಮ ಅಗಾಧ ಪ್ರತಿಭೆಯ ಹೊರತಾಗಿಯೂ `ಅವರಿಗೆ’ ಮತ್ತು ಅವರ `ಆಚಾರ-ವಿಚಾರ’ಗಳಿಗೆ ತಗ್ಗಿಬಗ್ಗೆ ನಡೆದಿದ್ದರೆ `ಅವರು’ ಇಷ್ಟೊಂದು ಕತ್ತಿ ಮಸೆಯುತ್ತಿರಲಿಲ್ಲ. ಆದರೆ ಯಾವಾಗ ಹಂಸಲೇಖ ತಮ್ಮ ಸಾಹಿತ್ಯದ ಮೂಲಕ ಶೂದ್ರತ್ವದ ಪ್ರಶ್ನೆಗಳನ್ನು ಮುಂದಿರಿಸಿದರೋ, ಚಾರಿತ್ರಿಕ ಶೋಷಣೆಯ ಅನ್ಯಾಯವನ್ನು ಪ್ರತಿಭಟಿಸಿದರೋ, ಅವರು ಕಷ್ಟಪಟ್ಟು ಜತನ ಮಾಡಿದ ಸಂಕಲೆಗಳನ್ನು ತುಂಡರಿಸಲು ಯತ್ನಿಸಿದರೋ ಆಗ ಅವರಿಗೆ ಹಂಸಲೇಖ ಒಬ್ಬ ದುಷ್ಟನಾಗಿ, ದುರಹಂಕಾರಿಯಾಗಿ ಕಾಣಲಾರಂಭಿಸಿದರು. ಆ ಕೀವು ಈಗ ಕಟ್ಟೆಯೊಡೆದಿದೆ. ಇಂಥಾ ಸಮಯದಲ್ಲಿ, ನಮಗೆ ಹಂಸಲೇಖರ ಬಗ್ಗೆ ವೈಯಕ್ತಿಕ ನಿಲುವು ಏನೇ ಇದ್ದರೂ, ಆ ಕೀವನ್ನು ತೊಡೆದುಹಾಕುವುದು ನಮ್ಮ ಕರ್ತವ್ಯವಾಗುತ್ತದೆ. ಆ ಕಾರಣಕ್ಕೆ ನಾವು ಹಂಸಲೇಖರ ಪರ ನಿಲ್ಲಬೇಕಿದೆ ಮತ್ತು ನಿಲ್ಲುತ್ತಿದ್ದೇವೆ. ಈ ವಿಚಾರದಲ್ಲಿ ನಮ್ಮಲ್ಲಿ ಹೆಚ್ಚೇನು ಭಿನ್ನಾಭಿಪ್ರಾಯಗಳು ಕಾಣುತ್ತಿಲ್ಲ.

ಈಗ ಹಂಸಲೇಖರ ಜಾಗದಲ್ಲಿ ಸಿದ್ದರಾಮಯ್ಯನವರನ್ನಿಟ್ಟು ನೋಡೋಣ. ಇವರದು ಸಾಮಾಜಿಕ ರಾಜಕಾರಣವಾದರೆ, ಅವರದು ಸಾಂಸ್ಕೃತಿಕ ರಾಜಕಾರಣ. ಅಷ್ಟೇ ವ್ಯತ್ಯಾಸ. ಅದನ್ನು ಬಿಟ್ಟು ಇನ್ನುಳಿದಂತೆ ತಮ್ಮ ಸಿನಿಮಾಸಾಹಿತ್ಯದ ಮೂಲಕ ಯಾವುದನ್ನು ಧಿಕ್ಕರಿಸಲು ಹಂಸಲೇಖ ಪಣತೊಟ್ಟಿದ್ದಾರೋ, ಅದನ್ನೇ ತಮ್ಮ ವೃತ್ತಿ ರಾಜಕಾರಣದ ಮೂಲಕ ಧಿಕ್ಕರಿಸಲು ಸಿದ್ದರಾಮಯ್ಯ ಶ್ರಮಿಸುತ್ತಾ ಬಂದವರು. ಜಾತಿ ವ್ಯವಸ್ಥೆ ಮತ್ತು ಕೋಮುವಾದ ಇಬ್ಬರ ಶತ್ರುಗಳು. ಸಮಾನತೆ ಮತ್ತು ಸೋದರತೆ ಇಬ್ಬರ ಆಶಯಗಳು. ಸಾಂಸ್ಕೃತಿಕ ರಾಜಕಾರಣದಲ್ಲಿ ಹಂಸಲೇಖರು `ಅವರುಗಳ’ ಪಾದ ಸೇವೆಗೆ ಸೀಮಿತವಾಗದೆ ‘ಅವರ’ ವಿರುದ್ಧ ಸಿಡಿದೆದ್ದಂತೆ, ವೃತ್ತಿ ರಾಜಕಾರಣದಲ್ಲಿ ಸಿದ್ದರಾಮಯ್ಯನವರು `ಅವರ’ ವಿರುದ್ಧ ತೊಡೆ ತಟ್ಟಿದವರು. ಗುಟುರು ಹಾಕಿದವರು. ಇವರಿಬ್ಬರನ್ನೂ `ಅವರು’ ವಿರೋಧಿಸಲು, ವಿಷ ಕಾರಲು ಇದೇ ಕಾರಣ.

ಶ್ರೇಷ್ಠತೆಯ ವ್ಯಸನದಲ್ಲಿ ಮುಳುಗಿಹೋದ ಅವರ ವಿರುದ್ಧ `ಅಹಿಂದ’ ವರ್ಗಗಳ ಸ್ವಾಭಿಮಾನವನ್ನು ಕಟೆದು ನಿಲ್ಲಿಸಿದ ಕಾರಣಕ್ಕೇ ಸಿದ್ದರಾಮಯ್ಯನವರನ್ನು ಅವರು ಹಿಗ್ಗಾಮುಗ್ಗಾ ದ್ವೇಷಿಸುತ್ತಿದ್ದಾರೆ. ಅದರ ಹೊರತಾಗಿ `ಅವರು’ ಹೆಸರಿಸುವ ಕಾರಣಗಳೆಲ್ಲ ಕೇವಲ ನೆಪ ಮಾತ್ರ. ಆರಂಭದಲ್ಲೇ ಹೇಳಿದಂತೆ, ಹಂಸಲೇಖರನ್ನು ಇಷ್ಟಪಡಲು ನಮಗೆ ಎಷ್ಟು ಕಾರಣಗಳು ಸಿಗಬಹುದೋ, ಇಷ್ಟಪಡದಿರಲು ನಮಗೆ ಅಷ್ಟೇ ವೈಯಕ್ತಿಕ ಕಾರಣಗಳು ಸಿಗಬಹುದು. ಅದೇ ರೀತಿ ಸಿದ್ದರಾಮಯ್ಯನವರನ್ನು ನಾವು ವೈಯಕ್ತಿಕವಾಗಿ ಇಷ್ಟಪಡಲು, ಇಷ್ಟಪಡದೆ ಇರಲು ಹಂಸಲೇಖರಿಗಿಂತ ಹೆಚ್ಚು ಕಾರಣಗಳು ಸಿಗಬಹುದು. ಯಾಕೆಂದರೆ, ಅವರಿಬ್ಬರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳ ವ್ಯಾಪ್ತಿ ಹಂತದ್ದು.

ಕೋಮುವಾದ ಮತ್ತು ಜಾತಿವಾದಕ್ಕೆ ಸಿದ್ದರಾಮಯ್ಯ ರಾಜಕೀಯವಾಗಿ ದೊಡ್ಡ ಅಡ್ಡಿಯಾಗಿದ್ದಾರೆ ಅನ್ನುವ ಕಾರಣಕ್ಕೆ ಈಗ ಅವರ ಮೇಲೆ ರಾಜಕೀಯ ದಾಳಿಗಳು ನಡೆಯುತ್ತಿವೆ. ಶೂದ್ರನ ಶೂದ್ರ-ಪ್ರತಿನಿಧಿತ್ವದ ವಿರುದ್ಧ `ಅವರು’ ನಡೆಸುತ್ತಿರುವ ಸಂಚುಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ನಮಗೆ ಸಿದ್ದರಾಮಯ್ಯನವರನ್ನು ವಿರೋಧಿಸಲು ನಮ್ಮನಮ್ಮದೇ ಕಾರಣಗಳು ಅನೇಕ ಇರಬಹುದು. ಆದರೆ `ಅವರ’ ಜ್ವಾಲಾಗ್ನಿಗೆ ನಮ್ಮ ಕಾರಣಗಳು ಉರುವಲುಗಳಾಗದಂತೆ ನೋಡಿಕೊಳ್ಳುವುದು; ಹಂಸಲೇಖರ ಪರವಾಗಿ ಯಾವ ಕಾರಣಕ್ಕೆ ನಿಲ್ಲುತ್ತೇವೆಯೋ ಅದೇ ಕಾರಣಕ್ಕೆ, ಸಿದ್ದರಾಮಯ್ಯನವರ ಪರವಾಗಿ ನಾವು ನಿಲ್ಲಬೇಕಿದೆ ಎಂಬುದನ್ನು ಅರ್ಥ ಮಾಡಿಕೊಳ್ಳದೇ ಹೋದಲ್ಲಿ ನಮ್ಮ ಪ್ರಜ್ಞೆಗೆ ವೈಶಾಲ್ಯತೆಯಾದರೂ ಹೇಗೆ ಬರುತ್ತೆ? ಸಿದ್ದರಾಮಯ್ಯನವರ ಬಗ್ಗೆ ನಮ್ಮ ತಕರಾರುಗಳೇನಾದರೂ ಇದ್ದಲ್ಲಿ, ಅದನ್ನು ಸಾಧಿಸಲು ಇದು ಕಾಲವಲ್ಲ ಎಂಬುದನ್ನಾದರೂ ನಾವು ಅರ್ಥ ಮಾಡಿಕೊಳ್ಳಬೇಕಿದೆ.

ಇಲ್ಲವಾದರೆ, ಇತಿಹಾಸದಲ್ಲಿ ‘ಅವರು’ ವಿಜೃಂಭಿಸುತ್ತಾ ಬಂದಂತೆ ಈಗಲೂ ವಿಜೃಂಭಿಸುತ್ತಾ ಸಾಗುತ್ತಾರೆ…

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!