Friday, September 20, 2024

ಪ್ರಾಯೋಗಿಕ ಆವೃತ್ತಿ

ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ವಿನೇಶ್ ಫೋಗಟ್!

ಸುಮಾರು 100 ಗ್ರಾಂ ಹೆಚ್ಚಾಗಿರುವ ಕಾರಣದಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಿನ್ನೆ ಅನರ್ಹಕ್ಕೊಳಗಾಗಿದ್ದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್, ತನ್ನ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ಬಳಿಕ ಯಾವುದೇ ಪ್ರತಿಕ್ರಿಯೆ ನೀಡದಿದ್ದ ವಿನೇಶ್ ಫೋಗಟ್, ಗುರುವಾರ ಬೆಳಗ್ಗೆ 5:17ಕ್ಕೆ ಟ್ವೀಟ್ ಮಾಡಿ, ಈ ಘೋಷಣೆ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ ತನ್ನ ಅಮ್ಮನನ್ನು ಉಲ್ಲೇಖಿಸಿದ್ದಾರೆ.

“ಅಮ್ಮ, ಕುಸ್ತಿಯು ಗೆದ್ದಿದೆ. ನಾನು ಸೋತಿದ್ದೇನೆ. ನನ್ನನ್ನು ಕ್ಷಮಿಸಿಬಿಡು. ನಿನ್ನ ಕನಸು, ನನ್ನ ಸಾಮರ್ಥ್ಯ ಎಲ್ಲವೂ ಈಗ ಮುರಿದುಹೋಗಿದೆ.‌ ನನಗೆ ಈಗ ಯಾವುದೇ ಶಕ್ತಿ ಇಲ್ಲ. ಕುಸ್ತಿಗೆ ವಿದಾಯ(2001-2024). ನಿಮ್ಮೆಲ್ಲರ ಕ್ಷಮೆಗಾಗಿ ನಾನು ಸದಾ ಋಣಿಯಾಗಿರುತ್ತೇನೆ” ಎಂದು ವಿನೇಶ್ ಫೋಗಟ್ ಟ್ವೀಟ್ ಮಾಡಿದ್ದು, ಕುಸ್ತಿಯಿಂದ ದೂರ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ.

ಸುಮಾರು 100 ಗ್ರಾಂ ಹೆಚ್ಚಾಗಿರುವ ಕಾರಣದಿಂದಾಗಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದರು. ಇದು ಭಾರತೀಯರಿಗೆ ಆಘಾತ ಉಂಟು ಮಾಡಿತ್ತು.

ಮಂಗಳವಾರ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದರು. ವಿಶ್ವದ ನಂ.1 ಆಟಗಾರ್ತಿ ಜಪಾನಿನ ಯುಯಿ ಸುಸಾಕಿಯನ್ನು ಸೋಲಿಸಿ, ಸೆಮಿಫೈನಲ್ ಪ್ರವೇಶಿಸಿದ್ದ ಫೋಗಟ್, ಸೆಮಿಫೈನಲ್‌ನಲ್ಲೂ ಕ್ಯೂಬಾದ ಪ್ರತಿಸ್ಪರ್ಧಿಯ ವಿರುದ್ಧ ಗೆಲುವು ಸಾಧಿಸುವ ಮೂಲಕ ಫೈನಲ್ ತಲುಪಿದ್ದರು. ಆ ಮೂಲಕ ಕುಸ್ತಿಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಆದರೆ, ಫೈನಲ್ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ತೂಕದಲ್ಲಿ ಸುಮಾರು 50 ಕೆಜಿಗಿಂತ 100 ಗ್ರಾಂ ಹೆಚ್ಚಳವಿರುವುದಾಗಿ ತಿಳಿಸಿ, ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ಅನರ್ಹಗೊಳಿಸಿತ್ತು. ಆ ಮೂಲಕ ಭಾರತವು ಚಿನ್ನದ ಪದಕವನ್ನು ಗೆಲ್ಲುವ ಕನಸು ನುಚ್ಚುನೂರಾಗಿತ್ತು. ಈ ಬೆಳವಣಿಗೆ ಭಾರತೀಯರಿಗೆ ಆಘಾತ ಉಂಟು ಮಾಡಿರುವುದು ಸುಳ್ಳಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!