Friday, September 20, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಪುರಸಭೆ ಸಾಮಾನ್ಯಸಭೆ: ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ತೀರ್ಮಾನ

ಕೆ.ಆರ್.ಪೇಟೆ ಪುರಸಭೆಯ ಸಾಮಾನ್ಯ ಸಭೆಯು ಶಾಸಕ ಹೆಚ್.ಟಿ.ಮಂಜು ನೇತೃತ್ವದಲ್ಲಿ ನಡೆಯಿತು. ಕಾವೇರಿದ ಬಿಸಿ ಬಿಸಿ ಚರ್ಚೆಗೆ ಸಾಕ್ಷಿಯಾಯಿತು.

ಕೆ.ಆರ್.ಪೇಟೆ ಪುರಸಭೆಯ ಸಾಮಾನ್ಯ ಸಭೆಯು ಆಡಳಿತಾಧಿಕಾರಿಗಳಾದ ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಸಕ ಹೆಚ್.ಟಿ. ಮಂಜು, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಆರ್.ಲೋಕೇಶ್ ಹಾಗೂ ಚೀಫ್ ಆಫೀಸರ್ ರಾಜು ಕೆ. ವಠಾರ ಸಭೆಯಲ್ಲಿ ಭಾಗವಹಿಸಿ ವಿವಿಧ ಅಭಿವೃದ್ಧಿ ವಿಚಾರಗಳನ್ನು ಕುರಿತು ಚರ್ಚೆ ನಡೆಸಿದರು.

ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಹಾಗೂ ವೃತ್ತಕ್ಕೆ ಅಂಬೇಡ್ಕರ್ ಹೆಸರಿಡುವಂತೆ ಸದಸ್ಯ ಪ್ರೇಮಕುಮಾರ್ ವಿಚಾರ ಮಂಡಿಸಿದಾಗ ಬಿಸಿ ಬಿಸಿ ಚರ್ಚೆ ನಡೆದು ಕಾವೇರಿದ ವಾತಾವರಣ ನಿರ್ಮಾಣವಾಯಿತು. ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಸರ್ಕಾರಿ ಜಾಗದಲ್ಲಿ ಪ್ರತಿಮೆ ಸ್ಥಾಪಿಸಲು ಅವಕಾಶವಿಲ್ಲವಾದ್ದರಿಂದ ಚನ್ನರಾಯಪಟ್ಟಣ- ಮೈಸೂರು ಮುಖ್ಯ ರಸ್ತೆಯ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವಂತೆ ಸಭೆಯಲ್ಲಿ ಸರ್ವನುಮತದಿಂದ ತೀರ್ಮಾನಿಸಲಾಯಿತು.

ಪುರಸಭೆಯ ವ್ಯಾಪ್ತಿಯಲ್ಲಿ ಅಗತ್ಯ ಇರುವ ಪ್ರದೇಶದಲ್ಲಿ ತುರ್ತಾಗಿ ಕಾಮಗಾರಿ ನಡೆಸುವುದು, ವಿವಿಧ ವೃತ್ತಗಳಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳಿಂದ ಶುಲ್ಕ ಸಂಗ್ರಹಣೆ ಮಾಡಿ ಆದಾಯ ಹೆಚ್ಚಿಸಿಕೊಳ್ಳುವುದು, ಹೊಸಹೊಳಲು ಹಾಗೂ ಕೆ. ಆರ್.ಪೇಟೆ ಪಟ್ಟಣದಲ್ಲಿ ನಿವೇಶನ ರಹಿತರಿಗೆ ನಿವೇಶನ ವಿತರಿಸಲು ಕ್ರಮ ಕೈಗೊಳ್ಳುವುದು, ವಿವಿಧ ಬಡಾವಣೆಗಳಲ್ಲಿ ಬೀದಿ ದೀಪ ಕಟ್ಟಿಸುವುದು ಸೇರಿದಂತೆ ಪಟ್ಟಣದ ಸಮಗ್ರವಾದ ಅಭಿವೃದ್ಧಿಗೆ ಸದಸ್ಯರು ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಶಾಸಕ ಮಂಜು ಸದಸ್ಯರಲ್ಲಿ ಮನವಿ ಮಾಡಿದರು.

ನಿವೃತ್ತ ಸರ್ಕಾರಿ ನೌಕರರ ಭವನದ ನಿರ್ಮಾಣಕ್ಕೆ ಪಟ್ಟಣದ ಸುಭಾಶ್ ನಗರ ಬಡಾವಣೆ ಯಲ್ಲಿ ನಿವೇಶನ ನೀಡಿ ಪೌರ ಕಾರ್ಮಿಕರ ಸಂಘದ ಕಟ್ಟಡದ ನಿರ್ಮಾಣಕ್ಕೆ ಹೇಮಾವತಿ ಬಡಾವಣೆಯ ವಾಟರ್ ಟ್ಯಾಂಕ್ ಪಕ್ಕದಲ್ಲಿ ನಿವೇಶನ ನೀಡಲು ತೀರ್ಮಾನಿಸಲಾಯಿತು.

ಹಿರಿಯ ಸದಸ್ಯರಾದ ಕೆ.ಸಿ. ಮಂಜುನಾಥ್, ಡಿ.ಪ್ರೇಮ್ ಕುಮಾರ್, ಬಸ್ ಸಂತೋಷ್ ಕುಮಾರ್, ಗಿರೀಶ್, ಪ್ರವೀಣ್, ರವೀಂದ್ರಬಾಬು, ಹೆಚ್.ಡಿ.ಅಶೋಕ್, ನಟರಾಜ್, ಪಂಕಜ, ಖಮ್ಮರ್ ಬೇಗಂ, ಕಲ್ಪನಾ, ಶುಭಾ ಗಿರೀಶ್, ಇಂದ್ರಾಣಿ, ಸೌಭಾಗ್ಯ, ಸುಗುಣ ರಮೇಶ್, ಕೆ. ಎಸ್. ಪ್ರಮೋದ್ ಚರ್ಚೆಯಲ್ಲಿ ಭಾಗವಹಿಸಿದ್ದರು.

ಕೆ.ಆರ್.ಪೇಟೆ ಹೇಮಾವತಿ ಬಡಾವಣೆಯ ಕ್ರೀಡಾ ಪಾರ್ಕಿನಲ್ಲಿ ಬಯಲು ರಂಗಮಂದಿರ ನಿರ್ಮಾಣ ಮಾಡುವುದು, ಕೆ.ಆರ್.ಪೇಟೆ ಪಟ್ಟಣದ ಪುರಸಭಾ ಕಚೇರಿಯನ್ನು ಬಸ್ ನಿಲ್ದಾಣದ ಪಕ್ಕದಲ್ಲಿ ಹೊಸದಾಗಿ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ತೀರ್ಮಾನಿಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!