Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಜ್ಯಪಾಲರೇ, ನವರಂಗಿ ನಕಲಿ ಸ್ವಾಮಿ ವಿರುದ್ಧ ಕ್ರಮ ಯಾವಾಗ ? ; ಡಿ.ಕೆ ಶಿವಕುಮಾರ್

ಜನತಾದಳದ ಅಗ್ರಗಣ್ಯ ನಾಯಕ, ನವರಂಗಿ ನಕಲಿ ಸ್ವಾಮಿ, ಬರೀ ಬುರುಡೆ ಬಿಡುವ ಕುಮಾರಸ್ವಾಮಿ ವಿರುದ್ದ ಇಲ್ಲದ ಕ್ರಮ ನಮ್ಮ ವಿರುದ್ದವೇಕೆ ರಾಜ್ಯಪಾಲರೇ? ಮುಂದಿನ 10 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುತ್ತದೆ. ನಿಮ್ಮ ಯಾವ ಹುನ್ನಾರಗಳಿಗೂ ನಮ್ಮ ಸರ್ಕಾರ ಜಗ್ಗುವುದಿಲ್ಲ, ಬಗ್ಗುವುದಿಲ್ಲ, ಹೆದರುವುದಿಲ್ಲ ಎಂದು ಡಿಸಿಎಂ ಡಿ .ಕೆ.ಶಿವಕುಮಾರ್ ಅವರು ಗುಡುಗಿದರು.

ಮುಖ್ಯಮಂತ್ರಿಗಳ ವಿರುದ್ಧದ ವಿಚಾರಣೆಗೆ ರಾಜ್ಯಪಾಲರು ನೀಡಿರುವ ಅನುಮತಿಯನ್ನು ಖಂಡಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.

“ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿ ಅವರ ಮೇಲೂ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿ ಕಳಂಕಿತರ ವಿರುದ್ದ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರೂ ಏಕೆ ಪುರಸ್ಕರಿಸಿಲ್ಲ ರಾಜ್ಯಪಾಲರೇ?” ಎಂದು ಪ್ರಶ್ನಿಸಿದರು.

“ವಿರೋಧ ಪಕ್ಷದವರು ಹತ್ತು ಜನ್ಮ ಎತ್ತಿದರೂ ಕಾಂಗ್ರೆಸ್ ಸರ್ಕಾರ ಬೀಳಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು ರಾಜಿನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮಂತ್ರದಿಂದ ಮಾವಿನಕಾಯಿ ಉದುರಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರ ಪರವಾಗಿ ಡಿ.ಕೆ.ಶಿವಕುಮಾರ್ ಒಬ್ಬನೇ ಅಲ್ಲ ಇಂಡಿಯಾ ಒಕ್ಕೂಟ ಹಾಗೂ ರಾಜ್ಯದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಕಟ್ಟ ಕಡೆಯ ಮತದಾರರು ಆಶೀರ್ವಾದ ಮಾಡಿ ಬೆನ್ನಲುಬಾಗಿ ನಿಂತಿದ್ದಾರೆ” ಎಂದರು.

ರಾಜ್ಯಪಾಲರೇ ಬಿಜೆಪಿಯವರು ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ

“ಸರ್ಕಾರ ನೀಡಿರುವ ಸಲಹೆಗಳನ್ನೂ ಓದದ ರಾಜ್ಯಪಾಲರು ಟಿ.ಜೆ.ಅಬ್ರಹಾಂ ಎನ್ನುವ ವ್ಯಕ್ತಿ ಬೆಳಗ್ಗೆ ಅರ್ಜಿ ಕೊಟ್ಟರೆ, ಸಾಯಂಕಾಲದ ವೇಳೆಗೆ ಒಂದೇ ದಿನದಲ್ಲಿ ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಬಿಜೆಪಿಯವರು ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ರಾಜ್ಯಪಾಲರೇ ನಿಮ್ಮದು ಸಾಂವಿಧಾನಿಕ ಹುದ್ದೆ, ನಿಮ್ಮ ಮೇಲೆ ಈಗಲೂ ಗೌರವವಿದೆ. ನಿಮಗೆ ಸಾಕಷ್ಟು ಸಮಯವಿದ್ದು ವಿಚಾರಣೆಗೆ ನೀಡಿರುವ ಅನುಮತಿ ವಾಪಸ್ ಪಡೆಯಿರಿ” ಎಂದು ಆಗ್ರಹಿಸಿದರು.

ರಾಜ್ಯಪಾಲರ ಹುದ್ದೆ ಸೃಷ್ಟಿ ಮಾಡಿದ್ದೇ ಕಾಂಗ್ರೆಸ್

“ರಾಜ್ಯಪಾಲರು ಸಿಎಂ ಅವರ ವಿರುದ್ಧ ನೀಡಿರುವ ಅನುಮತಿ ವಿರುದ್ದ ನ್ಯಾಯಲಯದಲ್ಲಿ ನಮ್ಮ ಪರವಾಗಿ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇವೆ. ಹಿಂಬಾಗಿಲ ಮೂಲಕ ಬಿಜೆಪಿ, ಜೆಡಿಎಸ್ ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿವೆ. ಸಂವಿಧಾನದ ಮೂಲಕ ರಾಜ್ಯಪಾಲರ ಕುರ್ಚಿಯನ್ನು ಸೃಷ್ಟಿ ಮಾಡಿದ್ದೇ ಕಾಂಗ್ರೆಸ್ ಸರ್ಕಾರ. ನಮ್ಮ ಪಕ್ಷ ಕೊಟ್ಟಿರುವ ಸಂವಿಧಾನದ ಹಕ್ಕನ್ನು ದುರುಪಯೋಗ ಪಡಿಸಿಕೊಂಡು ಮುಖ್ಯಮಂತ್ರಿಗಳ ವಿರುದ್ಧ ವಿಚಾರಣೆಗೆ ಅವಕಾಶ ನೀಡಿರುವುದು ಹಾಸ್ಯಾಸ್ಪದ” ಎಂದರು.

“ಪ್ರತಿಪಕ್ಷಗಳಿಗೆ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳ ಮೇಲೆ ಅಸೂಯೆ. ಬಡವರ ಪರವಾಗಿ ಕೆಲಸ ಮಾಡುತ್ತಿರುವ ಹಿಂದುಳಿದ ವರ್ಗದ ನಾಯಕನೊಬ್ಬ ಗ್ಯಾರಂಟಿಗಳನ್ನು ನೀಡಿ ಜನರ ಹೃದಯ ಗೆದ್ದಿದ್ದಾರೆ ಎಂಬುದನ್ನು ಪ್ರತಿಪಕ್ಷಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಧಿಕಾರ ಸಿಗಲಿಲ್ಲ ಎಂದು ಕೈ, ಕೈ ಹೊಸಕಿಕೊಳ್ಳುತ್ತಿದ್ದಾರೆ” ಎಂದು ಕಿಡಿಕಾರಿದರು.

“ಪ್ರತಿಪಕ್ಷದವರಿಗೆ ಹೊಟ್ಟೆಯುರಿ ಬಂದರೆ ನಮ್ಮ ಬಳಿ ಇರುವ ವೈದ್ಯರಿಂದ ಔಷಧಿ ಕಳಿಸಿಕೊಡೋಣ. ಹೊಟ್ಟೆಯುರಿಗೆ ಔಷಧವಿದೆ ಆದರೆ ಅಸೂಯೆಗೆ ಮದ್ದಿಲ್ಲ. ನಾವು ಅವರ ಮಾತುಗಳಿಗೆ ತಲೆಕೆಡಿಸಿಕೊಳ್ಳುವ ಪ್ರಮೇಯವಿಲ್ಲ. ಏಕೆಂದರೆ ವಿಚಾರಣೆಗೆ ನೀಡಿರುವ ಅನುಮತಿಯನ್ನು ನ್ಯಾಯಲಯವು ಧಿಕ್ಕರಿಸಿ ನ್ಯಾಯ ನೀಡುವ ನಂಬಿಕೆಯಿದೆ” ಎಂದರು.

ರಾಜ್ಯಪಾಲರೇ ಒಳಸಂಚು ಏಕೆ?

“ಜನ ಬಹುಮತ ನೀಡಿರುವ ಕಾರಣಕ್ಕೆ ರಾಜ್ಯಪಾಲರು ಸರ್ಕಾರಕ್ಕೆ ಪ್ರಮಾಣ ವಚನ ಭೋದನೆ ಮಾಡಿದರು. ಏಕೆ ಈಗ ಒಳಸಂಚು ಮಾಡುತ್ತಿದ್ದೀರಿ. ನಿಮಗೆ ಸಂವಿಧಾನವನ್ನು ಕಾಪಾಡುವ ಜವಾಬ್ದಾರಿ ನೀಡಲಾಗಿದೆ. ಆದರೆ ನೀವು ಏಕೆ ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ? ಸಂವಿಧಾನವನ್ನು ಕಾಪಾಡಬೇಕೆ ಹೊರತು, ಆ ಕುರ್ಚಿಗೆ ಕಳಂಕ ತರಬಾರದು ಎಂದು ನಿಮಗೆ ಸಲಹೆಯನ್ನು ನೀಡುತ್ತಿದ್ದೇವೆ” ಎಂದು ಹೇಳಿದರು.

“ನಮ್ಮ ಮುಖ್ಯಮಂತ್ರಿಗಳ ಮೇಲೆ ಅಗಾಧವಾದ ಆರೋಪಗಳು ಬಂದಿವೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ. ಆ ಆರೋಪಗಳ ಮೇಲೆ ನೀವು ತನಿಖೆ ನಡೆಸಿದ್ದೀರಾ? ಇದರ ಬಗ್ಗೆ ಯಾವುದಾದರೂ ತನಿಖಾ ಸಂಸ್ಥೆಗಳು ವರದಿ ನೀಡಿದ್ದಾವೆಯೇ? ಅಧಿಕಾರಿಗಳು, ಲೋಕಾಯುಕ್ತರು ಇಬ್ಬರಲ್ಲಿ ಯಾರು ನಿಮಗೆ ವರದಿ ನೀಡಿದ್ದಾರೆ” ಎಂದು ಖಾರವಾಗಿ ಪ್ರಶ್ನಿಸಿದರು.

“ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಬೇಕು ಎಂದು ಬ್ರಿಟಿಷರು 200 ವರ್ಷಗಳ ಕಾಲ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಈ ದೇಶದ ಜನರಿಗೆ ಸಂವಿಧಾನ, ಪ್ರಜಾಪ್ರಭುತ್ವ ಸೇರಿದಂತೆ ಎಲ್ಲಾ ಹಕ್ಕುಗಳನ್ನು ನೀಡಿದ್ದು ಕಾಂಗ್ರೆಸ್. ನಮ್ಮ ಸರ್ಕಾರದ ಯೋಜನೆಗಳನ್ನು ನೋಡಿ ಬಿಜೆಪಿಯವರು ಅನೇಕ ಕಡೆ ಕರ್ನಾಟಕ ಮಾಡೆಲ್ ಎಂದು ಜಾರಿಗೆ ತರುತ್ತಿದ್ದಾರೆ. ಇದು ಆ ಪಕ್ಷಕ್ಕೆ ಹೊಟ್ಟೆಯುರಿಯಾಗಿದೆ” ಎಂದರು.

ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಸಾಧ್ಯವಿಲ್ಲ

“ಬಿಜೆಪಿಯ ಹುನ್ನಾರಗಳನ್ನು ಜನರಿಗೆ ತಿಳಿಸುವ ಕೆಲಸ ಮುಂದಿನ ದಿನಗಳಲ್ಲಿ ಮಾಡಲಾಗುವುದು. ಬಿಜೆಪಿಯವರು ಅಧಿಕಾರಕ್ಕೆ ಏಕೆ ಬರಲಿಲ್ಲ. ನೀವು ಈ ಹಿಂದೆ 17 ಜನರನ್ನು ಕರೆದುಕೊಂಡು ಹೋಗಿ ಆಪರೇಷನ್ ಕಮಲ ಮಾಡಿ ಜನತಾದಳ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿದರು. ಈ ಬಾರಿಯೂ ಸ್ವಲ್ಪ ಪ್ರಯತ್ನ ಪಟ್ಟರು. ಆದರೆ ಅವರ ಆಟ ನಡೆಯಲಿಲ್ಲ. ಮುಂದಕ್ಕೂ ನಡೆಯುವುದಿಲ್ಲ. ಕಾಂಗ್ರೆಸ್ ಪಕ್ಷದ ಒಬ್ಬನೇ ಒಬ್ಬ ಶಾಸಕನನ್ನು ಖರೀದಿ ಮಾಡಲು ಸಾಧ್ಯವಿಲ್ಲ” ಎಂದು ಸವಾಲು ಹಾಕಿದರು.

“ಮುಡಾ ಅಕ್ರಮದಲ್ಲಿ ಸಿದ್ದರಾಮಯ್ಯ ಅವರು ಎಲ್ಲಾದರೂ ಪ್ರಭಾವ ಬೀರಿದ್ದಾರೆಯೇ. ಸಿದ್ದರಾಮಯ್ಯ ಅವರ ಪತ್ನಿಗೆ ಅವರ ಅಣ್ಣ ಅರಿಶಿನ, ಕುಂಕುಮಕ್ಕೆ ಎಂದು ಜಮೀನು ದಾನ ಕೊಟ್ಟಿದ್ದರು. ಇದನ್ನು ಮುಡಾ ಆಕ್ರಮಿಸಿಕೊಂಡ ಕಾರಣಕ್ಕೆ ಪರಿಹಾರ ನೀಡಿ ಎಂದು ಮನವಿ ಮಾಡಿದ್ದರು. ಸಿಎಂ ಅವರ ಪತ್ನಿ ಇಂತಲ್ಲೇ ಸೈಟ್ ಬೇಕು ಎಂದು ಎಲ್ಲಿಯೂ ಮನವಿ ಮಾಡಿಲ್ಲ. ಸಿದ್ದರಾಮಯ್ಯ ಅವರು ಎಲ್ಲಿಯೂ ಪ್ರಭಾವ ಬೀರಿಲ್ಲ. ಇದು ನಡೆದಾಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಈಗ ಅವರೇ ಆರೋಪ ಮಾಡುತ್ತಿರುವುದು ಎಷ್ಟು ಸರಿ?” ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!