Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಜಭವನ ತಲುಪಿದ ಹೆಚ್‌.ಡಿ ಕುಮಾರಸ್ವಾಮಿ ಗಣಿ ಅಕ್ರಮಗಳ ಪಟ್ಟಿ| ರಾಜ್ಯಪಾಲರ ನಡೆಯತ್ತ ಎಲ್ಲರ ಚಿತ್ತ

ಆಪಾದಿತ ಮುಡಾ ಅಕ್ರಮ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಉಕ್ಕು ಮತ್ತು ಕೈಗಾರಿಕೆ ಸಚಿವ ಎಚ್‌.ಡಿ ಕುಮಾರಸ್ವಾಮಿ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ಇದೇ ವೇಳೆ, ಎಚ್‌.ಡಿ ಕುಮಾರಸ್ವಾಮಿ ವಿರುದ್ಧವೂ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಡೆದಿವೆ ಎನ್ನಲಾದ ಗಣಿ ಗುತ್ತಿಗೆ ಮಂಜೂರು ಅಕ್ರಮಗಳ ಪಟ್ಟಿಯನ್ನು ಲೋಕಾಯುಕ್ತ ಎಸ್‌ಐಟಿ ತಂಡ ರಾಜಭವನಕ್ಕೆ ಕಳಿಸಲಾಗಿದೆ.

ಕುಮಾರಸ್ವಾಮಿ ವಿರುದ್ಧದ ಚಾರ್ಜ್‌ಶೀಟ್ ಸಲ್ಲಿಸಲು ಅನುಮತಿ ಕೋರಿದೆ. ಸಿದ್ದರಾಮಯ್ಯ ಅವರ ವಿಚಾರದಲ್ಲಿ ಅತ್ಯುತ್ಸಾಹದಿಂದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲ ತಾವರ್ ಚಂದ್ರ ಗೆಹ್ಲೋಟ್ ಅವರು ಎಚ್‌.ಡಿ ಕುಮಾರಸ್ವಾಮಿ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

ಮುಡಾ ಅಕ್ರಮ ಸಂಬಂಧ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿ ದೂರು ಸಲ್ಲಿಸಿದ ದಿನವೇ ಮುಖ್ಯಮಂತ್ರಿಗೆ ನೋಟಿಸ್‌ ಕೊಟ್ಟು, ಬಳಿಕ ಪ್ರಾಸಿಕ್ಯೂಷನ್‌ಗೂ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಇದೀಗ, ಕುಮಾರಸ್ವಾಮಿ ಅವರ ವಿಚಾರದಲ್ಲಿಯೂ ಅಷ್ಟೇ ತ್ವರಿತವಾಗಿ ಕ್ರಮ ಕೈಗೊಳ್ಳವರೇ ಎಂಬ ಪ್ರಶ್ನೆ ಮತ್ತು ಕುತೂಹಲ ರಾಜ್ಯದ ಜನರಲ್ಲಿದೆ. ಅಂದಹಾಗೆ, ಇದೇ ರಾಜ್ಯಪಾಲರು ಈ ಹಿಂದೆ ಕುಮಾರಸ್ವಾಮಿ ವಿರುದ್ಧ ಸಲ್ಲಿಕೆಯಾಗಿದ್ದ ದೂರನ್ನು 10 ತಿಂಗಳಿಗೂ ಹೆಚ್ಚು ಕಾಲ ಬಚ್ಚಿಟ್ಟಿದ್ದರು ಎಂಬುದು ಕಳೆದ ವಾರ ಭಾರೀ ಚರ್ಚೆಯಲ್ಲಿತ್ತು.

2007ರಲ್ಲಿ ಎಚ್‌.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬಳ್ಳಾರಿ ಜಿಲ್ಲೆಯ ಸಂಚೂರಿನಲ್ಲಿ 550 ಎಕರೆ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಎಸ್‌ಎಸ್‌ವಿಎಂ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ್ದರು. ಈ ವೇಳೆ, ಅವರು ಗಣಿ ಮತ್ತು ಖನಿಜ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ ಇದೇ ಆರೋಪದ ಮೇಲೆ ಎಚ್‌.ಡಿ ಕುಮಾರಸ್ವಾಮಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಅನುಮತಿ ಕೋರಿ ಲೋಕಾಯುಕ್ತ ಎಸ್‌ಐಟಿ ತಂಡ ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಿದೆ.

ಅಂದಿನ ಗಣಿ ಗುತ್ತಿಗೆ ಮಂಜೂರು ಪ್ರಕರಣದ ವಿಚಾರಣೆ ನಡೆಸಿದ್ದ ಆಗಿನ ಲೋಕಾಯುಕ್ತ ಎನ್‌ ಸಂತೋಷ್ ಹೆಗ್ಡೆ ಅವರು 2011ರಲ್ಲಿ ವರದಿ ಸಲ್ಲಿಸಿದ್ದರು. ಆ ವರದಿಯನ್ನು ಉಲ್ಲೇಖಿಸಿ ಲೋಕಾಯುಕ್ತ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಸಲು ಮುಂದಾಗಿದೆ. ಹೆಚ್ಚಿನ ತನಿಖೆ ನಡೆಸುತ್ತಿದೆ. ಭ್ರಷ್ಟಾಚಾರ ನಿಯಂತ್ರಣ ತಿದ್ದುಪಡಿ ಕಾಯ್ದೆ-2018ರ ಅಡಿಯಲ್ಲಿ ಜನಪ್ರತಿನಿಧಿಗಳ ವಿರುದ್ಧದ ಆರೋಪದ ತನಿಖೆಗೆ ತನಿಖಾ ಸಂಸ್ಥೆಗಳು ರಾಜ್ಯಪಾಲರ ಅನಮತಿ ಪಡೆಯಬೇಕಿದೆ. ಹೀಗಾಗಿ, ಕುಮಾರಸ್ವಾಮಿ ವಿರುದ್ಧ ತನಿಖೆಗಾಗಿ ರಾಜ್ಯಪಾಲರ ಅನುಮತಿಗೆ ಪ್ರಸ್ತಾವ ಸಲ್ಲಿಸಿದೆ.

ರಾಜ್ಯಪಾಲರು ಜಾರ್ಜ್‌ಶೀಟ್‌ ಸಲ್ಲಿಸಲು ಅನುಮತಿ ನೀಡುವರೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಎಲ್ಲ ಚಿತ್ರ ರಾಜಭವನದತ್ತ ನೆಟ್ಟಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!