Friday, September 20, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ ಪುರಸಭೆ ಕಾಂಗ್ರೆಸ್ ತೆಕ್ಕೆಗೆ | ಕೃಷಿ ಸಚಿವರ ತಂತ್ರಗಾರಿಕೆ ಸಕ್ಸಸ್ : ದಳಪತಿಗಳಿಗೆ ತೀವ್ರ ಮುಖಭಂಗ

ನಾಗಮಂಗಲ ಪುರಸಭೆಯ 23 ಸ್ಥಾನಗಳ ಪೈಕಿ 13 ಸ್ಥಾನಗಳ ಸರಳ ಬಹುಮತ ಹೊಂದಿದ್ದರೂ ಜೆಡಿಎಸ್ ಪಕ್ಷವು ಪುರಸಭೆಯ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದು, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ತಂತ್ರಗಾರಿಕೆಯಿಂದಾಗಿ ಕೇವಲ 10 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷವು ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಪದವಿಗಳನ್ನು ತನ್ನದಾಗಿಸಿಕೊಂಡು ಬೀಗುವ ಮೂಲಕ ದಳಪತಿಗಳಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ.

ಸ್ಥಳೀಯ ಶಾಸಕರೂ ಆಗಿರುವ ಜಿಲ್ಲಾ ಉಸ್ತವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಎರಡು ಮತಗಳು ಸೇರಿ ಮತದಾನದ ಸಂಖ್ಯಾಬಲ ಒಟ್ಟು 25 ಇತ್ತು.

ಚುನಾವಣೆಯಲ್ಲಿ ಕಾಂಗ್ರೆಸ್ ನ 12ನೇ ವಾರ್ಡ್ ಸದಸ್ಯ ಅಲಿ ಅನ್ಸರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡ್ ಸದಸ್ಯೆ ವಸಂತಲಕ್ಷ್ಮಿ ನಾಮಪತ್ರ ಸಲ್ಲಿಸಿದರೆ, ಜೆಡಿಎಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ 7ನೇ ವಾರ್ಡ್ ಸದಸ್ಯೆ ಚಂದ್ರಕಲಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 3ನೇ ವಾರ್ಡ್ ಸದಸ್ಯೆ ಸೌಮ್ಯ ನಾಮಪತ್ರ ಸಲ್ಲಿಸಿದ್ದರು.

ನಂತರ ನಡೆದ ಪ್ರಕ್ರಿಯೆಯಲ್ಲಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ 11 ಮಂದಿ ಅಲಿ ಅನ್ಸರ್ ಮತ್ತು ವಸಂತಲಕ್ಷ್ಮಿ ಪರವಾಗಿ ಕೈ ಎತ್ತುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡು ಗೆಲುವು ಸಾಧಿಸಿದರು. ಜೆಡಿಎಸ್‌ನ ಚಂದ್ರಕಲಾ ಹಾಗೂ ಸೌಮ್ಯ ಪರವಾಗಿ 10 ಮಂದಿ ಕೈ ಎತ್ತಿದ ಹಿನ್ನಲೆಯಲ್ಲಿ ಎರಡೂ ಸ್ಥಾನಗಳಲ್ಲಿ ಸೋಲನುಭವಿಸಿದರು. ತಹಸೀಲ್ದಾರ್ ನಯೀಂಉನ್ನೀಸಾ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಚುನಾವಣೆಯಲ್ಲಿ ಶತಾಯ ಗತಾಯ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಕೃಷಿ ಸಚಿವ ಚೆಲುವರಾಯಸ್ವಾಮಿ ನಡೆಸಿದ ತಂತ್ರಗಾರಿಕೆ ಫಲ ನೀಡಿದ್ದು, ಜೆಡಿಎಸ್ ನ ಇಬ್ಬರು ಸದಸ್ಯರಾದ ಆಶಾ, ವಿಜಯ್ ಕುಮಾರ್ ಗೈರು ಹಾಜರಾದರೆ, ಮತ್ತಿಬ್ಬರು ಜೆಡಿಎಸ್ ಪಕ್ಷದ ಸದಸ್ಯರಾದ ರತ್ನಮ್ಮ ಮತ್ತು ಭಾರತಿ ಅವರು ಕೃಷಿ ಸಚಿವ ಚಲುವರಾಯಸ್ವಾಮಿ ಅವರ ವಾಹನದಲ್ಲಿ ಬಂದು ಚುನಾವಣೆಯಲ್ಲಿ ಭಾಗವಹಿಸಿದ್ದರೂ ತಟಸ್ಥರಾಗಿ ಉಳಿದರು. ಜೆಡಿಎಸ್ ನಿಂದ ಎಲ್ಲಾ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದರೂ ಕೆಲವರು ಕಾಂಗ್ರೆಸ್ ಪರ ವಾಲಿದ್ದರಿಂದ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.

ಪೊಲೀಸ್ ಬಿಗಿಭದ್ರತೆಯಲ್ಲಿ ನಡೆದ ಚುನಾವಣೆಯು ಸಾಕಷ್ಟು ಕುತೂಹಲ ಕೆರಳಿಸಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜೈಕಾರಗಳನ್ನು ಕೂಗುತ್ತಾ ಬಲಾಬಲ ಪ್ರದರ್ಶನ ನೀಡಿದರು. ಈ ನಡುವೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಗೈರು ಹಾಜರಾಗಿದ್ದರು, ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗತ್ತಿದ್ದ ಜೆಡಿಎಸ್ ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತ್ಯುತ್ತರ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!