Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸೆ.14 ರಿಂದ ಅ.2 ರವರೆಗೆ ಸ್ವಚ್ಛತೆಯೇ ಸೇವೆ ಆಂದೋಲನ: ಡಾ.ಕುಮಾರ

ಮಂಡ್ಯ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 2 ರವರೆಗೆ ಸ್ವಚ್ಛತೆಯೇ ಸೇವೆ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸ್ವಚ್ಛತೆಯೇ ಸೇವೆ ಆಂದೋಲನ ಪಾಕ್ಷಿಕ – 2024 ರ ಆಚರಣೆ ಸಂಬಂಧ ಸಭೆ ನಡೆಸಿ ಮಾತನಾಡಿದರು.

ಸ್ವಚ್ಛತಾ ಆಂದೋಲನಕ್ಕೆ ಸಂಬಂಧಿಸಿದಂತೆ ಎಲ್ಲಾ ಶಾಲಾ – ಕಾಲೇಜುಗಳಲ್ಲಿ ಜಾಥಾ, ಪ್ರತಿಜ್ಞಾ ವಿಧಿ ಬೋಧನೆ, ಸಸಿ ನೆಡುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೆಚ್ಚು ಪಾಲ್ಗೊಳ್ಳುವಂತೆ ಮಾಡಬೇಕು. ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಸ್ವಚ್ಛತಾ ಆಂದೋಲನದ ಬಗ್ಗೆ ಪ್ರಬಂಧ, ಚರ್ಚಾ ಸ್ಪರ್ಧೆ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದರು.

ಪತ್ರ ಬರೆಯುವ ಅಭಿಯಾನ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅವರ ತಂದೆ, ತಾಯಿ, ಪೋಷಕರಿಗೆ ಹಾಗೂ ಕುಟುಂಬ ವರ್ಗದವರಿಗೆ ಸ್ವಚ್ಛತೆಯ ಪ್ರಾಮುಖ್ಯತೆ ಬಗ್ಗೆ ಪತ್ರ ಬರೆಸಿ ಪತ್ರ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಿ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸೆಪ್ಟೆಂಬರ್ 19 ರಂದು ಬೆಳಿಗ್ಗೆ 7 ಗಂಟೆಗೆ ಏಕಕಾಲದಲ್ಲಿ ಸ್ವಚ್ಛತೆಗಾಗಿ ಶ್ರಮದಾನ ಮಾಡಬೇಕು ಎಂದು ತಿಳಿಸಿದರು.

ಹಸಿ ಕಸ, ಒಣ ಕಸ ವಿಂಗಡಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜನ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಿ ಎಂದರು.

ಸಸಿ ನೆಡುವ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಸ್ವಯಂ ಸೇವಕರು, ಎನ್ ಜಿ ಓ ಹಾಗೂ ರೆಡ್ ಕ್ರಾಸ್ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳನ್ನು ಪಾಲ್ಗೊಳ್ಳುವಂತೆ ನೋಡಿಕೊಳ್ಳಿ ಎಂದರು.

ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ 1,500 ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ. ಅರಣ್ಯ ಇಲಾಖೆಯಿಂದ ಗಿಡಗಳನ್ನು ಒದಗಿಸಲಾಗುವುದು. ಮಾನವ ಸರಪಳಿ, ಜಾಥಾ ಹಾಗೂ ವೇದಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಯ ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರು ಭಾಗವಹಿಸಬೇಕು ಎಂದರು.

ಸ್ವಚ್ಛತಾ ಆಂದೋಲನ ಅರಿವು ಜಾಗೃತಿಯು ಜನರಿಗೆ ವೇಗವಾಗಿ, ದೃಢವಾಗಿ ತಲುಪಬೇಕು. ಸಾರ್ವಜನಿಕರಿಗೆ ಬೀದಿ ನಾಟಕಗಳ ಮೂಲಕ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು ಎಂದರು.

ಅಕ್ಟೋಬರ್ 2 ರಂದು ಸ್ವಚ್ಛತಾ ಸೇವಾ ಕಾರ್ಯಕ್ರಮವನ್ನು ಉತ್ತಮವಾಗಿ ಸಂಘಟಿಸಿದ ಗ್ರಾಮ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು ಎಂದು ತಿಳಿಸಿದರು.

ಸಫಾಯಿಮಿತ್ರ ಸುರಕ್ಷಾ ಶಿಬಿರ ಸೆಪ್ಟೆಂಬರ್ 17 ರಂದು ಸಫಾಯಿಮಿತ್ರ ಸುರಕ್ಷಾ ಶಿಬಿರವನ್ನು ಆಯೋಜಿಸಿ ಆರೋಗ್ಯ ತಪಾಸಣೆಗಳನ್ನು ಹಮ್ಮಿಕೊಳ್ಳಲಾಗುವುದು. ಶಿಬಿರದಲ್ಲಿ ನೈರ್ಮಲ್ಯ ಕಾರ್ಯಕರ್ತರಿಗೆ ಉಚಿತ ಆರೋಗ್ಯ ತಪಾಸಣೆ, ಅಗತ್ಯವಿರುವ ವ್ಯಾಕ್ಸಿನೇಷನ್ ಮತ್ತು ಜಂತುಹುಳು ನಿವಾರಣೆ ಮತ್ತು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳಾ ನೈರ್ಮಲ್ಯ ಕಾರ್ಮಿಕರಿಗೆ ತ್ರೈಮಾಸಿಕ ತಪಾಸಣೆ ಹಾಗೂ ಅಗತ್ಯ ಚಿಕಿತ್ಸೆಗಳನ್ನು ನೀಡುವುದು ಎಂದರು.

ಬ್ಲಾಕ್ ಸ್ಪಾಟ್ ಗುರುತಿಸಿ ಸ್ವಚ್ಛತೆ ಮಾಡಲೇ ಬೇಕಿರುವ ಹೆಚ್ಚು ಅನೈರ್ಮಲ್ಯ ಹೊಂದಿರುವ ಸ್ಥಳಗಳು/ಬ್ಲಾಕ್ ಸ್ಪಾಟ್ ಗುರುತಿಸಿ ಈ ಸ್ಥಳಗಳಲ್ಲಿ ಸ್ವಚ್ಛತಾ ಆಂದೋಲನವನ್ನು ನಡೆಸುವಂತೆ ತಿಳಿಸಿದರು.

ಸ್ವಚ್ಛತೆಯೇ ಸೇವೆ ಆಂದೋಲನ ಅವಧಿಯಲ್ಲಿ ಇಲಾಖಾವಾರು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಇಲಾಖೆಯು ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರು ಕುರಿತು ಅರಿವು ಮೂಡಿಸಬೇಕು. ಕೈ ತೊಳೆಯುವ ಸರಿಯಾದ ವಿಧಾನದ ಬಗ್ಗೆ ಮಕ್ಕಳಿಗೆ ತಿಳಿಸಿ ಎಂದರು.

ಪ್ರವಾಸೋದ್ಯಮ ಇಲಾಖೆಯು ಪ್ರವಾಸಿತಾಣ, ಪಾರಂಪರಿಕ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಚ್ಛತೆಯೇ ಸೇವೆ -2024 ಕುರಿತು ಪೋಸ್ಟರ್ ಅನ್ನು ಅಳವಡಿಸುವುದು. ಸ್ವಚ್ಛ ಪ್ರವಾಸೋದ್ಯಮ ಪರಿಕಲ್ಪನೆ, ಪ್ರವಾಸಿ ತಾಣಗಳಲ್ಲಿನ ಶೌಚಾಲಯಗಳಲ್ಲಿ ಶುಚಿತ್ವ ಮತ್ತು ನೈರ್ಮಲ್ಯದ ನಿರ್ವಹಣೆ ಮಾಡುವುದು ಕಡ್ಡಾಯ ಎಂದರು.

ಸಾರಿಗೆ ಇಲಾಖೆಯು ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಲು ಶ್ರಮದಾನ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಶುಚಿತ್ವದ ಮಹತ್ವ ಸಾರುವ ಸಂದೇಶಗಳ ಬಸ್ ನಿಲ್ದಾಣಗಳಲ್ಲಿ ಕಸದ ತೊಟ್ಟಿ/ ಬುಟ್ಟಿಗಳನ್ನು ಇಡುವುದು. ಕಸ ವಿಲೇವಾರಿ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದರು.

ಕೃಷಿ ಮಾರುಕಟ್ಟೆ ಇಲಾಖೆಯು ಎ ಪಿ ಎಂ ಸಿ ಯಾರ್ಡ್ ಗಳು, ಮಂಡಿಗಳು, ಮಾರುಕಟ್ಟೆಗಳು, ಬಯೋಮಾಸ್ ಸಂಸ್ಥೆಗಳ ನಿರ್ವಹಣೆಯಲ್ಲಿ ತ್ಯಾಜ್ಯದಿಂದ ಸಂಪತ್ತು ಮಾಡುವ ಕುರಿತು ಸ್ವಚ್ಛತಾ ಅಭಿಯಾನಗಳನ್ನು ಹಮ್ಮಿಕೊಳ್ಳುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಯೋಜನಾ ನಿರ್ದೇಶಕ ಸಂಜೀವಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್ ಶಿವರಾಮೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಅಧಿಕಾರಿ ರಾಜಮೂರ್ತಿ ಎಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್ ಹೆಚ್ ನಿರ್ಮಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!