Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಜ್ಯಪಾಲರಿಗೆ ಮಂಡ್ಯದಲ್ಲಿ ಕಪ್ಪುಬಟ್ಟೆ ಪ್ರದರ್ಶನ: ಸುಂಡಹಳ್ಳಿ ಮಂಜುನಾಥ್

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪ್ರಾಸಿಕ್ಯೂಷನ್ನಿಗೆ ಅನುಮತಿ ಕೊಡುವಾಗ ಸಂವಿಧಾನದ ಮೂಲ ತತ್ವಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿರುವ ರಾಜ್ಯಪಾಲರು ಸೆ. 13ರಂದು ಮಂಡ್ಯದಲ್ಲಿ ನಡೆಯಲಿರುವ ಮಂಡ್ಯ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಆಗಮಿಸುತ್ತಿದ್ದು, ಈ  ಸಂದರ್ಭದಲ್ಲಿ ಅವರಿಗೆ ಕಪ್ಪುಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಮುಖಂಡ ಸುಂಡಹಳ್ಳಿ ಮಂಜುನಾಥ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಮುವಾದಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಮತ್ತು ಜಾತಿವಾದಿ ರಾಜಕಾರಣ ಮಾಡುತ್ತಿರುವ ಜೆಡಿಎಸ್‌ ಪಕ್ಷಗಳ ಕಛೇರಿಯನ್ನಾಗಿ ರಾಜಭವನವನ್ನು ಪರಿವರ್ತಿಸಿಕೊಂಡಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಾಗಿದೆ. ಜನರಿಂದ ಆಯ್ಕೆಯಾದ ಸರ್ಕಾರದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗಳ ವಿರುದ್ಧ ನಡೆಯುತ್ತಿರುವ ಪಿತೂರಿ-ಷಡ್ಯಂತ್ರಗಳ ಭಾಗವಾಗಿ ರಾಜ್ಯಪಾಲರು ವರ್ತಿಸುತ್ತಿದ್ದಾರೆ. ಆ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ದೂರಿದರು.

ಕರ್ನಾಟಕ ಲೋಕಾಯುಕ್ತ, ಎಸ್.ಐ.ಟಿ. ಮುಂತಾದ ತನಿಖಾ ಸಂಸ್ಥೆಗಳು ಪ್ರಾಥಮಿಕ ತನಿಖೆ ಮಾಡಿ ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಮೇಲ್ನೋಟಕ್ಕೆ ಸಾಬೀತಾದ ಪ್ರಮುಖ ಪ್ರಕರಣಗಳ ಕುರಿತು ಪ್ರಾಸಿಕ್ಯೂಷನ್ನಿಗೆ ಅನುಮತಿ ಕೊಡಿ ಎಂದು ರಾಜಭವನಕ್ಕೆ ಕೋರಿಕೆ ಸಲ್ಲಿಸಿ ವರ್ಷಗಳಾದರೂ ಈ ರಾಜ್ಯಪಾಲರು ಆ ಕೋರಿಕೆಗಳನ್ನು ಕಸದ ಬುಟ್ಟಿಗೆ ಎಸೆದು ಪಕ್ಷಪಾತ ಮಾಡಿದ್ದಾರೆ. ಇದುವರೆಗೆ ಒಬ್ಬರ ಮೇಲೂ ವಿಚಾರಣೆಗೆ ಅನುಮತಿ ನೀಡಿಲ್ಲ ಎಂದು ಆರೋಪಿಸಿದರು.

ರಾಜ್ಯಪಾಲರ ನೋಟಿಸ್ ಕುರಿತು ಸಚಿವ ಸಂಪುಟ ಚರ್ಚೆ ಮಾಡಿ ನೋಟೀಸ್‌ನ್ನು ಕೂಡಲೆ ವಿತ್ ಡ್ರಾ ಮಾಡುವಂತೆ ನಿರ್ಣಯ ಮಾಡಿ ರಾಜಭವನಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ಸಹ ದೀರ್ಘವಾದ ಪ್ರತಿಕ್ರಿಯೆಯನ್ನು ಕಳುಹಿಸಿ ಕೊಟ್ಟಿದ್ದಾರೆ. ಇದ್ಯಾವುದನ್ನು ಪರಿಗಣಿಸದ ಈ ರಾಜ್ಯಪಾಲರು ರಾಜ್ಯದ ಜನನಾಯಕರಾದ ಸಿದ್ದರಾಮಯ್ಯನವರಿಗೆ ಕಿರುಕುಳ ನೀಡಬೇಕು ಎಂದು ತೀರ್ಮಾನಿಸಿದ್ದಾರೆ, ರಾಜ್ಯಪಾಲರು ಮಾಡಿರುವ ಎಡವಟ್ಟಿನಿಂದಾಗಿ ನ್ಯಾಯಾಲಯದ ಸಮಯ, ಹಣ ಎಲ್ಲವೂ ವ್ಯಯವಾಗುತ್ತಿದೆ. ಪ್ರಸ್ತುತ ರಾಜ್ಯಪಾಲರು ನಿರಂತರವಾಗಿ ಕರ್ನಾಟಕದ ವಿರೋಧಿಯಾಗಿ ವರ್ತಿಸುತ್ತಾ ಬರುತ್ತಿದ್ದಾರೆ. ರಾಜ್ಯ ಸರ್ಕಾರದ 11 ಮಸೂದೆಗಳನ್ನು ಅನುಮೋದನೆ ನೀಡದೆ ಇತ್ತೀಚೆಗೆ ವಾಪಸು ಕಳುಹಿಸಿದ್ದಾರೆ. ಜನತೆ ಆಯ್ಕೆ ಮಾಡಿರುವ ಸರ್ಕಾರವನ್ನು ಅಸ್ಥಿರಗೊಳಿಸಲು ಇವರ ಷಡ್ಯಂತ್ರ ಮಾಡುತ್ತಿರುವಂತಿದೆ ಎಂದು ದೂರಿದರು.

ಸಂವಿಧಾನ ಮತ್ತು ಒಕ್ಕೂಟ ತತ್ವದ ವಿರೋಧಿಯಾದ ರಾಜ್ಯಪಾಲರನ್ನು ಮೋದಿ ಸರ್ಕಾರ ಕೂಡಲೇ ವಾಪಸ್ಸು ಕರೆಸಿಕೊಳ್ಳಬೇಕು. ಸಿದ್ದರಾಮಯ್ಯರವರ ಪ್ರಾಸಿಕ್ಯೂಷನ್ ಅನುಮತಿ ಹಿಂಪಡೆಯಬೇಕು. ಪ್ರಜಾಪ್ರಭುತ್ವ ಒಕ್ಕೂಟದ ವ್ಯವಸ್ಥೆ ಮತ್ತು ರಾಜ್ಯ ಸರ್ಕಾರದ ಸಾರ್ವಭೌಮತೆಯನ್ನು ಸಂರಕ್ಷಿಸಬೇಕು. ಕನ್ನಡ ನಾಡಿನ ಘನತೆಯನ್ನು ಕಾಪಾಡಬೇಕೆಂದು ಅಗ್ರಹಿಸಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಯುತ್ತಿರುವ ಪಿತೂರಿಯ ಭಾಗವಾಗಿರುವ ರಾಜ್ಯಪಾಲರು ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳ ಘಟಿಕೋತ್ಸವ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದರು.

ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲೆಯ ಪ್ರಜ್ಞಾವಂತರು, ಪ್ರಗತಿಪರರು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಬಂಧುಗಳು, ವಿದ್ಯಾರ್ಥಿ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಒಕ್ಕೂಟ ಮುಖಂಡರಾದ ಕೆ.ಹೆಚ್.ನಾಗರಾಜು, ಸಿ.ಎಂ.ದ್ಯಾವಪ್ಪ, ವಿಜಯ ಲಕ್ಷ್ಮಿ ರಘುನಂದನ್ ಹಾಗೂ ಅಮ್ಜದ್ ಪಾಷ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!