Thursday, September 19, 2024

ಪ್ರಾಯೋಗಿಕ ಆವೃತ್ತಿ

ನಮ್ಮೊಳಗೆ ನಾವೇ ನಿರ್ಮಾಣವಾಗುವ ಸಂಸ್ಕೃತಿ ಕಟ್ಟಬೇಕಿದೆ : ಗೊಲ್ಲಹಳ್ಳಿ ಶಿವಪ್ರಸಾದ್

ಮಾಯಾಲೋಕ ಅಪ್ಪಿಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದು, ಈ ಸಂದರ್ಭದಲ್ಲಿ ಜೀವಪರ ಜನಪರ, ನೆಲಪರ, ಪ್ರಕೃತಿಪರ ಸಮಾಜ ನಿರ್ಮಾಣ ಮಾಡುವುದು ಕಷ್ಟವಾಗುತ್ತಿದೆ. ನಮ್ಮೊಳಗೆ ನಾವೇ ನಿರ್ಮಾಣವಾಗುವ ಸಂಸ್ಕೃತಿ ಕಟ್ಟುವ ಕೆಲಸ ನಮ್ಮದಾಗಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅಭಿಪ್ರಾಯಟ್ಟರು.

ಮಂಡ್ಯನಗರದ ಗಾಂಧಿ ಭವನದಲ್ಲಿ ಜನ ಕಲಾರಂಗ, ಜಿಲ್ಲಾ ಕಲಾವಿದರ ಬಳಗ ಹಾಗೂ ಜನಪರ ಸಂಘಟನೆಗಳ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ನನ್ನನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದು ಸಂತೋಷ ಖುಷಿಗಿಂತ ಭಯ ಆತಂಕ ಹೆಚ್ಚಾಗಿದೆ. ಆ ಸ್ಥಾನಕ್ಕೆ ಜವಾಬ್ದಾರಿ ನ್ಯಾಯ ಕೊಡುವ ಕೆಲಸವಾಗಬೇಕು. ನಮ್ಮ ಆಶಯಗಳನ್ನು ಈಡೇರಿಸಲು ಸ್ವಾತಂತ್ರ‍್ಯ ಸಿಗುತ್ತದೆಯೇ ಎಂಬ ಆತಂಕದಲ್ಲಿದ್ದೇನೆ ಎಂದರು.

ಪ್ರೀತಿ, ಸಂಬಂಧ ಬೆಳೆಸುವ ಜನಪದರ ಸಂಸ್ಕೃತಿ ನಶಿಸುತ್ತಿದೆ. ಜನಪದದ ಮುಖಾಂತರ ಹಳೆಯ ಕಥೆ, ನೀತಿ ಕಥೆ ಪರಂಪರೆಯ ಪಾಠವನ್ನು ಬಿತ್ತಲು ಸಾಧ್ಯವಾಗುತ್ತಿಲ್ಲ. ಪ್ರೀತಿಯಿಂದ ಸಮಾಜವನ್ನು ಕಟ್ಟುವ ಮಹತ್ತರ ಪಾತ್ರ ವಹಿಸಬಹುದು ಎಂಬ ಸಣ್ಣ ತಿಳುವಳಿಕೆ ನಮ್ಮಲ್ಲಿದೆ. ಹಾಡು,ಪದ, ಶಬ್ದ, ಸಮಾಜದ ಪರವಾಗಿ ವಕಾಲತ್ತು ಮಾಡಬೇಕು.ಅದರ ಮೂಲಕ ಸಮಾಜವನ್ನು ಕಟ್ಟಬೇಕು ಎನ್ನುವ ಸಣ್ಣ ಪ್ರಯತ್ನದಲ್ಲಿ ತೊಡಗಿಕೊಳ್ಳಬೇಕು ಎಂದರು.

ಮಕ್ಕಳು ಶೋಕೇಸ್ ಗೊಂಬೆಗಳು

ಸಂತರು, ಸಿದ್ಧರು, ದಾರ್ಶನಿಕರು, ಜನಪದರು ಯಾರೂ ಕೂಡ ನಮ್ಮ ಮಕ್ಕಳ ಮನಸ್ಸಿನಲ್ಲಿ ಉಳಿದಿಲ್ಲ. ಅವುಗಳ ಮರುಪ್ರವೇಶ ಮಾಡದೆ ದೇಶಕ್ಕೆ ಉಳಿಗಾಲವಿಲ್ಲ. ಮಕ್ಕಳು ಶೋಕೇಸ್‌ನಲ್ಲಿಯ ಗೊಂಬೆಗಳಂತಾಗಿದ್ದಾರೆ. ಕೆಳಗೆ ಬಿದ್ದರೆ ಒಡೆದು ಹೋಗುತ್ತವೆ. ಅವರಿಗೆ ಊರು-ಕೇರಿ, ಕೆರೆ-ಕಟ್ಟೆ ತಾತ-ಮುತ್ತಾತಂದಿರ ಪರಿಚಯ ಮಾಡಿಸಬೇಕು. ಪರಂಪರೆಯ ಜ್ಞಾನದ ಪರಿಜ್ಞಾನವನ್ನು ಹತ್ತಿಕ್ಕುವಂತಹ ಲೋಕದಲ್ಲಿ ನಾವಿದ್ದೇವೆ ಎಂದು ವಿಷಾದಿಸಿದರು.

ಜನಪರ ಹೋರಾಟಗಳಿಗೆ ಹಾಡುಗಳಿಂದ ಸ್ಫೂರ್ತಿ

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ರೈತ ಹೋರಾಟಗಾರ್ತಿ ಅನುಸೂಯಮ್ಮ ಮಾತನಾಡಿ, ಸಮಾಜದಲ್ಲಿ ಹಲವು ನ್ಯೂನತೆಗಳ ಬಗ್ಗೆ ಹೋರಾಟ ನಡೆದಿದೆ. ಈ ಸಂದರ್ಭದಲ್ಲಿ ನಮ್ಮ ಕರ್ತವ್ಯ ಏನು? ನಮ್ಮ ಹಿರಿಯರು ಏನು ಮಾಡಿದ್ದಾರೆ ಎನ್ನುವುದರ ಬಗ್ಗೆ ತಿಳುವಳಿಕೆ ನೀಡಬೇಕು. ಹೋರಾಟಗಳು ಏಕೆ ನಡೆಯುತ್ತಿವೆ. ಎಲ್ಲಿಯ ಕನಕ ಹೋರಾಟ ನಡೆಯಬೇಕಾಗುತ್ತದೆ ಎಂಬುದನ್ನು ತಿಳಿಸಬೇಕು. ಹೋರಾಟದ ದಿಕ್ಕಿನಲ್ಲಿ ಹಲವು ಹಾಡುಗಳು ರಚಿತವಾಗಿದ್ದು ಹೋರಾಟಕ್ಕೆ ಪೂರಕವಾಗಿವೆ. ಈ ಹಾಡುಗಳು ಕಿವಿಗೆ ಬಿದ್ದ ತಕ್ಷಣ ಸ್ಫೂರ್ತಿ ಉಂಟಾಗುತ್ತದೆ ಡಾ.ಸಿದ್ದಲಿಂಗಯ್ಯ, ಕೋಟಿಗಾನನಹಳ್ಳಿ ರಾಮಯ್ಯ ಮುಂತಾದವರ ಹಾಡುಗಳು ಇದಕ್ಕೆ ಸಾಕ್ಷಿ ಎಂದರು

ಸಮಾಜದಲ್ಲಿ ಪ್ರತಿಕ್ಷಣ ಆತಂಕದ ವಾತಾವರಣವಿದೆ. ದುಷ್ಟಶಕ್ತಿ ಸಂಘಟನೆಗಳು ಬೆಳೆಯುತ್ತಿವೆ. ಸಣ್ಣ ವಿಷಯಕ್ಕೂ ಹೋರಾಟ ಅಗತ್ಯವಾಗಿದೆ. ಸಮಾಜ ನಿರ್ಮಾಣದಲ್ಲಿ ಎಲ್ಲರ ಪಾತ್ರವಿದೆ. ಜಾತಿ ಧರ್ಮದ ಹೆಸರಿನಲಿ ಮುಗ್ಧ ಜನರ ಹಾದಿ ತಪ್ಪಿಸಲಾಗುತ್ತಿದೆ. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಆದಿಕವಿ ಪಂಪ ಹೇಳಿದರೆ, ಕುವೆಂಪು ಅವರು ‘ಮನುಜ ಮತ ವಿಶ್ವಪಥ ವಿಶ್ವಮಾನವ ತತ್ವವನ್ನು ಪ್ರತಿಪಾದಿಸಿದ್ದಾರೆ. ಆ ದಿಕ್ಕಿನಲ್ಲಿ ನಮ್ಮ ಹೆಜ್ಜೆ ಸಾಗಬೇಕಿದೆ ಎಂದರು.

ಸಮಾರಂಭದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರನ್ನು ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಅಭಿನಂದಿಸಿದರು. ಇದೇ ವೇಳೆ ಕರ್ನಾಟಕ ಜಾನಪದ ವಿವಿ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗಿರುವ ಗೊರವಾಲೆ ಚಂದ್ರಶೇಖರ್, ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಡಾ.ಎಂ.ಕೆಂಪಮ್ಮ, ಮಂಜೇಶ್ ಚನ್ನಾಪುರ ಅವರನ್ನು ಸನ್ಮಾನಿಸಲಾಯಿತು. ದಸಂಸ ಹಿರಿಯ ಮುಖಂಡ, ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ಎಸ್. ಚಂದ್ರಶೇಖರನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಲಾವಿದರಾದ ಗಂಗಾಧರ್ ಗೆಜ್ಜಲಗೆರೆ, ಮಹದೇವ್ ಕೊತ್ತತ್ತಿ, ದೇವರಾಜ್ ಕೊಪ್ಪ, ಮಂಜುಳಾ ಆಲದಹಳ್ಳಿ, ಬಿ.ಎಂ.ಸತ್ಯ, ಹುರುಗಲವಾಡಿ ರಾಮಯ್ಯ ಮುಂತಾದವರು ಗೊಲ್ಲಹಳ್ಳಿ ಶಿವಪ್ರಸಾದ್ ರಚಿಸಿರುವ ಹಾಡುಗಳ ಗಾಯನ ನಡೆಸಿಕೊಟ್ಟರು.

ಸಮಾರಂಭದಲ್ಲಿ ರೈತ ನಾಯಕಿ ಸುನಂದಾ ಜಯರಾಂ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಶಂಕರ್, ಉಮೇಶ್ ಮುಂತಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!