Thursday, September 19, 2024

ಪ್ರಾಯೋಗಿಕ ಆವೃತ್ತಿ

ನಮ್ಮ ಸಂವಿಧಾನದ ಅಡಿಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಾಧ್ಯವಿಲ್ಲ: ಪಿ. ಚಿದಂಬರಂ

‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿಷಯದ ಕುರಿತು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಪಿ ಚಿದಂಬರಂ ವಾಗ್ದಾಳಿ ನಡೆಸಿದ್ದು, “ಪ್ರಸ್ತುತ ಸಂವಿಧಾನದ ಅಡಿಯಲ್ಲಿ ಇದು ಸಾಧ್ಯವಿಲ್ಲ, ಕನಿಷ್ಠ ಐದು ಸಾಂವಿಧಾನಿಕ ತಿದ್ದುಪಡಿಗಳ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ತನ್ನ ಪ್ರಸ್ತುತ ಅಧಿಕಾರಾವಧಿಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ಯನ್ನು ಜಾರಿಗೆ ತರಲಿದೆ ಎಂಬ ವರದಿಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಆ ಸಾಂವಿಧಾನಿಕ ತಿದ್ದುಪಡಿಗಳನ್ನು ಲೋಕಸಭೆ ಅಥವಾ ರಾಜ್ಯಗಳಲ್ಲಿ ಮಂಡಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಸಂಖ್ಯೆ (ಬಹುಮತ) ಇಲ್ಲ ಎಂದು ಹೇಳಿದರು.

ಕಳೆದ ತಿಂಗಳು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಾತನಾಡಿದ್ದ ಪ್ರಧಾನಿಯವರು, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಮಾತನಾಡಿದ್ದರು. ಆಗಾಗ್ಗೆ ಚುನಾವಣೆಗಳು ದೇಶದ ಪ್ರಗತಿಯಲ್ಲಿ ಅಡಚಣೆಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಪ್ರತಿಪಾದಿಸಿದ್ದರು.

ಇಂದು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಚಿದಂಬರಂ, “‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತುತ ಸಂವಿಧಾನದ ಅಡಿಯಲ್ಲಿ ಸಾಧ್ಯವಿಲ್ಲ. ಇದಕ್ಕೆ ಕನಿಷ್ಠ ಐದು ಸಾಂವಿಧಾನಿಕ ತಿದ್ದುಪಡಿಗಳ ಅಗತ್ಯವಿದೆ. ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಸಾಂವಿಧಾನಿಕ ತಿದ್ದುಪಡಿಗಳನ್ನು ಹಾಕಲು ಮೋದಿಗೆ ಬಹುಮತವಿಲ್ಲ” ಎಂದು ಮಾಜಿ ಕೇಂದ್ರ ಸಚಿವರು ಹೇಳಿದರು.

‘ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಹೆಚ್ಚಿನ ಸಾಂವಿಧಾನಿಕ ಅಡೆತಡೆಗಳಿವೆ ಎಂದು ಅವರು ಪ್ರತಿಪಾದಿಸಿದರು. “ಅದು ಸಾಧ್ಯವಿಲ್ಲ; ಇಂಡಿಯಾ ಬಣವು ‘ಒಂದು ರಾಷ್ಟ್ರ, ಒಂದು ಚುನಾವಣೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ” ಎಂದರು.

‘ಮೀಸಲಾತಿಯನ್ನು ಕೊನೆಗೊಳಿಸಲು ಕಾಂಗ್ರೆಸ್ ಬಯಸುತ್ತಿದೆ’ ಎಂದು ಇತ್ತೀಚೆಗೆ ಪ್ರಧಾನಿ ಮೋದಿ ಆರೋಪವನ್ನು ಚಿದಂಬರಂ ತಿರಸ್ಕರಿಸಿದರು. “ನಾವು ಮೀಸಲಾತಿಯನ್ನು ಏಕೆ ರದ್ದುಗೊಳಿಸಬೇಕು” ಎಂದು ಅವರು ಪ್ರಶ್ನಿಸಿದರು.

ಶೇ.50 ರಷ್ಟು ಮೀಸಲಾತಿ ಮಿತಿಯನ್ನು ತೆಗೆದುಹಾಕಬೇಕು ಎಂದು ಹೇಳುತ್ತಿರುವವರು ನಾವು, ಜಾತಿ ಗಣತಿ ಕೇಳುವವರು ನಾವು, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ನಾವು ಹೇಳುತ್ತೇವೆ, ಎಲ್ಲವನ್ನೂ ನಂಬಬೇಡಿ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಸೆಪ್ಟೆಂಬರ್ 15 ರಂದು ಕುರುಕ್ಷೇತ್ರದಲ್ಲಿ ನಡೆದ ರ್ಯಾಲಿಯಲ್ಲಿ, ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು, “ಕಾಂಗ್ರೆಸ್‌ನ ರಾಜಮನೆತನ ದಲಿತರಿಗೆ ಮೀಸಲಾತಿಯನ್ನು ಕೊನೆಗೊಳಿಸುವ ಉದ್ದೇಶವನ್ನು ಹೊಂದಿದೆ, ನಾನು ಇರುವವರೆಗೂ ಮೀಸಲಾತಿಯ ಒಂದು ಭಾಗವನ್ನು ಸಹ ಬಿಡುವುದಿಲ್ಲ” ಎಂದು ಪ್ರತಿಪಾದಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!