Saturday, September 21, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ ಗಲಭೆಯಲ್ಲಿ ಸಂಘ-ಪರಿವಾರದ ಸಂಚು: ಸಿಪಿಐಎಂ ಆರೋಪ

ಗಣೇಶ ವಿಸರ್ಜನೆಯ ನೆಪದಲ್ಲಿ ನಾಗಮಂಗಲ ಪಟ್ಟಣದಲ್ಲಿ ನಡೆದ ಕೋಮುಗಲಭೆ ಮತ್ತು ಆಸ್ತಿಪಾಸ್ತಿ ಹಾನಿಗೆ ಸಂಘ ಪರಿವಾರದ ಸಂಚು ಕಾರಣವಾಗಿದೆ, ಇದರೊಂದಿಗೆ ಗುಪ್ತಚರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಹಾಗೂ ಜೆಡಿಎಸ್ ಪಕ್ಷದೊಡನೆ ಬಿಜೆಪಿ ಮಾಡಿಕೊಂಡಿರುವ ಅವಕಾಶವಾದಿ ಮೈತ್ರಿ ಕಾರಣವಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ ವಾದಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಆರೋಪಿಸಿದರು.

ಮಂಡ್ಯ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 17ರಂದು ನಾಗಮಂಗಲ ಪಟ್ಟಣಕ್ಕೆ ಸಿಪಿಐಎಂ ಪಕ್ಷದ ನಿಯೋಗ ಭೇಟಿ ನೀಡಿ ಸಾರ್ವಜನಿಕರ ಜೊತೆ ಮಾತನಾಡಿದಾಗ ಈ ರೀತಿಯ ಅಂಶಗಳು ಬೆಳಕಿಗೆ ಬಂದಿದೆ, ಆಗಾಗಿ ಆದಿಚುಂಚನಗಿರಿ ಶ್ರೀಗಳು ಶಾಂತಿ ಸ್ಥಾಪನೆಗಾಗಿ ಪಾದಯಾತ್ರೆ ನಡೆಸಬೇಕೆಂದು ಒತ್ತಾಯಿಸಿದರು.

ಸೆಪ್ಟೆಂಬರ್ 11ರಂದು ನಾಗಮಂಗಲ ಪಟ್ಟಣ ಹತ್ತಿ ಉರಿದಿದೆ. ಗಣೇಶ ವಿಸರ್ಜನೆಯ ಮೆರವಣಿಗೆಯನ್ನು ಗಲಭೆಯಾಗಿ ಪರಿವರ್ತಿಸುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ನೆಲೆ ಕೊಂಡುಕೊಳ್ಳುವ ಸಂಘ ಪರಿವಾರದ ಸಂಚಿಗೆ ನಾಗಮಂಗಲ ನಲುಗಿದೆ ಎಂದು ದೂರಿದರು.

ನಾಗಮಂಗಲ ಪಟ್ಟಣದಿಂದ ಬೆಳ್ಳೂರು ಕಡೆಗೆ 2 ಕಿ.ಮೀ ದೂರದಲ್ಲಿರುವ ಬದರಿ ಕೊಪ್ಪಲು ಗ್ರಾಮದ ಯುವಕರು ಎಂದಿನಂತೆ ಈ ವರ್ಷವೂ ಗಣೇಶನನ್ನು ಕೂರಿಸಿದ್ದಾರೆ. ಆದರೆ ಹಂಪಯ್ಯನ ಕೊಳದಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ನಾಲ್ಕು ಗಂಟೆಗಳ ಮುಂಚೆ ಊರಿನಿಂದ ಹೊರಟ ಮೆರವಣಿಗೆ ಪಟ್ಟಣ ತಲುಪುವಲ್ಲಿ 7ಗಂಟೆ ಆಗಿದೆ,  ಮೆರವಣಿಗೆ ನಡೆಸಲು ಅನುಮತಿ ಪಡೆಯದೆ ಹೋಗುವ ದಾರಿಯನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ವಿವರಿಸಿದರು.

ಮೈಸೂರು ರಸ್ತೆಯಲ್ಲಿ ಕೇವಲ 100 ಮೀಟರ್ ಅಂತರದಲ್ಲಿ ಮಸೀದಿ ಇದ್ದು ,ಆ ಮಸೀದಿಯ ಮುಂದೆ ಮೆರವಣಿಗೆ ಹೋದ ತಕ್ಷಣವೇ ಅಪಾರ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ್ದಾರೆ. ಘೋಷಣೆಗಳನ್ನು ಕೂಗಿದ್ದಾರೆ. ಸುಮಾರು 20 ನಿಮಿಷ ಮೆರವಣಿಗೆಯನ್ನು ನಿಲ್ಲಿಸಿದ್ದು ಇದಕ್ಕೆ ಮಸೀದಿಯವರು ಆಕ್ಷೇಪಿಸಿದಾಗ ಪರಿಸ್ಥಿತಿ ನಿಯಂತ್ರಣ ಮೀರಿದೆ, ಇದು ಗಲಭೆಗೆ ಕಾರಣವಾಗಿದೆ ಎಂದು ವಿವರಿಸಿದರು.

ಮುಸ್ಲಿಂ, ಅಲ್ಪಸಂಖ್ಯಾತರ ಅಂಗಡಿಗಳೇ ಗುರಿ

ಬೆಂಕಿ ಹಚ್ಚುವಾಗಲೂ ಬಹಳ ಯೋಜಿತವಾಗಿ ಅಲ್ಪಸಂಖ್ಯಾತರಿಗೆ ಸೇರಿದ ಅಂಗಡಿಗಳನ್ನೇ ಗುರುತಿಸಿ ಹಚ್ಚಿದ್ದಾರೆ. ಪೊಲೀಸ್‌ ಠಾಣೆಯ ಹಿಂದಿನ ರಸ್ತೆಯಲ್ಲಿ ಗಣೇಶ್ ಜ್ಯೂಯಲರಿ ಅಂಗಡಿಯ ಅಕ್ಕಪಕ್ಕದ ಎರಡು ಮುಸಲ್ಮಾನರ ಅಂಗಡಿಗಳು ಸುಟ್ಟುಹೋಗಿವೆ. ಆದರೆ ಮಧ್ಯದಲ್ಲಿರುವ ಗಣೇಶ ಜ್ಯೂಯಲರಿಗೆ ಸಣ್ಣ ಹಾನಿಯೂ ಸಂಭವಿಸಲಿಲ್ಲ. ಅದೇ ರೀತಿ ಮೂರ್ನಾಲ್ಕು ಸುಟ್ಟು ಹೋಗಿರುವ ಅಂಗಡಿಗಳ ಪಕ್ಕದಲ್ಲಿರುವ ಹಿಂದೂ ಸಮುದಾಯಕ್ಕೆ ಸೇರಿದ ಅಂಗಡಿಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ವಿವರಿಸಿದರು.

ಆದರೆ ಮುಸಲ್ಮಾನರು ಹೆಚ್ಚಿರುವ ತಹಶಿಲ್ದಾರ್ ಕಚೇರಿ ಹಿಂದುಗಡೆ ಮತ್ತು ಅಕ್ಕಪಕ್ಕದಲ್ಲಿ ಹಿಂದೂಗಳಿಗೆ ಸೇರಿದ ಅಂಗಡಿಗಳಿಗೆ ಬೆಂಕಿ ಹಾಕಲಾಗಿದೆ. ಮುಸಲ್ಮಾನರ ಕಟ್ಟಡದಲ್ಲಿದ್ದ ಹಿಂದೂಗಳ ಬಟ್ಟೆ ಅಂಗಡಿಯೊಂದಕ್ಕೆ ಬೆಂಕಿ ಇಟ್ಟು ಸಂಪೂರ್ಣವಾಗಿ ಸುಟ್ಟು ಹಾಕಲಾಗಿದೆ. ಹೀಗೆ ಎರಡೂ ಕಡೆಯವರು ಅನ್ಯಧರ್ಮೀಯರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ. ಮುಸಲ್ಮಾನರಿಗೆ ಸೇರಿದ ಆಸ್ತಿ ಪಾಸ್ತಿ ಹೆಚ್ಚಾಗಿ ನಾಶವಾಗಿದೆ ಎಂದು ಎಂದು ಹೇಳಿದರು.

ಸಂಘ ಪರಿವಾರದ ಸಂಚು

ಮೆರವಣಿಗೆ, ಗಲಾಟೆ ನಂತರದಲ್ಲಿ ಬೆಂಕಿ ಹಚ್ಚಿರುವ ವಿಧಾನವನ್ನು ಗಮನಿಸಿದರೆ ಇದರಲ್ಲಿ ಸಂಘ ಪರಿವಾರದ ಸಂಚು ನಿಚ್ಚಳವಾಗಿದೆ. ಇದುವರೆಗೂ ಕೇವಲ ಗಣೇಶನಿಗೆ ಮಾತ್ರ ಸೀಮಿತವಾಗಿದ್ದ ಮೆರವಣಿಗೆ ಘೋಷಣೆಗಳಲ್ಲಿ ಈಗ ಜೈ ಶ್ರೀರಾಮ್ ಮತ್ತು ಜೈ ಹನುಮಾನ್ ಕಾಣಿಸಿಕೊಂಡಿವೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಕೇಸರಿ ಶಾಲು ಮತ್ತು ತಲೆಗೆ ಕೇಸರಿ ಪಟ್ಟಿ ಕಟ್ಟಲಾಗಿದೆ. ಅಲ್ಲೋ ಇಲ್ಲೋ ಒಂದೆರಡು ಕಾರ್ಯಕರ್ತರನ್ನು ಹೊಂದಿದ್ದ ಸಂಘ ಪರಿವಾರ ಗಣೇಶನ ಮೂರ್ತಿ ಸ್ಥಾಪನೆ, ಕಾರ್ಯಕ್ರಮ ಎಲ್ಲಕ್ಕೂ ಹಣಕಾಸು ಮತ್ತು ಯೋಜನೆಯನ್ನು ಒದಗಿಸಿ ಗಣೇಶನ ಭಕ್ತರನ್ನು ಸಂಘದ ಕಾರ್ಯಕರ್ತರನ್ನಾಗಿಸುವ ಯೋಜನೆಯನ್ನು ಯೋಜನಾಬದ್ಧವಾಗಿ ಜಾರಿ ಮಾಡುತ್ತಿದೆ ಎಂದು ಆರೋಪಿಸಿದರು

ಈ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ರಾಜಕಾರಣಕ್ಕೆ ಇಂತಹ ಘಟನೆಯನ್ನು ಬಳಸಿಕೊಳ್ಳುತ್ತಿರುವುದಕ್ಕೆ ಇತಿಶ್ರೀ ಹಾಡಬೇಕು. ನಾಗಮಂಗಲ ಪಟ್ಟಣದಲ್ಲಿ ಶಾಂತಿ ಸೃಷ್ಟಿಸುವಲ್ಲಿ ಆದಿಚುಂಚನಗಿರಿ ಮಠದ ಪ್ರಭಾವ ಹೆಚ್ಚಾಗಿದೆ. ಆದಕಾರಣ ಸ್ವಾಮೀಜಿಗಳು ಬೀದಿಗೆ ಇಳಿದು ಪಾದಯಾತ್ರೆ ನಡೆಸಿ ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.

ಗೋಷ್ಠಿಯಲ್ಲಿ ಸಿಪಿಐಎಂ ಕಾರ್ಯಕಾರಿ ಮಂಡಳಿ ಸದಸ್ಯರಾದ ಸಿ ಕುಮಾರಿ, ಜಿಲ್ಲಾ ಸಮಿತಿ ಸದಸ್ಯರಾದ ಆರ್ ಕೃಷ್ಣ, ಬಿ ಹನುಮೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!