Sunday, September 22, 2024

ಪ್ರಾಯೋಗಿಕ ಆವೃತ್ತಿ

ಅನುದಾನ ಬಳಕೆಗೆ ಮಾತ್ರ ಸೀಮಿತವಾದ ಬುಡಕಟ್ಟು ಸಂಶೋಧನಾ ಸಂಸ್ಥೆ; ಬದಲಾಗದ ಬುಡಕಟ್ಟು ಸಮುದಾಯಗಳ ಬದುಕು!

ಕರ್ನಾಟಕ ರಾಜ್ಯದಲ್ಲಿರುವ 50 ಬುಡಕಟ್ಟು ಸಮುದಾಯಗಳ ಸಂಶೋಧನೆ, ತರಬೇತಿ, ಮೌಲ್ಯಮಾಪನ, ಮತ್ತು ಕುಲಶಾಸ್ತ್ರೀಯ ಅಧ್ಯಯನವನ್ನು ನಡೆಸಲು 2009ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ನಂತರ ಇದನ್ನು 2010ರಲ್ಲಿ ಬುಡಕಟ್ಟು ಸಮುದಾಯಗಳು ಹೆಚ್ಚು ಇರುವ ಮೈಸೂರು ಜಿಲ್ಲೆಗೆ ಸ್ಥಳಾಂತರಿಸಲಾಯಿತು. ಈ ಸಂಸ್ಥೆಯು ಸ್ಥಾಪನೆಯಾದ ಮೇಲೆ ಇದುವರೆಗೆ 25-30 ಕೋಟಿ ರೂ.ಗಳ ಅನುದಾನವನ್ನು ಪಡೆದು 200ಕ್ಕೂ ಹೆಚ್ಚು ಸಂಶೋಧನಾ ವರದಿಗಳನ್ನು ಸಿದ್ಧಪಡಿಸಿದೆ ಎಂದು ಹೇಳಲಾಗುತ್ತಿದೆ.

ಆದಾಗ್ಯೂ, ಈ ಸಂಶೋಧನಾ ವರದಿಗಳಲ್ಲಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ನೆರವಾದ ಉದಾಹರಣೆಗಳು ಮಾತ್ರ ಕಾಣಿಸುತ್ತಿಲ್ಲ. ಇಂದಿಗೂ ಯಾವುದೇ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ, ಕಾಡು ಮೇಡುಗಳಲ್ಲಿ ಜೀವನಕ್ಕಾಗಿ ಅಲೆಯುತ್ತಾ, ಸರಿಯಾದ ಪೌಷ್ಟಿಕ ಆಹಾರಗಳಿಲ್ಲದೆ ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಅಕಾಲಿಕ ಮರಣ ಹೊಂದುತ್ತ ಗಣನೀಯ ಜನಸಂಖ್ಯೆಯಲ್ಲಿ ಇಳಿಮುಖವಾಗುತ್ತಾ ಅಳಿವಿನಂಚಿಗೆ ಬಂದು ತಲುಪಿದ್ದಾರೆ. ಇವರ ಅಭಿವೃದ್ದಿಗೆ ಪೂರಕವಾಗಿ ನಡೆಯಬೇಕಾದ ಅನೇಕ ಸಂಶೋಧನಾ ವರದಿಗಳು ಕಛೇರಿಗಳಲ್ಲಿಯೇ ಉಳಿದುಕೊಳ್ಳುತ್ತವೆ; ಇವುಗಳನ್ನು ಸಮುದಾಯಗಳ ಅಭಿವೃದ್ಧಿಗೆ ಬಳಸಲು ಸಾಧ್ಯವಾಗಾದ ಸ್ಥಿತಿಯಲ್ಲಿದ್ದು ಅನುದಾನ ಉಪಯೋಗಕ್ಕೆ ಮಾತ್ರ ಸೀಮಿತವಾಗಿದೆ.

ಈ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದ ಮಾಜಿ ನಿರ್ದೇಶಕರೊಬ್ಬರು ಸುಮಾರು 10 ವರ್ಷಕ್ಕೂ ಹೆಚ್ಚು ಕಾಲ ಸಂಸ್ಥೆಯಲ್ಲಿ ಇದ್ದರೂ, ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿಲ್ಲ. ಇದರಿಂದಾಗಿ ಇವರ ವಿರುದ್ಧ ಬುಡಕಟ್ಟು ಸಮುದಾಯಗಳು ಹೋರಾಟವನ್ನು ಸಂಘಟಿಸಿದ್ದರ ಪರಿಣಾಮವಾಗಿ ಸರ್ಕಾರವು ಅವರನ್ನು ಮಾತೃ ಸಂಸ್ಥೆಗೆ ಕಳುಹಿಸಿತ್ತು. ಇಷ್ಟಾದರೂ ಛಲ ಬಿಡದ ಅವರು ಮತ್ತೆ ಹುದ್ದೆಗೆ ಬರುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಸಮುದಾಯಗಳು ಅನುಮಾನದಿಂದ ನೋಡುತ್ತಿದೆ.

ಈ ಸಂಸ್ಥೆಯು ಕೇಂದ್ರ ಸರ್ಕಾರದಿಂದ ಪಡೆದ ಅನುದಾನಕ್ಕೆ ಸರಿಯಾದ ಲೆಕ್ಕ ಕೊಡದ ಕಾರಣ ಹೆಚ್ಚಿನ ಹಣಕಾಸು ಸಹಾಯ ಪಡೆಯಲು ವಿಫಲವಾಗಿದೆ. 2016ರಿಂದ ಈಗಿವರೆಗೆ ಸಂಸ್ಥೆಗೆ ಹೇಳಿಕೊಳ್ಳುವಂತಹ ಅನುದಾನ ನೀಡದಿರುವುದು ಇದಕ್ಕೆ ಉದಾಹರಣೆ. ನೂರಕ್ಕೂ ಹೆಚ್ಚು ವರದಿಗಳು ಕಚೇರಿಯಲ್ಲಿಯೇ ಉಳಿದುಕೊಳ್ಳುತ್ತಿವೆ. ಈ ಸಂಸ್ಥೆಯನ್ನು ಕೇವಲ ಆಡಳಿತಾತ್ಮಕ ಸಂಸ್ಥೆಯಾಗಿ ಮಾರ್ಪಡಿಸಲು ಒಂದು ವರ್ಗ ಅವಣಿಸುತ್ತಿದೆ ಇವರ ಉದ್ದೇಶ ಸಂಶೋಧನೆ ಮತ್ತು ಯೋಜನೆಗಳನ್ನು ವಿಶ್ವವಿದ್ಯಾಲಯಗಳಿಗೆ ವಹಿಸಿಕೊಡುವ ಮೂಲಕ, ಕೇವಲ ಆಡಳಿತ ಸಂಸ್ಥೆಯಾಗಿಸುವುದಾಗಿದೆ .

ಬುಡಕಟ್ಟು ಸಮುದಾಯಗಳಿಗೆ ಸಂಬಂಧಿಸಿದ ಕೆಲವು ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ಸಮುದಾಯದವರಲ್ಲಿ ಅರಿವು ಮೂಡಿಸುವ ಬದಲು, ಕಚೇರಿಯ ಕಡತಗಳಲ್ಲಿಯೇ ಮುಗಿಯುತ್ತಿದೆ. ಬಡ ಸಮುದಾಯಗಳಿಗೆ ನೆರವಾಗುವ ಬದಲು, ಅನುದಾನ ದುರುಪಯೋಗವಾಗಿ, ಕೆಲವು ಅಧಿಕಾರಿಗಳ ವೈಯಕ್ತಿಕ ಪ್ರಯೋಜನಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಪ್ರಸ್ತುತ ಈ ಸಂಸ್ಥೆಗೆ ಪ್ರಭಾರ ನಿರ್ದೇಶಕರಾಗಿರುವ ಡಾ. ರಾಜಕುಮಾರ್ ಅವರು ಹಲವು ಹುದ್ದೆಗಳ ಜವಾಬ್ದಾರಿಯಿದ್ದು, ಈ ಸಂಸ್ಥೆಗೆ ನಿಯಮಿತವಾಗಿ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಮುದಾಯದವರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ಕಾರಣದಿಂದಾಗಿ, ಸಂಸ್ಥೆಯ ಜವಾಬ್ದಾರಿ ಮತ್ತು ನಿಷ್ಠೆಯ ಬಗ್ಗೆ ಪ್ರಶ್ನೆ ಏಳುತ್ತಿದೆ.

ಸರ್ಕಾರವು ಕನಿಷ್ಠ ಮೂಲಭೂತ ದಾಖಲೆಗಳನ್ನು ಹೊಂದಿಲ್ಲದ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ 6.90 ಕೋಟಿ ರೂ. ಅನುದಾನವನ್ನು ನೀಡಿದೆ. ಈ ಅನುದಾನವನ್ನು ಸಮುದಾಯದ ಅನಿಸಿಕೆ ಪಡೆದು ಯೋಜನೆ ರೂಪಿಸಿ ಖರ್ಚು ಮಾಡಬೇಕಾಗಿದೆ. ಇಲ್ಲವಾದರೆ, ಇದೂ ಕೂಡಾ ಕೇವಲ ಬಿಲ್ಲುಗಳಿಗೆ ಸೀಮಿತವಾದ ಯೋಜನೆಯಾಗುವ ಸಾಧ್ಯತೆಯಿದೆ.

ಸಂಶೋಧನಾ ಸಂಸ್ಥೆಯು ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಸ್ಪಂದಿಸಬೇಕಾದರೆ, ತಜ್ಞರನ್ನು ನೇಮಿಸಿ, ಸಮುದಾಯದ ಅಭಿಪ್ರಾಯವನ್ನು ಗಮನಿಸಿ ಯೋಜನೆ ರೂಪಿಸಬೇಕಾಗಿದೆ. ಅಲ್ಲಿಯ ವರೆಗೆ ಮೈಸೂರಿನಲ್ಲಿರುವ ಸ್ಥಳೀಯ ಅಧಿಕಾರಿಗಳನ್ನು ಪ್ರಭಾರ ನಿರ್ದೇಶಕರಾಗಿ ನೇಮಿಸಿ, ಸಮುದಾಯಗಳಿಗೆ ನೆರವಾಗಲು ಕ್ರಮ ಕೈಗೊಳ್ಳಬೇಕಾಗಿದೆ. ಆಗ ಮಾತ್ರ ಈ ಸಂಸ್ಥೆಯು ಸಮುದಾಯಗಳ ಬಾಳಿಗೆ ಬೆಳಕಾಗುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!