Sunday, September 22, 2024

ಪ್ರಾಯೋಗಿಕ ಆವೃತ್ತಿ

ಗಾಂಧೀಜಿಯವರ ಸರ್ವೋದಯದ ಸಾಕ್ಷತ್ಕಾರವಾಗಬೇಕು; ಸಿಪಿಕೆ

ಭಾರತೀಯ ಸಮಾಜದಲ್ಲಿ ಪ್ರಜಾಪ್ರಭುತ್ವದ ಮೂರು ಮಂತ್ರಗಳಾದ ಸ್ವಾತಂತ್ರ್ಯ, ಸಮಾನತೆ, ಸೋದರತೆ ಇನ್ನೂ ಬೇರೂರಿಲ್ಲ. ಈ ದಿಶೆಯಲ್ಲಿ ಮೊದಲು ಗಾಂಧೀಜಿಯವರ ಸರ್ವೋದಯದ ಸಾಕ್ಷತ್ಕಾರವಾಗಬೇಕು ಎಂದು ಪಂಪ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.

ಮೈಸೂರು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಮತ್ತು ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ೭೮ನೆಯ ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ನಡೆದ ಸುಗಮ ಸಂಗೀತ, ಜಾನಪದ ಗೀತಗಾಯನ, ಭರತನಾಟ್ಯ ಪ್ರದರ್ಶನ ಮತ್ತು ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಕಾಲೀನ ಸಮಾಜವನ್ನು ನಾನಾ ರೀತಿಯ ಕತ್ತಲೆ ಕವಿದಿದೆ. ಈ ಕತ್ತಲೆಯನ್ನು ನಿರಸನಗೊಳಿಸುವ ಶಕ್ತಿಯಿರುವುದು ಸಾಹಿತ್ಯ ಮತ್ತು ಸಂಸ್ಕೃತಿಗೆ ಮಾತ್ರ. ಸಾಂಸ್ಕ್ರತಿಕ ಮುಂಬೆಳಗಿನ ಹಬ್ಬಗಳಾದ ದಸರಾ ಮತ್ತು ದೀಪಾವಳಿ ಕತ್ತಲೆಯ ತೊಲಗಿಸಲಿ. ಬೆಳಕಿನ ಪ್ರವಾಹ ಎಲ್ಲೆಡೆ ಹರಿಯಲಿ ಎಂದು ಆಶಿಸಿದರು.

ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಮಾತನಾಡಿ, ಕುವೆಂಪು ಹಂಬಲಿಸಿದ ಸರ್ವಜನಾಂಗದ ಶಾಂತಿಯ ತೋಟದ ಸಾಮರಸ್ಯ ಕದಡುವ ಪ್ರಯತ್ನಗಳು ನಿರಂತರ ನಡೆದಿವೆ. ಭಾವೈಕ್ಯತೆಯನ್ನು ಬೆಸೆಯಬೇಕಾದ ಗಣೇಶೋತ್ಸವವು ಕೆಲವು ಕಿಡಿಗೇಡಿಗಳಿಂದ ಕೋಮು ಸಂಘರ್ಷಕ್ಕೆ ಮೂಲವಾಗುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಶಸ್ತಿಗಳ ಪ್ರದಾನ ಮಾಡಿದ ಖ್ಯಾತ ಶಿಕ್ಷಣ ತಜ್ಞ ಹಾಗೂ ಅಂಕಣಕಾರ ಪ್ರೊ.ಕೆ.ಇ. ರಾಧಕೃಷ್ಣ ಮಾತನಾಡಿ, ನ್ಯಾಯಪೀಠದಲ್ಲಿ ಕುಳಿತವರು ಮಹಿಳೆಯರನ್ನು ಅಪಮಾನಿಸುವುದು, ಒಂದು ಸಮುದಾಯವನ್ನು ನಿಂದಿಸುವುದು ನಿಜಕ್ಕೂ ಅಕ್ಷಮ್ಯ. ಶಾಂತಿ-ಪ್ರೀತಿಯ ಹಂಚಿದ ಗಾಂಧಿಯ ನಾಡು ಸಂವೇದನಾಶೀಲ ರಹಿತವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕುವೆಂಪು ಅವರ ಮನುಜ ಮತ ವಿಶ್ವ ಪಥದಲ್ಲಿ ಸಾಗಿ ನಾವು ವಿಶ್ವಮಾನವರಾಗಬೇಕು. ಹಾಗೆ ಒಂದು ಸರ್ಕಾರ ಯುದ್ಧ ಮಾಡುವ ಬದಲಿಗೆ ಪ್ರಕೃತಿಯನ್ನು ಉಳಿಸಬೇಕು. ಧರ್ಮ, ಜಾತಿ, ಪಂಥಗಳನ್ನು ತೊಲಗಿಸಿ ಮನುಷ್ಯರನ್ನು ಪ್ರೀತಿಸುವ ವಾತಾವರಣ ನಿರ್ಮಿಸಬೇಕು. ಮುಂದಿನ ತಲೆಮಾರಿಗೂ ಪ್ರಕೃತಿ ಮತ್ತು ಭೂಮಿಯನ್ನು ನಾವೆಲ್ಲ ಉಳಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತೆ ಜಿ.ವೈ. ಪದ್ಮ ನಾಗರಾಜು, ಸಮಾಜ ಸೇವಕ ಗೋವಿಂದಹಳ್ಳಿ ಕೃಷ್ಣೇಗೌಡ, ಚಿತ್ರನಟಿಯರಾದ ನಿರೋಷ ಮತ್ತು ತನುಷ, ವಿಶ್ರಾಂತ ಪ್ರಾಧ್ಯಾಪಕಿ ಪ್ರೊ. ಸಮತಾ ದೇಶಮಾನೆ, ಪ್ರತಿಷಾನದ ಅಧ್ಯಕ್ಷ ಡಾ. ಗುಣವಂತ ಮಂಜು, ಪದಾಧಿಕಾರಿ ವಿ.ಎಂ. ವರಲಕ್ಷ್ಮಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಡಾ. ಸಿಪಿಕೆ ಮತ್ತು ಟಿ. ಸತೀಶ್ ಜವರೇಗೌಡ ಅವರಿಗೆ ‘ಮಹಾತ್ಮಗಾಂಧಿ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಗೆ ವಿವಿಧ ಕ್ಷೇತ್ರದ ಸಾಧಕರಾದ ವೈದ್ಯರಾದ ಡಾ.ಕೆ.ಬಿ. ರುದ್ರೇಶ್, ಡಾ. ಲೋಕೇಶ್, ಕವಿ ಗಣೇಶ್ ನಿಲುವಾಗಿಲು, ಹೆಚ್.ಡಿ. ಕೋಟೆ ತಾ.ಪಂ. ಕಾರ್ಯನಿರ್ವಾಕ ಅಧಿಕಾರಿ ಎಸ್.ಪಿ. ಧರಣೇಶ್, ಪಿಡಿಓಗಳಾದ ಸುಷ್ಮಾ ರಾಣಿ, ಕೆ.ಎಸ್. ಸತೀಶ್ ಕುಮಾರ್, ಆರ್. ವಸಂತ ಕುಮಾರ್, ಅಭಿಯಂತರ ಪಿ. ಚಿಕ್ಕಸಿದ್ದೇಗೌಡ ಮುಂತಾದವರಿಗೆ ‘ಭಾರತ ಸೇವಾರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!