Monday, September 23, 2024

ಪ್ರಾಯೋಗಿಕ ಆವೃತ್ತಿ

ಧರ್ಮಸ್ಥಳ ಸಂಘಗಳಲ್ಲಿ ಪ್ರತಿ ವಾರ 10,000 ಕೋಟಿ ರೂ.ಗಳ ಕಪ್ಪುಹಣದ ವಹಿವಾಟು: ಗಿರೀಶ್ ಮಟ್ಟಣ್ಣನವರ್

ರಾಜ್ಯದ ಉದ್ದಗಲಕೂ ಇರುವ ಧರ್ಮಸ್ಥಳ ಸಂಘಗಳ 52 ಲಕ್ಷ ಸದಸ್ಯರಿಂದ ಸರಾಸರಿ 2000 ರೂಪಾಯಿ ವಸೂಲಿಯಂತೆ ಅಂದಾಜು 10,000 ಕೋಟಿ ರೂ.ಗಿಂತಲೂ ಅಧಿಕ ಹಣದ ವಹಿವಾಟು ಕಪ್ಪುಹಣದ ರೂಪದಲ್ಲಿ ನಡೆಯುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಗಂಭೀರ ಆರೋಪ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹತ್ತು ಸಾವಿರ ಕೋಟಿ ರೂಪಾಯಿಯ ತಿಂಗಳ ಬಡ್ಡಿಯನ್ನು ಯಾರು ತಿನ್ನುತ್ತಿದ್ದಾರೆ? ಏಕೆಂದರೆ ಪ್ರತಿ ವಾರ ದುಡ್ಡು ಕಟ್ಟಿದರೂ, SKDRDP ಕೇವಲ ಮಾಸಿಕ ವರದಿ ನೀಡುತ್ತಿದೆ. ತಿಂಗಳು ಬಡ್ಡಿ ತಿನ್ನಲು ಸದಸ್ಯರಿಂದ ಪ್ರತಿ ವಾರ ವಾರದ ಬಡ್ಡಿಯನ್ನು ಬಲವಂತವಾಗಿ ವಸೂಲಿ ಮಾಡುತ್ತಿರುವುದು, ಇದರಿಂದ ತಿಳಿಯುತ್ತದೆ ಅಲ್ಲವೇ? ಇದು ಈ ದೇಶದ ಅತೀ ದೊಡ್ಡ ಆರ್ಥಿಕ ಹಗರಣ, ಆರ್ಥಿಕ ಭಯೋತ್ಪಾದನ ಅಲ್ಲವೇ?? ಎಂದು ನೇರವಾಗಿ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರತ್ತ ಬೊಟ್ಟು ಮಾಡಿದರು.

ಸಾಲದ ಸುಳಿಯಲ್ಲಿ ಶ್ರಮಿಕ ವರ್ಗ

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಮೀಟರ್ ಬಡ್ಡಿ ದಂದೆ ಇಂದು ನಮ್ಮ ರಾಜ್ಯದ ದುಡಿಯುವ ಶ್ರಮಿಕ ವರ್ಗವನ್ನು ಸಾಲದ ಸುಳಿಯ ಮೃತ್ಯು ಕೂಪದಲ್ಲಿ ಸಿಲುಕಿಸಿದೆ. ಇದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ (SKDRDP – Shree Kshetra Dharmasthala Rural Development Project) ಎಂಬ ಸಂಸ್ಥೆ ಅಭಿವೃದ್ಧಿ ಹೆಸರಲ್ಲಿ ನಡೆಸುತ್ತಿರುವ ಕಾನೂನು ಬಾಹಿರ ಹಣದ ಲೇವಾ ದೇವಿ ಚಟುವಟಿಕೆಗಳು ಹಲವು ಅನುಮಾನಗಳನ್ನು ಹುಟ್ಟು ಹಾಕಿವೆ ಎಂದು ವಿವರಿಸಿದರು.

ವೀರೇಂದ್ರ ಹೆಗ್ಗಡೆ 50 ಲಕ್ಷ ಪರಿಹಾರ ನೀಡಲಿ

ಮಳವಳ್ಳಿಯಲ್ಲಿ ಧರ್ಮಸ್ಥಳ ಸಂಘದವರಿಗೆ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಾಲಕ್ಷ್ಮಿ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು, ಅಲ್ಲದೇ ಆತ್ಮಹತ್ಯೆ ಮತ್ತು ವಾರದ ಬಡ್ಡಿ ಕಿರುಕುಳದ ಹೊಣೆಯನ್ನು ವೀರೇಂದ್ರ ಜೈನ್ @ ಹೆಗ್ಗಡೆ ಅವರೇ ವಹಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಧರ್ಮಾಧಿಕಾರಿಗಳು ತಲಾ 50 ಲಕ್ಷ ಪರಿಹಾರ ನೀಡಬೇಕು ಎಂದು ಮಹೇಶ ಶೆಟ್ಟಿ ತಿಮರೋಡಿ ಅವರ ನೇತೃತ್ವದ ಸೌಜನ್ಯ ಹೋರಾಟ ಸಮಿತಿ ಈ ಮೂಲಕ ಆಗ್ರಹಿಸುತ್ತದೆ ಎಂದರು.

ಹೆಗ್ಗಡೆ ಕುಟುಂಬದ ಅಕ್ರಮಗಳನ್ನು ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಕೊಲೆಗಡುಕನ, ಅಕ್ರಮ ಬಡ್ಡಿ ದಂದೆ ವಿರುದ್ಧ ಮಹೇಶ ಶೆಟ್ಟಿ ತಿಮರೋಡಿ ಮತ್ತು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಸ್ಥಳೀಯ ಸಂಘಗಳು ಜನ ಜಾಗೃತಿ ಮಾಡುತ್ತಾ ಬಂದಿವೆ. ಆದರೆ ಅಧಿಕಾರಿಗಳು, ರಾಜಕೀಯ ವ್ಯವಸ್ಥೆಗಳು ನ್ಯಾಯಾಂಗ ಮತ್ತು ಮಾಧ್ಯಮಗಳು ಕುರುಡಾಗಿರುವುದರಿಂದ ಇಡೀ ರಾಜ್ಯ ಇಂದು ಧರ್ಮೋದ್ಯಮಿಗಳ ಕವಿ ಮುಷ್ಟಿಯಲ್ಲಿ ನಲುಗುತ್ತಿದೆ. ಇನ್ನಾದರೂ ಈ ಸಮಾಜ ನಕಲಿ ದೇವ ಮಾನವ ನಿಂದ ಎಚ್ಚತ್ತುಕೊಂಡು ಜಾಗೃತವಾಗಲಿ ಎಂದರು.

ಗಿರೀಶ್ ಮಟ್ಟಣ್ಣವರ್ ಎತ್ತಿದ ಪ್ರಮುಖ ಪ್ರಶ್ನೆಗಳೇನು ?

ರಾಜ್ಯದಲ್ಲಿ SKDRDP ನಡೆಸುತ್ತಿದೆ ಎಂದು ಹೇಳಲಾಗುವ ಸ್ವಸಹಾಯ SHG ಸಂಘದ ಸದಸ್ಯರಿಗೆ ಇದುವರೆಗೂ ತಮ್ಮ ಸಂಘದ ನೋಂದಣಿ ಪ್ರತಿ REGISTRATION Copy ನೀಡಿಲ್ಲ. ಏಕೆ? ತಾವಿರುವ ಸಂಘದ ನೀತಿ ನಿಯಮಗಳನ್ನು ಅರಿತುಕೊಳ್ಳುವುದು ಅದೇ ಸಂಘದ ಸದಸ್ಯರ ಹಕ್ಕು ಅಲ್ಲವೇ?? SKDRDP Bank Business Correspondance trust, ಕಮಿಷನ್  agent (BC Agent trust) ಆಗಿ ಕೆಲಸ  ಮಾಡುತ್ತದೆ ಎಂದು ಸಂಸ್ಥೆ ಹೇಳುತ್ತದೆ. ಆದರೆ ಇದುವರೆಗೂ bank ಜೊತೆಗೆ SKDRDP ಮುಖ್ಯಸ್ಥರು ಮತ್ತು ಬ್ಯಾಂಕ್ ನಡುವೆ ಆದ ಒಪ್ಪಂದದ ಪ್ರತಿಯನ್ನು ಪ್ರತಿವಾರ ಬಡ್ಡಿ ಕಟ್ಟುವ ಸದಸ್ಯರ ಗಮನಕ್ಕೆ ಏಕೆ ತರುತ್ತಿಲ್ಲ ? ಬ್ಯಾಂಕ್ ಬಡ್ಡಿ ದರ ಎಷ್ಟು? ಕಮಿಷನ್ ಎಷ್ಟು? ಈ ಕುರಿತು ಪಾರದರ್ಶಕತೆ ಏಕಿಲ್ಲ ಎಂದು ಪ್ರಶ್ನಿಸಿದರು.

ಸಂಸ್ಥೆ ಬ್ಯಾಂಕ್ agent ಆಗಿರುವುದರಿಂದ ಬಡ್ಡಿ ದರ, ಸಾಲದ ಕಂತಿನ ದರ, ಕಂತಿನ ಅವಧಿಯನ್ನು ಬ್ಯಾಂಕ್‌ ನಿರ್ಧರಿಸಬೇಕು. ಬ್ಯಾಂಕ್ ದಲಾಲಿ ಏಜೆಂಟ್ ಆದ SKDRDP ಪಾತ್ರವೇನು? ಪ್ರತಿವಾರ 52 ಲಕ್ಷ ಸದಸ್ಯರಿಂದ ವಸೂಲಿ ಮಾಡುತ್ತಿರುವ ಉಳಿತಾಯ ಹಣವನ್ನು ಸ್ವಸಹಾಯ ಗುಂಪಿನ ಬ್ಯಾಂಕ್ ಖಾತೆಗೆ ಜಮಾ ಮಾಡದೆ SKDRDP ಸಂಸ್ಥೆ ತನಗೆ ಮನಸಿಗೆ ಬಂದ ಖಾತೆಗೆ ಜಮಾ ಮಾಡುತ್ತಿರುವುದು ಏಕೆ? ಉಳಿತಾಯ ಹಣವನ್ನು ಕಾನೂನು ಬಾಹಿರವಾಗಿ ಸಂಗ್ರಹಣೆ ಮಾಡುತ್ತಿರುವುದು ಏಕೆ? ಉಳಿತಾಯ ಹಣವನ್ನು ಸೂಕ್ತ ಸಮಯದಲ್ಲಿ ಫಲಾನುಭವಿಗಳಿಗೆ ಹಿಂತಿರುಗಿಸುತ್ತಿಲ್ಲ ಏಕೆ? ಇದು ಸಾರ್ವಜನಿಕ ಹಣದ ದುರ್ಬಳಕೆ ಮತ್ತು ವಂಚನೆ ಅಲ್ಲವೇ? ಎಂದು ಪ್ರಶ್ನಿಸಿದರು.

ಗುಂಪು ವಿಮೆ ಅವಶ್ಯಕತೆ ಏನಿದೆ?

ಕಡ್ಡಾಯವಾಗಿ ಗುಂಪು ವಿಮೆ (Group insurance) ಮಾಡಿಸುವ ಅವಶ್ಯಕತೆ ಏನಿದೆ? ಬ್ಯಾಂಕ್ ನಿಂದ ಕೊಡಿಸುವ ಸಾಲಕ್ಕೂ ಕಡ್ಡಾಯ ವಿಮೆಗೆ ಏನು ಸಂಬಂಧ? ವೈಯುಕ್ತಿಕ ವಿಮೆಗೆ ಅವಕಾಶ ಇದ್ದರೂ ನಿಯಮಬಾಹಿರವಾಗಿ ಗುಂಪು ವಿಮೆಯನ್ನು ಸ್ವಸಹಾಯ ಗುಂಪುಗಳ ಸದಸ್ಯರ ಅನುಮತಿ ಇಲ್ಲದೆ ಮಾಡಿದ ಕಾರಣ ಏನು? ಸ್ವಸಹಾಯ ಗುಂಪುಗಳ ಸದಸ್ಯರನ್ನು ಬಿಟ್ಟು SKDRDP ಯನ್ನು group ಮಾಸ್ಟರ್ ಮಾಡಿದ್ದು ಗ್ರಾಮೀಣ ಜನರಿಗೆ ಮಾಡಿದ ಮಹಾವಂಚನೆ ಅಲ್ಲವೇ? ಇದುವರೆಗೂ ಬಹುತೇಕ ವಿಮೆ ಫಲಾನುಭವಿಗಳಿಗೆ ಅವರ ವಿಮೆಯ ಬಾಂಡ್ ಆಗಲಿ ಪಾಲಿಸಿ ಸಂಖ್ಯೆ ಆಗಲಿ ನೀಡಿಲ್ಲ ಏಕೆ? ಸದಸ್ಯರು ಮೃತರಾದರೆ ಅಥವಾ ಆರೋಗ್ಯ ಚಿಕಿತ್ಸೆ ಸಂದರ್ಭದಲ್ಲಿ ವಿಮೆ ಸೌಲಭ್ಯಗಳು ಬಹುತೇಕ ಕಡೆಗಳಲ್ಲಿ ಸಿಗುತ್ತಿಲ್ಲ. ಏಕೆ? ಇದು ಸಾರ್ವಜನಿಕ ಹಣ ದುರ್ಬಳಕೆ ಮತ್ತು ವಂಚನೆ ಅಲ್ಲವೇ ಎಂದು ಪ್ರಶ್ನೆ ಎತ್ತಿದರು.

ವಿಮೆ ಕಂಪನಿ ನೀಡುವ ವಿಮೆ ಏಜೆಂಟ್ ಕಮಿಷನ್ ಸ್ವಸಹಾಯ ಗುಂಪುಗಳಿಗೆ ತಲುಪುವ ಬದಲು SKDRDP ಏಕೆ ಪಡೆಯುತ್ತಿದೆ?.  ಸ್ವಸಹಾಯ ಗುಂಪುಗಳನ್ನು ನೇರವಾಗಿ ಬ್ಯಾಂಕ್ ಗಳಿಗೆ, ಸದಸ್ಯರ ಮೊಬೈಲ್ ಸಂಖ್ಯೆ ಗೆ link ಕೊಡದೆ, SB ಖಾತೆ ತೆರೆಯುವ ಅವಕಾಶ ಇದ್ದರೂ CC ಖಾತೆ ತೆರೆದಿದ್ದು ಏಕೆ? ಇದರಿಂದ ಪ್ರಾಮಾಣಿಕವಾಗಿ ಪ್ರತಿವಾರ ಕಟ್ಟಿದ ದುಡ್ಡಿಗೆ ಶ್ರಮಿಕ ವರ್ಗದ ಜನ CIBIL score ಮತ್ತು ಇತರ ಬ್ಯಾಂಕ್ ಸೇವೆ ಮತ್ತು ಸರ್ಕಾರದ ಯೋಜನೆಗಳಿಂದ ಜನಸಾಮಾನ್ಯರು ವಂಚಿತರಾಗುವುದಿಲ್ಲವೇ? ಇದು ಗ್ರಾಮೀಣಾಭಿವೃದ್ಧಿಯೇ?? ಎಂದು ಪ್ರಶ್ನೆ ಮಾಡಿದರು.

ಮನೆ ಮನೆಗೆ ಹೋಗಿ ಕಿರುಕುಳ ಕೊಟ್ಟು ವಸೂಲಿ

RBI ಮತ್ತು ಲೇವಾದೇವಿ ನಿಯಮಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ವಾರದ ಬಡ್ಡಿಯನ್ನು ಮನೆ ಮನೆಗೆ ಹೋಗಿ ಕಿರುಕುಳ ಕೊಟ್ಟು ವಸೂಲಿ ಮಾಡುವುದು ಗ್ರಾಮೀಣಾಭಿವೃದ್ಧಿಯೇ? ಇದರಿಂದ ನಿರಂತರವಾಗಿ ಆಗುತ್ತಿರುವ ಆತ್ಮಹತ್ಯೆಗಳಿಗೆ SKDRDP ನೇರ ಕಾರಣ ಅಲ್ಲವೇ?? SKDRDP ಕೊಡುವ ಸ್ಟೇಟೆಂಟ್ ನಲ್ಲಿ ಯಾವುದೇ ಸಹಿ ಅಥವಾ ಮುದ್ರೆ ಇರುವುದಿಲ್ಲ ಏಕೆ? ಬ್ಯಾಂಕ್ ಗಳಲ್ಲಿ ವಿಚಾರಿಸಿದಾಗ ನಮಗೂ ನಿಮ್ಮ ವ್ಯವಹಾರಕ್ಕೂ ಸಂಬಂಧ ಇಲ್ಲ ಎನ್ನುವ ಉತ್ತರ ಬ್ಯಾಂಕ್ ಅಧಿಕಾರಿಗಳು ಕೊಡುತ್ತಾರೆ ಏಕೆ?CC ಖಾತೆ ತೆರೆದಿದ್ದರೆ ಬ್ಯಾಂಕ್ ಯಾಕೆ ಈ ಉತ್ತರ ಕೊಡುತ್ತದೆ? ಅಂದರೆ ಸಾಲ ಕೊಟ್ಟ ಬ್ಯಾಂಕಿಗೆ ತನ್ನ ಗ್ರಾಹಕರು ಯಾರು ಎಂದು ಗೊತ್ತಿಲ್ಲ, ಸಾಲ ಪಡೆದ ಗ್ರಾಹಕನಿಗೆ ಯಾವ ಬ್ಯಾಂಕ್ ಸಾಲ ನೀಡಿದೆ ಎನ್ನುವ ಮಾಹಿತಿ ಇಲ್ಲ! ಇದು ಪಾರದರ್ಶಕತೆಯೇ? CC ಖಾತೆಯಲ್ಲಿ ಸ್ವಸಹಾಯ ಗುಂಪಿನಿಂದ ಜಮಾ ಆದ ಉಳಿತಾಯ ಹಣದ, NRLM ಸಬ್ಸಿಡಿ ವಿವರಣೆಯನ್ನು ನೀಡುತ್ತಿಲ್ಲ ಏಕೆ? ಎಂದರು.

ಸಂಘದ ಸದಸ್ಯರಿಂದ ಇದುವರೆಗೂ SKDRDP ಸಂಸ್ಥೆ ನೇರವಾಗಿ ಬ್ಯಾಂಕ್ ಅಕೌಂಟ್ ಗೆ ಅಥವಾ ಆನ್ನೈನ್ ಮೂಲಕ ಹಣ ಪಾವತಿ ಆಗುವುದಿಲ್ಲ ಎಲ್ಲವೂ ನಗದು ರೂಪದಲ್ಲಿ ವಸೂಲಿ ಮಾಡಲಾಗುತ್ತದೆ. ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಇದ್ದರೂ SKDRDP ಯಲ್ಲಿ ಕಡ್ಡಾಯವಾಗಿ ನಗದು ಏಕೆ? ಎಂದರು.

ಪುಕ್ಕಟೆ ಪ್ರಚಾರ

ಸರ್ಕಾರದ ಕೆರೆ ಯೋಜನೆ, ಮಧ್ಯ ವರ್ಜನ ಯೋಜನೆ, ಕೌಶಲ್ಯ ಅಭಿವೃದ್ಧಿ ಯೋಜನೆಗಳ ಗುತ್ತಿಗೆ ಪಡೆದು ಸರ್ಕಾರದ ಅನುದಾನದಿಂದ ಕೆಲಸ ಮಾಡಿಸಿ, ಪೂಜ್ಯರು ದಾನ ಕೊಟ್ಟರು, ಗ್ರಾಮ ಅಭಿವೃದ್ಧಿ ಮಾಡಿದರು ಎಂದು ಪುಕ್ಕಟೆ ಪ್ರಚಾರ ಪಡೆಯುವುದು ಸಾಮಾಜಿಕ ದ್ರೋಹ ಅಲ್ಲವೇ? ಇದರಿಂದ ಸ್ಥಳೀಯ ಸಾಮಾಜಿಕ ಸಂಘಗಳು ಸರ್ಕಾರದ ಯೋಜನೆಯಿಂದ ವಂಚಿತರಾಗುವುದಿಲ್ಲವೇ?? ಎಂದು ಪ್ರಶ್ನೆ ಮಾಡಿದರು.

ಜೈನರಿಗೆ ಸೇರಿದ ಒಂದು ಖಾಸಗಿ ಸಂಸ್ಥೆ

ಇಷ್ಟೊಂದು ಅಕ್ರಮ ಲಾಭ ಇರುವ ವಹಿವಾಟು ಲಾಭ ರಹಿತ ಟ್ರಸ್ಟ್ ಎಂದು ಹೇಳಿಕೊಳ್ಳುವ SKDRDP ಕಳೆದ 20 ವರ್ಷಗಳಿಂದ ಹಿಂದೂ ಧಾರ್ಮಿಕ ಪವಿತ್ರ ಧರ್ಮಸ್ಥಳ ದೇಗುಲ ಮುಂದಿಟ್ಟು ನಡೆಸುತ್ತ ಬಂದಿದೆ. ಆದರೆ ನ್ಯಾಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಿಂದುಗಳು ಪೂಜಿಸುವ ಹಕ್ಕು ಇಲ್ಲ ಅದು ಹಿಂದೂಗಳ ಧಾರ್ಮಿಕ ಕೇಂದ್ರ ಅಲ್ಲವೇ ಅಲ್ಲ. ಅದು ನಮ್ಮ ಜೈನರಿಗೆ ಸೇರಿದ ಒಂದು ಖಾಸಗಿ ಸಂಸ್ಥೆ ಮಾತ್ರ ಎಂದು ಲಿಖಿತವಾಗಿ ಬರೆದು ಕೊಟ್ಟಿರುತ್ತಾರೆ. ಇದು ವೀರೇಂದ್ರ ಜೈನ್ @ ಹೆಗ್ರಡೆ ಕುಟುಂಬ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ತಂದ ಕಳಂಕ ಅಲ್ಲವೇ, ಕೋಟ್ಯಂತರ ಭಕ್ತರಿಗೆ ಮಾಡಿದ ದ್ರೋಹ ಅಲ್ಲವೇ ?? ಎಂದು ಪ್ರಶ್ನಿಸಿದರು.

ವೀರೇಂದ್ರ ಹೆಗ್ಗಡೆ ಉತ್ತರಿಸಲಿ

ಈ ಎಲ್ಲ ಪ್ರಶ್ನೆಗಳಿಗೆ SKDRDP ಸಂಸ್ಥಾಪಕ ಅಧ್ಯಕ್ಷರು, ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರು ಆದ ವೀರೇಂದ್ರ ಜೈನ್ @ ಹೆಗ್ಗಡೆ ಅವರು ಉತ್ತರಿಸಬೇಕು ಮತ್ತು ಹಣದ ವಹಿವಾಟಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಸಾರ್ವಜನಿಕರ ಗಮನಕ್ಕೆ ತರಲೇಬೇಕು. ಅಲ್ಲಿಯವರೆಗೆ ಯಾವ ಸದಸ್ಯರು ವಾರದ ಸಾಲ ಅಥವಾ ಬಡ್ಡಿ ಕಟ್ಟುವುದಿಲ್ಲ. ಈ ಕುರಿತು ಪ್ರತಿ ಜಿಲ್ಲೆಯಲ್ಲಿ ಅಕ್ರಮ ಮೀಟರ್ ಬಡ್ಡಿ ದಂದೆಗೆ ಕಡಿವಾಣ ಹಾಕಲು ಸಹಾಯವಾಣಿ ತೆರೆಯಬೇಕು. ಈ ನಿಟ್ಟಿನಲ್ಲಿ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಅವರ ನಿಲುವನ್ನು, ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್ ಅವರ ಪ್ರಯತ್ನ ಮತ್ತು ಸಚಿವರಾದ ಚಲುವರಾಯಸ್ವಾಮಿ ಅವರ ದಿಟ್ಟ ನಿಲುವನ್ನು ನಾವು ಸ್ವಾಗತಿಸುತ್ತೇವೆ ಎಂದರು.

ಗೋಷ್ಠಿಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮಹೇಶ್ ತಿಮರೋಡಿ, ಹೋರಾಟಗಾರರಾದ ಪ್ರಸನ್ನ ರವಿ, ಬಂಡೂರು ಸಿದ್ದರಾಜು, ಮಲ್ಲು, ಜಯಂತ್ ಪಿ, ಮಹೇಶ್ ಉಪಸ್ಥಿತರಿದ್ದರು. 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!