Monday, September 23, 2024

ಪ್ರಾಯೋಗಿಕ ಆವೃತ್ತಿ

ಬೆಂಗಳೂರಿಗೆ ಕಾವೇರಿ ನೀರು| ಕಾವೇರಿ 5 ನೇ ಹಂತದ ಯೋಜನೆಗೆ ಶೀಘ್ರದಲ್ಲೇ ಚಾಲನೆ; ಡಿ.ಕೆ.ಶಿವಕುಮಾರ್

ಬೆಂಗಳೂರು ನಗರದ ಮೂಲೆ ಮೂಲೆಗೂ ಕಾವೇರಿ ನೀರನ್ನು ತಲುಪಿಸುವ ಮಹತ್ವಾಕಾಂಕ್ಷಿ ಕಾವೇರಿ ಐದನೇ ಘಟ್ಟದ ಯೋಜನೆಗೆ ದಸರಾ ಸಮಯದಲ್ಲಿ ಚಾಲನೆ ನೀಡಲಾಗುವುದು. ಈ ಮೂಲಕ ಬೆಂಗಳೂರು ನಗರವನ್ನು ವಾಟರ್‌ ಸರ್‌ಪ್ಲಸ್‌ ಮಾಡುವುದು ನಮ್ಮ ಗುರಿಯಾಗಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವ ಡಿಕೆ ಶಿವಕುಮಾರ್‌ ತಿಳಿಸಿದರು.

ಇಂದು ಕಾವೇರಿ 5 ನೇ ಹಂತದ ಕಾಮಗಾರಿಯ ಪರಿಶೀಲನೆಯನ್ನು ನಡೆಸುವ ನಿಟ್ಟಿನಲ್ಲಿ ಕೃಷ್ಣಪ್ರಿಯ ಕಲ್ಯಾಣ ಮಂಟಪ,ಕೆಂಗೇರಿಯಲ್ಲಿ‌ ಚಾಲನೆಯಲ್ಲಿರುವ ಬೃಹತ್ ಕೊಳವೆ ಮಾರ್ಗದ ಕಾಮಗಾರಿ, ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ 5 ನೇ ಹಂತದ ಕಾವೇರಿ ನೀರು ಸರಬರಾಜು ಯೋಜನೆಯ ಪಂಪ್ ಸ್ಟೇಷನ್, ಟಿ.ಕೆ ಹಳ್ಳಿಯಲ್ಲಿರುವ ಬೃಹತ್‌ ನೀರು ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

ಇಂಜಿನಿಯರಿಂಗ್‌ ಮಾರ್ವೆಲ್‌ ಬೃಹತ್‌ ಯೋಜನೆ
ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆ ಭಾರತ ದೇಶದ ಅತಿದೊಡ್ಡ ನೀರು ಸರಬರಾಜು ಯೋಜನೆಗಳಲ್ಲಿ ಒಂದಾಗಿದೆ. ಒಂದೇ ಹಂತದಲ್ಲಿ 50 ಲಕ್ಷ ಜನರಿಗೆ ನೀರು ಒದಗಿಸುವ ಬೃಹತ್‌ ಯೋಜನೆ ಇದಾಗಿದ್ದು, ದೇಶದ ಮೆಟ್ರೋ ಸಿಟಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ನಗರಗಳಲ್ಲೂ ಇಷ್ಟು ದೊಡ್ಡ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿಲ್ಲ. ಭಾರತದಲ್ಲೆ ಅತಿದೊಡ್ಡ 775 ಎಂ.ಎಲ್‌.ಡಿ ಸಾಮರ್ಥ್ಯದ ಅತ್ಯಾಧುನಿಕ ನೀರು ವಾಟರ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌ ನಿರ್ಮಾಣ ಈ ಯೋಜನೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಅತ್ಯಾಧುನಿಕ ಪ್ರವಾಹ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದರಿಂದ ನಿರಂತರವಾಗಿ ಕಾರ್ಯಾಚರಣೆ ಸಾಧ್ಯವಾಗಲಿದೆ.

ಕಾವೇರಿ ಐದನೇ ಹಂತದ ಯೋಜನೆಯಲ್ಲಿ ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಮೂರು ಅತ್ಯಾಧುನಿಕ ತಂತ್ರಜ್ಞಾನದ ಸುಧಾರಿತ ಬೂಸ್ಟರ್ ಪಂಪಿಂಗ್ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಈ ಪಂಪಿಂಗ್‌ ಕೇಂದ್ರಗಳ ಸಹಾಯದಿಂದ ಸುಮಾರು 110 ಕಿಲೋಮೀಟರ್‌ ದೂರದಿಂದ 500 ಹಾಗೂ 2200 ಎಂಎಂನಷ್ಟು ವ್ಯಾಸದ ಬೃಹತ್‌ ಉಕ್ಕಿನ ಪೈಪ್‌ಗಳ ಮೂಲಕ ಕಾವೇರಿ ನೀರನ್ನು 450 ಮೀಟರ್‌ ಎತ್ತರಕ್ಕೆ ಹರಿಸಿ (ಸುಮಾರು 50 ಅಂತಸ್ತಿನ ಕಟ್ಟಡದಷ್ಟು ಎತ್ತರ) ಬೆಂಗಳೂರು ನಗರಕ್ಕೆ ನೀರನ್ನು ಪೂರೈಸಲಾಗುತ್ತದೆ. ಕಾವೇರಿ 5ನೇ ಹಂತದ ಯೋಜನೆಗೆ 1,45,000 ಮೆಗಾ ಟನ್‌ ಸ್ಟೀಲ್‌ ಪ್ಲೇಟ್‌ಗಳ ಬಳಕೆ ಮಾಡಲಾಗಿದೆ. 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಕಾಂಕ್ಷೆಯ ಯೋಜನೆ ಪೂರೈಸಲು 2.4 ಕೋಟಿ ಮಾನವ ಗಂಟೆಗಳ ಶ್ರಮ ಬಳಕೆಯಾಗಿದೆ. ಹೀಗಾಗಿ ನಾನು ಈ ಬೃಹತ್‌ ಯೋಜನೆಯನ್ನ ‘ Modern Engineering Marvel’ ಎಂದು ಕರೆಯಲು ಇಚ್ಚಿಸುತ್ತೇನೆ ಎಂದು ಹೇಳಿದರು.

ಬೆಂಗಳೂರಿನ ಮನೆ ಮನೆಗೂ ಕಾವೇರಿ ನೀರು
ಬೆಂಗಳೂರು ನಗರದ ಹೊರವಲಯಕ್ಕೆ ಬರುವ ಕಾವೇರಿ ನೀರು, ವಾಜರಹಳ್ಳಿ ಬಳಿ ಪೈಪ್‌ಲೈನ್ ವಿಭಜನೆಯಾಗಿ ಸ್ಟೀಲ್ ಟ್ರಂಕ್ ಮೇನ್ ಮೂಲಕ ನಗರದ ಗೊಟ್ಟಿಗೆರೆ, ದೊಡ್ಡಕನಹಳ್ಳಿ, ಲಿಂಗಧೀರನಹಳ್ಳಿ, ಸಿಂಗಾಪುರ, ಎಸ್‌ಎಂವಿ 6ನೇ ಬ್ಲಾಕ್, ಕಾಡುಗೋಡಿ ಮತ್ತು ಚೊಕ್ಕನಹಳ್ಳಿ ಜಲಾಶಯಗಳಿಗೆ ನೀರು ತುಂಬಿಸುತ್ತದೆ. ಬೆಂಗಳೂರಿನ ವಿವಿಧ ಬಡಾವಣೆಯ “ನೀರಿನ ದಾಹ” ತಣಿಸುವ ಯೋಜನೆ ಇದಾಗಿದೆ. ಕಾವೇರಿ 5ನೇ ಹಂತದ ಯೋಜನೆಯಿಂದ ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಟಿ.ದಾಸರಹಳ್ಳಿ, ಮಹದೇವಪುರ, ರಾಜರಾಜೇಶ್ವರಿನಗರ ಹಾಗೂ ಬೊಮ್ಮನಹಳ್ಳಿ ವಲಯದ ವಿವಿಧ ಹಳ್ಳಿಗಳ ಮನೆ ಮನೆಗೂ ಕಾವೇರಿ ನೀರು ಸರಬರಾಜು ಆಗಲಿದೆ.

ಬೆಂಗಳೂರು ಮಹಾನಗರದ ನೀರಿನ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾವೇರಿ 5 ನೇ ಘಟ್ಟವನ್ನು 2 ಹಂತಗಳಲ್ಲಿ ಜಪಾನ್‌ ಇಂಟರ್‌ನ್ಯಾಷನ್‌ ಕೋ-ಆಪರೇಷನ್‌ ಏಜೆನ್ಸಿ – ಜೈಕಾ ಆರ್ಥಿಕ ನೆರವಿನಿಂದ ಯೋಜನೆಯನ್ನು ಪ್ರಾರಂಭಿಸಲು ಅಂದಿನ ಕಾಂಗ್ರೆಸ್‌ ಸರಕಾರ 2014 ರಲ್ಲಿ ಯೋಜನೆ ಪ್ರಾರಂಭಿಸಲು ಅನುಮೋದನೆ ನೀಡಿತ್ತು. ಈಗ ನಮ್ಮ ಸರಕಾರ ಇದರ ಉದ್ಘಾಟನೆಯನ್ನು ಮಾಡುತ್ತಿದೆ. 5,550 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ನೀರು ಸರಬರಾಜು ಅಷ್ಟೇ ಅಲ್ಲದೆ ನಗರದ ನೈರ್ಮಲ್ಯೀಕರಣದ ಪ್ರಮುಖ ಅಂಶವಾದ ಕೊಳಚೆ ನಿರ್ವಹಣೆಗೂ ಸುಮಾರು 1000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗಿದೆ ಎಂದು ಹೇಳಿದರು.

ದಸರಾ ಸಂಧರ್ಭದಲ್ಲಿ ಉದ್ಘಾಟನೆ
ಈ ಮಹತ್ವಾಕಾಂಕ್ಷಿ ಯೋಜನೆಯನ್ನು ದಸರಾ ಸಮಯದಲ್ಲಿ ಉದ್ಘಾಟಿಸಲಾಗುವುದು. ಈಗಾಗಲೇ ಕಾಮಗಾರಿಯ ಬಹುತೇಕ ಮುಗಿದಿವೆ. ಇನ್ನು ಕೆಲವೇ ಸಣ್ಣ ಪುಟ್ಟ ಕಾಮಗಾರಿಗಳು ಬಾಕಿಯಿದ್ದು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ, ದಸರಾ ಸಂಧರ್ಭದಲ್ಲಿ ಉದ್ಘಾಟನೆಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ತಿಳಿಸಿದರು.

ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನದಿಂದ ಬೆಂಗಳೂರಿಗೆ ಹೆಚ್ಚುವರಿಯಾಗಿ 775 ಎಂಎಲ್‌ಡಿ ನೀರು ದೊರೆಯಲಿದೆ. ಇದು ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಲಿದೆ. ಜಲ ಮಂಡಳಿಯಿಂದ ಬೆಂಗಳೂರು ನಗರದಲ್ಲಿ 10.64 ಲಕ್ಷ ಕಾವೇರಿ ನೀರಿನ ಸಂಪರ್ಕ ನೀಡಲಾಗಿದೆ. ಕಾವೇರಿ 5ನೇ ಹಂತದ ಯೋಜನೆ ಜಾರಿ ಬಳಿಕ 4 ಲಕ್ಷ ಹೊಸ ಸಂಪರ್ಕ ನೀಡಲಾಗುತ್ತಿದೆ. ಇದರಿಂದ ಜಲಮಂಡಳಿಯ ಆದಾಯ ಹೆಚ್ಚಲಿದೆ ಎಂದು ಹೇಳಿದರು.

ಬೆಂಗಳೂರು ನಗರವನ್ನು ವಾಟರ್‌ ಸರ್‌ಪ್ಲಸ್‌ ಮಾಡುವ ಗುರಿ
ಕೊಳವೆ ಬಾವಿಗಳು ಬತ್ತಿಹೋದ ಪರಿಣಾಮವಾಗಿ ಈ ಬಾರಿ ಬೇಸಿಗೆಯಲ್ಲಿ ಬಹಳಷ್ಟು ತೊಂದರೆಯನ್ನು ನಮ್ಮ ನಗರದ ನಾಗರೀಕರು ಅನುಭವಿಸಬೇಕಾಯಿತು. ಈ ಸಂಧರ್ಭದಲ್ಲಿ ನಮ್ಮ ಜಲಮಂಡಳಿಯ ಎಲ್ಲಾ ಸಿಬ್ಬಂದಿಗಳು ಹಗಲು ರಾತ್ರಿ ಶ್ರಮವಹಿಸಿ ಇದನ್ನ ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಪರಿಸ್ಥಿತಿ ಮತ್ತೊಮ್ಮೆ ಮರುಕಳಿಸಿದಂತೆ ಅಗತ್ಯ ಸಿದ್ದತೆಗಳನ್ನು ಜಲಮಂಡಳಿ ಮಾಡುತ್ತಿದೆ. ಹಲವಾರು ಸುಸ್ಥಿರ ಯೋಜನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಬೆಂಗಳೂರು ನಗರವನ್ನು ವಾಟರ್‌ ಸರ್‌ಪ್ಲಸ್‌ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯಶವಂತಪುರ ಶಾಸಕರಾದ ಎಸ್. ಟಿ. ಸೋಮಶೇಖರ್, ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮಪ್ರಸಾತ್ ಮನೋಹರ್, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ರಾಜೇಂದ್ರ ಚೋಳನ್, ಶಾಸಕರಾದ ನರೇಂದ್ರ ಸ್ವಾಮಿ, ವಿಧಾನ ಪರಿಷತ್‌ ಸದಸ್ಯರಾದ ರವಿಕುಮಾರ್‌, ದಿನೇಶ್‌ ಗೂಳಿಗೌಡ ಹಾಗೂ ಜಲ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!