Wednesday, September 25, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ನುಡಿಹಬ್ಬ| ಸಮ್ಮೇಳನಾಧ್ಯಕ್ಷರಾಗಿ ಪ್ರೊ.ಕೆ.ಎಸ್ ಭಗವಾನ್ ಆಯ್ಕೆಗೆ ಒತ್ತಾಯ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ ವಿಚಾರವಾಗಿದ್ದು ಸಮ್ಮೇಳನದ ಅಧ್ಯಕ್ಷರನ್ನಾಗಿ ಸಾಹಿತಿ ಪ್ರೊ.ಕೆ.ಎಸ್ ಭಗವಾನ್ ಅವರನ್ನು ಆಯ್ಕೆ ಮಾಡಬೇಕೆಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಗೌರವ ಅಧ್ಯಕ್ಷ ಎಂ ಸಿ ಬಸವರಾಜು ಹಾಗೂ ನ್ಯಾಯವಾದಿ ಬಿ.ಟಿ.ವಿಶ್ವನಾಥ್ ಒತ್ತಾಯಿಸಿದರು.

ಮಂಡ್ಯದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವುದು ಸಂತೋಷದಾಯಕ ವಿಚಾರ. ಈ ಹಿಂದೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಜಯದೇವ ತಾಯಿ ಲಿಗಾಡೆ ಮತ್ತು ಚದುರಂಗ ಅವರು ತುಂಬಿದ್ದಾರೆ. ಆದ್ದರಿಂದ ಈ ಬಾರಿಯ ಸಮ್ಮೇಳನ ಅಧ್ಯಕ್ಷರ ಸ್ಥಾನವನ್ನು ಪ್ರೊ. ಭಗವಾನ್ ಅವರಿಗೆ ನೀಡಬೇಕೆಂದು ಒತ್ತಾಯಿಸಿದರು.

ಭಗವಾನ್ ಅವರು ಅನೇಕ ವೈಚಾರಿಕ ಗ್ರಂಥಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಅನೇಕ ಮಹನೀಯರ ಅಮೂಲ್ಯವಾದ ಕೃತಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಹಾಗಾಗಿ ಅವರಿಗೆ ಸಮ್ಮೇಳನ ಅಧ್ಯಕ್ಷರ ಸ್ಥಾನವನ್ನು ನೀಡಬೇಕು ಎಂದು ತಿಳಿಸಿದರು.

ಕಾವೇರಿ ಆರತಿ ಕೈ ಬಿಡಿ

ಗಂಗಾ ಆರತಿಯಂತೆ ಇಲ್ಲಿಯೂ ಕಾವೇರಿ ಆರತಿ ಪ್ರಾರಂಭಿಸಲು ಹೊರಟಿರುವುದು ಅನಾಹುತಗಳಿಗೆ ಕಾರಣವಾಗಲಿದೆ. ಆದ್ದರಿಂದ ಇದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಕಾವೇರಿ ಆರತಿ ಬದಲು ಅನೇಕ ಕೆಲಸಗಳಿವೆ. ಕಾವೇರಿ ಕೊಳ್ಳದಲ್ಲಿ ಈ ಬಾರಿ ನೀರು ಹರಿದು ಹೋಗಿದ್ದು ಮೇಕೆದಾಟು ಯೋಜನೆ ಅನುಷ್ಠಾನವಾಗುವ ಸಾಧ್ಯತೆ ಕ್ಷೀಣವಾಗಿದೆ. ಆದಕಾರಣ ಮಳೆಗಾಲದಲ್ಲಿ ನೀರನ್ನು ಸಂರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಬೇಕು. ಕೆರೆಗಳನ್ನು ತುಂಬಿಸುವ ಬಗ್ಗೆ ಮತ್ತು ಕೃಷಿ ವಿಸ್ತರಣೆಯ ಬಗ್ಗೆ ಯೋಚಿಸಬೇಕು ಎಂದರು.

ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ವಸಂತಮ್ಮ, ಸಿ.ಶಿವಲಿಂಗಯ್ಯ, ಗುರುಮೂರ್ತಿ, ಎಂ.ಸಿ.ಲಂಕೇಶ್, ಜಯರಾಮ್ ಹಾಗೂ ಕೆ.ವಿ.ವೆಂಕಟಾಚಲಯ್ಯ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!