Sunday, October 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬಸ್ ಪಲ್ಟಿ: ಪ್ರಯಾಣಿಕರ ಜೀವ ಉಳಿಸಿದ ಕಂಟೈನರ್!

ಮಂಡ್ಯನಗರದ ಸ್ಯಾಂಜೋ ಆಸ್ಪತ್ರೆ ಮುಂಭಾಗ KSRTC ಬಸ್ಸು ಕಂಟೈನರ್ ಗೆ ಡಿಕ್ಕಿ ಹೊಡೆದಿದ್ದರಿಂದ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿ ಜೀವ ಉಳಿದಿದೆ, ಇಲ್ಲವಾದರೆ ಬಸ್ಸು ವಿದ್ಯುತ್ ಕಂಬ ಹಾಗೂ ಕಾಂಪೌಂಡ್‌ಗೆ ಬಸ್ ಡಿಕ್ಕಿ ಹೊಡೆದು ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗಾಯಗೊಂಡವರ್‍ಯಾರು ?

ಬಸ್ಸಿನಲ್ಲಿ ಸುಮಾರು 70 ಜನರಿದ್ದರು, ಈ ಅಪಘಾತದಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ. ಬಸ್ಸಿನ ಚಾಲಕ ಶಶಿಕುಮಾರ್, ಪ್ರಯಾಣಿಕರಾದ ಪುತ್ತೂರಿನ ನಿವಾಸಿ ಮಾದಪ್ಪ, ಮೈಸೂರಿನ ಚಿಕ್ಕಮಾದು, ಮಮತಾ, ರಮ್ಮನಹಳ್ಳಿ ಲೀಲಾವತಿ, ಹುಲಿಯೂರು ದುರ್ಗದ ಅರ್ಪಿತಾ, ಮದ್ದೂರಿನ ಮೋಹಿತ, ಬೆಂಗಳೂರಿನ ವರಲಕ್ಷ್ಮೀ, ನಂಜನಗೂಡಿನ ಮಹದೇವಮ್ಮ, ನಿಡಸಾಲೆ ನಾಗೇಶ್, ಪಾವಗಡದ ಶಶಿಕುಮಾರ್, ಆತಗೂರಿನ ಮಂಗಳಮ್ಮ, ಚಿಂದಗಿರಿದೊಡ್ಡಿಯ ರಾಮಚಂದ್ರ, ಹುಲಿಯೂರು ದುರ್ಗದ ಗಿರೀಗೌಡ, ಮಲ್ಲಿಕಾರ್ಜುನ, ಗೋಪಾಲ ಹಾಗೂ ವಿದ್ಯಾರ್ಥಿಗಳಾದ ವಿನಯ್, ಸಚ್ಚಿನ್, ಬೀರೇಶ್, ಯೋಗೇಶ್, ಮೋನಿಕಾ, ಶಿವರಾಜ್, ಕೃಷ್ಣ, ಸೌಮ್ಯಾ, ಶಿಲ್ಪಾ, ಅನಿತಾ, ಕಿರಣ್‌ಕುಮಾರ್, ದಯಾನಂದ, ಹೇಮಾದ್ರಿ, ರೇಷ್ಮಾ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ.

ಸೋಮವಾರ ಬೆಳಗ್ಗೆ 9.50ರ ಸುಮಾರಿಗೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಬರುತ್ತಿದ್ದ ಬಸ್, ಮಂಡ್ಯ ನಗರಕ್ಕೆ ಬರಲು ಖಾಸಗಿ ಆಸ್ಪತ್ರೆ ಎದುರು ಸರ್ವೀಸ್ ರಸ್ತೆ ಕಡೆಗೆ ತಿರುಗಿಸಲಾಗಿದೆ. ಆದರೆ ಅತಿ ವೇಗವಿದ್ದ ಕಾರಣ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ ಕಂಟೈನರ್‌ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಕೂಡಲೇ ಸ್ಥಳೀಯರು ಧಾವಿಸಿ ಬಸ್‌ನೊಳಗಿದ್ದವರನ್ನು ಹೊರಗೆ ಎಳೆದುಕೊಂಡಿದ್ದಾರೆ. ಬಳಿಕ ಆಂಬ್ಯುಲೆನ್ಸ್ ಕರೆಸಿಕೊಂಡು ಖಾಸಗಿ ಆಸ್ಪತ್ರೆ ಹಾಗೂ ಮಿಮ್ಸ್‌ಗೆ ಗಾಯಾಳುಗಳನ್ನು ರವಾನಿಸಲಾಗಿದ್ದು, ಎಲ್ಲರೂ ಚಿಕಿತ್ಸೆ ಪಡೆದಿದ್ದಾರೆ. ಅಪಘಾತದ ಸಮಯದಲ್ಲಿ ವ್ಯಕ್ತಿಯೊಬ್ಬರು ಬೈಕ್‌ನಲ್ಲಿ ಹೋಗುತ್ತಿದ್ದು, ಇವರ ಮುಂದೆಯೇ ಬಸ್ ಬಿದ್ದಿದ್ದು, ಆತ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಮೊಬೈಲ್ ಬಳಕೆಯೇ ಅಪಘಾತಕ್ಕೆ ಕಾರಣವಾಯ್ತೇ ?

ಬಸ್ಸಿನ ಚಾಲಕನ ನಿರ್ಲಕ್ಷೃವೇ ಅಪಘಾತಕ್ಕೆ ಕಾರಣ ಎನ್ನುವ ಆರೋಪವನ್ನು ಪ್ರಯಾಣಿಕರು ಮಾಡಿದ್ದಾರೆ. ಒಂದು ಕೈಯಲ್ಲಿ ಮೊಬೈಲ್ ಹಿಡಿದು, ವೇಗವಾಗಿ ಚಾಲನೆ ಮಾಡಿದರಿಂದ ಅವಘಡ ಸಂಭವಿಸಿದೆ ಎಂದಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಚಾಲಕ, ಬ್ರೇಕ್ ಲೈನರ್ ಜಾಮ್ ಆಗಿದರಿಂದ ಅಪಘಾತ ಸಂಭವಿಸಿದೆ. ಬಸ್ 40 ಕಿ.ಮೀ ವೇಗದಲ್ಲಿತ್ತು. ನಾನು ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ ಎಂದಿದ್ದಾರೆ. ಅಪಘಾತದ ದೃಶ್ಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!