Saturday, October 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ನಡೆಯದ ಸಾಮಾನ್ಯ ಸಭೆ ; ಪುರಸಭಾ ಸದಸ್ಯರಿಂದ ಪ್ರತಿಭಟನೆ

ಮಳವಳ್ಳಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಅಧ್ಯಕ್ಷತೆಯಲ್ಲಿ ಇಂದು ನಿಗಧಿಯಾಗಿದ್ದ ಸಾಮಾನ್ಯ ಸಭೆಯನ್ನು ಮುಂದೂಡಿರುವುದನ್ನು ಖಂಡಿಸಿ ಪುರಸಭೆಯ ಕೆಲವು ಸದಸ್ಯರು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪುರಸಭೆ ಸದಸ್ಯ ಎಂ.ಎಲ್ ಶಿವಸ್ವಾಮಿ ಮಾತನಾಡಿ, ಪುರಸಭೆ ಸಭಾಂಗಣದಲ್ಲಿ ಎರಡನೇ ಅಧಿಕಾರದ ಅವಧಿಯ ಮೊದಲ ಸಾಮಾನ್ಯ ಸಭೆಯೂ ಬೆಳಿಗ್ಗೆ 11 ಗಂಟೆಗೆ ನಿಗಧಿಯಾಗಿತ್ತು, ಸಾಮಾನ್ಯ ಸಭೆಗೆ ಅಧ್ಯಕ್ಷರು ಉಪಾಧ್ಯಕ್ಷರು ಹಾಜರಾಗದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿಗಳು ಸಭೆಯನ್ನು ಮುಂದೂಡಿದರು.

ಸಭೆ 11ಗಂಟೆಗೆ ನಡೆಯಬೇಕಿತ್ತು. ಆದರೇ ಅಧ್ಯಕ್ಷರು 12.45ರ ಸುಮಾರಿಗೆ ಆರೋಗ್ಯದ ಸಮಸ್ಯೆಯಿಂದ ಸಭೆ ಮುಂದೂಡಬೇಕೆಂದು ಮೊಬೈಲ್ ಮೂಲಕ ಸಂದೇಶ ಕಳುಹಿಸಿದ್ದಾರೆ, ಉಪಾಧ್ಯಕ್ಷರನ್ನು ಕರೆಸಿ ಸಭೆ ನಡೆಸಬೇಕೆಂದು ಒತ್ತಾಯಿಸಿದರೇ ಇದಕ್ಕೆ ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ ಅವರ ಮೊಬೈಲ್ ಸ್ವೀಚ್ ಆಫ್ ಆಗಿದೆ ಎಂದು ಹೇಳುತ್ತಾರೆ, ಇದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನಿರ್ಲಕ್ಷ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ 14 ವಿಷಯದಲ್ಲಿ ಸ್ಥಾಯಿ ಸಮಿತಿ ಆಯ್ಕೆ ನಡೆಯಬೇಕಿತ್ತು. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಜೆಡಿಎಸ್ ಪಕ್ಷದ ಎಲ್ಲಾ ಸದಸ್ಯರು ಗೈರು ಹಾಜರಾಗಿದ್ದಾರೆ, ಪಟ್ಟಣದ ಅಭಿವೃದ್ದಿಗೆ ಮೂರು ಕೋಟಿ ಅನುದಾನ ಬಂದಿದ್ದು, ಸಭೆಯಲ್ಲಿ ಅನುಮೋದನೆ ಪಡೆಯಬೇಕಿತ್ತು, ಆದರೇ ಸಭೆ ನಡೆಯದಿರುವುದರಿಂದ ಅಭಿವೃದ್ದಿ ಮತ್ತಷ್ಟು ಕುಂಠಿತ ಕಂಡಿದೆ, ಅಧ್ಯಕ್ಷ- ಉಪಾಧ್ಯಕ್ಷರು ಸಭೆಗೆ ಗೈರುಹಾಜರಾಗಿರುವುದಕ್ಕೆ ಸ್ವಷ್ಟನೆ ಕೊಟ್ಟು ಸಭೆಯನ್ನು ಕೂಡಲೇ ನಡೆಸಬೇಕೆಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಸಾಮಾನ್ಯ ಸಭೆಯನ್ನು ತಕ್ಷಣದಲ್ಲಿಯೇ ನಡೆಸುವಂತೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿ ನಾಗರತ್ನಮ್ಮ ಅವರಿಗೆ ಮನವಿ ಸಲ್ಲಿಸಿದರು.

ಪುರಸಭೆ ಸದಸ್ಯೆ ಸವಿತ ಮಾತನಾಡಿ, ಪಟ್ಟಣವನ್ನು ಅಭಿವೃದ್ದಿಪಡಿಸುತ್ತಾರೆಂಬ ನಿರೀಕ್ಷೆಯಲ್ಲಿ ಮತದಾರರು ನಮ್ಮನ್ನು ಗೆಲ್ಲಿಸಿದ್ದಾರೆ, ಆದರೇ ಸರಿಯಾಗಿ ಸಭೆ ನಡೆಯದ ಕಾರಣ ಅಭಿವೃದ್ದಿ ಕುಂಠಿತ ಕಂಡಿದೆ, ಇನ್ನೂ ಕೇವಲ 11 ತಿಂಗಳು ಮಾತ್ರ ಉಳಿದಿದ್ದು, ಇನ್ನದರೂ ಸರಿಯಾದ ಸಭೆ ನಡೆಸಿ ಅಭಿವೃದ್ದಿಗೆ ಸಹಕರಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ರಾಜಶೇಖರ್, ರಾಜೇಶ್ವರಿ, ಪ್ರಮೀಳ, ಭಾಗ್ಯಮ್ಮ, ಸವಿತ, ಇಂದ್ರಮ್ಮ, ಅತಿಯಾಬೇಗಂ, ಕವಿತ ಇದ್ದರು.

ಸದಸ್ಯರ ಪಟ್ಟು

ನಿಗಧಿಯಾಗಿದ್ದ ಸಭೆಗೆ 10 ಸದಸ್ಯರು, ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಅಧ್ಯಕ್ಷರು ಉಪಾಧ್ಯಕ್ಷರು ಸುಮಾರು ಸಮಯ 12.30 ಆದರೂ ಸಭೆಗೆ ಬಂದಿರಲಿಲ್ಲ, ಸಭೆಯಲ್ಲಿ ಮೂರನೇ ಒಂದು ಭಾಗ ಸದಸ್ಯರು ಹಾಜರಾಗಿದ್ದು, ಸಭೆ ನಡೆಸಬೇಕೆಂದು ಸದಸ್ಯರ ಪಟ್ಟು ಹಿಡಿದರು. ಮುಖ್ಯಾಧಿಕಾರಿಗಳು ಅಧ್ಯಕ್ಷರನ್ನು ದೂರವಾಣಿಯ ಮೂಲಕ ಸಂಪರ್ಕಮಾಡಿ ಸಭೆ ನಡೆಸಲು ಸದಸ್ಯರು ಒತ್ತಾಯಿಸುವುದರ ಬಗ್ಗೆ ತಿಳಿಸಿದರು. ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳುತ್ತಿರುವುದರಿಂದ ಸಭೆಯನ್ನು ಮುಂದೂಡಬೇಕೆಂದು ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿಗಳು ಸಭೆ ಮುಂದೂಡಿರುವ ಬಗ್ಗೆ ಘೋಷಣೆ ಮಾಡಿದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!