Saturday, October 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಗಾಂಧೀಜಿ ಶಿಲ್ಪಗಳಿಗೆ ಜೀವ ತುಂಬಿದ ಕಲಾವಿದರಿಗೆ ಸನ್ಮಾನ

ಮಂಡ್ಯ ತಾಲ್ಲೂಕಿನ ಎಚ್.ಮಲ್ಲಿಗೆರೆಯ ‘ಗಾಂಧಿ ಗ್ರಾಮ’ದಲ್ಲಿ ಮಹಾತ್ಮ ಗಾಂಧೀಜಿ ಅವರ ವ್ಯಕ್ತಿ ವಿಚಾರ ಕುರಿತ ಸಿಮೆಂಟ್ ಶಿಲ್ಪ ನಿರ್ಮಾಣ ಶಿಬಿರದಲ್ಲಿ ಭಾಗವಹಿಸಿದ್ದ ಶಿಲ್ಪ ಕಲಾವಿದರನ್ನು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮತ್ತು ಬೆಂಗಳೂರಿನ ಗಾಂಧಿ ಭವನದ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು ಅವರು ಸನ್ಮಾನಿಸಿ ಗೌರವಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಮಂಡ್ಯದ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ (ರಿ), ಸಹಯೋಗದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿದ್ದ ಶಿಬಿರವು ಮಂಗಳವಾರ ಸಂಪನ್ನಗೊಂಡಿತು. ಕಲಾವಿದರು ಈ ಅವಧಿಯಲ್ಲಿ 30 ಶಿಲ್ಪಗಳಿಗೆ ಜೀವ ತುಂಬಿದರು.

ಶಿಲ್ಪಕಲಾವಿದರನ್ನು ಗೌರವಿಸಿದ ಬಳಿಕ ಮಾತನಾಡಿದ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅವರು, ‘ಶಿಲ್ಪಗಳಿಗೆ ಭಾವ ಮತ್ತು ಜೀವವನ್ನು ತುಂಬಿರುವ ಕಲಾವಿದರ ಕಾರ್ಯ ಸ್ತುತ್ಯಾರ್ಹ. ತನ್ಮಯತೆ, ಏಕಾಗ್ರತೆ, ಕುಶಲತೆ ಮತ್ತು ಶಾಂತ ಮನಸ್ಥಿತಿಯಿಂದ ಕೆಲಸ ಮಾಡಿದ್ದರಿಂದಲೇ ಶಿಲ್ಪಗಳಲ್ಲಿ ಜೀವಂತಿಕೆ ಇದೆ. ಈ ಸ್ಥಳಕ್ಕೆ ಜೀವಕಳೆ ಬಂದಿದೆ. ಶಿಲ್ಪಗಳಂತೆಯೇ ಕಲಾವಿದರ ಹೆಸರು ಕೂಡ ನೂರಾರು ಕಾಲ ಉಳಿಯಲಿದೆ’ ಎಂದು ಶ್ಲಾಘಿಸಿದರು.

ನಿತ್ಯವೂ ಪ್ರಾತಃಸ್ಮರಣೀಯರೂ ಆದ ಗಾಂಧೀಜಿ ಅವರ ಜೀವನ ಸಂದೇಶ ಸಾರುವ ‘ಗಾಂಧಿ ಗ್ರಾಮ’ದ ನಿರ್ಮಾಣಕ್ಕಾಗಿ ಜಿ.ಮಾದೇಗೌಡರು ಸಾಕಷ್ಟು ಶ್ರಮಿಸಿದ್ದರು. ಗೌಡರು ಯೋಜಿಸಿದ್ದಂತೆಯೇ ‘ಗಾಂಧಿ ಗ್ರಾಮ’ ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ, ‘ದುಡಿಮೆಯೇ ದೇವರು’ ಎನ್ನುವಂತಹದ್ದು ಸೇರಿದಂತೆ ಎಲ್ಲಾ ಆಯಾಮಗಳನ್ನು ಪೂರೈಸುವಂತೆ ಮಾದರಿಯಾಗಿ, ಪವಿತ್ರ ತಾಣವಾಗಿ ರೂಪುಗೊಳ್ಳಲಿ ಎಂದು ಹೇಳಿದರು.

ಕರ್ನಾಟಕ ಸರ್ಕಾರದ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ-2024’ಕ್ಕೆ ಭಾಜನರಾಗಿರುವ ಬೆಂಗಳೂರಿನ ಗಾಂಧಿ ಭವನದ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರೊ.ಜಿ.ಬಿ.ಶಿವರಾಜು ಅವರು, ‘ಇಂದಿನ ಹಲವಾರು ಬಿಕ್ಕಟ್ಟುಗಳು, ವಿಷಮ ಪರಿಸ್ಥಿತಿಯಲ್ಲಿ ಮಧ್ಯೆ ಬದುಕುತ್ತಿರುವ ನಾವು ಗಾಂಧೀಜಿ ಅವರ ಜೀವನ ಸಂದೇಶವನ್ನು ಅನುಸರಿಸಬೇಕಿದೆ. ಎಲ್ಲರ ಮನಮನಗಳಿಗೆ ಮನೆಮನೆಗಳಿಗೆ ಬಾಪು ಸಂದೇಶವನ್ನು ತಲುಪಿಸಬೇಕಿದೆ ಎಂದು ಹೇಳಿದರು.

ಶಿಬಿರದಲ್ಲಿ ನಿರ್ಮಿಸಲ್ಪಟ್ಟ ಗಾಂಧೀಜಿ ಅವರ ಒಂದು ಪುತ್ಥಳಿಯನ್ನು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರಾದ ಶಿಲ್ಪಿ ಎಂ.ಸಿ.ರಮೇಶ್ ಅವರಿಗೆ ಶಾಸಕ ಹಾಗೂ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಮಧು ಜಿ.ಮಾದೇಗೌಡ ಹಸ್ತಾಂತರಿಸಿದರು. ಶಿಬಿರದ ನಿರ್ದೇಶಕ ಕೆ.ನಾರಾಯಣರಾವ್ ಮತ್ತು ಶಿಬಿರದ ಸಂಚಾಲಕ ವೈ.ಕುಮಾರ್ ಹಾಜರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್, ಎಚ್.ಮಲ್ಲಿಗೆರೆ ಗ್ರಾಪಂ ಅಧ್ಯಕ್ಷ ಎಚ್.ಕೆ.ವಿನಯ್, ಉಪಾಧ್ಯಕ್ಷೆ ಬಿ.ಜೆ.ಭಾಗ್ಯಮ್ಮ, ಜಿಪಂ ಮಾಜಿ ಸದಸ್ಯ ಸಿ.ಮಾದಪ್ಪ, ಮಾಜಿ ಅಧ್ಯಕ್ಷ ಎಂ.ರಮೇಶ್, ಪಿಡಿಓ ಕೆ.ವೈ.ಪವಿತ್ರಾ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!