Friday, September 20, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ಜಿಲ್ಲೆಯ ಜನರ ಸಹಕಾರ ಮುಖ್ಯ

2023 ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಬೇಕೆಂಬುದು ಯಡಿಯೂರಪ್ಪನವರ ಶಪಥವಾಗಿದ್ದು, ಇದಕ್ಕೆ ಮಂಡ್ಯ ಜಿಲ್ಲೆಯ ಜನರ ಸಹಕಾರ ಅತಿಮುಖ್ಯ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು.

ಮಂಡ್ಯ ನಗರದ ಹೊರವಲಯದಲ್ಲಿರುವ ಅಮರಾವತಿ ಹೋಟೆಲ್‌ನಲ್ಲಿ ನಡೆದ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರ ಗೆಲ್ಲುವಂತೆ ಆಗಬೇಕು. ಅದಕ್ಕೆ ಪೂರಕವಾಗಿ ಪದವೀಧರರ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಬೇಕು. ಯಡಿ ಯೂರಪ್ಪ ಅವರ ಜನ್ಮ ಭೂಮಿ, ಕರ್ಮ ಭೂಮಿ ಮಂಡ್ಯ. ಇಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದರು.

ಇನ್ನು ಕಾಂಗ್ರೆಸ್-ಜೆಡಿಎಸ್ ಪಕ್ಷದ ಅಧಿಕಾರದ ಹಪಾಹಪಿಯಿಂದ ಮೈತ್ರಿ ಸರ್ಕಾರ ಬಂತು. ಸರ್ಕಾರದಲ್ಲಿ ಗೊಂದಲ ಸೃಷ್ಟಿಯಾದ ಕಾರಣ ಬಿಜೆಪಿ ಅಧಿಕಾರಕ್ಕೆ ಬಂತು. ಅಂದು ನಾರಾಯಣಗೌಡರ ಸ್ಥಾನದಲ್ಲಿ ನಾನಿದ್ದರೂ ರಾಜೀನಾಮೆ ಕೊಡುತ್ತಿರಲಿಲ್ಲ.ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿಟ್ಟು ನಾರಾಯಣಗೌಡರು ರಾಜೀನಾಮೆ ಕೊಟ್ಟು ಬಂದು ಸಚಿವರಾದರು ಎಂದರು.

ಕೆ.ಆರ್. ಪೇಟೆಯಲ್ಲಿ ಬಿಜೆಪಿ ಗೆಲ್ಲುವ ಭರವಸೆ ಯಾರಲ್ಲೂ ಇರಲಿಲ್ಲ. ಕೊನೆ ಕ್ಷಣದವರೆಗೂ ಹೋರಾಟ ಮಾಡಿದೆವು. ಜೆಡಿಎಸ್ ಭದ್ರಕೋಟೆಯಲ್ಲೂ ಕಮಲ ಅರಳಿಸಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿದರೆ ಯಶಸ್ಸು ಸಾಧ್ಯ ಎನ್ನುವುದಕ್ಕೆ ಇದು ಸಾಕ್ಷಿ ಎಂದರು.

ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ರವಿಶಂಕರ್ ಅವರನ್ನು ಗೆಲ್ಲಿಸಿ ಕೊಳ್ಳುವುದು ಅಸಾಧ್ಯವೇನಲ್ಲ. ಎಲ್ಲರೂ ಒಂದಾಗಿ ಚುನಾವಣೆ ಎದುರಿಸಿ ಎಂದು ಕರೆ ನೀಡಿದರು.

ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ರವಿಶಂಕರ್‌ರವರನ್ನು ಬಹು ಮತದಿಂದ ಗೆಲ್ಲಿಸಿದರೆ ಮಂಡ್ಯ ಜಿಲ್ಲೆಯಲ್ಲಿ ನಮಗೆ ಮತ್ತಷ್ಟು ಶಕ್ತಿ ಬರುತ್ತೆ. ನಾವು ಮಾಡಿರುವ ಅಭಿವೃದ್ಧಿ ಕೆಲಸವನ್ನ ಎಲ್ಲರಿಗೂ ತಿಳಿಸಬೇಕು. ಮಂಡ್ಯಕ್ಕೆ ಎರಡೂ ಪಕ್ಷದಿಂದ ದೊಡ್ಡ ಕೊಡುಗೆ ಏನು ಇಲ್ಲ.ಯಡಿಯೂರಪ್ಪ ಅವರು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಜಿಲ್ಲೆಯಲ್ಲೂ 5 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್,ಬಿಜೆಪಿ ನಾಯಕರಾದ ಚಂದಗಾಲು ಶಿವಣ್ಣ,ಲಕ್ಷ್ಮಿ ಅಶ್ವಿನ್ ಗೌಡ,ಸಿದ್ದರಾಮಯ್ಯ,ನಾಗಣ್ಣಗೌಡ,ಬಿ.ಸೋಮಶೇಖರ್ ಮತ್ತಿತರರಿದ್ದರು.

ಅದ್ದೂರಿ ಸ್ವಾಗತ

ಮಂಡ್ಯಕ್ಕೆ ಆಗಮಿಸಿದ ಬಿ.ವೈ.ವಿಜಯೇಂದ್ರಗೆ ಭಾರಿ ಗಾತ್ರದ ಹೂವು ಹಾಗೂ ಸೇಬಿನ ಹಾರ ಹಾಕಿ ಅದ್ದೂರಿ ಸ್ವಾಗತ ಕೋರಲಾಯಿತು.

ವಿಜಯೇಂದ್ರಗೆ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಮತ್ತಿತರರು ಸಾಥ್ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!