Friday, October 18, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರು ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ 34 ವರ್ಷದ ಮಹಿಳೆಯೊಬ್ಬರು ಮಂಗಳವಾರ ಬೆಂಗಳೂರಿನ ಸಂಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ವಿನಯ್ ಕುಲಕರ್ಣಿಯನ್ನು ಆರೋಪಿ 1 (A1) ಮತ್ತು ಅವರ ಆಪ್ತ ಸಹಾಯಕ ಅರ್ಜುನ್ ಅನ್ನು ಆರೋಪಿ 2 (A2) ಎಂದು ಹೆಸರಿಸಿ ಎಫ್‌ಐಆರ್ ದಾಖಲಿಸಿದ್ದಾರೆ.

ಸಂತ್ರಸ್ತ ಮಹಿಳೆ 2022 ರಲ್ಲಿ ಶಾಸಕರನ್ನು ಭೇಟಿಯಾಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶಾಸಕರು ರೈತರೊಬ್ಬರಿಂದ ಅವರ ಫೋನ್ ಸಂಖ್ಯೆಯನ್ನು ಪಡೆದುಕೊಂಡು, ರಾತ್ರಿಯೂ ಸಹ ಅವರಿಗೆ ಕರೆ ಮಾಡಲು ಪ್ರಾರಂಭಿಸಿದ್ದರು ಎಂದು ದೂರಲಾಗಿದೆ.

ಕಾಂಗ್ರೆಸ್ ಶಾಸಕ ಕೆಲವು ತಿಂಗಳ ನಂತರ, ಶಾಸಕ ಬೆತ್ತಲೆಯಾಗಿ ವೀಡಿಯೊ ಕರೆ ಮಾಡಿ ಹೆಬ್ಬಾಳದಲ್ಲಿರುವ ತನ್ನ ಮನೆಗೆ ಹೋಗುವಂತೆ ಒತ್ತಾಯಿಸಿದ್ದು, ಇದಕ್ಕೆ ಮಹಿಳೆ ನಿರಾಕರಿಸಿದ್ದರು. ಆಗ ರೌಡಿಗಳ ತಂಡವೊಂದು ಶಾಸಕರ ಮನೆಗೆ ಹೋಗದಿದ್ದಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾಗಿ ದೂರು ದಾಖಲಾಗಿದೆ.

ಏಪ್ರಿಲ್‌ ವೇಳೆ ಶಾಸಕ ಮಹಿಳೆಯನ್ನು ಬೆಳಗಾವಿಗೆ ಕರೆದಿದ್ದು, ಅಲ್ಲಿ ಅವರು ಅವರನ್ನು ತಬ್ಬಿ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದರು. ಈ ವೇಳೆ ಅಲ್ಲಿಗೆ ಬೇರೆ ಜನರು ಬಂದಾಗ ಶಾಸಕ ಕುಲಕರ್ಣಿ ಅವರು ಮಹಿಳೆಯನ್ನು ತೆರಳಲು ಬಿಟ್ಟಿದ್ದರು ಎಂದು ದೂರಲಾಗಿದೆ ಎಂದು ವರದಿಯಾಗಿದೆ.

ಆಗಸ್ಟ್ 24 ರಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ತೆರಳಿದಾಗ ಕೂಡಾ ಶಾಸಕ ಕುಲಕರ್ಣಿ ಅವರು ಮಹಿಳೆಗೆ ಮನೆಗೆ ಬರುವಂತೆ ಒತ್ತಾಯಿಸಿದ್ದರು. ಈ ವೇಳೆ ಮಹಿಳೆ ಆಟೋರಿಕ್ಷಾ ಹಿಡಿದು ಅವರ ಮನೆಗೆ ಹೋಗಿದ್ದರು. ಇದರ ನಂತರ, ಶಾಸಕ ಕುಲಕರ್ಣಿ ಅವರು ಮಹಿಳೆಯನ್ನು ದೇವನಹಳ್ಳಿ ವಿಮಾನ ನಿಲ್ದಾಣದ ಬಳಿಯ ಐವಿಸಿ ರಸ್ತೆಯಲ್ಲಿರುವ ಮನೆಗೆ ಕರೆದೊಯ್ದು ಮೇಲೆ ಅತ್ಯಾಚಾರ ಎಂದು ಆರೋಪಿಸಲಾಗಿದೆ.

ಅವರು ಮತ್ತೆ ಸೆಪ್ಟೆಂಬರ್ 2022 ರಲ್ಲಿ ಹಾವೇರಿಯಲ್ಲಿ ಭೇಟಿಯಾಗಿದ್ದು, ಇದರ ನಂತರ ಮಹಿಳೆ ಮತ್ತು ಶಾಸಕನ ನಡುವಿನ ಫೋನ್ ಸಂಭಾಷಣೆ ಲೀಕ್ ಆಗಿದೆ ಎಂದು ಆರೋಪಿಸಿ ಮಹಿಳೆಗೆ ಶಾಸಕ ಕುಲಕರ್ಣಿ ಅವರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಅಕ್ಟೋಬರ್ 2 ರಂದು ಅವರು ಧರ್ಮಸ್ಥಳದ ಬಳಿಯ ಸ್ಥಳವೊಂದಕ್ಕೆ ಕರೆದೊಯ್ದು, ಅಲ್ಲಿ ಶಾಸಕ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದರು. ಮರುದಿನ ಅವರು ಅಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ. ಧರ್ಮಸ್ಥಳದಲ್ಲಿದ್ದಾಗ ತಮ್ಮ ಸಂಬಂಧವನ್ನು ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದಾರೆ ಎಂದು ವರದಿ ಹೇಳಿದೆ.

ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506, 504, 201, 366, 376, 323, 354 ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!