Friday, October 18, 2024

ಪ್ರಾಯೋಗಿಕ ಆವೃತ್ತಿ

ಕೇಂದ್ರ ಸರ್ಕಾರದ ತೆರಿಗೆ ಅನ್ಯಾಯ| ಕನ್ನಡಿಗರೆಲ್ಲ ದನಿಯೆತ್ತಬೇಕೆಂದು ಕರೆ ನೀಡಿದ ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ತೆರಿಗೆ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿರುವ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಹೋರಾಟ ನಡೆಸುವಂತೆ ರಾಜ್ಯದ ಜನತೆಗೆ  ಕರೆ ನೀಡಿದ್ದಾರೆ.

ಈ ವಿಚಾರವಾಗಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಆ ಮೂಲಕ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ.

ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಕನ್ನಡಿಗರೆಲ್ಲರೂ ದನಿ ಎತ್ತಬೇಕಾಗಿದೆ. ಕೇಂದ್ರದ ಎನ್​​ಡಿಎ ಸರ್ಕಾರ ಕರ್ನಾಟಕ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಮಾಡುತ್ತಾ ಬಂದಿರುವ ಅನ್ಯಾಯಕ್ಕೆ ಇತ್ತೀಚಿನ ತೆರಿಗೆ ಪಾಲಿನ ಹಂಚಿಕೆಯ ವಿವರಗಳೇ ಸಾಕ್ಷಿ ಎಂದು ಹೇಳಿರುವ ಸಿದ್ದರಾಮಯ್ಯ, ಅದಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನೂ ಉಲ್ಲೇಖಿಸಿದ್ದಾರೆ.

ಕರ್ನಾಟಕಕ್ಕೆ ಕೇವಲ 6,498 ಕೋಟಿ

28 ರಾಜ್ಯಗಳಿಗೆ ಒಟ್ಟು 1,78,193 ಕೋಟಿ ರೂಪಾಯಿ ಬಿಡುಗಡೆಗೊಳಿಸಿರುವ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ನೀಡಿರುವುದು ಕೇವಲ 6,498 ಕೋಟಿ ರೂಪಾಯಿ. ಈ ಅನ್ಯಾಯದ ವಿರುದ್ಧ ಜಾತಿ-ಧರ್ಮ, ಪಕ್ಷ – ಪಂಥದ ಭೇದವಿಲ್ಲದೆ ದನಿ ಎತ್ತುವ ಶಪಥವನ್ನು ಪ್ರತಿಯೊಬ್ಬ ಕನ್ನಡಿಗನೂ ಮಾಡಬೇಕಾಗಿದೆ. ಇಂತಹದ್ದೊಂದು ಪ್ರಮಾಣ ವಚನ ಸ್ವೀಕಾರಕ್ಕೆ ಅನ್ಯಾಯದ ವಿರುದ್ಧ ನ್ಯಾಯದ ಗೆಲುವಿನ ಸಂಕೇತವಾದ ವಿಜಯದಶಮಿಯ ಶುಭ ದಿನ ಸಾಕ್ಷಿಯಾಗಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕವನ್ನು ಕಡೆಗಣಿಸುವಂತಹ ಅನ್ಯಾಯವನ್ನು ನಾವೇನು ಮಾಡಿದ್ದೇವೆ? ಎಂದು ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗನೂ ಕೇಂದ್ರ ಸರ್ಕಾರವನ್ನು ಕೇಳಬೇಕಾಗಿದೆ. ಬಿಮಾರು ರಾಜ್ಯಗಳೆಂದೇ ಕುಖ್ಯಾತಿ ಪಡೆದಿರುವ ರಾಜ್ಯಗಳಾದ ಉತ್ತರಪ್ರದೇಶಕ್ಕೆ 31,962 ಕೋಟಿ ರೂ, ಬಿಹಾರಕ್ಕೆ 17,921 ಕೋಟಿ ರೂ, ಮಧ್ಯಪ್ರದೇಶಕ್ಕೆ 13,987 ಕೋಟಿ ರೂ. ಮತ್ತು ರಾಜಸ್ಥಾನಕ್ಕೆ 10,737 ಕೋಟಿ ರೂಪಾಯಿಯಷ್ಟು ತೆರಿಗೆ ಪಾಲನ್ನು ನೀಡಲಾಗಿದೆ. ದುರಾಡಳಿತ ಮತ್ತು ಭ್ರಷ್ಟಾಚಾರದಿಂದಾಗಿ ಅಭಿವೃದ್ಧಿ ಪಥದಲ್ಲಿ ಹಿಮ್ಮುಖವಾಗಿ ಸಾಗುತ್ತಿರುವ ಈ ರಾಜ್ಯಗಳಿಗಾಗಿ ಕನ್ನಡಿಗನ ಬೆವರ ಗಳಿಕೆ ಯಾಕೆ ಪೋಲಾಗಬೇಕು ಎನ್ನುವುದು ನಮ್ಮ ಪ್ರಶ್ನೆಯಾಗಿದೆ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆ ಹಣದಲ್ಲಿ ಉತ್ತರಪ್ರದೇಶಕ್ಕೆ ಶೇ 17.93, ಬಿಹಾರಕ್ಕೆ 10.05, ರಾಜದ್ಥಾನಕ್ಕೆ 6.02 ಮತ್ತು ಮಧ್ಯಪ್ರದೇಶಕ್ಕೆ 7.85ರಷ್ಟು ಪಾಲು ನೀಡಿದರೆ, ಕರ್ನಾಟಕಕ್ಕೆ ನೀಡುತ್ತಿರುವ ತೆರಿಗೆ ಪಾಲು ಕೇವಲ ಶೇ 3.6. ತೆರಿಗೆ ಹಂಚಿಕೆಗಾಗಿ ನಿಗದಿ ಪಡಿಸಲಾಗಿರುವ ಮಾನದಂಡದಲ್ಲಿಯೇ ಕೇಂದ್ರ ಸರ್ಕಾರದ ಪ್ರಗತಿ ವಿರೋಧಿ ಧೋರಣೆ ಸ್ಪಷ್ಟವಾಗಿದೆ. ಅಭಿವೃದ್ಧಿಶೀಲ ರಾಜ್ಯವನ್ನು ಶಿಕ್ಷಿಸಿ, ದುರಾಡಳಿತ ನಡೆಸುತ್ತಿರುವ ರಾಜ್ಯಗಳನ್ನು ಪುರಸ್ಕರಿಸುವ ತೆರಿಗೆ ಹಂಚಿಕೆ ಮಾನದಂಡವನ್ನೇ ಬದಲಾಯಿಸಬೇಕೆಂದು ನಾವು ಒತ್ತಾಯಿಸುತ್ತಲೇ ಬಂದಿದ್ದರೂ ಕೇಂದ್ರ ಸರ್ಕಾರ ಕಿವುಡಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

14 ನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲು ಶೇ 4.713 ಎಂದು ನಿಗದಿಪಡಿಸಿತ್ತು. ಈಗಿನ 15ನೇ ಹಣಕಾಸು ಆಯೋಗ ಈ ಪಾಲನ್ನು ಕಡಿಮೆಗೊಳಿಸಿ ಶೇ 3.647ಕ್ಕೆ ಇಳಿಸಿತು. ಇದರಿಂದ 2021-26 ರವರೆಗಿನ ಐದು ವರ್ಷಗಳಲ್ಲಿ ತೆರಿಗೆ ಪಾಲಿನಲ್ಲಿ ಅಂದಾಜು 62,275 ಕೋಟಿ ರೂಪಾಯಿಯನ್ನು ಕರ್ನಾಟಕ ಕಳೆದುಕೊಂಡಿದೆ. ಈ ಅನ್ಯಾಯವನ್ನು ಪರಿಗಣಿಸಿದ್ದ ಹಣಕಾಸು ಆಯೋಗ ವಿಶೇಷ ಅನುದಾನದ ರೂಪದಲ್ಲಿ 5,495 ಕೋಟಿ ರೂ. ನೀಡುವಂತೆ ಶಿಫಾರಸು ಮಾಡಿತ್ತು. ಇದನ್ನು ಕೂಡಾ ಕೇಂದ್ರ ಸರ್ಕಾರ ನೀಡದೆ ಅನ್ಯಾಯ ಎಸಗಿದೆ. ಈ ಎಲ್ಲ ನಷ್ಟಗಳನ್ನು ಸೇರಿಸಿದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯಕ್ಕೆ 79,770 ಕೋಟಿ ರೂ. ನಷ್ಟವಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ಕರ್ನಾಟಕಕ್ಕೆ ಹಿಂದಿರುಗಿ ಬರುತ್ತಿರುವುದು 15 ಪೈಸೆ ಮಾತ್ರ

ದೇಶದ ಒಟ್ಟು ತೆರಿಗೆ ಸಂಗ್ರಹಕ್ಕೆ ಕರ್ನಾಟಕ ರೂ.4 ಲಕ್ಷ ಕೋಟಿ ರೂಪಾಯಿಗಳನ್ನು ನೀಡುತ್ತಿದ್ದರೂ ತೆರಿಗೆ ಹಂಚಿಕೆ ರೂಪದಲ್ಲಿ ನಮಗೆ ಸಿಗುತ್ತಿರುವ ಪಾಲು ರೂ.45,000 ಕೋಟಿ ಮಾತ್ರ. ಇದರ ಜೊತೆಗೆ ಅನುದಾನದ ರೂಪದಲ್ಲಿ ಅಂದಾಜು ₹15,000 ಕೋಟಿ ಸೇರಿರುತ್ತದೆ. ಇವೆಲ್ಲ ಕೂಡಿದರೆ ಕರ್ನಾಟಕಕ್ಕೆ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ನೀಡುತ್ತಿರುವ ಪ್ರತಿಯೊಂದು ರೂಪಾಯಿಗೆ ಹಿಂದಿರುಗಿ ಬರುತ್ತಿರುವುದು ಕೇವಲ 15 ಪೈಸೆ ಮಾತ್ರ. ಈ ಅನ್ಯಾಯವನ್ನು ಎಷ್ಟು ದಿನ ಸಹಿಸಿಕೊಂಡಿರಲು ಸಾಧ್ಯ? ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಬಜೆಟ್‌ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

2018-19ರಲ್ಲಿ ಕೇಂದ್ರ ಬಜೆಟ್‌ ಗಾತ್ರ ರೂ. ₹24,42,213 ಕೋಟಿ ಇತ್ತು. ಆಗ ಕೇಂದ್ರದಿಂದ ರಾಜ್ಯಕ್ಕೆ ದೊರೆಯುತ್ತಿದ್ದ ತೆರಿಗೆ ಪಾಲು ರೂ.35,895 ಕೋಟಿ ಹಾಗೂ ರೂ.16,082 ಕೋಟಿ ಸೇರಿ ಒಟ್ಟು ರೂ.46,288 ಕೋಟಿ ಲಭ್ಯವಾಗಿತ್ತು. 2024-25ರಲ್ಲಿ ಕೇಂದ್ರದ ಬಜೆಟ್‌ ಗಾತ್ರ ರೂ.48,20,514 ಕೋಟಿಗೆ ಏರಿಕೆಯಾಗಿದೆ. ಆದರೆ 2024-25ರ ಸಾಲಿನಲ್ಲಿ ಕರ್ನಾಟಕಕ್ಕೆ ನಿಗದಿ ಪಡಿಸಿರುವ ತೆರಿಗೆ ಪಾಲು ರೂ.44,485 ಕೋಟಿ. ಅಂದಾಜು ಅನುದಾನ ರೂ.15,299 ಕೋಟಿ. ಈ ರೀತಿ ತೆರಿಗೆ ಪಾಲು ಮತ್ತು ಅನುದಾನಗಳೆರಡೂ ಸೇರಿ ಕೇಂದ್ರದಿಂದ ರಾಜ್ಯಕ್ಕೆ ಸಿಗಲಿರುವ ಒಟ್ಟು ಹಣ ರೂ,59,784 ಕೋಟಿ ಮಾತ್ರ. ಅಂದರೆ ಕಳೆದ 8 ವರ್ಷಗಳ ಅವಧಿಯಲ್ಲಿ ಬಜೆಟ್ ಗಾತ್ರ ದುಪ್ಪಟ್ಟಿಗಿಂತ ಹೆಚ್ಚಾದರೂ ಕರ್ನಾಟಕಕ್ಕೆ ಸಿಗುವ ಕೇಂದ್ರದ ತೆರಿಗೆ ಪಾಲಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸಕ್ತ ಬಜೆಟ್‌ ಗಾತ್ರದ ಹೋಲಿಕೆಯಲ್ಲಿ ಕರ್ನಾಟಕಕ್ಕೆ ವಾರ್ಷಿಕ ಕನಿಷ್ಠ ರೂ.1 ಲಕ್ಷ ಕೋಟಿಯಷ್ಟು ಹಣ ತೆರಿಗೆಯ ಪಾಲು ಹಾಗೂ ಅನುದಾನದ ಮುಖೇನ ದೊರೆಯಬೇಕಿತ್ತು, ಆದರೆ ದೊರೆತಿಲ್ಲ ಎಂದು ಕಿಡಿಕಾರಿದ್ಧಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!