Thursday, October 10, 2024

ಪ್ರಾಯೋಗಿಕ ಆವೃತ್ತಿ

ರಸಗೊಬ್ಬರ ಸಬ್ಸಿಡಿ ಹಣ ರೈತರಿಗೆ ಕೊಡಿ

ಕೇಂದ್ರ ಸರ್ಕಾರ ರಸಗೊಬ್ಬರ ಕಂಪನಿಗಳಿಗೆ ನೀಡುವ ಸಬ್ಸಿಡಿ ಹಣವನ್ನು ನಿಲ್ಲಿಸಿ,ಅದೇ ಹಣವನ್ನು ರೈತರ ಖಾತೆಗಳಿಗೆ ಹಾಕಿದರೆ ಅವರು ಸಾವಯವ ಕೃಷಿಯತ್ತ ಒಲವು ತೋರುತ್ತಾರೆಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಗೂ ನೈಸರ್ಗಿಕ ಕೃಷಿಕ ಹಾಡ್ಯ ರಮೇಶ್ ರಾಜು ಆಗ್ರಹಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಸಗೊಬ್ಬರಗಳ ಸಹಾಯಧನವನ್ನು ಹೆಚ್ಚಿಸಲು ಹೊರಟಿದೆ. ಇದರಿಂದಾಗಿ ದೇಶಕ್ಕೆ ಇನ್ನಷ್ಟು ಹೊರೆಯಾಗುತ್ತಿದ್ದು, ರಾಸಾಯನಿಕ ಗೊಬ್ಬರಗಳ ಕಂಪನಿಗೆ ಹಾಲು-ಅನ್ನ ಉಂಡಂತಾಗಿದೆ ಎಂದರು.

ಒಂದು ಎಕರೆ ಕಬ್ಬಿನ ಬೆಳೆಗೆ 20 ಚೀಲ ರಸಗೊಬ್ಬರವನ್ನು ರೈತ ಇಂದು ಬಳಸುತ್ತಿದ್ದಾನೆ. 20 ಚೀಲಕ್ಕೆ ಸರಾಸರಿ 40 ಸಾವಿರದಿಂದ 50 ಸಾವಿರ ರೂ. ಹಣ ರೈತರ ಹಸರಿನಲ್ಲಿ ಕಂಪನಿಗಳ ಪಾಲಾಗುತ್ತಿದೆ.ಇದರ ಬದಲು ರೈತನಿಗೆ ಸಹಾಯಧನ ರೂಪದಲ್ಲಿ ಹಣವನ್ನು ನೀಡಿದರೆ ಆತ ಬೇಕಾಬಿಟ್ಟಿ ಖರ್ಚು ಮಾಡಲು ಹಿಂಜರಿಯುತ್ತಾನೆ. ದುಬಾರಿ ರಸಗೊಬ್ಬರದ ಬದಲಾಗಿ ನೈಸರ್ಗಿಕ ಕೃಷಿಗೆ ಕ್ರಮೇಣ ಆಕರ್ಷಿತನಾಗುತ್ತಾನೆ ಎಂದರು.

ಇದರಿಂದ ಸಮಾಜಕ್ಕೆ ವಿಷಮುಕ್ತ ಆಹಾರ ಸಿಕ್ಕಂತಾಗುತ್ತದೆ. ರಸಗೊಬ್ಬರಗಳ ಸಹಾಯಧನ ಕಂಪನಿಗಳ ಪಾಲಾಗದಂತೆ ದೇಶಕ್ಕೆ ಉಳಿದು ವಿದೇಶಿ ವಿನಿಮಯ ಉಳಿದಂತಾಗುತ್ತದೆ ಎಂದರು.

ಇದೇ ಹಣವನ್ನು ನೈಸರ್ಗಿಕ ಕೃಷಿಗೆ ಬೇಕಾದ ದೇಶಿ ತಳಿ ಗೋವುಗಳನ್ನು ಕೊಳ್ಳಲು ರೈತನಿಗೆ ಸಹಾಯಧನವಾಗಿ ಕೊಡಬಹುದು. ಹಾಗೂ ಗೋಶಾಲೆಗಳ ಅಭಿವೃದ್ಧಿಗೆ ಬಳಸಬಹುದು ಎಂದು ಸಲಹೆ ನೀಡಿದರು.

ಎಲ್ಲಿ ದೇಶಿ ಗೋವುಗಳ ಸಂಖ್ಯೆ ಹಚ್ಚಾಗುವುದೋ ಅಲ್ಲಿ ಒಳ್ಳೆಯ ಪರಿಸರ, ಒಳ್ಳೆಯ ಗಾಳಿ, ಮತ್ತು ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಕಳೆದ 20 ವರ್ಷಗಳಿಂದ ರಾಜ್ಯದಲ್ಲಿ ಸಾವಿರಾರು ರೈತರು ನೈಸರ್ಗಿಕ ಕೃಷಿಯಿಂದ ಭತ್ತ, ಕಬ್ಬು, ಬಾಳೆ, ರಾಗಿ ಹಾಗೂ ತೋಟಗಾರಿಕಾ ಬೆಳೆಗಳು, ವಾಣಿಜ್ಯ ಬೆಳೆಗಳು ಸೇರಿದಂತೆ ಎಲ್ಲಾ ತರಹದ ಕೃಷಿ ಉತ್ಪನ್ನಗಳಿಗೆ ಯಾವುದೇ ರಸಗೊಬ್ಬರ, ಕಳೆನಾಶಕ ಕೀಟನಾಶಕಗಳನ್ನು ಬಳಸದೆ ಹೆಚ್ಚಿನ ಇಳುವರಿಯನ್ನು ಪಡೆಯುತ್ತಿದ್ದಾರೆ ಎಂದರು.

ಸಾವಯವ ಕೃಷಿ ಉತ್ತೇಜಿಸುವ ಸಂಬಂಧ ಭಾರತೀಯ ಕಿಸಾನ್ ಸಂಘದಿಂದ ದಕ್ಷಿಣ ಕರ್ನಾಟಕ ಉತ್ತರ ಕರ್ನಾಟಕದಲ್ಲಿ ಜೂ.18 ಹಾಗೂ 19 ರಂದು ದಾವಣಗೆರೆಯಲ್ಲಿ ಮೊದಲ ಹಂತವಾಗಿ ಹೋರಾಟ ರೂಪಿಸಲಾಗುವುದು. ನಂತರದಲ್ಲಿ ದೇಶವ್ಯಾಪಿ ವಿಸ್ತರಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ವಕ್ತಾರ ಗಾಣದಾಳು ನರಸಿಂಹನ್, ನಿರ್ಮಲ, ಪುಟ್ಟಮ್ಮ, ಅನಿಲ್ ಕುಮಾರ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!