Saturday, October 19, 2024

ಪ್ರಾಯೋಗಿಕ ಆವೃತ್ತಿ

ಪಾಂಡವಪುರ| ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

ಸಾಲ ಭಾದೆಯಿಂದಾಗಿ ರೈತನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಾಂಡವಪುರ ತಾಲೂಕಿನ ಅತ್ತಿಗಾನಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಗ್ರಾಮದ ನಿವಾಸಿ ಬಿ.ಕೃಷ್ಣ (40) ಎಂಬಾತನೇ ಆತ್ಯಹತ್ಯೆಗೆ ಶರಣಾಗಿರುವ ರೈತ.

ಆತ್ಮಹತ್ಯೆ ಮಾಡಿಕೊಂಡಿರುವ ರೈತ ಕೃಷ್ಣ ಅವರಿಗೆ ಭಾವನಾ ಹಾಗೂ ಧನುಷ್ ಎಂಬ ಇಬ್ಬರು ಮಕ್ಕಳಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆಯೇ ಜಮೀನುಗಳನ್ನು ಹಂಚಿಕೆ ಮಾಡಿದ್ದು ಕೃಷ್ಣನ ಪಾಲಿಗೆ ಬಂದಿರುವ ಜಮೀನಿನ ಜತೆಗೆ ಹೆಂಡತಿಯ ತಾಯಿ ಮನೆ ಹಳೇಬಿಡು ಗ್ರಾಮದ ಸರ್ವೆ ನಂ.31/4 ರಲ್ಲಿ, ಒಂದು ಎಕರೆ ಹತ್ತು ಗುಂಟೆ ಜಮೀನನ್ನು ಕೃಷ್ಣನ ಹೆಸರಿಗೆ ಮಾಡಿಕೊಟ್ಟಿದ್ದು ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದ. ಹೆಂಡತಿ ತಾಯಿ ಮನೆಯ ಎಲ್ಲ ವ್ಯವಹಾರಗಳನ್ನು ಆತನೇ ನೋಡಿಕೊಳ್ಳುತ್ತಿದ್ದನು. ಈ ಜಮೀನುಗಳಲ್ಲಿ ಬಹಳ ವರ್ಷಗಳಿಂದ ತರಕಾರಿ ಬೆಳೆ ಮತ್ತು ಇತರೆ ವ್ಯವಸಾಯವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.

ಈ ಮಧ್ಯೆ ಬೇಸಾಯಕ್ಕೆಂದು ಸುಂಕಾತೊಣ್ಣೂರು ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಎರಡು ಲಕ್ಷದ ನಲವತ್ತನಾಲ್ಕು ಸಾವಿರ ರೂಪಾಯಿಗಳನ್ನು ಸಾಲ ಪಡೆದಿದ್ದನು. ಇದಲ್ಲದೆ ಸಂಬಂಧಿಕರು ಮತ್ತು ಸ್ನೇಹಿತರ ಬಳಿ ಕೈ ಸಾಲ ಸೇರಿ ಸುಮಾರು ಹತ್ತು ಲಕ್ಷದವರೆಗೆ ಸಾಲ ಮಾಡಿದ್ದ. ಜಮೀನಿನಲ್ಲಿ ಬೆಳೆದ ಬೆಳೆ ಸರಿಯಾಗಿ ಕೈ ಸೇರದೆ ಮತ್ತು ಬೆಲೆ ಸಿಗದೆ ಸಾಲವನ್ನು ತೀರಿಸಲು ಹೆಂಡತಿ ಮನೆಯಿಂದ ನೀಡಿದ ಆಸ್ತಿಯನ್ನು ಸಹ ಕಳೆದ ನಾಲ್ಕು ವರ್ಷಗಳ ಹಿಂದೆಯೇ ಮಾರಾಟ ಮಾಡಿದ್ದ.

ಹೀಗಿದ್ದರೂ ಸಹ ಸಾಲ ತೀರಿಸಲು ಆಗಿರಲಿಲ್ಲ. ಹೀಗಾಗಿ ಭಾನುವಾರ ಬೆಳಗ್ಗೆ ಮನೆಯ ಶೀಟಿಗೆ ಹಾಕಿರುವ ಕಬ್ಬಿಣದ ರಾಡಿಗೆ ಕೇಬಲ್ ವೈರ್ ನಿಂದ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ. ಈ ಸಂಬಂಧ ಮೇಲುಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ‌ ತನಿಖೆ ಕೈಗೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!