Saturday, October 19, 2024

ಪ್ರಾಯೋಗಿಕ ಆವೃತ್ತಿ

ಭೀಕರ – ಭೀಭತ್ಸ್ಯ – ಬರ್ಬರ : ಲಾರೆನ್ಸ್ ಬಿಷ್ಣೋಯ್

ಲಾರೆನ್ಸ್ ಬಿಷ್ಣೋಯ್ ಎಂಬ 31 ಹರೆಯದ ಪಾತಕಿಯ ಹೆಸರು ಭಾರತ ಸೇರಿದಂತೆ ಪ್ರಪಂಚದ ಹಲವು ದೇಶಗಳಲ್ಲಿ‌ ಸಂಚಲನ ಮೂಡಿಸಿದೆ. ಪಾತಕ ಲೋಕದಲ್ಲಿ ಲಾರೆನ್ಸ್ ಬಿಷ್ಣೋಯ್ ಹೆಸರು ದಿನೇ ದಿನೇ ಸಾಕಷ್ಟು ಸದ್ದು ಮಾಡುತ್ತಿದ್ದು, ದೇಶದ ಕಾನೂನು ಸುವ್ಯವಸ್ಥೆ ಬಗ್ಗೆ ಜನರಲ್ಲಿ ಪ್ರಶ್ನೆಗಳೇಳುವಂತೆ ಮಾಡಿದೆ.

ಬಿಷ್ಣೋಯ್ ಗ್ಯಾಂಗ್ ನ ಪಾತಕ ಕೃತ್ಯಗಳ ಹಿಂದೆ ಭಾರತದ ರಾಜಕೀಯದಲ್ಲಿ ಪಳಗಿರುವ ವ್ಯಕ್ತಿಯ ಆಶೀರ್ವಾದ ಇರುವುದರಿಂದಲೇ ಆತನನ್ನು ಮುಟ್ಟಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಈ ಮಾತಗಳನ್ನು ಜನರೇ ಆಡಲಾರಂಭಿಸಿದ್ದಾರೆ.

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್’ಸಿಪಿ ನಾಯಕ, ಮಾಜಿ ಸಚಿವ ಬಾಬಾ ಸಿದ್ದೀಕಿ ಹತ್ಯೆಯ ಪ್ರಕರಣದ ನಂತರ ಲಾರೆನ್ಸ್ ಬಿಷ್ಣೋಯ್ ಹೆಸರು ಭಾರತದ ಪಾತಕ ಪ್ರಪಂಚದಲ್ಲಿ ಮತ್ತಷ್ಟು ಹೊಳೆಯುತ್ತಿದೆ.

ಕಾನೂನು ಬಿಟ್ಟರೂ ನಾನು ಬಿಡಲ್ಲ

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಆತ್ಮೀಯರಾಗಿದ್ದ ಕಾರಣಕ್ಕೆ ಬಾಬಾ ಸಿದ್ದೀಕಿ ಅವರನ್ನು ಕೊಲೆ ಮಾಡಿದ್ದಾಗಿ ಮುಂಬೈನ ಉನ್ನತ ಮೂಲಗಳು ಪೋಲೀಸ್ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಬಿಷ್ಣೋಯ್ ಸಮುದಾಯ ಕೃಷ್ಣ ಮೃಗವನ್ನು ಪೂಜನೀಯ ಸ್ಥಾನದಲ್ಲಿ ನೋಡುತ್ತದೆ. ಬಿಷ್ಣೋಯ್ ಸಮುದಾಯದ ಪೂಜನೀಯ ಪ್ರಾಣಿ ಕೃಷ್ಣಮೃಗವನ್ನು ಹತ್ಯೆ ಮಾಡಿದ ಕಾರಣಕ್ಕಾಗಿಯೇ ಸಲ್ಮಾನ್ ಖಾನ್ ಹತ್ಯೆ ನಡೆಸಿ ಸೇಡು ತೀರಿಸಿಕೊಳ್ಳಲು ಬಿಷ್ಣೋಯ್ ಗ್ಯಾಂಗ್ ಹಲವು ಪ್ರಯತ್ನಗಳನ್ನು ನಡೆಸಿದೆ. ಕಳೆದ ಏಪ್ರಿಲ್ ನಲ್ಲಿ ಮುಂಬೈನ ಸಲ್ಮಾನ್ ಖಾನ್ ನಿವಾಸದ ಎದುರು ಇಬ್ಬರು ವ್ಯಕ್ತಿಗಳು ಮೋಟಾರ್ ಬೈಕಿನಲ್ಲಿ ಬಂದು ಗುಂಡಿನ ದಾಳಿ ನಡೆಸಿ ಪರಾರಿಯಾದರು. ಸಲ್ಮಾನ್ ಖಾನ್ ಹತ್ಯೆ ಮಾಡುವುದಾಗಿ ಬಿಷ್ಣೋಯ್ ಗ್ಯಾಂಗ್ ಎಚ್ಚರಿಕೆ ನೀಡಿತ್ತು.

ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ಜೋಧ್ ಪುರ ನ್ಯಾಯಾಲಯದಲ್ಲಿ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ಬಂದಿದ್ದು, ಇದನ್ನು ಸಲ್ಮಾನ್ ಖಾನ್ ರಾಜಸ್ಥಾನದ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಆದರೆ ಲಾರೆನ್ಸ್ ಬಿಷ್ಣೋಯ್ ಮಾತ್ರ ಕಾನೂನು ಬಿಟ್ಟರೂ ನಾನು ಮಾತ್ರ ನಿನ್ನ ಬಿಡುವುದಿಲ್ಲ ಎಂದು ನೇರವಾಗಿ ಸಲ್ಮಾನ್ ಖಾನ್ ಗೆ ಎಚ್ಚರಿಕೆ ನೀಡಿದ್ದಾನೆ.

ಲಾರೆನ್ಸ್ ಬಿಷ್ಣೋಯ್ ಯಾರು?

ಲಾರೆನ್ಸ್ ಬಿಷ್ಣೋಯಿ ಪಂಜಾಬ್ ನ ಫಿರೋಜ್ ಪುರ ಗ್ರಾಮದ ನಿವಾಸಿ. ಫೆಬ್ರವರಿ 12,1993ರಲ್ಲಿ ಜನಿಸಿದ ಈತನ ತಂದೆ ಹರಿಯಾಣ ಪೋಲಿಸ್ ಇಲಾಖೆಯಲ್ಲಿ ಪೇದೆಯಾಗಿದ್ದರು. ನಂತರ ಅವರು ಕೆಲಸಕ್ಕೆ ರಾಜೀನಾಮೆ ನೀಡಿ ಕೃಷಿಕರಾದರು. ಪಂಜಾಬ್ ಯುನಿವರ್ಸಿಟಿಯಲ್ಲಿ ಎಲ್ಎಲ್‌ಬಿ ಪದವಿ ಪಡೆದಿರುವ ಲಾರೆನ್ಸ್ ಬಿಷ್ಣೋಯ್ ಗೆ ಗ್ಯಾಂಗ್ಸ್ ಸ್ಟರ್ ಗೋಲ್ಡಿ ಬ್ರಾರ್ ಸಹವಾಸ ದೊರೆತ ನಂತರ ಈತನ ಕ್ರಿಮಿನಲ್ ಚಟುವಟಿಕೆಗಳು ಆರಂಭವಾಯಿತು.

 RAW ನಿರ್ದೇಶನದ ಮೇಲೆ ಕೆಲಸ !

ಬಿಷ್ಣೋಯಿ ಗ್ಯಾಂಗ್ ಭಾರತದ ಅಧಿಕೃತ ಇಂಟಲಿಜೆನ್ಸ್ ಸಂಸ್ಥೆ RAW ನಿರ್ದೇಶನದ ಮೇಲೆ ಕೆಲಸ ಮಾಡುತ್ತಿದ್ದು, RAW ಅಧಿಕಾರಿಗಳು, ಏಜೆಂಟ್ ಗಳ ನಿರ್ದೇಶನದ ಮೇಲೆ ಕೆನಡಾ, ಯುರೋಪ್ ಅಮೇರಿಕಾ, ಪಾಕಿಸ್ತಾನ ಜೊತೆಗೆ ಭಾರತದಲ್ಲಿ ಸಹ ಕೆಲಸ ಮಾಡುತ್ತಿದೆ ಎಂದು ತನಿಖಾ ವರದಿಗಳು ಹೇಳುತ್ತವೆ. ಇದರ ಹಿನ್ನೆಲೆ ದಾವೂದ್ ಇಬ್ರಾಹಿಂ ಪಾಕಿಸ್ತಾನದ ISI ಎಜೆಂಟ್ ಗಳ ನಿರ್ದೇಶನದ ಮೇಲೆ ಕೆಲಸ ಮಾಡಲು ಪ್ರಾರಂಭ ಮಾಡಿದ ಮೇಲೆ ಅವನಿಗೆ ಪರ್ಯಾಯವಾಗಿ ಅವನ ಗುಂಪಿನ ಚೋಟಾ ರಾಜನ್ ನನ್ನು ಭಾರತದ RAW ಏಜೆಂಟ್ ಗಳು ಬಳಸಿಕೊಂಡು ಹತ್ಯೆ ಮಾಡಿಸುತ್ತಿದ್ದರು. ಚೋಟಾ ರಾಜನ್ ಗೆ ವಯಸ್ಸಾಗಿ ಮತ್ತು ಮೊದಲಿನಷ್ಟು ಅಂಡರ್ ವರ್ಲ್ಡ್ ಬಗ್ಗೆ ಆಸಕ್ತಿ ಕಳೆದುಕೊಂಡ ನಂತರ RAW ಏಜೆಂಟ್ ಗಳ ಪಾಲಿಗೆ ಸಿಕ್ಕ ಹೊಸ ತಂಡವೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಎಂಬುದು ಹಲವರ ಅನುಮಾನ.

ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿಯ ಕೊಲೆಗೆ ಕಾರಣಗಳು ಇನ್ನಷ್ಟೇ ಗೊತ್ತಾಗಬೇಕಿದೆ. ಲಾರೆನ್ಸ್ ಗ್ಯಾಂಗಿನ ಇತಿಹಾಸ ನೋಡಿದರೆ, ಅವರು ಕಣ್ಣಿಟ್ಟ ಮುಖ್ಯ ವ್ಯಕ್ತಿಯ ಅಕ್ಕಪಕ್ಕದವರನ್ನೂ ಮುಗಿಸುತ್ತಾ ಬಂದಿದ್ದಾರೆ. ಸಲ್ಮಾನ್ ಖಾನ್ ಹತ್ಯೆ ಮಾಡುವುದೇ ಅವರ ಮುಖ್ಯ ಗುರಿ. ಬಿಷ್ಣೋಯಿ ಸಮುದಾಯದ ಪೂಜನೀಯ ಪ್ರಾಣಿಯಾದ ಕೃಷ್ಣಮೃಗವನ್ನು ಸಲ್ಮಾನ್ ಕೊಂದಿದ್ದಕ್ಕೆ ಅವರ ಕೊಲೆಗೆ ಪದೇ ಪದೇ ಯತ್ನಿಸಿದೆ ಈ ಗುಂಪು. 31 ವರ್ಷದ ಈ ಗ್ಯಾಂಗ್ ಸ್ಟರ್ ಜೈಲಿನಲ್ಲಿದ್ದರೂ ತನ್ನ ಬಹುದೊಡ್ಡ ಪಡೆಯನ್ನು ನಿರ್ವಹಿಸುತ್ತಿರುವುದು ಹೇಗೆ? ಈತನಿಗೆ ಪ್ರಭುತ್ವದ ರಕ್ಷಣೆ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಲಾರೆನ್ಸ್ ಗ್ಯಾಂಗ್ ಮತಾಂಧತೆಯ ಕೂಪವಾಗಿದೆ. ಕೊಲೆ, ದರೋಡೆ, ಕೊಲೆ ಯತ್ನವೇ ಈ ಗ್ಯಾಂಗಿನ ಇತಿಹಾಸ. ಪಾತಕ ಮಾಡುವುದಷ್ಟೇ ಇವರ ಉದ್ದೇಶ. ಜನರಲ್ಲಿ ಭಯವನ್ನು ಹುಟ್ಟುಹಾಕುವುದು ಈತನ ಗ್ಯಾಂಗ್ ಉದ್ದೇಶ. 700ಕ್ಕೂ ಹೆಚ್ಚು ಶಾರ್ಪ್ ಶೂಟರ್ ಗಳನ್ನು ಬಿಷ್ಣೋಯ್ ಗ್ಯಾಂಗ್ ಹೊಂದಿದೆ ಎಂದು ವರದಿಗಳು ಹೇಳುತ್ತಿವೆ. ಇದು ನಮ್ಮ ವ್ಯವಸ್ಥೆಯ ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿ ಆಗಿದೆ ಕೂಡ.

2010ರಲ್ಲಿ ಅಪರಾಧ ಕೃತ್ಯಗಳಿಗೆ ಕೈಯಿಟ್ಟ ಲಾರೆನ್ಸ್ ಬಿಷ್ಣೋಯ್ 2013ರಲ್ಲಿ ಮುಖ್ತ ಸರ್ ನಲ್ಲಿ ಕಾಲೇಜು ಚುನಾವಣೆಯಲ್ಲಿ ವಿಜಯಿ ಅಭ್ಯರ್ಥಿಯಾಗಿದ್ದವನನ್ನು ಕೊಲೆ ಮಾಡುತ್ತಾನೆ. ನಂತರ ಲುಧಿಯಾನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ತನ್ನ ಪ್ರತಿಸ್ಪರ್ಧಿಯಾಗಿದ್ದವನನ್ನು ಗುಂಡಿಟ್ಟು ಕೊಲ್ಲುವುದರಲ್ಲಿ ಅಪರಾಧ ಲೋಕದಲ್ಲಿ ತನ್ನ ಹೆಸರು ಕೇಳಿ ಬರುವಂತೆ ಮಾಡುತ್ತಾನೆ. ಕೊಲೆ, ಕೊಲೆ ಯತ್ನ, ದರೋಡೆ, ಮಾದಕ ವಸ್ತು ಕಳ್ಳಸಾಗಣೆ, ಶಸ್ತ್ರಾಸ್ತ್ರ ಸಾಗಾಣಿಕೆಯಲ್ಲಿ ಈತನ ಗ್ಯಾಂಗ್ ಹೆಸರು ವ್ಯಾಪಕವಾಗಿ ಕೇಳಿಬರುತ್ತದೆ. ಲಾರೆನ್ಸ್ ಬಿಷ್ಣೋಯ್ ಮೇಲೂ ಹತ್ತಾರು ಪ್ರಕರಣಗಳಿವೆ.

ಸಿದ್ದು ಮೂಸೆವಾಲ

ಗಾಯಕ ಸಿಧು ಮೂಸೇವಾಲಾ ಬರ್ಬರ ಹತ್ಯೆ

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮಾಡಿದ ಬರ್ಬರ ಹತ್ಯೆಗಳಲ್ಲಿ ಪ್ರಮುಖವಾದದ್ದು ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿದ್ದು ಮೂಸೇವಾಲಾ ಹತ್ಯೆ. ಅಕಾಲಿದಳದ ಯುವ ನಾಯಕ ವಿಕ್ಕಿ ಮಧುಕೇರ ಎಂಬುವನ ಹತ್ಯೆಗೆ ಪ್ರತಿಯಾಗಿ ಗ್ಯಾಂಗ್ಸ್ ಸ್ಟರ್ ಗೋಲ್ಡಿ ಬ್ರಾರ್ ಸೂಚನೆಯ ಮೇರೆಗೆ ಸಿಧು ಮೂಸೇವಾಲಾ ಹತ್ಯೆ ನಡೆದಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.ಜೈಲಿನಲ್ಲಿದ್ದು ಕೊಂಡೇ ತನ್ನ ಗುರು ಗೋಲ್ಡಿ ಬ್ರಾರ್ ಸೂಚನೆಯಂತೆ ಗಾಯಕ ಸಿದ್ದು ಮೂಸೇವಾಲಾ ಹತ್ಯೆ ನಡೆದು ಹೋಗುತ್ತದೆ.

ಮೇ 29ರಂದು ಪಂಜಾಬಿನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದ ಬಳಿ ತನ್ನ ಥಾರ್ ಕಾರಿನಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿದ ಬಿಷ್ಣೋಯ್ ಗ್ಯಾಂಗ್ ಆತನ ಮೇಲೆ 30 ಸುತ್ತುಗಳ ಗುಂಡು ಹಾರಿಸಿತು.ಅದರಲ್ಲಿ 24 ಗುಂಡುಗಳು ಸಿಧು ಮೂಸೇವಾಲಾ ದೇಹದಲ್ಲಿ ಇತ್ತು.ತಲೆಬುರುಡೆಯ ಮೂಳೆಯಲ್ಲಿ ಗುಂಡು ಸಿಲುಕಿತ್ತು ಎಂದರೆ ಹತ್ಯೆಯ ಭೀಕರತೆ ಅರ್ಥವಾಗುತ್ತದೆ.

ಜೈಲಿಂದಲೇ ಆಪರೇಟ್

ಲಾರೆನ್ಸ್ ಬಿಷ್ಣೋಯ್ ಸದ್ಯ ಗುಜರಾತಿನ ಸಬರಮತಿ ಜೈಲಿನಲ್ಲಿದ್ದಾನೆ.ಜೈಲಿನಿಂದಲೇ ಆಪರೇಟ್ ಮಾಡುವ ಬಿಷ್ಣೋಯ್ ತನ್ನ ಗ್ಯಾಂಗಿನ ಸದಸ್ಯರ ಕೈಲಿ ಪಾತಕಗಳನ್ನು ಮಾಡಿಸುತ್ತಾನೆ.
ಸೆಪ್ಟೆಂಬರ್ 21,2023 ರಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಸುಖ್ ದೂಲ್ ಸಿಂಗ್ ಗಿಲ್ ಹತ್ಯೆ ಮಾಡಿಸಿದ ಬಿಷ್ಣೋಯ್, ಡಿಸೆಂಬರ್ 5,2023ರಲ್ಲಿ ಕರ್ಣಿ ಸೇನೆ ಅಧ್ಯಕ್ಷ ಸಖ್ ದೇವ್ ಸಿಂಗ ಗೊಗೆಮಡಿ ಅವರನ್ನು ರಾಜಸ್ಥಾನದ ಜೈಪುರದಲ್ಲಿ ಗುಂಡಿಟ್ಟು ಹತ್ಯೆ ಮಾಡಿಸಿದ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!