Sunday, May 5, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಗ್ಯಾರಂಟಿಗಳು ಬಿಜೆಪಿ- ಜೆಡಿಎಸ್ ನಾಯಕರ ನಿದ್ದೆಗೆಡಿಸಿವೆ: ಸುರ್ಜೇವಾಲ

ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರಿಗಾಗಿ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಬಿಜೆಪಿ- ಜೆಡಿಎಸ್ ನಾಯಕರ ನಿದ್ದೆಗೆಡಿಸಿವೆ, ಅವರು ಅಧಿಕಾರದಲ್ಲಿದ್ದಾಗ ಜನರಿಗೆ ಯಾವ ಕೊಡುಗೆಯನ್ನು ಕೊಟ್ಟಿಲ್ಲ. ಆದರೆ ಅಧಿಕಾರದಲ್ಲಿರುವ ನಾವು ಜನರಿಗೆ ಅನುಕೂಲ ಮಾಡಿಕೊಟ್ಟರೆ ಅದನ್ನು ಇವರ ಕೈಯಲ್ಲಿ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಕಿಡಿಕಾರಿದರು.

ಮಂಡ್ಯದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿಯ ಉಪಯೋಗವನ್ನು ಪಡೆದುಕೊಂಡು ಕರ್ನಾಟಕದ ಜನ ಅಭಿವೃದ್ಧಿಯಾಗುತ್ತಿದ್ದರೆ, ಅದನ್ನು ಸಹಿಸಲಾಗದೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಪ್ರಚಾರ ಭಾಷಣದಲ್ಲಿ, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಗ್ಯಾರಂಟಿ ಯೋಜನೆಗಳನ್ನು ಮುಗಿಸಲು ಹೊರಟಿದ್ದಾರೆ, ಇವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಹುನ್ನಾರದ ಬಗ್ಗೆ ಎಚ್ಚರಿಕೆಯಿಂದ ಇರಬೇಕು

ಗ್ಯಾರಂಟಿ ಯೋಜನೆಗಳನ್ನು ರದ್ದು ಪಡಿಸುವ ಹುನ್ನಾರ ಮೈತ್ರಿ ಮುಖಂಡರದ್ದಾಗಿದ್ದು, ಫಲಾನುಭವಿಗಳು ಇವರ ಹುನ್ನಾರದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮತದಾನದ ವೇಳೆ ಗ್ಯಾರಂಟಿ ವಿರೋಧಿಗಳಾದ ಎನ್‌ಡಿಎ ಅಭ್ಯರ್ಥಿಗಳನ್ನು ತಿರಸ್ಕರಿಸಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ನಾವು ಜಾತಿ ಧರ್ಮದ ಆದರದಲ್ಲಿ ರೂಪಿಸಿಲ್ಲ. ಎಲ್ಲರಿಗೂ ಯೋಜನೆ ಸಿಗಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.

ಕೋಟಿ ಕೋಟಿ ಜನರಿಗೆ ಉಪಯೋಗ

ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಯ ಲಾಭವನ್ನು ರಾಜ್ಯದ ಕೋಟಿ ಕೋಟಿ ಜನ ಪಡೆಯುತ್ತಿದ್ದಾರೆ. ಇಂತಹ ಜನಪ್ರಿಯ ಯೋಜನೆಗಳ ಮೇಲೆ ಬಿಜೆಪಿ- ಜೆಡಿಎಸ್ ಕಣ್ಣಿಟ್ಟಿದೆ. ರಾಜ್ಯದ ಜನ ಖುಷಿಯಿಂದಿರುವುದು ಇವರಿಗೆ ಇಷ್ಟವಿಲ್ಲ. ಈಗಾಗಲೇ ನಾವು ರಾಜ್ಯದ ಮಹಿಳೆಯರಿಗೆ 2 ಸಾವಿರ ಹಣ ಕೊಡುತ್ತಿದ್ದು, ಕೇಂದ್ರದಲ್ಲೂ ಅಧಿಕಾರಕ್ಕೆ ಬಂದರೆ ಎಂಟೂವರೆ ಸಾವಿರ ಹಣ ನೀಡುತ್ತೇವೆ. ಆಗ ರಾಜ್ಯದ ಒಬ್ಬ ಮಹಿಳೆ ತಿಂಗಳಿಗೆ 10,500 ರೂ. ಹಣ ಸಿಕ್ಕಂತಾಗುತ್ತದೆ. ಈಗಾಗಲೇ ನಿರುದ್ಯೋಗಿ ಪದವಿ ಯುವಕರಿಗೆ ರಾಜ್ಯ ಸರ್ಕಾರ ಹಣ ನೀಡುತ್ತಿದ್ದು, ನಾವು ಅಧಿಕಾರ ಹಿಡಿದರೆ ಈ ಯೋಜನೆಯನ್ನು ದೇಶಾದ್ಯಂತ ಹೆಚ್ಚಿಸುತ್ತೇವೆ ಎಂದರು.

ನರೇಗಾ ಕೂಲಿ ಕಾರ್ಮಿಕರ ನಿತ್ಯ ಕೂಲಿಯನ್ನು 530 ರೂ.ಗೆ ಹೆಚ್ಚಿಸುವ ಯೋಜನೆ ನಮ್ಮಲ್ಲಿದೆ. ರೈತರ ಸಾಲಮನ್ನಾ ಮಾಡುವುದು ಕೂಡ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಮ್ಮ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮನ್ನು ಬೆಂಬಲಿಸಿ ಕೇಂದ್ರದಲ್ಲಿ ಅಧಿಕಾರ ನೀಡಿ ಎಂದು ಮನವಿ ಮಾಡಿದರು.

ರಾಜ್ಯದ ತೆರಿಗೆ ಹಣ ಬೇರೆ ರಾಜ್ಯಗಳ ಪಾಲಾಗುತ್ತಿದೆ. ನೀವು ನೂರು ರೂ. ತೆರಿಗೆ ಹಣ ಕಟ್ಟಿದರೆ, ಅದರಲ್ಲಿ ನಿಮಗೆ ಸಿಗುತ್ತಿರುವುದು ಕೇವಲ 13 ರೂ. ಮಾತ್ರ. ಇನ್ನುಳಿದಿದ್ದು ಬೇರೆ ರಾಜ್ಯಗಳ ಪಾಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಅವರ ಬಳಿ ಉತ್ತರವಿಲ್ಲ. ತೆರಿಗೆಯಲ್ಲಿ ಬೃಹತ್ ಪಾಲು ಪಡೆದು ರಾಜ್ಯದ ಜನಕ್ಕೆ ಚೆಂಬು ಕೊಟ್ಟಿದ್ದಾರೆ ಎಂದು ಸುದ್ದಿಗೋಷ್ಟಿಯಲ್ಲೇ ಸುಜೇವಾಲ ಚೆಂಬು ಪ್ರದರ್ಶಿಸಿದರು.

ಗೋಷ್ಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ದಿನೇಶ್‌ಗೂಳಿಗೌಡ, ರವಿಕುಮಾರ್ ಗಣಿಗ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!