Sunday, October 20, 2024

ಪ್ರಾಯೋಗಿಕ ಆವೃತ್ತಿ

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸಿಂಹಾಸನಾರೋಹಣ ದಿನ…..


8.8.1902 ನಾಲ್ವಡಿ ಕೃಷ್ಣರಾಜ ಒಡೆಯರು ಸಿಂಹಾಸನಾರೋಹಣ ಮಾಡಿದ ದಿನ. ವಿದೇಶಗಳಿಂದ ಗಣ್ಯಾತಿಗಣ್ಯರು ಮೈಸೂರಿಗೆ ಆಗಮಿಸಿದ್ದರು. ಅಧಿಕಾರ ಹಸ್ತಾಂತರಿಸಲು ಅಂದಿನ ಗವರ್ನರ್ ಜನರಲ್ ಲಾರ್ಡ್ ಕರ್ಜನ್ ಶಿಮ್ಲಾದಿಂದ ಸ್ವತಃ ಆಗಮಿಸಿದ್ದರು. ಮಹಾರಾಜರನ್ನು ಕುರಿತು ಅಂದು ಅವರು ಆಡಿದ ಮಾತುಗಳ ಆಯ್ದಭಾಗ ಇಲ್ಲಿದೆ.


ಮಹಾರಾಜರೇ, ನಿಮಗಾಗಿ ಕೆಲವು ಮಾತುಗಳನ್ನು ಹೇಳಬೇಕಿದೆ. ನಿಮಗೊಂದು ದೊಡ್ಡ ಉಪನ್ಯಾಸ ನೀಡುತ್ತಿದ್ದೇನೆ ಎಂದೇನೂ ಭಾವಿಸಬೇಡಿ. ಆಳ್ವಿಕೆ ನಡೆಸುವವರನ್ನು ಅವರ ವಂಶದ ಬಳುವಳಿಯಾಗಿ ರೂಪಿಸಲಾಗದು. ಪಟ್ಟದಲ್ಲಿ ಮೇಲೆ ಕೂರಿಸಬಹುದಷ್ಟೇ. ದಕ್ಷ ಆಡಳಿತಗಾರ ತನ್ನ ಸ್ವಭಾವಜನ್ಯ ಗುಣಗಳಿಂದಾಗಿ ಆಳ್ವಿಕೆ ನಡೆಸಬಲ್ಲ. ತನಗೆ ಸಿಕ್ಕ ತರಬೇತಿಯ ಜೊತೆಗೆ ಇತರರ ಅನುಭವ ಮತ್ತು ವಿವೇಕವನ್ನು ಬಳಸಿಕೊಂಡು ಆಡಳಿತ ನೀಡಬೇಕಾಗುತ್ತದೆ.

ಓರ್ವ ಹದಿನೆಂಟು ವರ್ಷದ ಯುವಕನಿಗೆ ಪ್ರಜಾಸೇವೆಯ ಅಪರೂಪದ ಶ್ರೇಷ್ಠ ಅವಕಾಶ ಸಿಕ್ಕಿದೆ ಎಂಬುದು ಹೆಮ್ಮೆಯ ಸಂಗತಿ. ಆದರೆ ಅದು ಅಷ್ಟೇ ಜವಾಬ್ದಾರಿಯುತ ಕಾರ್ಯವೂ ಹೌದು. ನಿಮ್ಮನ್ನು ನೋಡಿ ಲಕ್ಷಾಂತರ ಜನರು ಆದರ್ಶವಾಗಿ ತೆಗೆದುಕೊಂಡಿರುತ್ತಾರೆ. ನಿಮ್ಮ ಬಗ್ಗೆ ನಿರೀಕ್ಷೆಗಳನ್ನಿಟ್ಟುಕೊಂಡಿರುವ ಅವರು ಈಗಾಗಲೇ ಪೂಜ್ಯತೆಯಿಂದ ನೋಡುತ್ತಿರುತ್ತಾರೆ ಎಂಬುದು ಗೊತ್ತಿರಲಿ. ನೀವು ಅತ್ಯುತ್ತಮ ಆಡಳಿತ ನೀಡಿದರೆ ನಿಷ್ಠೆಯಿಂದ ಆರಾಧಿಸುತ್ತಾರೆ.

ನಿಮಗೆ ಸಿಕ್ಕಿರುವ ಈ ಉನ್ನತ ಸ್ಥಾನದ ಸದುಪಯೋಗವಾಗದಿದ್ದರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ನಿಮ್ಮ ಯಾವದೇ ತಪ್ಪು ನಡೆಯ ದುಷ್ಫಲ ನಿಮ್ಮನ್ನು ನಂಬಿರುವವರ ಮೇಲಾಗುತ್ತದೆ. ನಿಮ್ಮನ್ನಿಂದು ಈ ಸ್ಥಾನದಲ್ಲಿರಿಸಿರುವುದು ನಿಮಗಾಗಿಯಲ್ಲ. ನಿಮ್ಮನ್ನು ಅನುಸರಿಸಿ ಆರಾಧಿಸುವ ಜನರಿಗಾಗಿ. ನಿಮ್ಮ ಕರ್ತವ್ಯ ಪರಾಙ್ಮುಖತೆಯ ದುಷ್ಪರಿಣಾಮ ಅವರ ಮೇಲಾಗುತ್ತದೆ ಎಂಬುದು ಸದಾ ನೆನಪಿರಲಿ.

ನಿಮ್ಮಲ್ಲಿ ನನ್ನ ವಿನಂತಿ ಇಷ್ಟೇ. ನಿಮ್ಮ ಜೀವನದ ಈ ಮಹತ್ವದ ತಿರುವಿನಲ್ಲಿ ನನ್ನ ಮಾತುಗಳನ್ನು ದಯವಿಟ್ಟು ನೆನಪಿಟ್ಟುಕೊಳ್ಳಿ. ಮಾಡುವ ಕೆಲಸದಲ್ಲಿ ಚಿತ್ತವಿಟ್ಟು ಅಚ್ಚುಕಟ್ಟಾಗಿ ಕೆಲಸಮಾಡಿ. ನಿಮ್ಮ ಪ್ರತಿ ನಡೆಯೂ ಧೈರ್ಯದಿಂದ ಕೂಡಿ, ನ್ಯಾಯಯುತವಾಗಿರಲಿ. ಸಹೃದಯ ಕರುಣೆಯಿಂದ ಕೂಡಿರಲಿ. ಎಲ್ಲರಿಗೂ ಸಮಾನ ಗಮನ ಕೊಡಿ. ಆಡಳಿತದಲ್ಲಿ ಯಾವ ಸಂಗತಿಯೂ ನಿಷ್ಕೃಷ್ಟವಲ್ಲ. ಎಲ್ಲಾ ಆಗುಹೋಗುಗಳ ಮೇಲೆ ನಿಗಾ ಇರಲಿ. ಐವತ್ತು ವರ್ಷ ಬದುಕಬಲ್ಲೆ ಎಂದು ನೀವು ಕೆಲಸ ಮಾಡಬೇಡಿ. ಮುಂದೆ ಬದುಕುವುದು ಐದೇ ವರ್ಷ ಎಂದು ತಿಳಿದು ಕರ್ತವ್ಯ ಮಾಡಿ. ಸದಾ ಕ್ರಿಯಾಶೀಲರಾಗಿರಿ. ಒಬ್ಬ ರಾಜನ ದಿನಚರಿಯಲ್ಲಿ ಸೋಮಾರಿಯಗಿ ಕಾಲಹರಣ ಮಾಡಿದ ಖಾಲಿ ಜಾಗಗಳಿರಕೂಡದು.

ನನಗೊಂದು ಆಸೆಯಿದೆ. ನಾನೀ ದೇಶದಿಂದ ಹೋದ ಮೇಲೆ ಮುಂದಿನ ವೈಸರಾಯ್ ಗಳು ನಿಮ್ಮ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಪ್ರಶಂಸಿಸುವಂತಿರಬೇಕು. ಆ ಉಜ್ವಲ ದಿನಗಳಿಗಾಗಿ ನಾನು ಎದುರು ನೋಡುತ್ತಿರುತ್ತೇನೆ. ನಿಮ್ಮಲ್ಲಿ ನಾನಿಟ್ಟಿರುವ ಅಪಾರ ನಂಬಿಕೆಯನ್ನು ಸುಳ್ಳುಮಾಡಬೇಡಿ. ವರ್ಷದಿಂದ ವರ್ಷಕ್ಕೆ ನಿಮ್ಮ ಶಕ್ತಿ ಸಾಮರ್ಥ್ಯ ದಕ್ಷತೆಗಳು ಬೆಳೆಯುತ್ತಾ ಹೋಗಲಿ ಎಂದು ಆಶಿಸುತ್ತೇನೆ ಎಂದು ಲಾರ್ಡ್ ಕರ್ಜನ್ ತಿಳಿಸಿದ್ದರು.

ನಂತರ ನಾಲ್ವಡಿಯವರು ಅಧಿಕಾರ ಸ್ವೀಕರಿಸಿ, ತಮ್ಮ ಸ್ಫುಟವಾದ ಇಂಗ್ಲೀಷಿನಲ್ಲಿ ಹೀಗೆ ಹೇಳಿದರು…. “ಸನ್ಮಾನ್ಯರೇ, ನನ್ನ ಮೇಲಿರುವ ಜವಾಬ್ದಾರಿ ಎಷ್ಟು ಗುರುತರವಾದದ್ದು ಎಂಬುದನ್ನು ಬಲ್ಲೆ. ಇದನ್ನು ಮಾತಿನಿಂದಲ್ಲ. ಕಾರ್ಯರೂಪದಲ್ಲಿ ತೋರಿಸಬೇಕೆಂದು ಸಂಕಲ್ಪಿಸಿದ್ದೇನೆ. ವೈಸರಾಯರು ಹೇಳಿದ ಬುದ್ದಿಮಾತುಗಳು ನಮ್ಮ ಹೃದಯದಲ್ಲಿ ಬೇರೂರಿವೆ. ಅದರಂತೆ ನಡೆಯುವ ಸಂಕಲ್ಪ ನಮ್ಮದು. ಯಾರ ಭಯವಾಗಲೀ, ದಾಕ್ಷಿಣ್ಯವಾಗಲೀ ಇಲ್ಲದೆ, ಯಾರ ತಂತ್ರಕ್ಕೂ ಹಿಂಜರಿಯದೆ, ಯಾವ ಮಂತ್ರಕ್ಕೂ ಒಳಗಾಗದೆ ನಮ್ಮ ಪ್ರಜೆಗಳಿಗೆ ಶಾಂತಿ ನೆಮ್ಮದಿ ದೊರಕಿಸಿಕೊಡಲು, ತಕ್ಕ ಸಾಮರ್ಥ್ಯವನ್ನು ಭಗವಂತ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇವೆ” ಎಂದು ಮಾತು ಮುಗಿಸಿದರು.

ಪ್ರಜೆಗಳಿಗೆ ನಾಲ್ವಡಿ ಪತ್ರ

ನಾಲ್ವಡಿ ಮಹಾರಾಜರು ಕರ್ಜನರಿಗೆ ಅಂದು ಕೊಟ್ಟ ವಾಗ್ಧಾನ ಬರಿಯ ಭಾಷಣವಾಗಿರಲಿಲ್ಲ. ಮರೆಯದೆ ಜೀವನವಿಡೀ ಅದನ್ನು ಅಕ್ಷರಶಃ ಪಾಲಿಸಿದರು. ನಮಗಾಗಿ ಕನ್ನಂಬಾಡಿಯನ್ನು ಕಟ್ಟಿಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಅಡಿಗಲ್ಲು ಹಾಕಿದರು, ಮೈಸೂರ್ ಸ್ಯಾಂಡಲ್, ಮೈಷುಗರ್ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಿದರು. ಇವರ ಅನನ್ಯ ಸಾಧನೆ ಮೆಚ್ಚಿ ಮಹಾತ್ಮಗಾಂಧಿ “ರಾಜರ್ಷಿ” ಬಿರುದು ಕೊಟ್ಟರು. ಸೂರ್ಯ ಚಂದ್ರ ತಾರೆಗಳಿರುವವರೆಗೆ ಕನ್ನಡ ನಾಡು ನಾಲ್ವಡಿಯವರನ್ನು ಸ್ಮರಿಸುತ್ತದೆ.

ಸಂಗ್ರಹ: ಚಿತ್ರಕೂಟ

Source:
History of Mysore Kingdom
Rare Books Society of India
& British Library

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!