Monday, October 21, 2024

ಪ್ರಾಯೋಗಿಕ ಆವೃತ್ತಿ

ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರಾಗಿ ಮಾಡಿದರೆ ಅದು ಇಡೀ ಪ್ರಪಂಚಕ್ಕೆ ಮಾಡುವ ಮೋಸ| ಮಂಡ್ಯ ರಮೇಶ್

ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರಾಗಿ ಮಾಡಿದರೆ ಅದು ಇಡೀ ಪ್ರಪಂಚಕ್ಕೆ ಮಾಡುವ ಮೋಸ, ಕಡ್ಡಾಯವಾಗಿ ಸಾಹಿತಿಗಳನ್ನೇ ಅದರಲ್ಲೂ ಪ್ರಬುದ್ಧರನ್ನ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕು ಎಂದು ಚಲನಚಿತ್ರ ನಟ, ರಂಗ ಕಲಾವಿದ ಮಂಡ್ಯ ರಮೇಶ್ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಾರದ ಸಾಹಿತ್ಯ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಸಮ್ಮೇಳನ ಆಗುತ್ತಿರುವ ದಿಸೆಯಿಂದ ಸಾಹಿತಿಗಳೇ ಸಮ್ಮೇಳನಾಧ್ಯಕ್ಷರಾಗಬೇಕೆಂಬುದು ನನ್ನ ಖಡಾಖಂಡಿತ ವಾದವಾಗಿದ್ದು ತುಂಬಾ ಪ್ರಬುದ್ಧ, ಚಿಂತನೆಯುಳ್ಳ ಯೋಗ್ಯರನ್ನೇ ಆಯ್ಕೆ ಮಾಡಬೇಕು, ಮಂಡ್ಯದಲಿ ಈ ಹಿಂದೆ ನಡೆದ ಎರಡೂ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಜಯದೇವ ತಾಯಿ ಲಿಗಾಡೆ ಹಾಗೂ ಚದುರಂಗರಂತಹ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದ್ದು, ಅದೇ ರೀತಿ ಅದ್ಬುತ ಆಯ್ಕೆಯನ್ನು ಮಾಡಬೇಕಿದೆ ಸಾಹಿತಿಗಳಲ್ಲದೆ ರಾಜಕಾರಣಿಗಳು, ಮಠಾಧೀಶರು ಮತ್ಯಾರನ್ನಾದರು ಆಯ್ಕೆ ಮಾಡಿದರೆ ಅದು ಕನ್ನಡ ಜನಕ್ಕೆ ಮಾಡುವ ದೊಡ್ಡ ಮೋಸ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮ್ಮೇಳನಾಧ್ಯಕ್ಷರಾಗಲು ಕನ್ನಡದಲ್ಲಿ ತುಂಬ ಒಳ್ಳೆಯ ವ್ಯಕ್ತಿಗಳ ಹೆಸರುಗಳಿದ್ದು, ಅದನ್ನು ಬಿಟ್ಟು ಬೇರೆ ಕ್ಷೇತ್ರದವರನ್ನು ಆರಿಸಿಕೊಳ್ಳುವುದು ವಿಕೃತಿ ಎಂದು ಬಣ್ಣಿಸಿದ ಅವರು, ಸಾಹಿತ್ಯ ಎಂಬುದು ಬದುಕಾಗಬೇಕು. ಬದುಕಿನಲ್ಲಿ ಸಾಹಿತ್ಯವಾಗಬೇಕು ಎಂದು ಹೇಳಿದರು.

ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದಲ್ಲಿ ಓದಿ ಬಂದು ಕನ್ನಡವನ್ನು ಚನ್ನಾಗಿ ಅರಿತವರಿಗೆ ಜಾಗತಿಕವಾಗಿ ತಲುಪಲು ಬೇಕಾದ ಉದ್ಯೂಗ ನಿರ್ಮಾಣ ಆಗಬೇಕಿದೆ. ಕಡ್ಡಾಯವಾಗಿ ಎಲ್ಲಾ ಕನ್ನಡ ಶಾಲೆಗಳ ಕನ್ನಡ ಕಲಿಸುವ ಶಿಕ್ಷಕರಿಗೆ ರಂಗ ಭೂಮಿಯ ಪರಿಚಯ ಮಾಡಿಸಿ ತರಬೇತಿ ನೀಡಬೇಕು. ಈ ಮೂಲಕ ಕನ್ನಡ ಶಿಕ್ಷಕರ ಸಂವಹನ ಗುಣ ಹೆಚ್ಚು ಮಾಡುವಂತ ಶಿಕ್ಷಣವನ್ನು ಸರ್ಕಾರ ಒದಗಿಸಬೇಕು. ಕನ್ನಡವನ್ನು ಉಳಿಸಿಕೊಳ್ಳಲು ತಾಲೂಕು ಕೇಂದ್ರಗಳಲ್ಲಿ ರಂಗಮಂದಿರ ಸೃಷ್ಠಿಸಿ, ಅಲ್ಲಿ ಗ್ರಂಥಾಲಯ ರಚಿಸಿ ಎಲ್ಲಾ ರೀತಿಯ ಪುಸ್ತಕ ಒದಗಿಸಬೇಕು ಎಂದು ಸಲಹೆ ನೀಡಿದರು.

ಒಂದು ಜಾಹೀರಾತಿಗೂ ಉತ್ತಮವಾದ ಸಾಹಿತ್ಯವಿಲ್ಲದೇ ಇದ್ದರೆ, ಅದು ಗಮನ ಸೆಳೆಯದು, ಕಾವ್ಯಾತ್ಮಕ ಗುಣ ಸಾಹಿತ್ಯದಲ್ಲಿ ಇರಬೇಕು. ಮಂಡ್ಯದಲ್ಲಿ ಕಾವ್ಯಾತ್ಮಕ ಸಾಹಿತ್ಯ ರಚಿಸುವ ಧೀಮಂತ ಸಾಹಿತಿಗಳಿದ್ದು, ಅವರಲ್ಲಿ ಬೆಸಗರಹಳ್ಳಿ ರಾಮಣ್ಣ, ಹೆಚ್.ಎಲ್.ಕೇಶವಮೂರ್ತಿ ಸೇರಿದಂತೆ ಹಲವರಿದ್ದಾರೆ. ಚಲನಚಿತ್ರದಲ್ಲೂ ಮಂಡ್ಯದವರ ಸಾಹಿತ್ಯದ ಪ್ರಭಾವ ಹೆಚ್ಚಿದೆ. ಪುಟ್ಟಣ್ಣ ಕಣಗಲ್ ಅವರ ಅದ್ಬುತ ಚಲನಚಿತ್ರಗಳಿಗೆ ಬೆನ್ನೆಲುಬಾಗಿ ಮಂಡ್ಯದ ಯೋಗಾನಂದ ಶಾಸ್ತ್ರಿಗಳ ಸಾಹಿತ್ಯ ಶಕ್ತಿ ತುಂಬಿದ್ದವು ಎಂದು ನೆನೆದರು.

ಸಾಹಿತ್ಯ ಸಮ್ಮೇಳನಗಳು ಮಕ್ಕಳನ್ನು ಕನ್ನಡ ಓದಲು ಪ್ರೇರೇಪಿಸುವಂತಹ ಕೆಲಸ ಮಾಡಬೇಕು. ಸಮ್ಮೇಳನ ಸಾಹಿತಿಗಳನ್ನು ಮಾತ್ರವಲ್ಲ ಅಲ್ಲಿನ ಕಲೆಯನ್ನು ವೀಕ್ಷಿಸಲು ಬರುವ ಶಾಲಾ ಕಾಲೇಜಿನ ಯುವತಲೆಮಾರಿನ ಕೈಯಲ್ಲಿ ಪುಸ್ತಕವಿದ್ದರೆ ಪುಸ್ತಕ ಪ್ರೀತಿ ಹೆಚ್ಚುತ್ತದೆ. ಈ ಮೂಲಕ ಮಕ್ಕಳಿಗೆ ಸಾಹಿತ್ಯ ಜ್ಞಾನದ ಮೂಲಕ ಜಗತ್ತಿನ ಮನಸ್ಸು ವಿಸ್ತರಿಸುವ ಕೆಲಸವಾಗಿ, ಪರಂಪರೆಯನ್ನು ದಾಖಲಿಸುವ ಕೆಲಸವಾಗಬೇಕು ಎಂದು ಪ್ರಶ್ನೆಗೆ ಉತ್ತರಿಸಿದರು.

ಸಿನಿಮಾ ಮತ್ತು ರಂಗಭೂಮಿಗಳು ಭೂಮಿಯಷ್ಟೇ ಆತಂಕದ ಸ್ಥಿತಿಯಲ್ಲಿದೆ. ಕನ್ನಡ ಸಾಹಿತ್ಯದ ಹಿನ್ನಲೆಯಲ್ಲಿ ಬಂದಂತ ಸಿನಿಮಾಗಳನ್ನು ಗುರುತಿಸುವ ಕೆಲಸವನ್ನು ಸಾಹಿತ್ಯ ಸಮ್ಮೇಳನದಲ್ಲಿ ನಡೆಯಬೇಕಿದೆ. ಒಳ್ಳೆಯದನ್ನು ಗಮನಿಸುವಲ್ಲಿ ನಾವು ಸೋಲುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಮ್ಮೇಳನಗಳು ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಪ್ರತಿ ಜಿಲ್ಲೆಯಲ್ಲೂ ರಂಗಾಯಣವಾಗಬೇಕು. ಸಾಹಿತ್ಯ ಭವನಗಳಲ್ಲಿ ಕಡ್ಡಾಯವಾಗಿ ಮಕ್ಕಳಿಗೆ ಕಾವ್ಯ ವಾಚನ, ಸಂಗೀತ ಓದಿಸುವ ಕೆಲಸ ಆಗಬೇಕಿದೆ. ಕಾದಂಬರಿ, ಸಾಹಿತ್ಯಗಳನ್ನು ನಾಟಕ, ಸಿನಿಮಾ ಆಗಿ ಪರಿವರ್ತಿಸುವ ಸಿದ್ದತೆಗಳನ್ನು ಮಕ್ಕಳಿಗೆ ಕಲಿಸಬೇಕಿದೆ. ಇಂದಿನ ಯುವ ಜನತೆಯನ್ನು ಕೌಶಲ್ಯ ವೃದ್ಧಿಯಾಗುತ್ತಿದೆ. ಇದರ ಜೊತೆಗೆ ಸಾಹಿತ್ಯದ ಮನಸ್ಥಿತಿ ವೃದ್ಧಿಸುವ ಕೆಲಸ ಸಮ್ಮೇಳನದ ಗೋಷ್ಠಿಯಲ್ಲಿ ಆಗಬೇಕಿದೆ ಎಂದರು.

ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡುವಂತೆ ಕರೆ ಬಂದರೆ ಒಂದು ದಿನ ಶಿಬಿರ ಆಯೋಜಿಸಿ, ರಂಗಭೂಮಿ ಸಾಹಿತ್ಯದ ಕುರಿತು ಮಾತನಾಡಿ, ಕೆಲಸ ಮಾಡಿ, ಸರ್ಕಾರವನ್ನೇ ಎದುರಿಸಿ ನಾಟಕ ಮಾಡುವಂತಹ ಕಾರ್ಯಕ್ರಮವನ್ನು ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ತಮ್ಮ ಉತ್ತರವನ್ನು ನೀಡಿದರು.

ನನಗೆ ಮಂಡ್ಯ ಜಿಲ್ಲೆಯಿಂದ ದೊರೆತ ಪ್ರೀತಿ ಮುಂದಿನ ಜನ್ಮದಲ್ಲೂ ತೀರಿಸಲಾಗದು, ಮಣ್ಣಿಗೆ ಆಪ್ತ ಭಾವ, ತಾಯ್ತನವಿದ್ದು ಅದನ್ನು ಕಾಪಾಡಿಕೊಳ್ಳಲು ಇಷ್ಟ ಪಡುತ್ತೇನೆ ಎಂದು ಮನವದಾಳದ ಮಾತುಗಳನ್ನಾಡಿದರು.

ಸಂವಾದದಲ್ಲಿ ಹಿರಿಯ ಪತ್ರಕರ್ತ, ಸಂಘದ ಮಾಜಿ ಅಧ್ಯಕ್ಷ ಕೆ.ಎನ್.ರವಿ, ಪ್ರಧಾನ ಕಾರ್ಯದರ್ಶಿ ಆನಂದ್, ಖಜಾಂಚಿ ನಂಜುಂಡಸ್ವಾಮಿ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!