Wednesday, October 23, 2024

ಪ್ರಾಯೋಗಿಕ ಆವೃತ್ತಿ

ಪೌರಕಾರ್ಮಿಕನೊಬ್ಬನ ಕನ್ನಡ ಪ್ರೀತಿ !

ಅರವಿಂದ ಪ್ರಭು, ಚಿತ್ರಕೂಟ

ಈ ಹುಡುಗನ ಹೆಸರು ಲೋಗನಾದನ್. ಈಗ ಅಚ್ಚಕನ್ನಡದಲ್ಲಿ ಲೋಕನಾಥ್ ಅನ್ನಬಹುದು. ಜೀವನ‌ ನಿರ್ವಹಿಸಲು ಸಾಕಾಗುವಷ್ಟು ಓದಿಕೊಂಡಿದ್ದ ಈತ ಕರೋನಾ ಸಂಕಷ್ಟದ ಸಮಯದಲ್ಲಿ ಕೆಲಸ ಅರಸಿ ಮಂಡ್ಯಕ್ಕೆ ಬಂದ. ಯಾವ ಕೆಲಸವಾದರೂ ಸರಿ, ಸುಮ್ಮನೆ ಕೂರುವುದು ಬೇಡ ಅಂತ ನಗರಸಭೆಯಲ್ಲಿ ಪೌರಕಾರ್ಮಿಕನ ಕೆಲಸಕ್ಕೆ ಸೇರಿದ.

ಮಂಡ್ಯದ ಪರಿಸರ ಆತನಿಗೆ ಹಿಡಿಸಿತು. ಇಲ್ಲಿನ ಜನಗಳು ಒಳ್ಳೆಯವರಂತೆ ಕಂಡರು. ಇಲ್ಲೇ ನೆಲೆಯೂರಲು ನಿರ್ಧರಿಸಿದ. ಕನ್ನಡ ಕಲಿಯಬೇಕು ಅನಿಸಿತು. ಒಂದೇ ತಿಂಗಳಲ್ಲಿ ಕನ್ನಡದ ಅಕ್ಷರ ಮಾಲೆಯನ್ನು ಬರೆಯಲು ಕಲಿತ. ಕಸದ ಗಾಡಿಯಲ್ಲಿ ಕುಳಿತು ರಸ್ತೆಯ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳ ನಾಮಫಲಕ, ಕಾಂಪೌಂಡ್ ಬರಹಗಳನ್ನು ಆಸಕ್ತಿಯಿಂದ ಓದಲು ಆರಂಭಿಸಿದ. ಇದರ ನಡುವೆ ಬಡವರಿಗೆ ಸ್ವಂತ ಮನೆ ಕೊಡಿಸಲು ಹೋರಾಟವೊಂದು ಮಂಡ್ಯದಲ್ಲಿ ನಡೆಯುತ್ತಿತ್ತು. ಎಂ.ಬಿ.ನಾಗಣ್ಣಗೌಡರ ಪರಿಚಯವಾಯಿತು.

ಈತನ ಆಸಕ್ತಿಯನ್ನು ಗಮನಿಸಿದ ಗೌಡರು, ಒಂದಷ್ಟು ಸರಳ ಕನ್ನಡ ಪುಸ್ತಕಗಳನ್ನು ತರಿಸಿಕೊಟ್ಟು, “ಇವುಗಳನ್ನು ಅಭ್ಯಾಸ ಮಾಡು, ಎಸ್ಸಸ್ಸೆಲ್ಲಿ ಪರೀಕ್ಷೆ ಪಾಸು ಮಾಡಿಕೋ. ಮನೆಯಲ್ಲಿ ಕಷ್ಟವಿದ್ದರೆ ಹೇಳು” ಎಂಬ ಅಭಯ ಕೊಟ್ಟರು. ಹಗಲು ಪೌರಕಾರ್ಮಿಕ‌ನ ಕೆಲಸ ರಾತ್ರಿ ಕನ್ನಡದ ಅಭ್ಯಾಸವನ್ನು ನಿರಂತರವಾಗಿ ಮಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸು‌ ಮಾಡಿದ.

ತೇಜಸ್ವಿ ಅವನಿಗೀಗ ಇಷ್ಟದ ಲೇಖಕ. ಸಮಯ ಸಿಕ್ಕಾಗಲೆಲ್ಲಾ ಚಿತ್ರಕೂಟಕ್ಕೆ ಬರುವ ಈತನ ವಿನಯದ ನಡವಳಿಕೆಗೆ ನಾನು ಕೆಲವೇ ದಿನಗಳಲ್ಲಿ ಅಭಿಮಾನಿಯಾದೆ. ತಮಿಳಿನ ತಿರುಕ್ಕುರುಳ್ ಸಾಲುಗಳ ಅರ್ಥಗಳನ್ನು ನಾನು ಕೇಳಿದರೆ, ಆತ ಮಂಕುತಿಮ್ಮನ ಕಗ್ಗದ ಕುರಿತು ಕೇಳುತ್ತಾನೆ. ಈಗ ಕನ್ನಡದಲ್ಲಿ ಕವಿತೆ ಬರೆಯುವಷ್ಟು ಮುಂದುವರಿದಿದ್ದಾನೆ.

ಲೋಕನಾಥನ ಮಾತೃಭಾಷೆ ತೆಲುಗು, ತಮಿಳುನಾಡಿನಲ್ಲಿ ಬೆಳೆದು ಈಗ ಕನ್ನಡನಾಡಿನಲ್ಲಿ ಬದುಕು ಕಟ್ಟಿಕೊಂಡಿದ್ದಾನೆ. ಅನ್ಯಭಾಷಿಕನೊಬ್ಬ ನೋಡ ನೋಡುತ್ತಿದ್ದಂತೆ ನಮ್ಮವನೇ ಆಗಿಹೋದ ಪರಿ ನನ್ನಲ್ಲಿ ಅಚ್ಚರಿ ಮೂಡಿಸುತ್ತದೆ. ಪ್ರೀತಿಯಿಂದ ಸಾಗಿದರೆ ಇಲ್ಲಿ ಯಾವುದೂ ಅಸಾಧ್ಯವಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!