Friday, October 25, 2024

ಪ್ರಾಯೋಗಿಕ ಆವೃತ್ತಿ

ನುಡಿ ಹಬ್ಬ | ಸಮ್ಮೇಳನಾಧ್ಯಕ್ಷರ ಸ್ಥಾನಕ್ಕೆ ಕುಂ.ವೀರಭದ್ರಪ್ಪ ಆಯ್ಕೆಗೆ ನಾಡಿನ ಪ್ರಜ್ಞಾವಂತರ ಆಗ್ರಹ

ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಕುಂ.ವೀರಭದ್ರಪ್ಪ ಅವರನ್ನೇ ಆಯ್ಕೆ ಮಾಡಬೇಕೆಂದು ನಾಡಿನ ಪ್ರಜ್ಞಾವಂತರು ರಾಜ್ಯ ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತನ್ನು ಆಗ್ರಹಿಸಿದ್ದಾರೆ.

ನಾಡಿನ ಉದ್ದಗಲಕ್ಕೂ ಇರುವ ಸಾಹಿತಿಗಳು, ಕವಿಗಳು, ಪ್ರಕಾಶಕರು, ಅಧ್ಯಾಪಕರು, ಶಿಕ್ಷಕರು, ಚಿತ್ರಕಲಾವಿದರು ಸೇರಿದಂತೆ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡಿರುವ 127 ಪ್ರಜ್ಞಾವಂತರು ರಾಜ್ಯ ಸರ್ಕಾರ ಹಾಗೂ ಕೇಂದ್ರ ಕಸಾಪಕ್ಕೆ ಪತ್ರ ಬರೆದು, ಸಮ್ಮೇಳಾಧ್ಯಕ್ಷರಾಗುವವರಿಗೆ ಏನೆಲ್ಲ ಅರ್ಹತೆಗಳಿರಬೇಕೆಂಬುದರ ಬಗ್ಗೆ ಗಮನ ಸೆಳೆದಿದ್ದಾರೆ.

ತಳ ಸಮುದಾಯದಿಂದ ಬಂದಿರುವ ಕುಂ.ವೀರಭದ್ರಪ್ಪನವರು ಗಡಿನಾಡಿನ ಅನಕ್ಷರಸ್ಥ ಮಕ್ಕಳಿಗೆ ಅಕ್ಷರ ಕೊಟ್ಟು, ವಿದ್ಯಾವಂತರನ್ನಾಗಿಸಿದ್ದಾರೆ. ಶ್ರಮಿಕ ವರ್ಗದ ಕಷ್ಟ ಕಾರ್ಪಣ್ಯಗಳನ್ನು ಅರಿತವರು. ಕಲ್ಲುಮುಳ್ಳಿನ ಹಾದಿಯಲ್ಲಿ ಬದುಕಿನ ತಲ್ಲಣಗಳಿಗೆ ಸ್ಪಂದಿಸಿ, ಅವುಗಳನ್ನೇ ಕಥೆ, ಕಾದಂಬರಿಗಳ ಜೀವಾಳವಾಗಿಸಿದವರು. ನಿರಂತರವಾಗಿ ಕನ್ನಡದ ಕಾಳಜಿ, ಪ್ರೀತಿ, ಪ್ರೇಮವನ್ನು ಇಟ್ಟುಕೊಂಡು, ಸ್ವಾಭಿಮಾನದ ಕಲಿಯಾಗಿರುವ ಹಾಗೂ ಚಳವಳಿಗಳ ಹಿನ್ನೆಲೆಯಿಂದ ಬಂದವರು ಎಂದು ಸರ್ಕಾರ ಹಾಗೂ ಕಸಾಪಕ್ಕೆ ನೆನಪಿಸಿದ್ದಾರೆ.

ಹಳ್ಳಿಗಳನ್ನೇ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡು, ಮಾನವೀಯ ಕಳಕಳಿಯಿಂದ ಕೆಲಸ ಮಾಡುತ್ತಿರುವ ಇವರು ವ್ಯವಸ್ಥೆಯಲ್ಲಿನ ಅವ್ಯವಸ್ಥೆಯ ವಿರುದ್ಧ ಪ್ರತಿರೋಧದ ದನಿಯಾಗಿ ಕರ್ನಾಟಕದ ಸಾಕ್ಷಿಪ್ರಜ್ಞೆಯಂತೆ ನಮ್ಮೊಡನಿದ್ದಾರೆ. ಕನ್ನಡ ಪ್ರಜ್ಞೆ ಹಾಗೂ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿರುವ ಕುಂ.ವೀರಭದ್ರಪ್ಪ ಅವರು ಕನ್ನಡಿಗರ ಪ್ರೀತಿಯ ಬಹುದೊಡ್ಡ ಲೇಖಕ ಹಾಗೂ ಜೀವಪರ ಗುಣವುಳ್ಳ ವಿಶಿಷ್ಠ ಸಾಹಿತಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸಮ್ಮೇಳನಾಕ್ಷರಾಗುವವರಿಗೆ ಕನಿಷ್ಠ ಈ ಅರ್ಹತೆಗಳಿರಲಿ……

  • 1. ಅಧ್ಯಕ್ಷರಾಗುವವರಿಗೆ ಕನ್ನಡ ಭಾಷೆಯ ಆಮೂಲಾಗ್ರ ಪರಿಚಯವಿರಬೇಕು.
  • 2. ಕನ್ನಡದಲ್ಲಿ ಅನನ್ಯವಾದ, ಮೌಲಿಕವಾದ, ಸಮೃದ್ಧವಾದ ಸಾಹಿತ್ಯ ಕೃಷಿಯನ್ನು ಮಾಡಿದವರಾಗಿರಬೇಕು.
  • 3. ಅವರ ಸಾಹಿತ್ಯ ಕೃತಿಗಳು ಕನ್ನಡಿಗರ, ಕನ್ನಡ ನಾಡಿನ ಗೌರವಕ್ಕೆ, ಪ್ರೀತಿಗೆ ಪಾತ್ರವಾಗಿರಬೇಕು.
  • 4. ಸಮ್ಮೇಳನ ಅಧ್ಯಕ್ಷರಾಗುವವರು ಕನ್ನಡ ನಾಡಿನ ಸರ್ಕಾರಿ ಶಾಲೆಗಳಲ್ಲಿ ಓದಿದವರಾಗಿರಬೇಕು ಹಾಗೂ ಅವರ ಮಕ್ಕಳು ಕೂಡ ಸರ್ಕಾರಿ ಶಾಲೆಗಳಲ್ಲಿ ಓದಿ ವಿದ್ಯಾವಂತರಾಗಿರಬೇಕು.
  • 5. ಪ್ರಕಾಶಕರಿಂದ ಸರ್ಕಾರ ಪುಸ್ತಕಗಳನ್ನು ಕೊಳ್ಳುವಲ್ಲಿ ತೋರುತ್ತಿರುವ ವಿಳಂಬ ನೀತಿ ಹಾಗೂ ಅಸಡ್ಡೆಯನ್ನು ಖಂಡಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಡುವವರಾಗಿರಬೇಕು.
  • 6. ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರದ, ರಾಜಕೀಯ ಪಕ್ಷಗಳ ನಾಯಕರ ಯಾವುದೇ ರೀತಿಯ ಹಸ್ತಕ್ಷೇಪವಿರದಂತೆ ನೋಡಿಕೊಳ್ಳುವವರಾಗಿರಬೇಕು.
  • 7. ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಸರ್ಕಾರ ಎಸಗುವ ಯಾವುದೇ ರೀತಿಯ ತಪ್ಪುಗಳನ್ನು ಖಂಡಿಸಿ, ಸರ್ಕಾರಕ್ಕೆ ಬುದ್ಧಿ ಹೇಳಿ ಕೆಲಸ ಮಾಡಿಸುವ ಛಾತಿ ಹೊಂದಿದವರಾಗಿರಬೇಕು.
  • 8. ಪಂಪನ ಹಾಗೇ, ಕುವೆಂಪು ಅವರ ಹಾಗೆ ಪ್ರಭುತ್ವದ ಕೆಡಕುಗಳನ್ನು ಹಾಗೂ ಮೌಢ್ಯಗಳನ್ನು ಪ್ರಶ್ನಿಸುವ, ತಿದ್ದುವ ಪ್ರಜ್ಞಾವಂತ ಹೋರಾಟಗಾರರಾಗಿರಬೇಕು.
  • 9. ಜಾಗತಿಕ ಮಟ್ಟದಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ತೊಡಕುಗಳನ್ನು ನಿವಾರಿಸಿ, ಜಾಗತಿಕ ಮಟ್ಟದಲ್ಲಿ ಕನ್ನಡ ಸ್ವಾಭಿಮಾನದ ಭಾಷೆಯಾಗಿ ರೂಪಿಸುವವರಾಗಿರಬೇಕು. ಕರ್ನಾಟಕದ ಯುವಜನಾಂಗಕ್ಕೆ ಅನ್ನದ ಭಾಷೆಯಾಗಿ ಕನ್ನಡವನ್ನು ಕಟ್ಟುವ ನಿಟ್ಟಿನಲ್ಲಿ ಛಲ ಬಿಡದ ತ್ರಿವಿಕ್ರಮನಂತೆ ಹೋರಾಡುವ ಮನೋಧರ್ಮದವರಾಗಿದ್ದು, ಕನ್ನಡ ನಾಡಿನ ಪ್ರಬುದ್ಧ ಹಾಗೂ ಬದ್ಧತೆಯುಳ್ಳ ಕನ್ನಡದ ಕಾವಲುಗಾರನಾಗಿರಬೇಕು.
  • 10. ಸಮಾಜದ, ಕನ್ನಡಿಗರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಹಾಗೂ ಯುವಜನಾಂಗಕ್ಕೆ ದಾರಿದೀಪವಾಗುವ ವ್ಯಕ್ತಿತ್ವವುಳ್ಳ ಅಪ್ಪಟ ಸಾಹಿತಿಯಾಗಿರಬೇಕು.
  • 11. ಯಾವುದೇ ಸರ್ಕಾರದ ಹಂಗಿಗೆ ಒಳಗಾಗದೆ ಪ್ರಶಸ್ತಿ, ಬಿರುದು, ಬಾವಲಿಗಳಿಂದ ತಮ್ಮ ನಿಜದನಿಯನ್ನು ಕಳೆದುಕೊಳ್ಳದೆ, ತಮ್ಮ ವೈಯುಕ್ತಿಕ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಕಾಪಾಡಿಕೊಂಡು, ಪ್ರಭುತ್ವದ ಅಂಕುಡೊಂಕುಗಳನ್ನು ತಿದ್ದಿ ತೀಡುವ ಶಕ್ತಿಯುತ ವ್ಯಕ್ತಿತ್ವದವರಾಗಿರಬೇಕು.

ಈ ಮೇಲ್ಕಂಡ ಈ ಎಲ್ಲಾ ಅರ್ಹತೆಗಳನ್ನು ಒಳಗೊಂಡಿರುವ ಅಪೂರ್ವ, ಅನನ್ಯ ಸಾಹಿತ್ಯ ಕೃಷಿಯನ್ನು ಮಾಡಿರುವ, ಈಗಲೂ ನಿರಂತರವಾಗಿ ಮಾಡುತ್ತಿರುವ ನಮ್ಮೆಲ್ಲರ ಪ್ರೀತಿಯ ಸಾಹಿತಿಯನ್ನು ಸಮ್ಮೇಳಾಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!