ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಇತ್ತೀಚೆಗೆ ಮದ್ದೂರು ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಇ-ತಂತ್ರಾಂಶ ಜಾರಿ ಕುರಿತು ತಪ್ಪು ಮಾಹಿತಿ ನೀಡಿದ್ದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಮದ್ದೂರು ತಾಲೂಕು ಕಚೇರಿಯ ಆಡಳಿತ ಶಿರಸ್ತೇದಾರ್ ಚಂದ್ರಶೇಖರ್ ಅಮಾನತುಗೊಂಡಿರುವುದಾಗಿ ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ ನೀಡಿದ್ದಾರೆ.
ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಾಲ್ಲೂಕು ಕಚೇರಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಇ-ಆಫೀಸ್ ಗೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸಿದಾಗ, ಪೂರ್ಣ ಪ್ರಮಾಣದಲ್ಲಿ ತಂತ್ರಾಂಶವನ್ನು ಅನುಷ್ಟಾನಗೊಳಿಸದೇ ಇರುವುದು ಕಂಡು ಬಂದಿತ್ತು. ಅಲ್ಲದೆ ತಂತ್ರಾಂಶ ಅನುಷ್ಠಾನ ಕುರಿತು ತಪ್ಪು ಮಾಹಿತಿ ನೀಡಿರುವುದಕ್ಕೆ ಹಾಗೂ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದ್ದರು.
ಹಲವು ಕಾಲಾವಕಾಶ ನೀಡಿದ್ದರೂ ಸಹ ಇ-ಆಫೀಸ್ ತಂತ್ರಾಂಶವನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಕ್ರಮ ವಹಿಸದೇ ಇರುವುದರಿಂದ ಮದ್ದೂರು ತಾಲೂಕು ಕಚೇರಿಯ ಆಡಳಿತ ಶಿರಸ್ತೇದಾರ್ ಚಂದ್ರಶೇಖರ್ ಸರ್ಕಾರಿ ಸೇವೆಯಿಂದ ಅಮಾನತ್ತು ಮಾಡಲಾಗಿದೆ.