Sunday, October 27, 2024

ಪ್ರಾಯೋಗಿಕ ಆವೃತ್ತಿ

ನೂರಡಿ ರಸ್ತೆಯ ಸಾಲು ಮರಗಳ ಹನನ- ಜೀವ ಸಂಕುಲಕ್ಕೆ ಮಾರಕ

ಇತ್ತೀಚೆಗೆ ಮಂಡ್ಯ ನಗರದ ನೂರಡಿ (ಡಾ:ಬಿ.ಆರ್. ಅಂಬೇಡ್ಕರ್) ರಸ್ತೆಯಲ್ಲಿರುವ ಮರಗಳ ಕೊಂಬೆಗಳನ್ನು ಕಡಿಯುತ್ತಿದ್ದರು. ಅಪಾಯಕ್ಕೆ ಎದುರಾಗುವ ಒಣಗಿದ ಕೊಂಬೆಗಳನ್ನು , ರಸ್ತೆಗಳ ಕಡೆ ಚಾಚಿಕೊಂಡಿದ್ದ ಕೊಂಬೆಗಳನ್ನು ಕಡಿಯುವುದು ತಪ್ಪಿಲ್ಲ. ಆದರೆ ಪಾದಚಾರಿಗಳಿಗೆ ನೆರಳು ನೀಡುವ ಕೊಂಬೆಗಳನ್ನು ಕಡಿಯುವುದು ಸರಿಯೆ ?. ಕೆಲವು ಮರಗಳ ಸಂಪೂರ್ಣ ಕೊಂಬೆಗಳನ್ನು ಕಡಿದು ಬೋಳು ಮಾಡಿರುವುದು ಯಾವ ನ್ಯಾಯ. ಬೋಳು ಮಾಡಿರುವ ಮರಗಳು ಜೀವಂತವಾಗಿ ಇರಲು ಸಾಧ್ಯವೇ? ಕ್ರಮೇಣ ಈ ಮರಗಳನ್ನು ಕಡಿದು ತೆರವುಗೊಳಿಸುವ ಹುನ್ನಾರ ಇದಾಗಿದೆ.

nudikarnataka.com
ನೂರಡಿ ರಸ್ತೆಯಲ್ಲಿ ಮರಗಳ ಕೊಂಬೆಗಳನ್ನು ಕಡಿದು ಬೋಳಾಗಿ ನಿಂತಿರುವ ಮರಗಳ ನೋಟ

ಕೆಲ ದಶಕಗಳ ಹಿಂದೆ ಮಂಡ್ಯದ ಪುರ ಸಭೆ, ನಗರ ಸಭೆಯಾಗಿ ಬದಲಾದ ಹಿನ್ನೆಲೆಯಲ್ಲಿ ಈ  ನೂರಡಿ ರಸ್ತೆಯನ್ನು ವಾಣಿಜ್ಯ ಮಾರ್ಗವಾಗಿ ಮಾಡಲು ನಿರ್ಧರಿಸಿದ ನಗರಸಭೆ ಇನ್ನುಮುಂದೆ ಇಲ್ಲಿ ವಸತಿಗಳ ನಿರ್ಮಾಣಕ್ಕೆ ಲೈಸೆನ್ಸ್ (ಪರವಾನಿಗೆ) ನೀಡಲು ನಿರಾಕರಿಸಿ ‘ವಾಣಿಜ್ಯ ಮಳಿಗೆ’ ನಿರ್ಮಿಸಲು ಲೈಸೆನ್ಸ್ ನೀಡಲು ಮುಂದಾಯಿತು. ಇದರಿಂದಾಗಿ ಕ್ರಮೇಣ ವಸತಿ ಗೃಹಗಳು ಕಣ್ಮರೆಯಾಗಿ ವಾಣಿಜ್ಯ ಮಳಿಗೆಗಳು ತಲೆ ಎತ್ತಿ ನೂರಡಿ ರಸ್ತೆ ವಾಣಿಜ್ಯ ಮಾರ್ಗವಾಗಿ ವ್ಯಾಪಾರ ಕೇಂದ್ರವಾಗಿದೆ.

ಕೆಲ ದಶಕಗಳ ಹಿಂದೆ ಈ ಮಾರ್ಗದಲ್ಲಿ ಹಸಿರು ತಲೆಯೆತ್ತಲಿ ಹಾಗೂ ಪಾದಚಾರಿಗಳಿಗೆ ನೆರಳು ನೀಡಲಿ ಎಂದು ಗಿಡ ನೆಟ್ಟ ಮರಿಣಾಮ ಇಂದು ಈ ಸಾಲು ಮರಗಳಾಗಿ ನೂರಡಿ ರಸ್ತೆ ಹಸಿರುಮಯವಾಗಿ ಕಂಗೊಳಿಸುತ್ತಿದ್ದವು. ನೂರಡಿ ರಸ್ತೆಗೆ ಈ ಸಾಲು ಮರಗಳು ಕಿರೀಟಪ್ರಾಯವಾಗಿದ್ದವು. ಆದರೆ ಈಚೆಗೆ ಈ ಹಸಿರು ಮರಗಳು ವಿಕೃತ ಮನಸ್ಸುಗಳ ವಕ್ರದೃಷ್ಟಿಗೆ ಒಳಗಾಗಿ ಮರಗಳ ಹನನ ಆಗುತ್ತಿವೆ. ಸಂಜೆ, ಬೆಳಿಗ್ಗೆ ಇಲ್ಲಿ ವಾಸ ಮಾಡುತ್ತಿದ್ದ ಪಕ್ಷಿಗಳ ಕಲರವ ಕಣ್ಮರೆಯಾಗಿದೆ. ವಾಹನಗಳ ಸಂಚಾರಗಳಿಂದ ಉಂಟಾಗುತ್ತಿದ್ದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ.

ಈ ರಸ್ತೆಯಲ್ಲಿ ಇರುವ ಸಾಲು ಮರಗಳ ಕೊಂಬೆಗಳನ್ನು ಕಡಿಯಲು ಹಾಗೂ ಬೋಳು ಮರಗಳಾಗಿ ಎಲ್ಲಾ ಕೊಂಬೆಗಳನ್ನು ಕಡಿಯಲು ಅರಣ್ಯ ಇಲಾಖೆ ಹಾಗೂ ಪರಿಸರ ಇಲಾಖೆಯ ಅನುಮತಿ ಪಡೆದು ಕಡಿಯಲಾಗಿದೆಯೆ? ಈ ವಿಷಯ ಅರಣ್ಯ, ಪರಿಸರ ಹಾಗೂ ನಗರಸಭೆ ಅಧಿಕಾರಿಗಳ ಗಮನಕ್ಕೆ ಬಂದ್ದಿಲ್ಲವೆ?

ಒಂದು ಕಡೆ ಸರ್ಕಾರ, ಅರಣ್ಯ ಇಲಾಖೆಯವರು, ಗಿಡ ನೆಡಿ, ಪರಿಸರ ಉಳಿಸಿ ಎಂದೆಲ್ಲಾ ಜಾಹೀರಾತು ನೀಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಾರೆ. ಮತ್ತೊಂದೆಡೆ ಹಲವಾರು ವರ್ಷಗಳಿಂದ ಈ ರೀತಿ ದೊಡ್ಡದಾಗಿ ಜೀವ ಸಂಕುಲಗಳಿಗೆ ಆಶ್ರಯದಾತವಾಗಿರುವ ಇಂತಹ ವೃಕ್ಷಗಳನ್ನು ಯಾವುದೇ ಮಾನವೀಯ ಕಾಳಜಿ ಮತ್ತು ಕನಿಷ್ಟ ಜೀವ ಸಂಕುಲಗಳ ಬಗೆಗೆ ಯೋಚಿಸದೆ ಕಟಾವು ಮಾಡಿಸುತ್ತಾರೆ. ಇಂತಹದೆಲ್ಲಾ ಮಾಡುವಾಗ ಅರಣ್ಯ ಇಲಾಖೆ ಎಚ್ಚರಿಕೆಯಿಂದ ಇದ್ದು, ಸಂಬಂಧಪಟ್ಟವರಿಗೆ ಸೂಚನೆ ಕೊಡಬೇಕು. ಇಂತಹ ಕೃತ್ಯಗಳಿಂದ ಪರಿಸರಕ್ಕೆ ಹಾನಿಯುಂಟಾಗಿ, ಮಳೆಯುಬಾರದೆ, ಕೃಷಿಯ ಮೇಲೆ ಮತ್ತು ಮಾನವನ ಬದುಕಿನ ಮೇಲೆ ನೇರ ಪರಿಣಾಮವಾಗುತ್ತದೆ. ಮರಗಿಡಗಳು ನಾಶವಾದರೆ ಪರಿಸರದಲ್ಲಿ ವೈಪರೀತ್ಯ ಉಂಟಾಗಿ ಅತಿವೃಷ್ಟಿ, ಅನಾವೃಷ್ಟಿ ಉಂಟಾಗಿ ಜೀವ ಸಂಕುಲ ಬದುಕಿಗೆ ಮಾರಕ ಉಂಟಾಗುತ್ತದೆ. ಪರಿಸರ ಕಾಪಾಡುವುದು ಎಲ್ಲರ ಹೊಣೆ.

ನಗರ ಪ್ರದೇಶಗಳಲ್ಲಿ ಗಿಡ ನೆಟ್ಟು ಮರ ಬೆಳಸುವುದು ಕಷ್ಟದ ಕೆಲಸ. ಇರುವ ಮರಗಳನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ. ನೂರಡಿ ರಸ್ತೆಯಲ್ಲಿ ವಾಹನಗಳ ಸಂಚಾರದಿಂದ ವಾಯು ಮಾಲಿನ್ಯ ಹೆಚ್ಚಾಗಿದೆ.

ಇದರಿಂದಾಗಿ ನೂರಡಿ ರಸ್ತೆಯಲ್ಲಿ ಇರುವ ಮರಗಳನ್ನು ಕಾಪಾಡುವ ಜವಾಬ್ದಾರಿ ನಾಗರಿಕರಿಗೆ ಇರಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಹ ಇತ್ತ ಗಮನ ಹರಿಸುವ ಅಗತ್ಯವಿದೆ.

ಸಿ. ಸಿದ್ದರಾಜು ಆಲಕೆರೆ,
ಸಾಹಿತಿ-ಪರಿಸರವಾದಿ, ಮಂಡ್ಯ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!