Monday, October 28, 2024

ಪ್ರಾಯೋಗಿಕ ಆವೃತ್ತಿ

ಪ್ರಭಾ ಅರುಣ್‌ಕುಮಾರ್ ಹತ್ಯೆ ಪ್ರಕರಣ | ಸುಳಿವು ನೀಡಿದವರಿಗೆ 1 ಮಿಲಿಯನ್ ಡಾಲರ್ ಬಹುಮಾನ; ಆಸ್ಟ್ರೇಲಿಯಾ ಘೋಷಣೆ

ಒಂದು ದಶಕದ ಹಿಂದೆ ನಡೆದ ಬೆಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಪ್ರಭಾ ಅರುಣ್ ಕುಮಾರ್ ಅವರ ಹತ್ಯೆ ಪ್ರಕರಣ ಬಗೆಹರಿಸಲು ಸಹಾಯ ಮಾಡುವ ವ್ಯಕ್ತಿಗೆ 1 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಸರ್ಕಾರ ಘೋಷಣೆ ಮಾಡಿದೆ.

ಪ್ರಭಾ ಅರುಣ್ ಕುಮಾರ್ ಅವರನ್ನು 2015ರ ಮಾರ್ಚ್ 7ರಂದು ಸಿಡ್ನಿಯ ಪಶ್ಚಿಮದಲ್ಲಿನ ಪರಮಟ್ಟ ಪಾರ್ಕ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ 41 ವರ್ಷದ ಪ್ರಭಾ ಅವರ ಕತ್ತಿಗೆ ಇರಿಯಲಾಗಿತ್ತು. ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿದಿರಲಿಲ್ಲ. ಘಟನೆ ನಡೆದು 10 ವರ್ಷಗಳಾಗುತ್ತಾ ಬಂದರೂ, ಈವರೆಗೂ ಹಂತಕರ ಸುಳಿವು ದೊರಕಿಲ್ಲ. ಹಾಗಾಗಿ, ಹಂತಕರ ಸುಲಿವು ನೀಡುವವರಿಗೆ ಅಲ್ಲಿನ ಸರ್ಕಾರ ಬಹುಮಾನ ಘೋಷಿಸಿದೆ.

ಪ್ರಕರಣದ ತನಿಖೆಗಾಗಿ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿತ್ತು. ಅನೇಕ ಹಂತದಲ್ಲಿ ತನಿಖೆಯನ್ನೂ ನಡೆಸಲಾಗಿದೆ. ಹಂತಕರ ಪತ್ತೆಗಾಗಿ ಸಾರ್ವಜನಿಕರ ನೆರವನ್ನೂ ಕೋರಲಾಗಿದೆ. ಆದರೂ ಪ್ರಕರಣ ಬಗೆಹರಿಯದೆ ಉಳಿದಿದೆ. ಇದು ಅಲ್ಲಿನ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ ಎಂದು ವರದಿಗಳು ಹೇಳಿವೆ.

ಬೆಂಗಳೂರಿನ ಮೈಂಡ್ ಟ್ರೀ ಕಂಪೆನಿಯ ಉದ್ಯೋಗಿಯಾಗಿದ್ದ ಪ್ರಭಾ ಅವರು, ಕರ್ತವ್ಯದ ನಿಯೋಜನೆ ಮೇರೆಗೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಬೆಂಗಳೂರಿನಲ್ಲಿದ್ದ ಪತಿ ಅರುಣ್ ಕುಮಾರ್ ಜೊತೆ ಫೋನ್‌ನಲ್ಲಿ ಮಾತನಾಡುತ್ತಾ ತೆರಳುತ್ತಿದ್ದ ಅವರಿಗೆ ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನ ಮೂಡಿತ್ತು. ಅದನ್ನು ಪತಿ ಬಳಿ ಹೇಳಿದ್ದರು. ಅದೇ ವೇಳೆ ಅವರ ಮೇಲೆ ದಾಳಿ ನಡೆದಿತ್ತು. ಅವರು ವಾಸವಿದ್ದ ಸ್ಥಳದಿಂದ ಕೇವಲ 300 ಮೀಟರ್ ದೂರದಲ್ಲಿ ಈ ಹತ್ಯೆ ನಡೆದಿತ್ತು.

ಪತ್ನಿ ಶವವನ್ನು ಭಾರತಕ್ಕೆ (ಬೆಂಗಳೂರಿಗೆ) ತರುವ ಸಲುವಾಗಿ ಅರುಣ್ ಕುಮಾರ್ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳ ಜೊತೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಹತ್ಯೆ ಮಾಡಿದ ವ್ಯಕ್ತಿ ಪ್ರಭಾ ಅವರಿಗೆ ಅಪರಿಚಿತನಾದರೂ, ಆಸ್ಟ್ರೇಲಿಯಾ ಅಥವಾ ಭಾರತದಲ್ಲಿರುವ ಅವರ ಪರಿಚಿತರೇ ಈ ಕೊಲೆ ಮಾಡಿಸಿರಬಹುದು ಎನ್ನುವುದು ಪೊಲೀಸರ ಅನುಮಾನವಾಗಿದೆ. ತನಿಖೆ ವೇಳೆ ಅನೇಕ ಪುರಾವೆಗಳು ದೊರಕಿದರೂ, ಹಂತಕರ ಬಂಧನಕ್ಕೆ ಅಗತ್ಯವಾದ ಪ್ರಬಲ ಸಾಕ್ಷ್ಯ ಅಥವಾ ಸುಳಿವು ಈವರೆಗೂ ಲಭ್ಯವಾಗಿಲ್ಲ.

ಪ್ರಭಾ ಅವರು ಮನೆ ಸಮೀಪದ ಉದ್ಯಾನವನದಲ್ಲಿ ನಡೆದುಕೊಂಡು ಬರುವುದನ್ನು ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳು ಸೆರೆ ಹಿಡಿದಿದ್ದವು. ಆದರೆ, ಅವರನ್ನು ಹಿಂಬಾಲಿಸುತ್ತಿದ್ದವರು ಯಾರು ಎನ್ನುವುದು ಈವರೆಗೂ ಸ್ಪಷ್ಟವಾಗಿಲ್ಲ. ಸಿಸಿಟಿವಿ ಕ್ಯಾಮರಾದಲ್ಲಿ ಕಾಣಿಸಿದ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದ್ದರೂ ಪ್ರಯೋಜನವಾಗಿಲ್ಲ.

ಪ್ರಭಾ ಅವರ ಹತ್ಯೆ ಅಂತಾರಾಷ್ಟ್ರೀಯ ವಿಷಯವಾಗಿ ಮಾರ್ಪಟ್ಟಿದೆ. ಇದು ಜನಾಂಗೀಯ ದಾಳಿ ಎನ್ನುವುದನ್ನು ಈ ಹಿಂದೆ ತನಿಖಾಧಿಕಾರಿಗಳು ಅಲ್ಲಗಳೆದಿದ್ದರು. 2 ಸಾವಿರಕ್ಕೂ ಅಧಿಕ ಜನರನ್ನು ಪೊಲೀಸರು ಈವರೆಗೂ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಭಾ ಅವರ ಮೃತದೇಹವನ್ನು ಮಾರ್ಚ್ 14ರಂದು ಬೆಂಗಳೂರಿಗೆ ತರಲಾಗಿತ್ತು. ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!