ಕನ್ನಡ ಸೇನೆಯ ವತಿಯಿಂದ ಕನ್ನಡ ಜಾಗೃತಿ ಸಮಾವೇಶ, ಕನ್ನಡ ರಾಜ್ಯೋತ್ಸವ ಹಾಗೂ ಹಾಸ್ಯ ಮತ್ತು ಮಿಮಿಕ್ರಿ ಕಾರ್ಯಕ್ರಮಗಳನ್ನು ನವೆಂಬರ್ ೮ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಿಂದ ವಿವಿಧ ಕಲಾತಂಡಗಳೊಂದಿಗೆ ಗಾಂಧಿ ಭವನದವರೆಗೆ ಕನ್ನಡದ ಮೆರವಣಿಗೆಯು ನಡೆಯಲಿದೆ ಎಂದರು.
ವೇದಿಕೆ ಕಾರ್ಯಕ್ರಮವನ್ನು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ವಹಿಸುವರು. ಕನ್ನಡ ಜಾಗೃತಿ ಕುರಿತು ಚಿತ್ರನಟ ಮುಖ್ಯಮಂತ್ರಿ ಚಂದ್ರು ಮಾತನಾಡಲಿದ್ದು, ಶಾಸಕ ರವಿಕುಮಾರ್ಗೌಡ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ, ನಗರಸಭಾ ಅಧ್ಯಕ್ಷ ಎಂ.ವಿ.ನಾಗೇಶ್, ಮಾಜಿ ಅಧ್ಯಕ್ಷ ಹೆಚ್.ಎಸ್.ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್ ಭಾಗವಹಿಸಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದ ಗಣ್ಯರಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.
ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಜೂಜು, ಕ್ರಿಕೆಟ್ ಬೆಟ್ಟಿಂಗ್ ದಂಧೆ ತಡೆಯಲು ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಸಲುವಾಗಿ ವಿಶೇಷ ತನಿಖಾ ದಳ ರಚಿಸಬೇಕು. ಗೃಹ ಸಚಿವರು ಜಿಲ್ಲೆಯ ಪ್ರವಾಸ ಕೈಗೊಂಡು ಸೂಕ್ತ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿಸುವ ಚರ್ಚೆ ಗಾಢವಾಗಿ ನಡೆಯುತ್ತಿದ್ದು, ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸುವುದರೊಂದಿಗೆ ಬಿಬಿಎಂಪಿ ಸದಸ್ಯರಾಗಿ, ಶಾಸಕರಾಗಿಯೂ ಆಯ್ಕೆಯಾದ ವಾಟಾಳ್ ನಾಗರಾಜ್ ಅವರನ್ನು ಪರಿಗಣಿಸಬೇಕೆಂದು ಒತ್ತಾಯ ಮಾಡಿದರು.
ಗೋಷ್ಠಿಯಲ್ಲಿ ದೇವಮ್ಮ, ಸೌಭಾಗ್ಯ ಶಿವಲಿಂಗು, ಎಂ.ಎಸ್.ಮಂಜುನಾಥ್, ಪವಿತ್ರ ನಾಗರಾಜು, ಜಿ.ಮಹಾಂತಪ್ಪ, ಕಮ್ಮನಾಯಕನಹಳ್ಳಿ ಮಂಜು ಇದ್ದರು.




