ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರ ಅಗತ್ಯವಾಗಿದ್ದು ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆ ತಡೆಗಟ್ಟಬಹುದೆಂದು ಪ್ರಭಾರಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಡಿ ಟಿ ಮಂಜುನಾಥ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶ್ರೀರಂಗಪಟ್ಟಣದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ಬಾಲಕಿಯರಿಗಾಗಿ ಹಮ್ಮಿಕೊಂಡಿದ್ದ “ಅನೀಮಿಯಾ ಕುರಿತು ಅರಿವು, ಪರೀಕ್ಷೆ” ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅನೀಮಿಯಾ ಹಾಗೂ ಅಪೌಷ್ಟಿಕತೆ ಇರುವ ಮಕ್ಕಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಅನೀಮಿಯಾದಿಂದ ಗ್ರಹಿಕಾ ಶಕ್ತಿ ಕಡಿಮೆಯಾಗಿ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ರಕ್ತ ಹೀನತೆ ಅಲಕ್ಷ ಬೇಡ ಕಬ್ಬಿಣಾಂಶ ಕೊರತೆಯಿಂದ ಹಿಮೊಗ್ಲೋಬಿನ್ ಕಡಿಮೆಯಾಗುತ್ತದೆ ಇದರಿಂದ ಸುಸ್ತು, ಆಯಾಸ ಆಗುತ್ತದೆ ಆದ್ದರಿಂದ ಪೌಷ್ಟಿಕ ಆಹಾರದ ಜೊತೆ ಕಬ್ಬಿಣಾಂಶ ಮಾತ್ರೆ ತಪ್ಪದೇ ಸೇವನೆ ಮಾಡಬೇಕೆಂದು ತಿಳಿಸಿದರು.
ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಮಕ್ಕಳಿಗೆ ವೈಯಕ್ತಿಕ ಶುಚಿತ್ವದ ಕುರಿತು ಆರೋಗ್ಯ ಶಿಕ್ಷಣ ನೀಡಿದರು. ಸಮುದಾಯ ಆರೋಗ್ಯ ಅಧಿಕಾರಿ ಸಹನಾ,ಕಾವ್ಯ, ಪೂಜಾ ಹಾಗೂ ಬಸವರಾಜ ಮಕ್ಕಳ ಹಿಮೊಗ್ಲೋಬಿನ್ ಪರೀಕ್ಷಿಸಿದರು.
ಈ ವೇಳೆ ಪ್ರಾಂಶುಪಾಲರಾದ ಶೋಭಾ, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಹದೇವಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಎನ್ ಕೃಷ್ಣೇಗೌಡ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.




