ಶ್ರೀರಂಗಪಟ್ಟಣ ತಾಲೂಕು ಅರಕೆರೆ ಹೋಬಳಿ ಹುಂಜನಕೆರೆ ಗ್ರಾಮದಲ್ಲಿ ದೇವಾಲಯದ ಕಬ್ಬಿಣದ ಗೇಟ್ ಮುರಿದು ಬಿದ್ದು ಮೃತಪಟ್ಟ ಮಗುವಿನ ಕುಟುಂಬಕ್ಕೆ ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಇಂಡುವಾಳು ಅವರು ಸಾಂತ್ವನ ಹೇಳಿ ವೈಯಕ್ತಿಕವಾಗಿ 25,000 ರೂ. ಪರಿಹಾರ ನೀಡಿದರು.
ಮುಜರಾಯಿ ಇಲಾಖೆಗೆ ಸೇರಿದ ಶ್ರೀಚನ್ನಕೇಶವಸ್ವಾಮಿ ದೇವಾಲಯದ ಗೇಟ್ ಹಾಳಾಗಿತ್ತು. ಆದರೆ, ಅದನ್ನು ಮುಜರಾಯಿ ಇಲಾಖೆ ಅಥವಾ ಸಂಬMಧಪಟ್ಟ ಅಧಿಕಾರಿಗಳು, ದೇವಾಲಯದ ವ್ಯವಸ್ಥಾಪನಾ ಸಮಿತಿಯು ದುರಸ್ತಿಗೊಳಿಸದೆ ನಿರ್ಲಕ್ಷ್ಯ ವಹಿಸಿತ್ತು. ಪರಿಣಾಮ ನ.11ರಂದು ದೇವಾಲಯಕ್ಕೆ ಆಗಮಿಸಿದ್ದ ಎಚ್.ಜೆ. ಸಿದ್ದರಾಜು ಮತ್ತು ಸುಮಿತ್ರ ದಂಪತಿಯ ಮಗು ಎಚ್.ಎಸ್.ಜಿಷ್ಣು (5 ವರ್ಷ 6 ತಿಂಗಳು) ಆಟವಾಡುತ್ತಾ ಕಬ್ಬಿಣದ ಗೇಟ್ ಮುಟ್ಟಿದಾಗ ಅದು ಮೈಮೇಲೆ ಬಿದ್ದು ಮಗು ಮೃತಪಟ್ಟಿತ್ತು.
ಈ ಹಿನ್ನೆಲೆಯಲ್ಲಿ ಮಂಡ್ಯದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮೃತ ಮಗುವಿನ ತಂದೆ-ತಾಯಿಯನ್ನು ಭೇಟಿಯಾದ ಎಸ್.ಸಚ್ಚಿದಾನಂದ ಅವರು ವೈಯಕ್ತಿಕವಾಗಿ ಪರಿಹಾರ ನೀಡಿ ಸಾಂತ್ವನ ಹೇಳಿದರು.
ಪ್ರತಿಪಕ್ಷದ ನಾಯಕ, ತಹಸೀಲ್ದಾರ್ಗೆ ಕರೆ
ಸ್ಥಳದಲ್ಲೇ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತು ಶ್ರೀರಂಗಪಟ್ಟಣ ತಹಸೀಲ್ದಾರ್ಗೆ ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಇಂಡುವಾಳು ಅವರು ಫೋನ್ ಕರೆ ಮಾಡಿ ದೇವಾಲಯದ ಗೇಟ್ ಮುರಿದು ಬಿದ್ದು ಮಗು ಮೃತಪಟ್ಟ ಘಟನೆ ಬಗ್ಗೆ ಸಮಾಲೋಚಿಸಿದರು.ಅಧಿಕಾರಿಗಳು ಮಾನವೀಯ ಗುಣವಿಟ್ಟುಕೊಂಡು ಕೆಲಸ ಮಾಡಬೇಕು. ದಲಿತ ಕುಟುಂಬಗಳ ನಿರ್ಲಕ್ಷ್ಯ ಸಲ್ಲದು. ಮೃತ ಮಗುವಿನ ಕುಟುಂಬಕ್ಕೆ ಪರಿಹಾರ ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಅವರನ್ನು ಸಚ್ಚಿದಾನಂದ ಒತ್ತಾಯಿಸಿದರು.
ಮತ್ತೊಂದೆಡೆ ಮಗು ಸಾವಿನ ಬಗ್ಗೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರೊಂದಿಗೆ ಮಾತನಾಡಿ, ಮೃತ ಮಗುವಿನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಹೋರಾಟ ನಡೆಸಬೇಕೆಂದು ಕೋರಿದರು.
ತಾವು ಹಾಗೂ ಸ್ನೇಹಿತರೊಂದಿಗೆ ಸೇರಿ ದಂಪತಿಯು ಉಳಿದಿರುವ ಮತ್ತೊಂದು ಮಗು ಇತಿಹಾಸ ಹೆಸರಿನಲ್ಲಿ 2 ಲಕ್ಷ ರೂಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗುವುದು. ಈ ಹಣವನ್ನು ಮಗುವಿನ ವಿದ್ಯಾಭ್ಯಾಸಕ್ಕೆ ಬಳಸಬೇಕೆಂದು ಸಚ್ಚಿದಾನಂದ ಅವರು ಮೃತ ಮಗುವಿನ ಪೋಷಕರಿಗೆ ತಿಳಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಇಂಡುವಾಳು, ದೇವಾಲಯದ ಸ್ಥಳೀಯ ಆಡಳಿತ ಮಂಡಳಿ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ. ಮೃತ ಮಗುವಿನ ಪೋಷಕರನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ. ಘಟನೆ ನಡೆದ 10 ದಿನಗಳು ಕಳೆದರೂ ಕೂಡ ಈವರೆಗೆ ಸ್ಥಳೀಯ ಶಾಸಕರು, ತಹಸೀಲ್ದಾರ್ ಸೇರಿದಂತೆ ಯಾವುದೇ ಅಧಿಕಾರಿಗಳು ಪೊಲೀಸ್ ಅಧಿಕಾರಿ ಕೂಡ ಭೇಟಿ ಕೊಟ್ಟಿಲ್ಲ. ಮೃತ ಮಗುವಿನ ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ ಎಂದು ಕಿಡಿಕಾರಿದರು.
ಮಗು ದಲಿತ ಕುಟುಂಬಕ್ಕೆ ಸೇರಿದ್ದು, ಈವರೆಗೆ ಪರಿಹಾರವನ್ನು ಕೂಡ ಕೊಟ್ಟಿಲ್ಲ. ಅಲ್ಲದೆ ನವೆಂಬರ್ 11ರಂದು ಈ ಘಟನೆ ಸಂಭವಿಸಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲು ಅರಕೆರೆ ಪೊಲೀಸರು 8-10 ತಾಸು ಸತಾಯಿಸಿದ್ದಾರೆ. ತಡವಾಗಿ ಎಫ್ಐಆರ್ ಆಗಿದೆ. ಪ್ರಕರಣ ದಾಖಲಿಸಿಕೊಳ್ಳದಂತೆ ಪೊಲೀಸರ ಮೇಲೆ ಸ್ಥಳೀಯ ಶಾಸಕರು ಒತ್ತಡ ಹೇರಿದ್ದರಿಂದ ವಿಳಂಬವಾಗಿದೆ ಎಂದು ಆರೋಪಿಸಿದರು.
ಬಡವರಿಗೆ ಬದುಕುವ ಹಕ್ಕು ಇಲ್ಲವೇ? ಬಡವರ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷö್ಯವೇಕೆ? ಈ ರೀತಿಯ ಘಟನೆಗಳು ಮರುಕಳಿಸಬಾರದು. ಕೂಡಲೇ ದೇವಾಲಯದ ಗೇಟ್ ದುರಸ್ತಿಗೊಳಿಸಬೇಕು. ಪ್ರಕರಣ ದಾಖಲಿಸಿಕೊಳ್ಳಲು ತಡ ಮಾಡಿದ ಅರಕೆರೆ ಪಿಎಸ್ಐನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.




